ಕಾಂಗ್ರೆಸ್‍ಗೆ ಮತ ಹಾಕದಿದ್ರೆ ಅಭಿವೃದ್ಧಿ ಮಾಡಲ್ಲ; ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡ ಕಾಂಗ್ರೆಸ್ ಶಾಸಕ
‘ಹೆಚ್ಚು ಲೀಡ್ ಕೊಡುವ ಬೂತ್ಗಳ ಬಗ್ಗೆ ಆಸಕ್ತಿ ವಹಿಸುತ್ತೇವೆ. ಕಡಿಮೆ ಲೀಡ್ ಕೊಡುವ ಬೂತ್ಗೆ ಕಡಿಮೆ ಆಸಕ್ತಿ ವಹಿಸುತ್ತೇವೆ. ಇದರಲ್ಲಿ ದ್ವೇಷ ರಾಜಕಾರಣ ಏನಿದೆ ಎನ್ನುವ ಮೂಲಕ ತಾವು ನೀಡಿದ್ದ ಹೇಳಿಕೆಯನ್ನು ಮಾಗಡಿ ಶಾಸಕ ಹೆಚ್.ಸಿ.ಬಾಲಕೃಷ್ಣ ಅವರು ಸಮರ್ಥಿಸಿಕೊಂಡಿದ್ದಾರೆ.
ರಾಮನಗರ, ಅ.12: ರಾಜ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದ ಕಾಂಗ್ರೆಸ್ನ್ನು, ಲೋಕಸಭಾ ಚುನಾವಣೆ (Loka Sabha Elections) ಯಲ್ಲಿ ಮಣಿಸಲು ಈಗಾಗಲೇ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಕೂಡ ಭರ್ಜರಿ ತಯಾರಿ ನಡೆಸುತ್ತಿದೆ. ಈ ಮಧ್ಯೆ ಮಾಗಡಿ ಶಾಸಕ ಹೆಚ್.ಸಿ.ಬಾಲಕೃಷ್ಣ (HC Balakrishna)ಅವರು ‘ವೋಟ್ ಹಾಕಿದವರಿಗೆ ಅಭಿವೃದ್ಧಿ ಕೆಲಸ ಮಾಡುತ್ತೇವೆ ಎಂಬ ಹೇಳಿಕೆ ನೀಡಿ ಚರ್ಚೆಗೆ ಗ್ರಾಸವಾಗಿದ್ದರು. ಇದೀಗ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಹೌದು, ರಾಮನಗರದಲ್ಲಿ ಮಾತನಾಡಿದ ಅವರು ‘ನಾನು ತಪ್ಪೇನು ಹೇಳಿದ್ದೇನೆ, ಕೆಲಸ ಮಾಡಲಿ ಎಂದು ಮತ ಹಾಕುವುದು. ವೋಟ್ ಹಾಕದೆ ಇರುವವರಿಗೆ ಕೆಲಸ ಮಾಡಲ್ಲ ಎಂದು ಹೇಳಿಲ್ಲ. ಆಲೋಚನೆ ಮಾಡುತ್ತೇಬೆ ಎಂದಿದ್ದೇನೆ. ಹೆಚ್ಚು ಲೀಡ್ ಕೊಡುವ ಬೂತ್ಗಳ ಬಗ್ಗೆ ಆಸಕ್ತಿ ವಹಿಸುತ್ತೇವೆ. ಕಡಿಮೆ ಲೀಡ್ ಕೊಡುವ ಬೂತ್ಗೆ ಕಡಿಮೆ ಆಸಕ್ತಿ ವಹಿಸುತ್ತೇವೆ. ಇದರಲ್ಲಿ ದ್ವೇಷ ರಾಜಕಾರಣ ಏನಿದೆ?. ನಾನೇನು ಜಗಳ ಮಾಡೋಕೆ ಹೋಗಿದ್ದೀನಾ ಎನ್ನುವ ಮೂಲಕ ‘ಕೈ’ ಶಾಸಕ ಹೆಚ್.ಸಿ.ಬಾಲಕೃಷ್ಣ ಅವರು ತಾವು ನೀಡಿದ್ದ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಇದನ್ನೂ ಓದಿ:ಕಾಂಗ್ರೆಸ್‍ಗೆ ಮತ ಹಾಕದಿದ್ರೆ ಅಭಿವೃದ್ಧಿ ಮಾಡಲ್ಲ: ವಿವಾದಕ್ಕೀಡಾದ ಕಾಂಗ್ರೆಸ್ ಶಾಸಕರೊಬ್ಬರ ಪರೋಕ್ಷ ಹೇಳಿಕೆ
ಶಾಸಕರು ನೀಡಿದ್ದ ಹೇಳಿಕೆಯೇನು?
‘ರಾಜ್ಯದಲ್ಲಿ ಮುಂದಿನ ಐದು ವರ್ಷ ನಮ್ಮ ಸರ್ಕಾರ ಇರುತ್ತದೆ. ಬೂತ್ ಲೆಕ್ಕಾಚಾರದ ಮೇಲೆ ಎಲೆಕ್ಷನ್ ಆಗುತ್ತೆ. ಯಾವ್ ಬೂತ್ ನಲ್ಲಿ ನಮಗೆ ಹೆಚ್ಚು ಮತ ಬರುತ್ತದೆಯೋ ಅಲ್ಲಿ ಕೆಲಸ ಮಾಡುತ್ತೇವೆ. ವೋಟ್ ಹಾಕದಿದ್ದರೆ, ಅಂತಹ ಬೂತ್ಗಳ ಬಗ್ಗೆ ಆಲೋಚನೆ ಮಾಡುತ್ತೀವಿ. ಹಾಗಾಗಿ ಇದನ್ನ ಜನ ಯೋಚನೆ ಮಾಡಬೇಕು ಎಂದು ಪರೋಕ್ಷವಾಗಿ ಕಾಂಗ್ರೆಸ್ ಗೆ ಮತಹಾಕದಿದ್ರೆ ಅಭಿವೃದ್ಧಿ ಮಾಡಲ್ಲ ಎನ್ನುವ ಅರ್ಥದಲ್ಲಿ ಹೇಳಿದ್ದರು.
ಇದರ ಜೊತೆಗೆ ಶಾಸಕರ ಹೇಳಿಕೆಗೆ ಸಾರ್ವಜನಿಕವಾಗಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿದ್ದು, ಮಾಗಡಿ ಜೆಡಿಎಸ್ನ ಮಾಜಿ ಶಾಸಕ ಎ. ಮಂಜುನಾಥ್ ಕಿಡಿಕಾರಿದ್ದರು. ವೋಟ್ ಹಾಕಿದ್ರೆ ಮಾತ್ರ ಅಭಿವೃದ್ಧಿ, ವೋಟ್ ಹಾಕದ ಬೂತ್ಗಳಲ್ಲಿ ಅಭಿವೃದ್ಧಿ ಮಾಡುವುದಿಲ್ಲ ಎಂದು ಹೇಳುತ್ತಿದ್ದಾರೆ ಅಲ್ವಾ, ಏನ್ರಿ ನೀವು ರಾಜಕಾರಣಿ, ಶಾಸಕರಾಗಿ ಮಾತನಾಡುವ ಮಾತೇ ಎಂದು ಪ್ರಶ್ನಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ