ಮೇಕೆದಾಟು ಪಾದಯಾತ್ರೆಯಲ್ಲಿ ಶಿವರಾಜ್​ಕುಮಾರ್ ಭಾಗಿಯಾಗುತ್ತಾರೆ: ಉಮಾಶ್ರೀ, ಮಧು ಬಂಗಾರಪ್ಪ ವಿಶ್ವಾಸ

ಮೇಕೆದಾಟು ಪಾದಯಾತ್ರೆಯಲ್ಲಿ ಶಿವರಾಜ್​ಕುಮಾರ್ ಭಾಗಿಯಾಗುತ್ತಾರೆ: ಉಮಾಶ್ರೀ, ಮಧು ಬಂಗಾರಪ್ಪ ವಿಶ್ವಾಸ
ಶಿವರಾಜ್​ಕುಮಾರ್ (ಸಂಗ್ರಹ ಚಿತ್ರ)

Mekedatu Padayatra: ಈ ಪಾದಯಾತ್ರೆಯಲ್ಲಿ ಜನರು ತೋರಿಸುತ್ತಿರುವ ಪ್ರೀತಿ ಸಹಕಾರ ತುಂಬಾ ದೊಡ್ಡದು. ಬೆಂಗಳೂರುವರೆಗೂ ಯಶಸ್ವಿಯಾಗಿ ಪಾದಯಾತ್ರೆ ಸಾಗಲಿದೆ. ಹೋರಾಟದ ಹೆಜ್ಜೆಗೆ ನಮ್ಮ ಮಹಿಳಾ ಶಕ್ತಿ ಕೂಡ ದೊಡ್ಡಮಟ್ಟದಲ್ಲೇ ಕೈ ಜೋಡಿಸಿದೆ ಎಂದು ಉಮಾಶ್ರೀ ಹೇಳಿದ್ದಾರೆ.

TV9kannada Web Team

| Edited By: ganapathi bhat

Jan 10, 2022 | 4:01 PM


ರಾಮನಗರ: ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್‌ನಿಂದ ಪಾದಯಾತ್ರೆ ನಡೆಸಲಾಗುತ್ತಿದೆ. ಪಾದಯಾತ್ರೆಯಲ್ಲಿ ಸ್ಯಾಂಡಲ್​ವುಡ್ ನಟ, ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಭಾಗಿಯಾಗುತ್ತಾರೆ. ನಿನ್ನೆಯೂ ಅರ್ಧ ದಾರಿಗೆ ಬಂದು ವಾಪಸ್ ಹೋಗಿದ್ದಾರೆ. ಇದು ಪಕ್ಷಾತೀತವಾಗಿ ನಡೆಯುತ್ತಿರುವ ಹೋರಾಟ. ಎಲ್ಲರೂ ಇದಕ್ಕೆ ಕೈ ಜೋಡಿಸಬೇಕು. ಬಿಜೆಪಿಯವರೇ ಇದರಲ್ಲಿ ರಾಜಕೀಯ ಮಾಡದೇ ಯೋಜನೆ ಜಾರಿ ಮಾಡಲಿ. ಈ ಪಾದಯಾತ್ರೆ ಯಶಸ್ವಿಯಾಗಿ ಸಾಗಲಿದೆ. ಕನ್ನಡ ಚಿತ್ರರಂಗ ಕೂಡ ಕೈ ಜೋಡಿಸಲಿದೆ ಎಂದು ಟಿವಿ9ಗೆ ಕಾಂಗ್ರೆಸ್ ಮುಖಂಡ ಮಧು ಬಂಗಾರಪ್ಪ ಹೇಳಿಕೆ ನೀಡಿದ್ದಾರೆ.

ಮೇಕೆದಾಟು ಯೋಜನೆಗಾಗಿ ನಡೆಯುತ್ತಿರುವ ಪಾದಯಾತ್ರೆಯಲ್ಲಿ ನಟ ಶಿವರಾಜ್​​ಕುಮಾರ್ ಭಾಗಿಯಾಗಲಿದ್ದಾರೆ ಎಂದು ಮಾಜಿ ಸಚಿವೆ ಉಮಾಶ್ರೀ ಕೂಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ನಮ್ಮ ಸ್ಯಾಂಡಲ್ ವುಡ್ ಸಂಪೂರ್ಣವಾಗಿ ಕೈ ಜೋಡಿಸಿದೆ. ಅಣೆಕಟ್ಟು ನಿರ್ಮಾಣವಾಗಲೇಬೇಕು. ಈ ಪಾದಯಾತ್ರೆಯಲ್ಲಿ ಜನರು ತೋರಿಸುತ್ತಿರುವ ಪ್ರೀತಿ ಸಹಕಾರ ತುಂಬಾ ದೊಡ್ಡದು. ಬೆಂಗಳೂರುವರೆಗೂ ಯಶಸ್ವಿಯಾಗಿ ಪಾದಯಾತ್ರೆ ಸಾಗಲಿದೆ. ಹೋರಾಟದ ಹೆಜ್ಜೆಗೆ ನಮ್ಮ ಮಹಿಳಾ ಶಕ್ತಿ ಕೂಡ ದೊಡ್ಡಮಟ್ಟದಲ್ಲೇ ಕೈ ಜೋಡಿಸಿದೆ ಎಂದು ಉಮಾಶ್ರೀ ಹೇಳಿದ್ದಾರೆ.

ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಸಹಿತ 30 ಮಂದಿಯ ವಿರುದ್ಧ ಎಫ್​ಐಆರ್
ವೀಕೆಂಡ್ ಕರ್ಫ್ಯೂ ಉಲ್ಲಂಘಿಸಿ ಕಾಂಗ್ರೆಸ್ ಪಾದಯಾತ್ರೆ ನಡೆಸಿರುವ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಒಟ್ಟು 30 ಮಂದಿಯ ವಿರುದ್ಧ ಎಫ್​ಐಆರ್ ದಾಖಲು ಮಾಡಲಾಗಿದೆ. ಮೊದಲನೆಯ ಆರೋಪಿಯಾಗಿ ಡಿ.ಕೆ. ಶಿವಕುಮಾರ್, ಎರಡನೇ ಆರೋಪಿಯಾಗಿ ಸಿದ್ದರಾಮಯ್ಯ, ಮೂರನೇ, ನಾಲ್ಕನೇ ಹಾಗೂ ನಂತರದ ಆರೋಪಿಗಳಾಗಿ ಡಿ.ಕೆ. ಸುರೇಶ್, ವೀರಪ್ಪ ಮೊಯ್ಲಿ, ಮಲ್ಲಿಕಾರ್ಜುನ ಖರ್ಗೆ, ಡಾ.ಜಿ. ಪರಮೇಶ್ವರ್, ಈಶ್ವರ್ ಖಂಡ್ರೆ, ಉಮಾಶ್ರೀ, ಬಿ.ಕೆ. ಹರಿಪ್ರಸಾದ್ ವಿರುದ್ಧ ಎಫ್​ಐಆರ್ ದಾಖಲಿಸಲಾಗಿದೆ.

ಉಳಿದಂತೆ ಎಂ.ಬಿ. ಪಾಟೀಲ್, ರಾಮಲಿಂಗಾರೆಡ್ಡಿ, ರವಿ ಎಸ್, ಟಿ.ಬಿ. ಜಯಚಂದ್ರ, ಹೆಚ್.ಎಂ. ರೇವಣ್ಣ, ಸಲೀಂ ಅಹ್ಮದ್, ಎನ್.ಎ. ಹ್ಯಾರಿಸ್, ಲಕ್ಷ್ಮೀ ಹೆಬ್ಬಾಳ್ಕರ್, ವಿನಯ್ ಕುಲಕರ್ಣಿ, ಪ್ರಿಯಾಂಕ್ ಖರ್ಗೆ, ಯತೀಂದ್ರ ಸಿದ್ದರಾಮಯ್ಯ, ಯು.ಟಿ. ಖಾದರ್, ಸೌಮ್ಯಾ ರೆಡ್ಡಿ, ನಲಪಾಡ್ ಹ್ಯಾರಿಸ್, ಎನ್. ಚಲುವರಾಯಸ್ವಾಮಿ, ಮೋಟಮ್ಮ, ಹೆಚ್.ಕೆ. ಪಾಟೀಲ್, ಸಾಧುಕೋಕಿಲ, ಸಾ.ರಾ. ಗೋವಿಂದು, ಜಯಮಾಲಾ, ದುನಿಯಾ ವಿಜಿ, ಇತರರ ವಿರುದ್ಧ ಎಫ್​ಐಆರ್ ದಾಖಲು ಮಾಡಲಾಗಿದೆ.

ಸಾತನೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಕನಕಪುರ ತಹಶೀಲ್ದಾರ್ ವಿಶ್ವನಾಥ್ ದೂರಿನ ಮೇರೆಗೆ ಎಫ್​ಐಆರ್ ದಾಖಲು ಮಾಡಲಾಗಿದೆ. ಮೇಕೆದಾಟು ಪಾದಯಾತ್ರೆಗೆ ಭಾನುವಾರ (ಜನವರಿ 9) ಅದ್ಧೂರಿ ಚಾಲನೆ ನೀಡಲಾಗಿತ್ತು. ಕರ್ನಾಟಕದಲ್ಲಿ ಕೊರೊನಾ ಸೋಂಕು ಭೀತಿ ಹಿನ್ನೆಲೆ ವೀಕೆಂಡ್ ಕರ್ಫ್ಯೂ ವಿಧಿಸಲಾಗಿತ್ತು. ವೀಕೆಂಡ್ ಕರ್ಫ್ಯೂ ಜಾರಿಯಲ್ಲಿ ಇದ್ದರೂ ಮೇಕೆದಾಟು ಪಾದಯಾತ್ರೆ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಎಫ್​ಐಆರ್ ದಾಖಲಿಸಲಾಗಿದೆ.

ಇದನ್ನೂ ಓದಿ: Analysis: ಮೇಕೆದಾಟು ಪಾದಯಾತ್ರೆ: ಕಾಂಗ್ರೆಸ್ ಗೆಲುವಿಗೆ ಬರೆಯಲಿದೆಯೇ ಮುನ್ನುಡಿ?

ಇದನ್ನೂ ಓದಿ: ಮೇಕೆದಾಟು ಪಾದಯಾತ್ರೆ ಕಾಂಗ್ರೆಸ್ ರಾಜಕೀಯ ಪ್ರೇರಿತ ಪಾದಯಾತ್ರೆ: ಸಿಎಂ ಬಸವರಾಜ ಬೊಮ್ಮಾಯಿ

Follow us on

Related Stories

Most Read Stories

Click on your DTH Provider to Add TV9 Kannada