ಗೃಹ ಸಚಿವರಿಗೆ, ಸಿಎಂ ರಾಜಕೀಯ ಕಾರ್ಯದರ್ಶಿಗೆ ಇಲ್ಲದ ಕೊವಿಡ್ ನಿರ್ಬಂಧ ನಮಗೇಕೆ: ಡಿಕೆ ಶಿವಕುಮಾರ್ ನೇರ ಸವಾಲು

ಗೃಹ ಸಚಿವರಿಗೆ, ಸಿಎಂ ರಾಜಕೀಯ ಕಾರ್ಯದರ್ಶಿಗೆ ಇಲ್ಲದ ಕೊವಿಡ್ ನಿರ್ಬಂಧ ನಮಗೇಕೆ: ಡಿಕೆ ಶಿವಕುಮಾರ್ ನೇರ ಸವಾಲು
ಮೇಕೆದಾಟು ಪಾದಯಾತ್ರೆಯಲ್ಲಿ ಡಿ.ಕೆ.ಶಿವಕುಮಾರ್

ಗೃಹ ಸಚಿವರು ಮತ್ತು ಸಿಎಂ ರಾಜಕೀಯ ಕಾರ್ಯದರ್ಶಿ ಪಾಲ್ಗೊಂಡಿದ್ದ ಊರುಗಳಲ್ಲಿ ಯಾವುದೇ ಕರ್ಫ್ಯೂ ಇರಲಿಲ್ಲವೇ? ಕನಕಪುರದಲ್ಲಿ ಮಾತ್ರ ನಮ್ಮ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಬೇಸರ ವ್ಯಕ್ತಪಡಿಸಿದರು.

TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Jan 10, 2022 | 5:45 PM


ರಾಮನಗರ: ಗೃಹ ಸಚಿವ ಆರಗ ಜ್ಞಾನೇಂದ್ರ ತಮ್ಮ ಸ್ವಕ್ಷೇತ್ರದಲ್ಲಿ ಸಾವಿರಾರು ಜನರನ್ನು ಸೇರಿಸಿ ಜಾತ್ರೆ ಮಾಡಿದ್ದಾರೆ. ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ಆಗ ಕರ್ನಾಟಕದಲ್ಲಿ ವೀಕೆಂಡ್ ಕರ್ಫ್ಯೂ ಇರಲಿಲ್ಲವೇ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು.

ಜಿಲ್ಲೆಯ ಮಾದಪ್ಪನ ದೊಡ್ಡಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೃಹ ಸಚಿವರು ಮತ್ತು ಸಿಎಂ ರಾಜಕೀಯ ಕಾರ್ಯದರ್ಶಿ ಪಾಲ್ಗೊಂಡಿದ್ದ ಸಮಾರಂಭಗಳು ನಡೆದ ಊರುಗಳಲ್ಲಿ ಯಾವುದೇ ಕರ್ಫ್ಯೂ ಇರಲಿಲ್ಲವೇ? ಕನಕಪುರದಲ್ಲಿ ಮಾತ್ರ ನಮ್ಮ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಕೊವಿಡ್ ಪ್ರಕರಣಗಳ ಬಗ್ಗೆ ಸುಳ್ಳು ಅಂಕಿಅಂಶಗಳನ್ನು ಕೊಡುತ್ತಿದ್ದಾರೆ. ಇದರ ಬಗ್ಗೆ ನ್ಯಾಯಂಗ ತನಿಖೆಯಾಗಬೇಕು ಎಂದು ಅವರು ಆಗ್ರಹಿಸಿದರು.

ನಾಳೆಯಿಂದ (ಜ.11) ಮೂರು ದಿನಗಳ ಕಾಲ ನನ್ನದು ಮೌನ ಮೆರವಣಿಗೆ. ಮಾಧ್ಯಮಗಳೊಂದಿಗೆ ನಮ್ಮ ಶಾಸಕರು, ಹಿರಿಯರು ಮಾತನಾಡುತ್ತಾರೆ. ನನ್ನನ್ನು ರಾಜಕೀಯವಾಗಿ ಸಾಯಿಸಲು ಹೊರಟಿದ್ದಾರೆ. ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ 30 ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಇಷ್ಟೇ ಜನರಿದ್ದ ಬಿಜೆಪಿ ನಾಯಕರಿದ್ದ ಸಮಾರಂಭಗಳಲ್ಲಿ ಪಾಲ್ಗೊಂಡಿದ್ದವರ ವಿರುದ್ಧ ಯಾವುದೇ ಪ್ರಕರಣಗಳು ದಾಖಲಾಗಿಲ್ಲ. ಇದರ ಬಗ್ಗೆ ನ್ಯಾಯಂಗ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ಆರೋಗ್ಯ ಅಧಿಕಾರಿಗಳಿಗೆ ಅಸಹಾರ ತೋರಿದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನನ್ನನ್ನ ಪಾಸಿಟಿವ್ ಮಾಡೋಕೆ ಬಂದಿದ್ರು ಅನ್ನೋದು ಗೊತ್ತಿತ್ತು. ಅವರ ಅಧಿಕಾರಿಗಳೇ, ಕೆಲ ಸಚಿವರೇ ಈ ಕುರಿತು ನನಗೆ ಮಾಹಿತಿ ಕೊಟ್ಟಿದ್ದರು. ಸರ್ಕಾರದ ಧೋರಣೆ ವಿರೋಧಿಸಿ ನಾನು ಮೂರು ದಿನ ಮೌನ ಪ್ರತಿಭಟನೆ ಮಾಡುತ್ತೇನೆ. ಮಾಧ್ಯಮಗಳ ಮೇಲೆ ನನಗೆ ಯಾವುದೇ ಸಿಟ್ಟು ಇಲ್ಲ. ಮಾಧ್ಯಮಗಳೊಂದಿಗೆ ನಾನು ಮಾತನಾಡುವುದಿಲ್ಲ ಎಂದರು.

ರೈತರ ಹಿತಕ್ಕಾಗಿ, ಜನರಿಗಾಗಿ, ನೀರಿಗಾಗಿ ನಾವು ಪಾದಯಾತ್ರೆ ಮಾಡುತ್ತಿದ್ದೇವೆ. ಪಾದಯಾತ್ರೆ ನಿಲ್ಲಿಸಲು ಸರ್ಕಾರ ಷಡ್ಯಂತ್ರ ಮಾಡಿದೆ. ನನ್ನನ್ನು ಭೇಟಿಯಾಗಲು ಬಂದಿದ್ದ ಅಧಿಕಾರಿಗೆ ಕೊವಿಡ್ ಪಾಸಿಟಿವ್ ಇತ್ತು. ಈ ಮೂಲಕ ನನ್ನನ್ನು ಪ್ರಾಥಮಿಕ ಸಂಪರ್ಕಿತ ಎನ್ನುವುದು ಅವರ ಹುನ್ನಾರವಾಗಿತ್ತು. ಇಂತಹ ಬುದ್ಧಿ ಸಿಎಂ ಬೊಮ್ಮಾಯಿಗೆ ಇಲ್ಲ. ಆದರೆ ಆದರೆ ಇಂತಹವು ಆರೋಗ್ಯ ಸಚಿವ ಸುಧಾಕರ್​ಗೆ ಬರುತ್ತೆ. ಏಕೆಂದರೆ ಚಾಮರಾಜನಗರದಲ್ಲಿ 36 ಜನ ಮೃತಪಟ್ಟಿದ್ದರೂ, ಆರೋಗ್ಯ ಸಚಿವ ಸುಧಾಕರ್ ಒಬ್ಬರೂ ಸತ್ತಿಲ್ಲ ಎಂದಿದ್ದರು ಎಂದು ನೆನಪಿಸಿಕೊಂಡರು.

ಈಗ ರಾಜ್ಯದಲ್ಲಿ ಬಂದಿರುವುದು ಬಿಜೆಪಿ ಕೊರೊನಾ ಸೋಂಕು ಎಂದು ಲೇವಡಿ ಮಾಡಿದ ಅವರು, ಕಮಿಷನ್ ಕಡಿಮೆಯಾಗಿದ್ದಕ್ಕೆ ಕೇಸ್ ಹೆಚ್ಚಿಸಿದ್ದಾರೆ ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ: ‘ಸರ್ಕಾರವೇ ಮೇಕೆದಾಟು ಪಾದಯಾತ್ರೆಯಲ್ಲಿ ಕೊರೊನಾ ಹಬ್ಬಿಸುತ್ತಿದೆ; ಡಿಕೆ ಶಿವಕುಮಾರ್ ಬಳಿ ಸೋಂಕಿತನನ್ನು ಕಳಿಸಲಾಗಿದೆ’
ಇದನ್ನೂ ಓದಿ: ಕೊವಿಡ್ ಟೆಸ್ಟ್ ಮಾಡಿಸಿಕೊಳ್ಳಿ ಎಂದ ಅಧಿಕಾರಿಗಳ ಮೇಲೆ ಹರಿಹಾಯ್ದ ಡಿಕೆ ಶಿವಕುಮಾರ್: ಡಿಕೆಶಿ ವರ್ತನೆಗೆ ಸಿಎಂ ಬೊಮ್ಮಾಯಿ, ಆರೋಗ್ಯ ಸಚಿವ ಸುಧಾಕರ್ ಖಂಡನೆ

Follow us on

Related Stories

Most Read Stories

Click on your DTH Provider to Add TV9 Kannada