AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಲ್ಲು ಕ್ವಾರಿ ದುರಂತ: ಬಂಡೆ ಬಿದ್ದ ರಭಸಕ್ಕೆ ಮೃತದೇಹ ಚೆಲ್ಲಾಪಿಲ್ಲಿ, ಟ್ರ್ಯಾಕ್ಟರ್​​ಗಳು ಪೀಸ್​​ ಪೀಸ್​

Ramanagara Quarry Tragedy: ರಾಮನಗರದ ಮಾದಪಟ್ಟಣ ಕಲ್ಲು ಕ್ವಾರಿ ದುರಂತದಲ್ಲಿ 7 ಮಂದಿ ಕಾರ್ಮಿಕರು ಮೃತಪಟ್ಟಿದ್ದು, ಅವರ ಗುರುತು ಪತ್ತೆಯಾಗಿದೆ. ಐವರು ಗಾಯಾಳುಗಳಿಗೆ ಆರ್.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಸಿಎಂ ಡಿ.ಕೆ.ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ. ಎರಡು ಕ್ವಾರಿಯಲ್ಲಿ ಕೆಲಸ ನಡೆಯುತ್ತಿತ್ತು. ಕೆಳಗಡೆ ಇದ್ದ ಕ್ವಾರಿಯಲ್ಲಿ 16 ಕಾರ್ಮಿಕರು ಕೆಲಸ ಮಾಡ್ತಿದ್ದರು. ಬಂಡೆ ಬಿದ್ದು 16 ಕಾರ್ಮಿಕರ ಪೈಕಿ 7 ಮಂದಿ ಮೃತಪಟ್ಟಿದ್ದಾರೆ ಎಂದು ಕೇಂದ್ರ ವಲಯ ಐಜಿಪಿ ಎಸ್.ಗಿರೀಶ್ ತಿಳಿಸಿದ್ದಾರೆ.

ಕಲ್ಲು ಕ್ವಾರಿ ದುರಂತ: ಬಂಡೆ ಬಿದ್ದ ರಭಸಕ್ಕೆ ಮೃತದೇಹ ಚೆಲ್ಲಾಪಿಲ್ಲಿ, ಟ್ರ್ಯಾಕ್ಟರ್​​ಗಳು ಪೀಸ್​​ ಪೀಸ್​
ಕಾವೇರಿ ಕ್ರಷರ್‌ನಲ್ಲಿ ದುರಂತImage Credit source: Tv9 Kannada
ಪ್ರಸನ್ನ ಹೆಗಡೆ
|

Updated on:Jul 02, 2026 | 12:42 PM

Share

ರಾಮನಗರ, ಜುಲೈ 02: ಮಾದಪಟ್ಟಣ ಗ್ರಾಮದ ಬಳಿಯ ಕಾವೇರಿ ಕ್ರಷರ್‌ನಲ್ಲಿ ನಡೆದ ದುರಂತದಲ್ಲಿ 7 ಮಂದಿ ಕೂಲಿ ಕಾರ್ಮಿಕರು ದಾರುಣವಾಗಿ ಮೃತಪಟ್ಟಿದ್ದಾರೆ. ಬೆಳಗ್ಗಿನ ಜಾವ ಏಕಾಏಕಿ ಬಂಡೆ ಕುಸಿದ ಪರಿಣಾಮ ಅವಶೇಷಗಳಡಿ ಕಾರ್ಮಿಕರು ಸಿಲುಕಿದ ಪ್ರಮಾಣ ಸಾವು ನೋವುಗಳು ಹೆಚ್ಚಿವೆ. ಅವಘಡದಲ್ಲಿ ಮೃತಪಟ್ಟವರನ್ನು ರಾಮು (46), ರಾಜಪಾಲ್​​ ಸಿಂಗ್​ (35), ಸತ್ಯನಾರಾಯಣ ಸಿಂಗ್​ (31), ರಾಮ ವತಾರ್​ ಸಿಂಗ್ (31), ರಾಜೇಂದ್ರ ಪ್ರಸಾದ್, ನೂಹರ್​ ಸಿಂಗ್​​ ಮತ್ತು ಭುವನೇಶ್ವರ ಸಿಂಗ್​ ಎಂದು ಗುರುತಿಸಲಾಗಿದೆ.

ಗಾಯಳುಗಳಿಗೆ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ

ದುರಂತದಲ್ಲಿ ಉತ್ತರ ಭಾರತದ ನಾಲ್ವರು, ಕರ್ನಾಟಕದ ಓರ್ವ ಕಾರ್ಮಿಕನಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳಾದ ಗುಲಾಬ್ ಸಿಂಗ್ (27), ರಾಜ್ ಪಾಲ್ (30), ಚೋಟು (24), ನೋಹರ್ ಸಿಂಗ್ (21), ಆನಂದ್​​ (30) ಅವರನ್ನು ಮೈಸೂರು ರಸ್ತೆಯಲ್ಲಿರುವ ಆರ್.ಆರ್.ಆಸ್ಪತ್ರೆಗೆ ದಾಖಲಸಿಸಿ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಪೈಕಿ ಓರ್ವ ಕೂಲಿ ಕಾರ್ಮಿಕನ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಬಂಡೆ ಬಿದ್ದ ರಭಸಕ್ಕೆ ಮೃತದೇಹಗಳು ಚೆಲ್ಲಾಪಿಲ್ಲಿಯಾಗಿದ್ದರೆ, ಮೂರು ಟ್ಯಾಕ್ಟರ್​​ಳು ಸಂಪೂರ್ಣ ಜಖಂಗೊಂಡಿವೆ.

ಇದನ್ನೂ ಓದಿ: ಕಲ್ಲು ಕ್ವಾರಿಯಲ್ಲಿ ಬಂಡೆ ಕುಸಿದು ದುರಂತ; 7 ಮಂದಿ ಬಲಿ, ಐವರು ಕೂಲಿ ಕಾರ್ಮಿಕರಿಗೆ ಗಾಯ

16 ಕಾರ್ಮಿಕರ ಪೈಕಿ 7 ಮಂದಿ ಸಾವು

ಘಟನಾ ಸ್ಥಳಕ್ಕೆ ಭೇಟಿ ಬಳಿಕ ಮಾತನಾಡಿರುವ ಕೇಂದ್ರ ವಲಯ ಐಜಿಪಿ ಎಸ್.ಗಿರೀಶ್, ತಾವರಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಎರಡು ಕ್ವಾರಿಯಲ್ಲಿ ಕೆಲಸ ನಡೆಯುತ್ತಿತ್ತು. ಕೆಳಗಡೆ ಇದ್ದ ಕ್ವಾರಿಯಲ್ಲಿ 16 ಕಾರ್ಮಿಕರು ಕೆಲಸ ಮಾಡ್ತಿದ್ದರು. ಬಂಡೆ ಬಿದ್ದು 16 ಕಾರ್ಮಿಕರ ಪೈಕಿ 7 ಮಂದಿ ಮೃತಪಟ್ಟಿದ್ದಾರೆ. ಈ ಸಂಬಂಧ ಎಫ್​ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತೇವೆ ಎಂದವರು ಹೇಳಿದ್ದಾರೆ.

ಸಿಎಂ ಡಿ.ಕೆ.ಶಿವಕುಮಾರ್ ಸಂತಾಪ

ಕಲ್ಲು ಕ್ವಾರಿ ದುರಂತಕ್ಕೆ ಸಿಎಂ ಡಿ.ಕೆ.ಶಿವಕುಮಾರ್ ಸಂತಾಪ ವ್ಯಕ್ತಪಡಿಸಿದ್ದಾರೆ. 7 ಕಾರ್ಮಿಕರು ಮೃತಪಟ್ಟಿರುವುದು ತೀವ್ರ ದುಃಖವನ್ನುಂಟು ಮಾಡಿದೆ. ಭಗವಂತ ಮೃತರ ಆತ್ಮಕ್ಕೆ ಚಿರಶಾಂತಿ ದಯಪಾಲಿಸಲಿ. ಕುಟುಂಬಸ್ಥರಿಗೆ ನೋವು ಭರಿಸುವ ಶಕ್ತಿ ನೀಡಲಿ ಹಾಗೂ ಗಾಯಾಳುಗಳು ಶೀಘ್ರವೇ ಗುಣಮುಖರಾಗಲಿ ಎಂದು ಪ್ರಾರ್ಥಿಸುವೆ. ಕಲ್ಲು ಕ್ವಾರಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಜೀವ ರಕ್ಷಣೆ ಹಾಗೂ ಭದ್ರತೆ ಒದಗಿಸುವುದು ಕ್ವಾರಿ ಮಾಲೀಕರ ಕರ್ತವ್ಯವಾಗಿದೆ. ನಿಯಮ ಉಲ್ಲಂಘಿಸುವ ಕ್ವಾರಿಗಳ ವಿರುದ್ಧ ಸರ್ಕಾರ ಸೂಕ್ತ ಕ್ರಮಕೈಗೊಳ್ಳಲಿದೆ ಎಂದು ಎಕ್ಸ್‌ ಮೂಲಕ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 12:40 pm, Thu, 2 July 26

Follow Us