ರಾಮನಗರ: ದೇವಸ್ಥಾನ ಬಳಿಯ ನಲ್ಲಿ ನೀರು ತರಲು ಹೋದ ದಲಿತ ಬಾಲಕಿಗೆ ನಿಂದಿಸಿದ ಪೂಜಾರಿ: ಕೇಸ್ ಬುಕ್
ರಾಮನಗರದಲ್ಲಿ 13 ವರ್ಷದ ದಲಿತ ಬಾಲಕಿ ತನ್ನ ಮನೆಯ ಸಮೀಪವೇ ಇದ್ದ ಮಾರಮ್ಮ ದೇವಸ್ಥಾನದ ಆವರಣದಲ್ಲಿರುವ ಸಾರ್ವಜನಿಕ ನಲ್ಲಿಯಿಂದ ಕುಡಿಯುವ ನೀರನ್ನು ತರಲು ಹೋಗಿದ್ದಳು. ಈ ವೇಳೆ ದೇವಸ್ಥಾನದ ಆರ್ಚಕ ಮತ್ತು ಆತನ ಸಹೋದರಿ ಜಾತಿ ಹೆಸರಿನಲ್ಲಿ ನಿಂದಿಸಿದ್ದಾರೆ.
ರಾಮನಗರ, ಅ.12: ದೇವಸ್ಥಾನದ (Temple) ಬಳಿಯಿದ್ದ ಸಾರ್ವಜನಿಕ ನಲ್ಲಿಯಿಂದ ನೀರು ತರಲು ಬಂದಿದ್ದ 13 ವರ್ಷದ ದಲಿತ (Dalit) ಬಾಲಕಿಗೆ ಆಕೆಯ ಜಾತಿ (Caste Abuse) ಹೆಸರಿಡಿದು ಪೂಜಾರಿ ಮತ್ತು ಆತನ ಸಹೋದರಿ ನಿಂದಿಸಿರುವ ಘಟನೆ ರಾಮನಗರದಲ್ಲಿ ನಡೆದಿದೆ. ಘಟನೆ ಸಂಬಂಧ ಅರ್ಚಕ ಹಾಗೂ ಆತನ ಸಹೋದರಿಯ ಮೇಲೆ ದೂರು ದಾಖಲಾಗಿದ್ದು ಐಜೂರು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ರಾಮನಗರ ಜಿಲ್ಲೆಯ ಚನ್ನಮಾನಹಳ್ಳಿ ಗ್ರಾಮದಲ್ಲಿ ಅಕ್ಟೋಬರ್ 9 ರಂದು ಬಾಲಕಿ ಭಾವನಾ ತನ್ನ ಮನೆಯ ಸಮೀಪವೇ ಇದ್ದ ಮಾರಮ್ಮ ದೇವಸ್ಥಾನದ ಆವರಣದಲ್ಲಿರುವ ಸಾರ್ವಜನಿಕ ನಲ್ಲಿಯಿಂದ ಕುಡಿಯುವ ನೀರನ್ನು ತರಲು ಬಿಂದಿಗೆ ಹಿಡಿದು ಹೋಗಿದ್ದಳು. ಈ ವೇಳೆ ದೇವಸ್ಥಾನದ ಆರ್ಚಕ ಕುಮಾರ್ ಮತ್ತು ಆತನ ಸಹೋದರಿ ಯಶೋಧಾ ಇಬ್ಬರೂ ಬಾಲಕಿಗೆ ಜಾತಿ ಹೆಸರಿನಲ್ಲಿ ನಿಂದಿಸಿದ್ದಾರೆ.
ಅಳುತ್ತಾ ಮನೆಗೆ ತೆರಳಿದ ಬಾಲಕಿ ತನ್ನ ಮನೆಯವರಿಗೆ ನಡೆದ ಘಟನೆಯನ್ನು ವಿವರಿಸಿದ್ದಾಳೆ. ಆಗ ಬಾಲಕಿ ಚಿಕ್ಕಪ್ಪ ಪ್ರಸನ್ನಕುಮಾರ್ ಮತ್ತು ಅವರ ಸ್ನೇಹಿತ ಜಯಕುಮಾರ್ ಸ್ಥಳಕ್ಕೆ ಬಂದು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಪೂಜಾರಿ ಮತ್ತು ಆತನ ಸಹೋದರಿ ಮತ್ತೆ ಜಾತಿ ನಿಂದನೆ ಮಾಡಿದ್ದು ದೇವಸ್ಥಾನದಿಂದ ದೂರ ಇರುವಂತೆ ಎಚ್ಚರಿಕೆ ನೀಡಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದ್ದು ಅವರ ಮೇಲೆ ಹಲ್ಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಪೂಜಾರಿ ಮತ್ತು ಆತನ ಸಹೋದರಿ ನನ್ನ ಕೆನ್ನೆಗೆ ಹೊಡೆದು, ಕಲ್ಲಿನಿಂದ ಹಲ್ಲೆ ಮಾಡಿದ್ದಾರೆ ಎಂದು ಪ್ರಸನ್ನ ಕುಮಾರ್ ಅವರು ಘಟನೆ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳ, ಬೆಂಗಳೂರಿನಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಾಣ ಆಗುತ್ತಾ?
ದೂರು ಆಧರಿಸಿ ಐಜೂರು ಪೊಲೀಸರು ಅರ್ಚಕ ಮತ್ತು ಆತನ ಸಹೋದರಿ ವಿರುದ್ಧ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎಸ್‌ಸಿ ಮತ್ತು ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಮತ್ತು ಐಪಿಸಿ ಸೆಕ್ಷನ್ 323, 324, 504, 506 ಹಾಗೂ 34ರ ಅಡಿ ಪ್ರಕರಣ ದಾಖಲಾಗಿದೆ.
ಇನ್ನು ಅರ್ಚಕ ಕುಮಾರ್ ಮತ್ತು ಅವರ ಸಹೋದರಿ ಯಶೋಧ ಅವರು ದೇವಸ್ಥಾನದ ಆವರಣಕ್ಕೆ ಬಾಲಕಿ ಪ್ರವೇಶಿಸುವುದನ್ನು ವಿರೋಧಿಸಿ ಆಕ್ರೋಶ ಹೊರ ಹಾಕಿದ್ದರು. ಬಾಲಕಿ ನಲ್ಲಿ ಮುಟ್ಟಿ ಅಪವಿತ್ರಗೊಳಿಸಿದ್ದಾಳೆ ಎಂದು ಜಾತಿ ನಿಂದನೆ ಮಾಡಿ ಬಾಲಕಿಯ ಬಳಿಯಿದ್ದ ಕೊಡವನ್ನು ಕಿತ್ತು ಎಸೆದು ದೇವಸ್ಥಾನದಿಂದ ದೂರವಿರುವಂತೆ ಎಚ್ಚರಿಕೆ ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಪ್ರಸನ್ನ ಕುಮಾರ್ ಮತ್ತು ಜಯಕುಮಾರ್ ಅವರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ಸೇರಿಸಲಾಗಿದೆ. ಅರ್ಚಕ ಮತ್ತು ಅವರ ಸಹೋದರಿ ನಾಪತ್ತೆಯಾಗಿದ್ದು ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ