ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ವೈದ್ಯನ ಲಂಚಾವತಾರ: ಹಣ ಕೊಡದಿದ್ದರೆ ರೋಗಿಗಳಿಗಿಲ್ಲ ಚಿಕಿತ್ಸೆ!

ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ಜಿಲ್ಲಾಸ್ಪತ್ರೆಯಲ್ಲಿನ ಕರ್ಮಕಾಂಡವೊಂದು ಬಯಲಾಗಿದೆ. ಇಲ್ಲಿನ ಸರ್ಕಾರಿ ವೈದ್ಯ ಹಣ ಕೊಡದಿದ್ದರೆ ಆಪರೇಷನ್​​ ಮಾಡುವುದಿಲ್ಲ. ರೋಗಿಯ ಹೊಟ್ಟೆಯಿಂದ ರಕ್ತ ಸುರಿಯುತ್ತಿದ್ದರು ಕರುಣೆ ತೋರಿಲ್ಲ. ಇನ್ನು ಲೋಕಾಯುಕ್ತ ಅಧಿಕಾರಿಗಳ ಎಚ್ಚರಿಕೆಗೂ ಡೋಂಟ್‌ಕೇರ್ ಎನ್ನುತ್ತಿರುವ ವೈದ್ಯ ವಿರುದ್ಧ ರೋಗಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ವೈದ್ಯನ ಲಂಚಾವತಾರ: ಹಣ ಕೊಡದಿದ್ದರೆ ರೋಗಿಗಳಿಗಿಲ್ಲ ಚಿಕಿತ್ಸೆ!
ರಾಮನಗರ ಜಿಲ್ಲಾಸ್ಪತ್ರೆ
Image Credit source: tv9 kannada
Edited By:

Updated on: Sep 09, 2026 | 4:24 PM

ರಾಮನಗರ, ಸೆಪ್ಟೆಂಬರ್​ 09: ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಸಿಗಬೇಕಾದ ಉಚಿತ ಆರೋಗ್ಯ ಸೇವೆ ಲಂಚದ ಜಾಲಕ್ಕೆ ಸಿಲುಕಿದೆ. ಆಸ್ಪತ್ರೆಯ ಯುರಾಲಜಿ ವಿಭಾಗದ ವೈದ್ಯ ಡಾ. ವಿಶ್ವನಾಥ್ ಆರ್. ಹಣ ನೀಡದಿದ್ದರೆ ಶಸ್ತ್ರಚಿಕಿತ್ಸೆಯನ್ನೇ ಮಾಡದೆ ರೋಗಿಗಳನ್ನು ವಾಪಸ್ ಕಳುಹಿಸುತ್ತಿದ್ದು, ‘ವೈದ್ಯೋ ನಾರಾಯಣ ಹರಿ’ ಎಂಬ ಮಾತಿಗೆ ಕಳಂಕ ತಂದಿದ್ದಾರೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಕಿಡ್ನಿ ಸ್ಟೋನ್ ಆಪರೇಷನ್‌ಗೆ ತಲಾ 30 ಸಾವಿರ ರೂ. ಬೇಡಿಕೆ

ಕಳೆದ ಮೂರು ವರ್ಷಗಳಿಂದ ಈ ಜಿಲ್ಲಾಸ್ಪತ್ರೆಯಲ್ಲಿ ಏಕೈಕ ಯುರಾಲಜಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿರುವ ಡಾ. ವಿಶ್ವನಾಥ್, ಕಿಡ್ನಿ ಸ್ಟೋನ್ ಶಸ್ತ್ರಚಿಕಿತ್ಸೆಗೆ ಬರುವ ರೋಗಿಗಳಿಂದ ತಲಾ 30 ಸಾವಿರ ರೂ ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ. ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸಾ ಪರಿಕರಗಳಿಲ್ಲ, ಹೀಗಾಗಿ ಹೊರಗಡೆಯಿಂದ ತರಿಸಿ ಆಪರೇಷನ್ ಮಾಡಬೇಕೆಂದು ನೆಪವೊಡ್ಡಿ ಹಣ ವಸೂಲಿಗೆ ಇಳಿದಿದ್ದಾರೆ.

ಇದನ್ನೂ ಓದಿ: ರಾಮನಗರದಲ್ಲಿ ಖೋಟಾ ನೋಟು ಜಾಲ ಪತ್ತೆ: ನಿರ್ಮಾಣ ಹಂತದ ಮನೆಯಲ್ಲಿ ನಡೆಯುತ್ತಿದ್ದ ದಂಧೆ

ಈ ಹಿಂದೆ ಇವರ ಲಂಚಾವತಾರದ ಬಗ್ಗೆ ಲೋಕಾಯುಕ್ತ ಎಸ್ಪಿ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರೂ, ಜಿಲ್ಲಾಸ್ಪತ್ರೆಯ ಸರ್ಜನ್ ಮತ್ತು ಲೋಕಾಯುಕ್ತರ ಮಾತಿಗೂ ಕ್ಯಾರೆ ಎನ್ನದೆ ದಂಧೆ ಮುಂದುವರಿಸಿದ್ದಾರೆ.

ರಕ್ತ ಸುರಿಯುತ್ತಿದ್ದರೂ ಕರುಣೆ ತೋರದ ವೈದ್ಯ ಡಾ ವಿಶ್ವನಾಥ್

ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಚಿಕಿತ್ಸೆಗೆ ಬಂದಿದ್ದ ಕುರುಬರಹಳ್ಳಿ ಗ್ರಾಮದ ರಂಗೇಗೌಡ ಎಂಬ ರೋಗಿಯ ಬಳಿ 30 ಸಾವಿರ ರೂ. ಬೇಡಿಕೆ ಇಡಲಾಗಿತ್ತು. ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಹೊರಗಿನಿಂದ 7 ಸಾವಿರ ರೂ ಮೌಲ್ಯದ ಔಷಧಗಳನ್ನು ತರಿಸಿಕೊಂಡಿದ್ದ ವೈದ್ಯ, ಕೇಳಿದಷ್ಟು ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಶಸ್ತ್ರಚಿಕಿತ್ಸೆಯ ನಂತರ ರೋಗಿಯ ಹೊಟ್ಟೆಯಿಂದ ರಕ್ತ ಸುರಿಯುತ್ತಿದ್ದರೂ ಕನಿಷ್ಠ ಬ್ಯಾಂಡೇಜ್ ಕೂಡ ಮಾಡದೆ ಅಮಾನವೀಯ ಮೆರೆದಿದ್ದಾರೆ.

ಲಂಚ ನೀಡದ್ದಕ್ಕೆ ಆಪರೇಷನ್ ಥಿಯೇಟರ್‌ನಿಂದಲೇ ವಾಪಸ್

ಮತ್ತೊಂದೆಡೆ, ಜಾಲಮಂಗಲ ಗ್ರಾಮದ ಲೀಲಾವತಿ ಎಂಬ ರೋಗಿಯ ಬಳಿಯೂ 30 ಸಾವಿರ ರೂ ಬೇಡಿಕೆ ಇಡಲಾಗಿತ್ತು. ಚಿಕಿತ್ಸೆಗೂ ಮುನ್ನವೇ ರೋಗಿಯಿಂದ 3 ಸಾವಿರ ರೂ ಪಡೆದಿದ್ದ ವೈದ್ಯ, ಉಳಿದ 30 ಸಾವಿರ ರೂ ನೀಡಲಿಲ್ಲ ಎಂಬ ಕಾರಣಕ್ಕೆ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಆಪರೇಷನ್ ಥಿಯೇಟರ್‌ನಲ್ಲೇ ಕೂರಿಸಿ, ಕೊನೆಗೆ ಶಸ್ತ್ರಚಿಕಿತ್ಸೆ ಮಾಡದೆಯೇ ವಾಪಸ್ ಕಳುಹಿಸಿದ್ದಾರೆ.

ವೈದ್ಯ ಡಾ ವಿಶ್ವನಾಥ್​ ವಿರುದ್ಧ ಸಾರ್ವಜನಿಕರ ಆಕ್ರೋಶ

ಇನ್ನು ಹಣಕ್ಕಾಗಿ ರೋಗಿಗಳ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ವೈದ್ಯ ಡಾ. ವಿಶ್ವನಾಥ್ ವಿರುದ್ಧ ರೋಗಿಗಳು, ಅವರ ಸಂಬಂಧಿಕರು ಹಾಗೂ ಸ್ಥಳೀಯ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಸಿಡಿದೆದ್ದಿದ್ದಾರೆ.

Bribery in Ramanagara Govt hospital: ಆಪರೇಷನ್​ ಮಾಡಲು ಡಾ.ವಿಶ್ವನಾಥ್​ಗೆ ಕೊಡಬೇಕಂತೆ ಲಂಚ! #TV9D

ಕರ್ನಾಟಕದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:15 pm, Wed, 9 September 26

Loading...
Unable to load recommendations.
Follow Us