ಬಂಡೆಮಠದ ಸ್ವಾಮೀಜಿ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ; ಆರೋಪಿ ಮೃತ್ಯುಂಜಯ ಸ್ವಾಮೀಜಿಗೆ ಜಾಮೀನು

ಬಂಡೆಮಠದ ಬಸವಲಿಂಗ ಸ್ವಾಮೀಜಿ ಡೆತ್​ನೋಟ್​​ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರಕರಣ ಸಂಬಂಧ ಮೃತ್ಯುಂಜಯಶ್ರೀ, ನೀಲಾಂಬಿಕೆ ಸೇರಿ ಹಲವರ ಬಂಧನವಾಗಿತ್ತು.

ಬಂಡೆಮಠದ ಸ್ವಾಮೀಜಿ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ; ಆರೋಪಿ ಮೃತ್ಯುಂಜಯ ಸ್ವಾಮೀಜಿಗೆ ಜಾಮೀನು
ಬಂಡೇಮಠದ ಬಸವಲಿಂಗ ಸ್ವಾಮೀಜಿ ಮತ್ತು ಮೃತ್ಯುಂಜಯ ಸ್ವಾಮೀಜಿ ಅಲಿಯಾಸ್ ರೇಣುಕಾರಾಧ್ಯ
Follow us
TV9 Web
| Updated By: Rakesh Nayak Manchi

Updated on:Jan 13, 2023 | 2:49 PM

ಬೆಂಗಳೂರು: ಬಂಡೆಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆಗೆ (Bande Mutt Basavalinga Swamiji Suicide) ಪ್ರಚೋದನೆ ನೀಡಿದ ‌ಪ್ರಕರಣ ಸಂಬಂಧ ಆರೋಪಿ ಮೃತ್ಯುಂಜಯ ಸ್ವಾಮೀಜಿ (Mruthyunjaya Swamiji) ಅಲಿಯಾಸ್ ರೇಣುಕಾರಾಧ್ಯ ಅವರಿಗೆ ಹೈಕೋರ್ಟ್​ ಜಾಮೀನು ನೀಡಿ ಆದೇಶ ಹೊರಡಿಸಿದೆ. ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಮೃತ್ಯುಂಜಯಶ್ರೀ ತಮ್ಮ ವಕೀಲರ ಮೂಲಕ ಜಾಮೀನು ಕೋರಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಅದರಂತೆ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ, ಷರತ್ತುಬದ್ಧ ಜಾಮೀನು ನೀಡಿ ಆದೇಶಿಸಿದೆ.

ಹನಿಟ್ರ್ಯಾಪ್​ಗೆ ಒಳಗಾಗಿದ್ದ ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಕಂಚುಗಲ್​ ಬಂಡೆಮಠದ ಬಸವಲಿಂಗ ಸ್ವಾಮೀಜಿ ಮರ್ಯಾದೆಗೆ ಅಂಜಿ ಅಕ್ಟೋಬರ್ 24ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಮೂರು ಪುಟಗಳ ಡೆತ್‌ ನೋಟ್ ಬರೆದಿಟ್ಟು ಮಠದ ತಮ್ಮ ಕೊಠಡಿಯ ಕಿಟಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಡೆತ್‌ ನೋಟ್​ನಲ್ಲಿ ಕೆಲವರು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ನನಗೆ ಯಾರ ಸಹಾಯವೂ ಇರಲಿಲ್ಲ. ಕೆಲವರಿಂದ ಬೆದರಿಕೆ ಕರೆಗಳು ಸಹ ಬಂದಿವೆ ಎಂದು ಉಲ್ಲೇಖಿಸಿದ್ದರು.

ಹನಿಟ್ರ್ಯಾಪ್ ಪ್ರಕರಣ ಸಂಬಂಧ ಪ್ರಕರಣದ ಮೊದಲ ಆರೋಪಿಯಾಗಿ (A1) ಕಣ್ಣೂರು ಮಠದ ಡಾ ಮೃತ್ಯುಂಜಯ ಸ್ವಾಮೀಜಿ, 2ನೇ ಆರೋಪಿ ನಿಲಾಂಬಿಕೆ, 3ನೇ ಆರೋಪಿಯಾಗಿ ಕಣ್ಣೂರು ಮಠದ ವಕೀಲ ಮಹದೇವಯ್ಯ ಅವರನ್ನು ಮಾಗಡಿ ಠಾಣೆ ಪೊಲೀಸರು ಬಂಧಿಸಿದ್ದರು. ಮೃತ್ಯುಂಜಯ ಸ್ವಾಮೀಜಿ ಅವರು ಬಸವಲಿಂಗ ಸ್ವಾಮೀಜಿಯ ಸೋದರ ಸಂಬಂಧಿಯಾಗಬೇಕಿದೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರ: ಇಶಾ ಫೌಂಡೇಶನ್ ಆದಿಯೋಗಿ ಪ್ರತಿಮೆ ಅನಾವರಣ ಮಾಡಬಹುದು -ತಡೆ ವಾಪಸ್ ಪಡೆದ ಹೈಕೋರ್ಟ್

ಒಮ್ಮೆ ಯಾರೋ ಬೇರೆ ಸ್ವಾಮೀಜಿ ಬಗ್ಗೆ ಯುವತಿಯು ಹಗುರವಾಗಿ ಮಾತನಾಡಿದ್ದನ್ನು ಬಂಡೇ ಮಠದ ಸ್ವಾಮೀಜಿ ಗಮನಿಸಿದ್ದರು. ನಂತರದ ದಿನಗಳಲ್ಲಿ ಇವರಿಬ್ಬರ ನಡುವೆ ಆಪ್ತತೆ ಬೆಳೆದಿತ್ತು. ಇಬ್ಬರೂ ಪರಸ್ಪರ ಫೋನ್​ನಲ್ಲಿಯೂ ಮಾತನಾಡುತ್ತಿದ್ದರು. ಇದನ್ನು ಗಮನಿಸಿದ್ದ ಕಣ್ಣೂರು ಮಠದ ಮೃತ್ಯುಂಜಯ ಸ್ವಾಮೀಜಿ ಹಾಗೂ ವಕೀಲ ಮಹದೇವಯ್ಯ ಹನಿಟ್ರ್ಯಾಪ್ ಬಲೆಗೆ ಸಿಲುಕಿಸಲು ಪ್ಲಾನ್ ಮಾಡಿದ್ದರು ಎಂದು ಈ ಹಿಂದೆ ಪೊಲೀಸರು ಹೇಳಿದ್ದರು.

ಆರೋಪಿಗಳನ್ನು ತೀವ್ರ ವಿಚಾರಣೆ ನಡೆಸಿದ ಪೊಲೀಸರು, ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಸುಮಾರು 216 ಪುಟಗಳ ಚಾರ್ಜ್​ಶೀಟ್ ಸಲ್ಲಿಕೆ ಮಾಡಿದ್ದರು. ಕರಣದಲ್ಲಿ ನಾಲ್ವರು ಆರೋಪಿಗಳು ಭಾಗಿಯಾಗಿದ್ದಾರೆ. ಪ್ರಕರಣ ಸಂಬಂಧ ಈವರೆಗೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಸಿಡಿ ಎಡಿಟ್​ ಮಾಡಿದ್ದ ಆರೋಪಿ ಬಿ.ಸಿ.ಸುರೇಶ್​ ತಲೆಮರೆಸಿಕೊಂಡಿದ್ದಾನೆ. ಆತ್ಮಹತ್ಯೆ ಕೇಸ್​ನಲ್ಲಿ 72 ಸಾಕ್ಷಿಗಳನ್ನು ಪರಿಗಣಿಸಲಾಗಿದೆ. ಸಿದ್ಧಗಂಗಾ ಶ್ರೀಗಳಿಗೆ ಕಣ್ಣೂರು‌ಶ್ರೀ ಹತ್ತಿರವಾಗಲು ವಿಡಿಯೋ ಮಾಡಿಸಿದ್ದರು. ಡೆತ್​ನೋಟ್ ಬರೆದಿರುವುದು ಪೊಲೀಸರಿಗೆ ತನಿಖೆಯಿಂದ ಗೊತ್ತಾಗಿದೆ ಎಂದು ರಾಮನಗರ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಬಾಬು ಹೇಳಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:49 pm, Fri, 13 January 23