ರಾಮನಗರ ಕಲ್ಲು ಕ್ವಾರಿಯಲ್ಲಿ ಏಳು ಕಾರ್ಮಿಕರ ಸಾವು ಪ್ರಕರಣ: ಮೂವರು ಅರೆಸ್ಟ್

Ramanagara Quarry Tragedy: ಬೆಂಗಳೂರು ದಕ್ಷಿಣದ ಮಾದಪಟ್ಟಣ ಕಾವೇರಿ ಕ್ವಾರಿ ದುರಂತದಲ್ಲಿ 7 ಕಾರ್ಮಿಕರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ತಾವರೆಕೆರೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ನಿರ್ಲಕ್ಷ್ಯದ ಆರೋಪದಡಿ ಕೇಸ್ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಕ್ರಷರ್ ಮುಖ್ಯ ಮಾಲೀಕರ ಪತ್ತೆಗೆ ತನಿಖೆ ಚುರುಕುಗೊಂಡಿದೆ.

ರಾಮನಗರ ಕಲ್ಲು ಕ್ವಾರಿಯಲ್ಲಿ ಏಳು ಕಾರ್ಮಿಕರ ಸಾವು ಪ್ರಕರಣ: ಮೂವರು ಅರೆಸ್ಟ್
ಕಾವೇರಿ ಕ್ರಷರ್‌ನಲ್ಲಿ ದುರಂತ
Edited By:

Updated on: Jul 03, 2026 | 10:47 AM

ರಾಮನಗರ, ಜುಲೈ 03: ಗುರುವಾರ ಬೆಳಗ್ಗಿನ ಜಾವ ಬೆಂಗಳೂರು ದಕ್ಷಿಣ (Ramanagar) ತಾಲೂಕಿನ ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಮಾದಪಟ್ಟಣ ಗ್ರಾಮದಲ್ಲಿ ಕಾವೇರಿ ಕ್ವಾರಿಯಲ್ಲಿ ಏಕಾಏಕಿ ಕಲ್ಲುಬಂಡೆ ಕುಸಿದು ಬಿದ್ದ ಪರಿಣಾಮ ಏಳು ಮಂದಿ ಕೂಲಿ ಕಾರ್ಮಿಕರು ದಾರುಣವಾಗಿ ಮೃತಪಟ್ಟು, ಐವರು ಗಂಭೀರವಾಗಿ ಗಾಯಗೊಂಡಿದ್ದರು. ಈ ಭೀಕರ ದುರಂತಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ.

ಕಾರ್ಮಿಕನ ದೂರಿನ ಮೇರೆಗೆ ಎಫ್​ಐಆರ್

ದುರಂತ ಸಂಭವಿಸುತ್ತಿದ್ದಂತೆ ಕಾರ್ಯಪ್ರವೃತ್ತರಾದ ತಾವರೆಕೆರೆ ಠಾಣೆಯ ಪೊಲೀಸರು ಪ್ರಕರಣದ ತನಿಖೆ ಚುರುಕುಗೊಳಿಸಿ ಮೂವರನ್ನು ಕಸ್ಟಡಿಗೆ ಪಡೆದಿದ್ದಾರೆ. ಸಾಯಿ ರಾಮ್ ಕ್ರಷರ್ ಮಾಲೀಕ ಪಾಂಡುರಂಗ, ಕ್ರಷರ್ ಹಾಗೂ ಕ್ವಾರಿ ಇನ್ ಚಾರ್ಜ್ ಲೋಕೇಶ್ ಹಾಗೂ ಕಾವೇರಿ ಕ್ರಷರ್ ನ ಲೋಕಲ್ ಇನ್ ಚಾರ್ಜ್ ರಾಜು , ಈ ಮೂವರು ಬಂಧನಕ್ಕೊಳಗಾದವರು. ಘಟನೆಯಲ್ಲಿ ಬದುಕುಳಿದ ಕಾರ್ಮಿಕ ಗೋಪಿಕೃಷ್ಣನ್ ಟಿ. ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಲಾಗಿದೆ.

ಮೂರು ಟ್ರ್ಯಾಕ್ಟರ್ ಜಖಂ

ಘಟನೆಯ ದಿನದಂದು ಕ್ವಾರಿಯ ಕೆಳಭಾಗದಲ್ಲಿ ಒಟ್ಟು 16 ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎಂದು ಕೇಂದ್ರ ವಲಯದ ಐಜಿಪಿ ಎಸ್.ಗಿರೀಶ್ ತಿಳಿಸಿದ್ದಾರೆ. ಅವರ ಮೇಲೆ ಏಕಾಏಕಿ ಬೃಹತ್ ಬಂಡೆ ಉರುಳಿದ ಕಾರಣ ರಾಮು (46), ರಾಜಪಾಲ್ ಸಿಂಗ್ (35), ಸತ್ಯನಾರಾಯಣ ಸಿಂಗ್ (31), ರಾಮ ವತಾರ್ ಸಿಂಗ್ (31), ರಾಜೇಂದ್ರ ಪ್ರಸಾದ್, ನೂಹರ್ ಸಿಂಗ್ ಮತ್ತು ಭುವನೇಶ್ವರ ಸಿಂಗ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಂಡೆ ಬಿದ್ದ ರಭಸಕ್ಕೆ ಸ್ಥಳದಲ್ಲಿದ್ದ ಮೂರು ಟ್ರ್ಯಾಕ್ಟರ್‌ಗಳು ಸಂಪೂರ್ಣ ಜಖಂಗೊಂಡಿವೆ. ಇನ್ನುಳಿದ ಗಾಯಾಳುಗಳಾದ ಗುಲಾಬ್ ಸಿಂಗ್, ರಾಜ್ ಪಾಲ್, ಚೋಟು, ನೋಹರ್ ಸಿಂಗ್ ಮತ್ತು ಆನಂದ್ ಅವರನ್ನು ಮೈಸೂರು ರಸ್ತೆಯ ಆರ್.ಆರ್. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ.

ಇದನ್ನೂ ಓದಿ ಕಲ್ಲು ಕ್ವಾರಿ ದುರಂತ: ಬಂಡೆ ಬಿದ್ದ ರಭಸಕ್ಕೆ ಮೃತದೇಹ ಚೆಲ್ಲಾಪಿಲ್ಲಿ, ಟ್ರ್ಯಾಕ್ಟರ್​​ಗಳು ಪೀಸ್​​ ಪೀಸ್​

ತಲೆಮರೆಸಿಕೊಂಡ ಮುಖ್ಯ ಮಾಲೀಕರು

ಪೊಲೀಸರು ಸದ್ಯ ಮೂವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದರೂ, ದುರಂತ ನಡೆದ ಕಾವೇರಿ ಕ್ರಷರ್‌ನ ಅಸಲಿ ಮಾಲೀಕ ಉದಯ್ ಶಂಕರ್ ಮತ್ತು ಬಸವೇಶ್ವರ ಕ್ರಷರ್ ಮಾಲೀಕ ಡಿ. ಆನಂದಸ್ವಾಮಿ ಹಾಗೂ ಹಿಟಾಚಿ ಚಾಲಕ ತಿರುಪತಿ ಇನ್ನೂ ಪೊಲೀಸರ ಕೈಗೆ ಸಿಕ್ಕಿಲ್ಲ. ಈ ಪ್ರಮುಖ ಮಾಲೀಕರು ತಲೆಮರೆಸಿಕೊಂಡಿದ್ದು, ಇವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us