ಉಡುಪಿ ಕೃಷ್ಣ ಮಠ ರಥ ಬೀದಿಯಲ್ಲಿ ಪ್ರಿ ವೆಡ್ಡಿಂಗ್, ಪೋಸ್ಟ್ ವೆಡ್ಡಿಂಗ್ ಫೋಟೊಶೂಟ್ ನಿಷೇಧ
ವೆಡ್ಡಿಂಗ್ ಫೋಟೋಗ್ರಾಫಿ, ಅದರಲ್ಲೂ ಪ್ರಿ ವೆಡ್ಡಿಂಗ್ ಹಾಗೂ ಪೋಸ್ಟ್ ವೆಡ್ಡಿಂಗ್ ಫೋಟೋಶೂಟ್ ಕ್ರೇಜ್ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಸಮಯ, ಸಂದರ್ಭ, ಸ್ಥಳದ ಪರಿವೆ ಇಲ್ಲದೆ ಜೋಡಿಗಳು ಫೋಟೋ ಶೂಟ್‌ನಲ್ಲಿ ನಿರತವಾಗಿರುವುದು ಅಲ್ಲಲ್ಲಿ ಕಾಣಿಸುತ್ತಿವೆ. ಇದೀಗ ಉಡುಪಿ ಕೃಷ್ಣ ಮಠದ ರಥ ಬೀದಿಯಲ್ಲಿ ಇಂಥ ಚಟುವಟಿಕೆಗಳಿಗೆ ನಿಷೇಧ ಹೇರಲಾಗಿದೆ.
ಉಡುಪಿ, ಏಪ್ರಿಲ್ 10: ಪ್ರಿ ವೆಡ್ಡಿಂಗ್ ಹಾಗೂ ಪೋಸ್ಟ್ ವೆಡ್ಡಿಂಗ್ ಫೋಟೋಶೂಟ್ (Wedding Photoshoot) ವಿಚಾರದಲ್ಲಿ ಉಡುಪಿ ಶ್ರೀ ಕೃಷ್ಣ ಮಠ (Udupi Sri Krishna Matha) ಮಹತ್ವದ ನಿರ್ಧಾರ ಕೈಗೊಂಡಿದೆ. ಕೃಷ್ಣ ಮಠದ ರಥ ಬೀದಿಯ ಆವರಣದಲ್ಲಿ ಪ್ರಿ ವೆಡ್ಡಿಂಗ್ ಹಾಗು ಪೋಸ್ಟ್ ವೆಡ್ಡಿಂಗ್ ಫೋಟೋಶೂಟ್ ನಿಷೇಧಿಸಿ ಪರ್ಯಾಯ ಪುತ್ತಿಗೆ ಮಠ (Puttige Mutt) ನಿರ್ಧಾರ ಪ್ರಕಟಿಸಿದೆ. ಬೆಳ್ಳಂಬೆಳಗ್ಗೆ ಹಾಗೂ ಸ್ವಾಮೀಜಿಗಳ ಓಡಾಟದ ವೇಳೆ ಮುಜುಗರದ ಸನ್ನಿವೇಶದ ಸೃಷ್ಟಿಯಾಗುವುದನ್ನು ತಪ್ಪಿಸುವುದಕ್ಕಾಗಿ ಮಠವು ಈ ಕ್ರಮ ಕೈಗೊಂಡಿದೆ.
ಕೃಷ್ಣ ಮಠದ ರಥಬೀದಿ ಪಾರಂಪರಿಕ ಕಟ್ಟಡಗಳು ಇರುವ ಜಾಗ. ಪ್ರಿ ವೆಡ್ಡಿಂಗ್ ಹಾಗೂ ಪೋಸ್ಟ್ ವೆಡ್ಡಿಂಗ್ ಫೋಟೋಶೂಟ್ ಹೆಸರಿನಲ್ಲಿ ಬೆಳ್ಳಂಬೆಳ್ಳಗ್ಗೆ ಮಠದ ಆವರಣದಲ್ಲಿ ಅಸಭ್ಯ ವರ್ತನೆ ಕಾಣಿಸುತ್ತಿದೆ. ಫೋಟೋಶೂಟ್ ನೆಪದಲ್ಲಿ ರಥಬೀದಿಯಲ್ಲಿ ಪ್ರೇಮ ಸಲ್ಲಾಪ ನಡೆಯುತ್ತಿದೆ. ಕೇರಳ ಬೆಂಗಳೂರು ಕಡೆಯಿಂದ ಬರುವ ಫೋಟೋಗ್ರಾಫರ್ಸ್ ಹಾವಳಿ ಹೆಚ್ಚಾಗಿದೆ. ಹೀಗಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಠದ ಅಧಿಕಾರಿಗಳು ತಿಳಿಸಿದ್ದಾರೆ.
ಅಷ್ಟಮಠಾಧೀಶರು ಓಡಾಡುವ ರಥಬೀದಿ ಇದಾಗಿದೆ. ನೂರಾರು ವರ್ಷಗಳಿಂದ ಯತಿಗಳು, ದಾಸರು ನಡೆದಾಡಿದ ಬೀದಿ ಇದಾಗಿದೆ. ಇದಕ್ಕೆ ಪಾವಿತ್ರ್ಯವಿದೆ. ಪ್ರತಿ ದಿನ ರಥ ಬೀದಿಯಲ್ಲಿ ಉತ್ಸವ ನಡೆಯುತ್ತದೆ. ಅಷ್ಟೇ ಅಲ್ಲದೆ ಇದು, ಅಷ್ಟಮಠಗಳು ಇರುವ ರಥಬೀದಿಯಾಗಿದೆ. ಇಲ್ಲಿ ಜೋಡಿಹಕ್ಕಿಗಳು ಸರಸ ಸಲ್ಲಾಪ ನಡೆಸುವುದು ಸರಿಯಲ್ಲ. ಹಾಗೆ ಮಾಡುವುದರಿಂದ ಧಾರ್ಮಿಕ ವಾತಾವರಣಕ್ಕೆ ಅಡ್ಡಿ ಆಗುತ್ತದೆ. ಹೀಗಾಗಿ ಮುಜುಗರದ ಸನ್ನಿವೇಶ ತಪ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಠ ತಿಳಿಸಿದೆ.
ಇದನ್ನೂ ಓದಿ: ಉಡುಪಿ ಲವ್ ಜಿಹಾದ್ ಪ್ರಕರಣಕ್ಕೆ ಟ್ವಿಸ್ಟ್: ನನ್ನನ್ನು ಯಾರೂ ಅಪಹರಿಸಿಲ್ಲ ಎಂದ ಯುವತಿ
ಒಂದು ಕಡೆ ಧಾರ್ಮಿಕತೆ ಆಚರಣೆ ನಡೆಯುವ ಸ್ಥಳ ಇದಾಗಿದೆ. ಮತ್ತೊಂದು ಕಡೆ ವಿವಿಧ ಊರುಗಳಿಂದ ಬರುವ ಫೋಟೋಗ್ರಾಫರ್‌ಗಳು, ಜೋಡಿಗಳು ವೆಡ್ಡಿಂಗ್ ಫೋಟೋಶೂಟ್ ಹೆಸರಿನಲ್ಲಿ ಸಲ್ಲಾಪ ಮಾಡುತ್ತಾರೆ. ಇದೊಂತರ ವಿರೋಧಭಾಸವಾಗಿ ಕಾಣಿಸುತ್ತಿದೆ. ಒಂದೆಡೆ ಧಾರ್ಮಿಕ ಪ್ರಜ್ಞೆ ವೃದ್ಧಿಸುತ್ತಿದ್ದರೆ, ಮತ್ತೊಂದೆಡೆ ಅದಕ್ಕೆ ತದ್ವಿರುದ್ಧವಾದ ವಾತಾವರಣಕ್ಕೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಹೆಚ್ಚಾಗಿ ಕಠಿಣ ಕ್ರಮ ಕೈಗೊಳ್ಳಲೇ ಬೇಕಾಯಿತು ಎಂದು ಮಠದ ಅಧಿಕಾರಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:07 am, Thu, 10 April 25