ಮೊಬೈಲ್‌ ಬಿಡಿ, ಪುಸ್ತಕ ಹಿಡಿ: ರಾಮನಗರದ ಶಿಕ್ಷಕರೊಬ್ಬರಿಂದ ವಿನೂತನ ಅಭಿಯಾನ

ಡ್ರಗ್ಸ್, ಮದ್ಯಪಾನದ ಚಟಕ್ಕಿಂತಲೂ ಇತ್ತೀಚೆಗೆ ಮಕ್ಕಳಿಗೆ ಮೊಬೈಲ್ ಗೀಳು ಹೆಚ್ಚಾಗಿದೆ. ಅತಿಯಾದ ಮೊಬೈಲ್ ವೀಕ್ಷಣೆ ಮಕ್ಕಳಲ್ಲಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸಾಕಷ್ಟು ದುಷ್ಪರಿಣಾಮ ಬೀರುತ್ತಿದೆ. ಈ ಬಗ್ಗೆ ರಾಮನಗರದ ಶಿಕ್ಷಕರೊಬ್ಬರು ಹೊಸ ಅಭಿಯಾನ ಆರಂಭಿಸಿದ್ದಾರೆ. ಮೊಬೈಲ್ ಬಿಡಿ, ಪುಸ್ತಕ ಹಿಡಿ ಎಂಬ ವಿನೂತನ ಅಭಿಯಾನದ ಮೂಲಕ ಮಕ್ಕಳು ಹಾಗೂ ಪೋಷಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ.

ಮೊಬೈಲ್‌ ಬಿಡಿ, ಪುಸ್ತಕ ಹಿಡಿ: ರಾಮನಗರದ ಶಿಕ್ಷಕರೊಬ್ಬರಿಂದ ವಿನೂತನ ಅಭಿಯಾನ
ಮೊಬೈಲ್‌ ಬಿಡಿ, ಪುಸ್ತಕ ಹಿಡಿ ಅಭಿಯಾನ
Updated By: Ganapathi Sharma

Updated on: Apr 10, 2025 | 3:02 PM

ರಾಮನಗರ, ಏಪ್ರಿಲ್ 10: ಇತ್ತೀಚೆಗೆ ಆರೋಗ್ಯ ಇಲಾಖೆ ನಡೆಸಿದ ಸಮೀಕ್ಷೆಯಲ್ಲಿ ಎರಡು ಗಂಟೆಯ ಅವಧಿಯಲ್ಲಿ ಸಾಮಾನ್ಯ ವಿದ್ಯಾರ್ಥಿಗಳು 600ಕ್ಕೂ ಹೆಚ್ಚು ರೀಲ್ಸ್ (Reels) ವೀಕ್ಷಣೆ ಮಾಡುತ್ತಾರೆ ಎಂಬ ಆಘಾತಕಾರಿ ಮಾಹಿತಿ ಹೊರ ಬಂದಿತ್ತು. ಮಕ್ಕಳಿಗೆ ಮೊಬೈಲ್ (Mobile Phone) ಇಲ್ಲದೆ ಊಟ ಮಾಡಿಸಲು ಪೋಷಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ದುಷ್ಪರಿಣಾಮಗಳಿಗೆ ಕಡಿವಾಣ ಹಾಕುವ ಸಂಬಂಧ ಪುಸ್ತಕದ ಕಡೆ ಆಸಕ್ತಿ ಮೂಡಿಸಲು ರಾಮನಗರ (Ramanagara) ತಾಲೂಕಿನ ವಾಜರಹಳ್ಳಿ ಶಾಲಾ ಶಿಕ್ಷಕ ಚಿಕ್ಕವೀರಯ್ಯ ವಿಭಿನ್ನ ಪ್ರಯತ್ನ ಮಾಡುತ್ತಿದ್ದಾರೆ.

ವಿದ್ಯಾರ್ಥಿಗಳ ಜತೆಗೆ, ಪೋಷಕರಿಗೂ ಮೊಬೈಲ್ ಚಟ ಬಿಡಿಸುವ ಸಲುವಾಗಿ ಶಿಕ್ಷಕ ಚಿಕ್ಕವೀರಯ್ಯ ‘‘ಮೊಬೈಲ್ ಬಿಡಿ, ಪುಸ್ತಕ ಹಿಡಿ’’ ಎಂಬ ಅಭಿಯಾನ ಆರಂಭಿಸಿದ್ದಾರೆ. ಗ್ರಾಮದ ಅರಳಿಕಟ್ಟೆ ಮೇಲೆ ಮಕ್ಕಳಿಗೆ ಪುಸ್ತಕಗಳನ್ನು ನೀಡಿ ಓದಿಸುವುದರ ಜೊತೆಗೆ ಪೋಷಕರಿಗೂ ಪುಸ್ತಕಗಳನ್ನು ನೀಡಿ ಮೊಬೈಲ್ ಬಳಕೆ ಕಡಿಮೆ ಮಾಡುವಂತೆ ಮನವಿ ಮಾಡುತ್ತಿದ್ದಾರೆ. ಬೇಸಿಗೆ ರಜೆಯಲ್ಲಿ ಮಕ್ಕಳಿಗೆ ಮೊಬೈಲ್ ಕೊಡದೇ ಹಾಡು, ನೃತ್ಯ, ಕ್ರೀಡೆಗಳನ್ನು ಕಲಿಸುವಂತೆ ಮನೆಮನೆಗೆ ತೆರಳಿ ಪೋಷಕರಲ್ಲಿ ಅರಿವು ಮೂಡಿಸುತ್ತಿದ್ದಾರೆ.

ವಾಜರಹಳ್ಳಿ ಶಾಲೆ

ಶಿಕ್ಷಕ ಚಿಕ್ಕವೀರಯ್ಯ ಪ್ರಯತ್ನಕ್ಕೆ ಗ್ರಾಮಸ್ಥರು ಕೈಜೋಡಿಸಿದ್ದು, ಮಕ್ಕಳ ಜೊತೆ ಕುಳಿತು ಪುಸ್ತಕ ಓದುವ ಕೆಲಸಕ್ಕೆ ಮುಂದಾಗಿದ್ದಾರೆ. ರಾಮನಗರ ತಾಲೂಕಿನ ಬನ್ನಿಕುಪ್ಪೆ ಗ್ರಾಮದ ಅರಳೀಕಟ್ಟೆ, ದೇವಸ್ಥಾನದ ಮುಂಭಾಗ ವಾರದಲ್ಲಿ ಒಂದು ದಿನ ಕುಳಿತು ಪುಸ್ತಕ ಓದುವುದರ ಜೊತೆಗೆ ಮಕ್ಕಳ ಮುಂದೆ ಮೊಬೈಲ್ ಬಳಕೆಗೂ ಕಡಿವಾಣ ಹಾಕಿದ್ದಾರೆ. ಮಕ್ಕಳಿಗೆ ಮೊಬೈಲ್ ಗೀಳು ಬಿಡಿಸುವುದರ ಜೊತೆಗೆ ಪುಸ್ತಕ ಹಾಗೂ ದೇಶಿ ಆಟಗಳ ಬಗ್ಗೆ ಆಸಕ್ತಿ ಮೂಡಿಸಲು ಈ ಅಭಿಯಾನಕ್ಕೆ ನಾವೂ ಸಹಕಾರ ನೀಡುತ್ತೇವೆ ಎಂದಿದ್ದಾರೆ.

ಇದನ್ನೂ ಓದಿ
ಶಾಲಾ ಶುಲ್ಕವಾಯ್ತು, ಇದೀಗ ಶಾಲಾ ವಾಹನ ಶುಲ್ಕ ಏರಿಕೆ ಸರದಿ: ಪೋಷಕರು ಪರದಾಟ
ಉಡುಪಿ ಕೃಷ್ಣ ಮಠ ರಥ ಬೀದಿಯಲ್ಲಿ ವೆಡ್ಡಿಂಗ್ ಫೋಟೊಶೂಟ್ ನಿಷೇಧ
ರೈಲ್ವೆ ಗೇಟ್​ ಬೋರ್ಡ್​ಗೆ ಮಸಿ ಬಳಿದ ಕನ್ನಡ ಪರ ಹೋರಾಟಗಾರರು, ವಿಡಿಯೋ ವೈರಲ್
ವಾಹನ ಪಾರ್ಕ್ ಮಾಡಿ ಮೆಟ್ರೋದಲ್ಲಿ ಸಂಚರಿಸುವವರಿಗೆ ಸಿಗಲಿದೆ ಡಿಸ್ಕೌಂಟ್

ಶಿಕ್ಷಕ ಚಿಕ್ಕವೀರಯ್ಯ

ಒಟ್ಟಾರೆಯಾಗಿ, ಮಕ್ಕಳಿಗೆ ಮೊಬೈಲ್ ಗೀಳು ಬಿಡಿಸಲು ಶಿಕ್ಷಕ ಆರಂಭಿಸಿರುವ ಈ ಅಭಿಯಾನ ಸಾಮಾಜಿಕ ಜಾಲತಾಣದಲ್ಲೂ ಸದ್ದು ಮಾಡುತ್ತಿದೆ. ಸಂಬಂಧಪಟ್ಟ ಶಿಕ್ಷಣ ಇಲಾಖೆ ಅಧಿಕಾರಿಗಳು ಈ ಅಭಿಯಾನವನ್ನ ಮತ್ತಷ್ಟು ವಿಸ್ತರಿಸಿದರೆ ಮಕ್ಕಳಿಗೆ ಅನುಕೂಲ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಇದನ್ನೂ ಓದಿ: ರಾಮನಗರ: ಜಮೀನು ವಿಚಾರಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯ ಕೇಸ್​, 12 ಮಂದಿಗೆ ಜೀವಾವಧಿ ಶಿಕ್ಷೆ

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ