
ಬೆಂಗಳೂರು ದಕ್ಷಿಣ, ಆಗಸ್ಟ್ 20: ಬೆಂಗಳೂರು ದಕ್ಷಿಣ (Bangalore South) ಜಿಲ್ಲೆ ಚನ್ನಪಟ್ಟಣ (Channapatna) ತಾಲ್ಲೂಕಿನ ಎಂಕೆ ದೊಡ್ಡಿ ಪೊಲೀಸ್ ಠಾಣೆಯ (Police Station) ಶೌಚಾಲಯದಲ್ಲಿ ಆರೋಪಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ದುಂಡನಹಳ್ಳಿ ಗ್ರಾಮದ ರಮೇಶ್ (59) ನೇಣಿಗೆ ಶರಣಾದ ಆರೋಪಿ. ಆರೋಪಿ ರಮೇಶ್ ಎರಡು ತಿಂಗಳ ಹಿಂದೆ ಚನ್ನಪಟ್ಟಣ ತಾಲ್ಲೂಕಿನ ಬೊಮ್ಮನಾಯಕನಹಳ್ಳಿ ಗ್ರಾಮದ ದೇವಸ್ಥಾನವೊಂದರಲ್ಲಿ ಹುಂಡಿ ಕಳ್ಳತನ ಮಾಡಿದ್ದನು.
ಪ್ರಕರಣ ಸಂಬಂಧ ಪೊಲೀಸರು ಆರೋಪಿಗಳಾದ ರಮೇಶ್, ಮಂಜು ಮತ್ತು ಶ್ರೀನಿವಾಸ್ ಎಂಬುವರನ್ನು ಬಂಧಿಸಿದ್ದರು. ಆಗಸ್ಟ್ 18ರಂದು ಚನ್ನಪಟ್ಟಣದ ನ್ಯಾಯಾಲಯದ ಮುಂದೆ ಆರೋಪಿಗಳನ್ನು ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆಂದು 3 ದಿನ ಪೊಲೀಸ್ ಕಸ್ಟಡಿಗೆ ಪಡೆಯಲಾಗಿತ್ತು. ಕದ್ದ ವಸ್ತುಗಳನ್ನು ಪೊಲೀಸರು ಆರೋಪಿಗಳಿಂದ ವಶಕ್ಕೆ ಪಡೆದಿದ್ದರು.
ಇಂದು (ಆ.20) ಮತ್ತೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಬೇಕಿತ್ತು. ಆದರೆ ಬೆಳಗ್ಗೆ 6:30ರ ಸುಮಾರಿಗೆ ಶೌಚಾಲಯಕ್ಕೆ ತೆರಳಿದ್ದ ಆರೋಪಿ ರಮೇಶ್, ತನ್ನ ಪಂಚೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬಹಳ ಸಮಯವಾದರೂ ರಮೇಶ್ ಶೌಚಾಲಯದಿಂದ ಹೊರಗೆ ಬಾರದ ಹಿನ್ನೆಲೆಯಲ್ಲಿ ಪೊಲೀಸ್ ಸಿಬ್ಬಂದಿ ಹೋಗಿ ನೋಡಿದಾಗ, ನೇಣು ಬಿಗಿದ ಸ್ಥಿತಿಯಲ್ಲಿದ್ದನು. ಕೂಡಲೇ ಪೊಲೀಸರು ರಮೇಶ್ನನ್ನು ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ, ಅಷ್ಟೊತ್ತಿಗಾಗಲೇ ರಮೇಶ್ನ ಪ್ರಾಣಪಕ್ಷಿ ಹಾರಿಹೋಗಿತ್ತು.
ಇದನ್ನೂ ಓದಿ: ಪ್ರೀತಿ ನಿರಾಕರಿಸಿದ್ದಕ್ಕೆ ವಿವಾಹಿತ ಮಹಿಳೆಯ ಕೊಲೆ ಆರೋಪ
ವಿಷಯ ತಿಳಿಯುತ್ತಿದ್ದಂತೆ ರಮೇಶ್ನ ಕುಟುಂಬಸ್ಥರು ಆಸ್ಪತ್ರೆ ಬಳಿ ಜಮಾವಣೆಗೊಂಡಿದ್ದರು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಪೊಲೀಸರ ಮೇಲೆ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ಆತ್ಮಹತ್ಯೆಗೆ ಶರಣಾಗಿರುವ ಆರೋಪಿ ರಮೇಶ್ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದವು. ಒಂದು ಪ್ರಕರಣದಲ್ಲಿ ಶಿಕ್ಷೆ ಕೂಡ ಪ್ರಕಟವಾಗಿತ್ತು.
ಇಂದು ಮತ್ತೆ ನ್ಯಾಯಾಧೀಶರ ಮುಂದೆ ಹಾಜರು ಪಡೆಸುವ ಮೊದಲೇ ಠಾಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಾಹಿತಿ ತಿಳಿದು ಠಾಣೆಗೆ ಭೇಟಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ಪರಿಶೀಲನೆ ನಡೆಸಿದರು. ಪ್ರಕರಣವನ್ನು ಈಗಾಗಲೇ ಸಿಐಡಿ ತನಿಖೆಗೆ ವಹಿಸಲಾಗಿದೆ. ಸಿಐಡಿ ಅಧಿಕಾರಿಗಳು ಮುಂದಿನ ತನಿಖೆಯನ್ನ ಕೂಡ ನಡೆಸಲಿದ್ದಾರೆ ಎಂದು ತಿಳಿಸಿದರು.
ಒಟ್ಟಾರೆಯಾಗಿ ಪೊಲೀಸ್ ಕಸ್ಟಡಿಯಲ್ಲಿ ಇದ್ದ ಆರೋಪಿ ನೇಣಿಗೆ ಶರಣಾಗಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ಸಿಐಡಿ ತನಿಖೆಯಿಂದ ಸತ್ಯಾಸತ್ಯತೆ ಹೊರಬರಬೇಕಿದೆ.
Published On - 9:34 pm, Wed, 20 August 25