Ramanagara News: ಹೆಣ್ಣು, ಲಾರಿ ವಿಚಾರವಾಗಿ ಇಬ್ಬರ ನಡುವೆ ಜಟಾಪಟಿ; ಮಧ್ಯಸ್ತಿಕೆ ವಹಿಸಲು ಹೋದವನ ಬರ್ಬರ ಹತ್ಯೆ
ಅವರೆಲ್ಲ ಸಾಕಷ್ಟು ಪರಿಚಯಸ್ಥರಾಗಿದ್ರು, ಟಿಪ್ಪರ್ ಲಾರಿಗಳನ್ನ ಇಟ್ಟುಕೊಂಡು ವ್ಯವಹಾರ ಮಾಡುತ್ತಿದ್ದರು. ಆದರೆ, ಅದೊಬ್ಬಳು ನಾರಿಯ ವಿಚಾರಕ್ಕೆ ಮೊದಲು ಕಿರಿಕ್ ಆರಂಭಗೊಂಡಿತ್ತು. ಆ ನಂತರ ಅದು ವಿಕೋಪಕ್ಕೆ ತಿರುಗಿ, ಟಿಪ್ಪರ್ ಲಾರಿಯೊಂದನ್ನ ರಾತ್ರೋರಾತ್ರಿ ಅದೊಬ್ಬ ಎತ್ತುಕೊಂಡು ಹೋಗಿದ್ದ. ಅವರಿಬ್ಬರ ಗಲಾಟೆ ವಿಚಾರಕ್ಕೆ ಮಧ್ಯಸ್ತಿಕೆ ವಹಿಸಲು ಬಂದವನು ಅವತ್ತು ಮಧ್ಯರಾತ್ರಿಯಲ್ಲಿ ಬರ್ಬರವಾಗಿ ಹತ್ಯೆಯಾಗಿದ್ದ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು 17 ಜನ ಆರೋಪಿಗಳನ್ನ ಹೆಡೆಮುರಿ ಕಟ್ಟಿದ್ದಾರೆ.
ರಾಮನಗರ: ಹೆಣ್ಣು ಹಾಗೂ ಲಾರಿ ವಿಚಾರವಾಗಿ ಇಬ್ಬರ ಮಧ್ಯೆ ಗಲಾಟೆ ಆರಂಭವಾಗಿದ್ದು, ಈ ವಿಚಾರವಾಗಿ ಮಧ್ಯಸ್ಥಿಕೆ ವಹಿಸಲು ಹೋದವನು ಬರ್ಬರವಾಗಿ ಹತ್ಯೆಯಾಗಿದ್ದ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ, ರಾಮನಗರ(Ramanagara)ಗ್ರಾಮಾಂತರ ಠಾಣೆ ಪೊಲೀಸರು ಪ್ರಮುಖ ಆರೋಪಿ ಮಂಜುನಾಥ್ ಸೇರಿ 17 ಜನ ಆರೋಪಿಗಳನ್ನ ಬಂಧಿಸಿದ್ದಾರೆ. ಮೇ.25 ಮಧ್ಯರಾತ್ರಿ ರಾಮನಗರ ತಾಲೂಕಿನ ವಡ್ಡರದೊಡ್ಡಿ ಗೇಟ್ ಬಳಿ ಗಲಾಟೆ ನಡೆದಿತ್ತು. ಈ ಗಲಾಟೆಯಲ್ಲಿ ಬೆಂಗಳೂರಿನ ಸುಂಕದಕಟ್ಟೆ ನಿವಾಸಿ ಮಂಜುನಾಥ್(29) ಎಂಬಾತ ಬರ್ಬರವಾಗಿ ಕೊಲೆಯಾಗಿದ್ದ.
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೆಎಂ ದೊಡ್ಡಿ ನಿವಾಸಿ ರಘು, ರಾಮನಗರ ತಾಲೂಕಿನ ಬೆಣ್ಣಹಳ್ಳಿ ನಿವಾಸಿ ಮಂಜುನಾಥ್ ಎಂಬುವವರು ಕಳೆದ ಹಲವು ವರ್ಷಗಳಿಂದ ಪರಿಚಯಸ್ಥರು. ರಘುನ ಟಿಪ್ಪರ್ ಲಾರಿಗಳನ್ನ ಬಾಡಿಗೆ ಪಡೆದು ಆರೋಪಿ ಮಂಜುನಾಥ್ ಜಲ್ಲಿ, ಡಸ್ಟ್, ಕ್ರಷರ್ಗಳನ್ನ ತುಂಬಿಸಿ ಮಾರಾಟ ಮಾಡುತ್ತಿದ್ದ. ಕಳೆದ ಹಲವು ತಿಂಗಳಿಂದ ಚೆನ್ನಾಗಿಯೇ ಇದ್ದರು. ಆದರೆ, ಈ ಮಧ್ಯೆ ತನ್ನದೇ ಗ್ರಾಮದ ರಾಣಿ ಎಂಬಾಕೆಯನ್ನ ಕೊಲೆ ಆರೋಪಿ ಮಂಜುನಾಥ್, ಕೆ ಎಂ ದೊಡ್ಡಿಗೆ ಕರೆದುಕೊಂಡು ಹೋಗಿ ಮನೆ ಮಾಡಿ ಇಟ್ಟಿದ್ದ. ರಾಣಿ ಎಂಬಾಕೆಯ ಜೊತೆ ಲಾರಿ ಮಾಲೀಕನಾಗಿದ್ದ ರಘು ಅನುಚಿತವಾಗಿ ವರ್ತನೆ ಮಾಡಿದ್ದಾನೆ ಎಂಬ ವಿಚಾರಕ್ಕೆ ರಘು ಹಾಗೂ ಮಂಜುನಾಥ್ ನಡುವೆ ಗಲಾಟೆ ನಡೆದಿತ್ತು.
ಇದನ್ನೂ ಓದಿ:Bengaluru News: ಪತ್ನಿಯನ್ನ ಕೊಲೆ ಮಾಡಿ ಅಸ್ಪತ್ರೆಗೆ ತಂದ ಪತಿ; ತನಿಖೆ ಬಳಿಕ ಬಯಲಾಯ್ತು ಅಸಲಿ ಕಥೆ
ಇದೇ ವಿಚಾರವಾಗಿ ರಘು ಮೇ 22ರಂದು ಕೆ ಎಂ ದೊಡ್ಡಿ ಠಾಣೆಯಲ್ಲಿ ಮಂಜುನಾಥ್ ಹಾಗೂ ರಾಣಿ ವಿರುದ್ದ ದೂರು ನೀಡಿದ್ದ. ಈ ವಿಚಾರಕ್ಕೆ ಸಿಟ್ಟಾದ ಆರೋಪಿ ಮಂಜುನಾಥ್, ರಘುಗೆ ಸಂಬಂಧಿಸಿದ ಟಿಪ್ಪರ್ ಲಾರಿಯನ್ನ ಮೇ.25ರಂದು ಚಾಲಕ ಬಸವಣ್ಣ ಎಂಬಾತನಿಂದ ಕಿತ್ತುಕೊಂಡು ಹೋಗಿ ಅಜ್ಞಾತ ಸ್ಥಳದಲ್ಲಿ ನಿಲ್ಲಿಸಿದ್ದ. ಈ ವಿಚಾರ ತಿಳಿಯುತ್ತಿದ್ದಂತೆ ರಘು ತನ್ನ ಸ್ನೇಹಿತರನ್ನ ಎರಡು ಕಾರಿನಲ್ಲಿ ಕರೆದುಕೊಂಡು ರಾತ್ರಿ ಬೆಣ್ಣಹಳ್ಳಿಗೆ ಬಂದಿದ್ದ. ಲಾರಿಯಲ್ಲಿ ಜಿಪಿಎಸ್ ಅಳವಡಿಸಿದ್ದರಿಂದ ಲಾರಿ ನಿಲ್ಲಿಸಿದ್ದ ಸ್ಥಳ ಗೊತ್ತಾಗಿತ್ತು.
ಇದೇ ವಿಚಾರವಾಗಿ ರಘು ಪರವಾಗಿ ಬೆಂಗಳೂರಿನ ಸುಂಕದಕಟ್ಟೆ ನಿವಾಸಿ ಕೊಲೆಯಾದ ಮಂಜುನಾಥ್ ಸಹ ಬಂದಿದ್ದ. ಕೊಲೆಯಾದ ಮಂಜುನಾಥ ಹಾಗೂ ಕೊಲೆ ಆರೋಪಿ ಮಂಜುನಾಥ್ಗೆ ಸಾಕಷ್ಟು ಪರಿಚಯವಿದ್ದ. ಕೊಲೆಯಾದ ಮಂಜುನಾಥ್ ಬಳಿಯೇ ಆರೋಪಿ ಮಂಜುನಾಥ್ ಲಾರಿ ಚಾಲಕನಾಗಿ ಕೆಲಸ ಮಾಡಿದ್ದ. ಹೀಗಾಗಿ ತಾನೇ ರಾತ್ರಿ 12 ಗಂಟೆ ಸುಮಾರಿಗೆ ಮಾತನಾಡಲು ಮಂಜುನಾಥ್ ಮುಂದಾಗಿದ್ದ. ಲಾರಿ ಮಾಲೀಕ ರಘು ಹಾಗೂ ಸ್ನೇಹಿತರು ಇದ್ದರು. ಈ ವೇಳೆ ಏಕಾಏಕಿ ಆರೋಪಿ ಮಂಜುನಾಥ್, ರಘು ಮೇಲೆ ಹಲ್ಲೆ ಮಾಡಲು ಮುಂದಾಗಿದ್ದು, ಮಂಜುನಾಥ್ ಅಡ್ಡ ಬಂದಿದ್ದ. ಈ ವೇಳೆ ಮಂಜುನಾಥ್ನ ಎದೆ ಭಾಗಕ್ಕೆ ಆರೋಪಿ ಮಂಜುನಾಥ್ ಚುಚ್ಚಿದ್ದ.
ಇದನ್ನೂ ಓದಿ:Bengaluru News: ಮಹಾಲಕ್ಷ್ಮಿ ಲೇಔಟ್ನಲ್ಲಿ ವೃದ್ದೆ ಕೊಲೆ ಮಾಡಿ ಬಂಗಾರ ದೋಚಿದ್ದ ಪ್ರಕರಣ; ಮೂವರು ಅರೋಪಿಗಳು ಅರೆಸ್ಟ್
ರಘು ಹಾಗೂ ಸಂಗಡಿರ ಮೇಲೂ ಹಲ್ಲೆ ಮಾಡಲು ಮುಂದಾಗಿದ್ದ. ಇದೇ ವೇಳೆ ರಘು ಅಂಡ್ ಟೀಂ ಪರಾರಿಯಾಗಿದ್ದರು. ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಮನಗರ ಗ್ರಾಮಾಂತರ ಠಾಣೆ ಪೊಲೀಸರು ಪ್ರಮುಖ ಆರೋಪಿ ಮಂಜುನಾಥ್ ಸೇರಿ 17 ಜನರನ್ನ ಬಂಧಿಸಿದ್ದಾರೆ. ಒಟ್ಟಾರೆ ಇಬ್ಬರ ಮಧ್ಯೆ ನಡೆದಿದ್ದ ಗಲಾಟೆಯನ್ನ ಬಗೆಹರಿಸಲು ಹೋಗಿ ಲಾರಿ ಮಾಲೀಕನಾಗಿದ್ದ ಮಂಜುನಾಥ್ ಎಂಬಾತ ಹತ್ಯೆಯಾಗಿದ್ದ. ಇದೇ ಪ್ರಕರಣಕ್ಕೆ ಆರೋಪಿಗಳನ್ನ ಬಂಧಿಸಿದ್ದ ಪೊಲೀಸರು ಜೈಲಿನಲ್ಲಿ ಮುದ್ದೆ ಮುರಿಯುವಂತೆ ಮಾಡಿದ್ದಾರೆ.
ವರದಿ: ಪ್ರಶಾಂತ್ ಹುಲಿಕೆರೆ, ಟಿವಿ9 ರಾಮನಗರ
ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ