ಹಾಸನ: ಪ್ರೀತಿ ನಿರಾಕರಿಸಿದ್ದಕ್ಕೆ ವಿವಾಹಿತ ಮಹಿಳೆಯ ಕೊಲೆ ಆರೋಪ
ಪ್ರೇಮ ಪ್ರಸ್ತಾಪ ನಿರಾಕರಿಸಿದ್ದಕ್ಕೆ ವಿವಾಹಿತ ಮಹಿಳೆ ಕೊಲೆಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಚಂದನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಅರೆಹಳ್ಳಿ ಪೊಲೀಸರು ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.ಅರೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಹಾಸನ, ಆಗಸ್ಟ್ 20: ಪ್ರೀತಿ ನಿರಾಕರಿಸಿದ್ದಕ್ಕೆ ವಿವಾಹಿತ ಮಹಿಳೆಯನ್ನು ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಹಾಸನ (Hassan) ಜಿಲ್ಲೆಯ ಬೇಲೂರು (Beluru) ತಾಲೂಕಿನ ಚಂದನಹಳ್ಳಿ ಗ್ರಾಮದ ಶ್ವೇತಾ (32) ಮೃತದುರ್ದೈವಿ. ಸಿನಿಮೀಯ ರೀತಿಯಲ್ಲಿ ಕಾರು ಕೆರೆಗೆ ತಳ್ಳಿ ಮಹಿಳೆಯನ್ನು ಹತ್ಯೆ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಮೃತ ಶ್ವೇತಾ ಗಂಡನಿಂದ ದೂರಾಗಿ ತವರು ಮನೆ ಸೇರಿದ್ದರು. ಹಾಸನದಲ್ಲಿ ಕೆಲಸ ಮಾಡುವಾಗ ಶ್ವೇತಾ ಅವರಿಗೆ ರವಿ ಎಂಬುವರು ಪರಿಚಯವಾಗಿದ್ದಾರೆ.
ಆಗ, “ನಾನು ಪತ್ನಿ ಬಿಟ್ಟು ಬರುತ್ತೇನೆ, ನೀನು ಬಾ” ಎಂದು ರವಿ ಮೃತ ಶ್ವೇತಾರಿಗೆ ಹೇಳಿದ್ದನು. ಆದರೆ ಶ್ವೇತಾ, ರವಿಯ ಪ್ರಸ್ತಾಪವನ್ನು ನಿರಾಕರಿಸಿದ್ದರು. ತನ್ನ ಪ್ರಸ್ತಾಪ ನಿರಾಕರಿಸಿದ್ದಕ್ಕೆ ಶ್ವೇತಾರನ್ನು ರವಿ ಕೊಲೆ ಮಾಡಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ.
ಮಂಗಳವಾರ (ಆ.19) ದಂದು ಶ್ವೇತಾರನ್ನು ಕಾರಿನಲ್ಲಿ ರವಿ ಚಂದನಹಳ್ಳಿ ಕೆರೆ ಬಳಿ ಕರೆದುಕೊಂಡು ಬಂದಿದ್ದರು. ಅಲ್ಲಿ, ಕಾರು ಕೆರೆಯಲ್ಲಿ ಬಿದ್ದಿದೆ. ರವಿ ಈಜಿಕೊಂಡು ಬಂದು ದಡ ಸೇರಿದ್ದರೇ, ಶ್ವೇತಾ ಜಲ ಸಮಾಧಿಯಾಗಿದ್ದಾರೆ. ರವಿ ಪೊಲೀಸರ ಎದುರು, “ಕಾರು ಆಕಸ್ಮಿಕವಾಗಿ ಕೆರೆಗೆ ಬಿದ್ದಿದೆ, ನನ್ನ ಗೆಳತಿ ಕಾರಲ್ಲಿದ್ದಾಳೆ. ನಾನು ಈಜಿಕೊಂಡು ದಡ ಸೇರಿದ್ದೇನೆ” ಎಂದು ಹೇಳಿದ್ದಾರೆ. ಸದ್ಯ, ಅರೆಹಳ್ಳಿ ಪೊಲೀಸರು ರವಿಯನ್ನು ವಶಕ್ಕೆ ಪಡೆದಿದ್ದಾರೆ. ಅರೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಇದನ್ನೂ ಓದಿ: ಅಕ್ರಮ ಸಂಬಂಧ: ಪತ್ನಿಯನ್ನು ಪೊಲೀಸ್ ಠಾಣೆಯ ಸಮೀಪವೇ ಕೊಂದ ಪತಿ
ಪತ್ನಿ ಹತ್ಯೆಗೆ ಯತ್ನಿಸಿದ ಪತಿ
ಹಾವೇರಿ: ಶೀಲ ಶಂಕಿಸಿ ಕತ್ತು ಕೊಯ್ದು ಪತ್ನಿಯನ್ನು ಪತಿ ಕೊಲೆ ಮಾಡಲು ಯತ್ನಿಸಿರುವ ಘಟನೆ ರಾಣೆಬೆನ್ನೂರು ನಗರದಲ್ಲಿ ನಡೆದಿದೆ. ರಾಣೆಬೆನ್ನೂರಿನ ಸುವರ್ಣ ಪಾರ್ಕ್ನಲ್ಲಿ ಪತ್ನಿಯ ಕತ್ತುಕೊಯ್ದು ಪತಿ ಯೋಗೇಶ್ ಕೊಲೆ ಮಾಡಲು ಯತ್ನಿಸಿದನು. ಯೋಗೇಶ್ ಕೊಲೆ ಮಾಡಲು ಯತ್ನಿಸಿದ ಆರೋಪಿ. ಗಾಯಕೊಂಡ ಪದ್ಮಾ ಅವರನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಎಳನೀರು ಕದ್ದಿದ್ದಕ್ಕೆ ಯುವಕನ ಕೊಲೆ
ಚಿಕ್ಕಮಗಳೂರು: ಎಳನೀರು ಕದ್ದಿದ್ದಕ್ಕೆ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ತೋಟದ ಮಾಲೀಕ ಚಂದ್ರಪ್ಪ, ಅಳಿಯ ಮಧು ಬಂಧಿತ ಆರೋಪಿಗಳು. ಕುಮಾರ್ (37) ಮೃತದುರ್ದೈವಿ. ಕಡೂರು ತಾಲೂಕಿನ ಎಸ್ ಬಿದರೆ ಗ್ರಾಮದಲ್ಲಿ ಘಟನೆ ನಡೆದಿದೆ. ಚಂದ್ರಪ್ಪ ಅವರ ತೋಟದಲ್ಲಿ ಕಾಯಿ ತೆಗೆದುಕೊಂಡಿದಕ್ಕೆ ಕುಮಾರ್ ಅವರ ಮೇಲೆ ಹಲ್ಲೆ ಮಾಡಲಾಗಿದೆ. ಕಡೂರು ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಯುತ್ತಿದೆ. ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ FIR ದಾಖಲು ಮಾಡಲಾಗಿದೆ ಎಂದು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಆಮ್ಟೆ ಹೇಳಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:56 pm, Wed, 20 August 25



