ವಾಹನ ಪಾರ್ಕ್ ಮಾಡಿ ಮೆಟ್ರೋ ಪ್ರಯಾಣ ಮಾಡುವವರಿಗೆ ಶೀಘ್ರದಲ್ಲೇ ಸಿಗಲಿದೆ ಡಿಸ್ಕೌಂಟ್
Namma Metro Parking: ನಮ್ಮ ಮೆಟ್ರೋ ಪ್ರಯಾಣಿಕರ ಪಾರ್ಕಿಂಗ್ ಸಮಸ್ಯೆಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಬಿಎಂಆರ್ಸಿಎಲ್ ಹೊಸ ಯೋಜನೆಯೊಂದನ್ನು ಜಾರಿಗೊಳಿಸಲು ಮುಂದಾಗಿದ್ದು, ಶೀಘ್ರದಲ್ಲೇ ಮೆಟ್ರೋ ಪ್ರಯಾಣಿಕರಿಗೆ ಶುಭ ಸುದ್ದಿ ನೀಡಲಿದೆ. ಅದರಂತೆ, ಮೆಟ್ರೋ ನಿಲ್ದಾಣಗಳಲ್ಲಿ ವಾಹನ ಪಾರ್ಕ್ ಮಾಡಿ ತೆರಳುವವರಿಗೆ ಡಿಸ್ಕೌಂಟ್ ಸಿಗಲಿದೆ.

ಬೆಂಗಳೂರು, ಏಪ್ರಿಲ್ 10: ನಮ್ಮ ಮೆಟ್ರೋದಲ್ಲಿ (Namma Metro) ಪ್ರಯಾಣ ಮಾಡುವವರು ನಗರದ ಹಲವು ಮೆಟ್ರೋ ನಿಲ್ದಾಣಗಳ ಬಳಿ ಅಡ್ಡಾದಿಡ್ಡಿ ವಾಹನ ಪಾರ್ಕ್ (Vehicle Parking) ಮಾಡಿ, ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತಿದ್ದಾರೆ. ಅಲ್ಲದೆ ಅನೇಕ ಮೆಟ್ರೋ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾದಂತೆ ಜಾಗ ಕೂಡ ಸಾಕಾಗದ ಪರಿಸ್ಥಿತಿ ನಿರ್ಮಾಣ ಆಗುತ್ತಿದೆ. ಈ ಎಲ್ಲಾ ಕಾರಣಕ್ಕಾಗಿ, ಪಾರ್ಕಿಂಗ್ಗಾಗಿ ಮೆಟ್ರೋ ನಿಲ್ದಾಣಗಳ ವಾಹನ ನಿಲುಗಡೆ ಜಾಗಗಳಿಗೆ ಹೊಸ ರೂಪ ಕೊಡಲು ಬಿಎಂಆರ್ಸಿಎಲ್ (BMRCL) ಮುಂದಾಗಿದೆ.
ನಗರದ ಹಲವು ಮೆಟ್ರೋ ನಿಲ್ದಾಣಗಳಲ್ಲಿ ಪಾರ್ಕಿಂಗ್ ಜಾಗ ಇದ್ದರೂ ಅನೇಕರು, ನಿಲ್ದಾಣಗಳ ಅಕ್ಕಪಕ್ಕ ಬೇಕಾಬಿಟ್ಟಿ ಪಾರ್ಕ್ ಮಾಡಿ ಹೋಗುತ್ತಿದ್ದಾರೆ. ಇದು ನಿಲ್ದಾಣಗಳ ಅಕ್ಕಪಕ್ಕದ ನಿವಾಸಿಗಳಿಗೂ ಸಾಕಷ್ಟು ಸಮಸ್ಯೆ ತಂದೊಡ್ಡಿದೆ. ಅಲ್ಲದೇ ನಿತ್ಯ ಅನೇಕ ಸಮಸ್ಯೆಗಳಿಗೂ ಕಾರಣವಾಗ್ತಿದೆ. ಬೈಕ್, ಕಾರ್ ಯಾವುದೇ ವಾಹನವಾದ್ರು ಅಡ್ಡಾದಿಡ್ಡಿ ನಿಲ್ಲಿಸಿ ಹೋಗೋ ಕಾರಣ ಸಾರ್ವಜನಿಕರಿಗೆ ಸಮಸ್ಯೆ ಜೊತೆಗೆ ವಾಹನ ಮಾಲೀಕರಿಗೂ ಸೇಫ್ಟಿ ಸಮಸ್ಯೆಯಾಗ್ತಿದೆ. ಈ ಎಲ್ಲಾ ಸಮಸ್ಯೆ ತಪ್ಪಿಸಲು, ಆಯಾ ಮೆಟ್ರೋ ನಿಲ್ದಾಣಗಳಲ್ಲಿ ಮಾಲ್ ಗಳಲ್ಲಿ ಇರುವಂತಹ ಮಲ್ಟಿ ಲೆವಲ್ ಪಾರ್ಕಿಂಗ್ ಮಾದರಿಯನ್ನು ಅನುಸರಿಸಲು ಬಿಎಂಆರ್ಸಿಎಲ್ ಮುಂದಾಗಿದೆ. ಅದರಂತೆ ಪಾರ್ಕಿಂಗ್ ಸ್ಥಳದಲ್ಲಿ ಮಷಿನ್ಗಳನ್ನ ಬಳಸಿ ಮಲ್ಟಿ ಲೆವಲ್ ಪಾರ್ಕಿಂಗ್ ಆರಂಭಿಸಲು ಚಿಂತನೆ ನಡೆಸಿದೆ. ಸದ್ಯ ಮಲ್ಟಿ ಲೆವಲ್ ಪಾರ್ಕಿಂಗ್ ಬೇಕಾದ ಮಷಿನ್ ಖರೀದಿ ಮಾಡಲು ಮುಂದಾಗಿದೆ. ಇದರ ಜೊತೆಗೆ ಮೆಟ್ರೋದಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರು ವಾಹನಗಳನ್ನು ಮೆಟ್ರೋ ಸ್ಟೇಷನ್ನಲ್ಲಿ ಪಾರ್ಕಿಂಗ್ ಮಾಡಿದ್ರೆ ಡಿಸ್ಕೌಂಟ್ ನೀಡಲು ಚಿಂತನೆ ಮಾಡಲಾಗುತ್ತಿದೆ ಎಂದು ಬಿಎಂಆರ್ಸಿಎಲ್ ಎಂಡಿ ಮಹೇಶ್ವರ್ ರಾವ್ ತಿಳಿಸಿದ್ದಾರೆ.
ಎಲ್ಲೆಲ್ಲಿ ಮಲ್ಟಿ ಲೆವೆಲ್ ಪಾರ್ಕಿಂಗ್, ಡಿಸ್ಕೌಂಟ್?
ಸದ್ಯ ಆರಂಭದಲ್ಲಿ ಕೆಆರ್ ಪುರ ಮತ್ತು ಮೆಜೆಸ್ಟಿಕ್ನಲ್ಲಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಆರಂಭಿಸಲು ಚಿಂತನೆ ನಡೆಸಲಾಗಿದೆ. ಬಳಿಕ ಹಂತ ಹಂತವಾಗಿ ಇತರೆ ನಿಲ್ದಾಣಗಳಿಗೂ ವಿಸ್ತರಣೆ ಮಾಡಲು ಬಿಎಂಆರ್ಸಿಎಲ್ ಚಿಂತನೆ ನಡೆಸಿದೆ. ಪ್ರಯಾಣಿಕರಿಗೆ ಮೆಟ್ರೋ ಕಾರ್ಡ್, ಅಥವಾ ಪೇಪರ್ ಟಿಕೆಟ್, ಯುಪಿಐ ಆಧಾರಿಸಿ ಶೇಕಡವಾರು ಪಾರ್ಕಿಂಗ್ ದರದಲ್ಲೂ ಡಿಸ್ಕೌಂಟ್ ನೀಡಲು ಚಿಂತನೆ ನಡೆಸಲಾಗಿದೆ.
ಇದನ್ನೂ ಓದಿ: ಬೆಂಗಳೂರು ಮೈಸೂರು ರೈಲು ಪ್ರಯಾಣಿಕರಿಗೆ ಸಂಕಷ್ಟ
ಆದರೆ, ಪಾರ್ಕಿಂಗ್ಗೆ ಡಿಸ್ಕೌಂಟ್ ನೀಡಿದರೆ ಹಿಂದಿನ ರೀತಿಯಲ್ಲಿ ಪ್ರಯಾಣಿಕರು ಬರಬಹುದು ಎಂದು ನಿರೀಕ್ಷೆ ಮಾಡುವುದು ತಪ್ಪಾಗುತ್ತದೆ. ಮೆಟ್ರೋ ಪ್ರಯಾಣ ದರ ಹಿಂದಿನಷ್ಟೇ ಇದ್ದರೆ ಹೆಚ್ಚು ಪ್ರಯಾಣಿಕರು ಬರಬಹುದು ಎಂದು ಪ್ರಯಾಣಿಕ ಭಾನುಪ್ರಕಾಶ್ ಎಂಬವರು ಅಭಿಪ್ರಾಯಪಟ್ಟಿದ್ದಾರೆ.