ನಾನು ಮಾಜಿ ಸಂಸದ ಡಿಕೆ ಸುರೇಶ್ ಪತ್ನಿ ಎಂದು ವಿಡಿಯೋ ಹರಿಬಿಟ್ಟಿದ್ದ ಮಹಿಳೆ ಅರೆಸ್ಟ್!
ನಾನು ಮಾಜಿ ಸಂಸದ ಡಿಕೆ ಸುರೇಶ್ ಪತ್ನಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿಬಿಟ್ಟಿದ್ದ ಮೈಸೂರಿನ ಸರ್ಕಾರಿ ಶಾಲಾ ಶಿಕ್ಷಕಿ ವಿರುದ್ಧ ಎಫ್ಐಆರ್ ದಾಖಲಾದ ಹಿನ್ನಲೆ ರಾಮನಗರದ ಸೆನ್ ಪೊಲೀಸ್ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಡಿಕೆ ಸುರೇಶ್ ಪರ ವಕೀಲ ಮಹಿಳೆ ವಿರುದ್ಧ ದೂರು ನೀಡಿದ್ದರು.

ರಾಮನಗರ, ಮೇ 01: ಮಾಜಿ ಸಂಸದ ಡಿಕೆ ಸುರೇಶ್ (DK Suresh) ಪತ್ನಿ ಎಂದು ಹೇಳಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹರಿಬಿಟ್ಟ ಮಹಿಳೆ ವಿರುದ್ಧ ಇದೀಗ ರಾಮನಗರ (Ramanagara) ಸೆನ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಡಿ.ಕೆ.ಸುರೇಶ್ ಪರ ವಕೀಲ ಪ್ರದೀಪ್ರಿಂದ ದೂರು ಹಿನ್ನೆಲೆ ಕನಕಪುರ ತಾಲೂಕಿನ ದೊಡ್ಡಾಲಹಳ್ಳಿ ಗ್ರಾಮದ ಮಹಿಳೆ ಪವಿತ್ರ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
ಡಿಕೆ ಸುರೇಶ್ ಫೋಟೋದೊಂದಿಗೆ ಮಹಿಳೆ ತನ್ನ ಫೋಟೋವನ್ನು ಎಡಿಟ್ ಮಾಡಿ ಏ.8 ರಂದು ಫೇಸ್ ಬುಕ್, ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಹರಿಬಿಟ್ಟಿದ್ದರು. ಈ ಸಂಬಂಧ ಡಿ.ಕೆ.ಸುರೇಶ್ ವಿರುದ್ಧ ದುರುದ್ದೇಶದಿಂದ ಅಪಪ್ರಚಾರ ಮಾಡಲಾಗುತ್ತಿದೆ ಎಂದು ವಕೀಲ ಪ್ರದೀಪ್ ದೂರು ನೀಡಿದ್ದರು.
ಡಿಕೆ ಸುರೇಶ್ ಪರ ವಕೀಲ ನೀಡಿದ ದೂರಿನಲ್ಲೇನಿದೆ?
ಮಹಿಳೆ ಡಿಕೆ ಸುರೇಶ್ ರವರ ಪತ್ನಿ ಎಂಬ ಸೋಗಿನಲ್ಲಿ ಅಪಪ್ರಚಾರ ಮಾಡುತ್ತಿದ್ದು, ಇದರಿಂದ ಸಾರ್ವಜನಿಕವಾಗಿ ತಪ್ಪು ಸಂದೇಶವನ್ನು ಹಬ್ಬಿಸುತ್ತಿದ್ದಾರೆ. ಸುಳ್ಳು ಮಾಹಿತಿಯನ್ನು ನಿಜವೆಂದು ಸಾರ್ವಜನಿಕರು ನಂಬುವಂತೆ ಕೇಡುಬಯಸುವ ದುರುದ್ದೇಶದಿಂದ ವಿಡಿಯೋವನ್ನು ಸಾಮಾಜಿಕ ತಾಣದಲ್ಲಿ ಹಂಚಿಕೊಳ್ಳಲಾಗಿದೆ. ಆದ್ದರಿಂದ ಮಹಿಳೆ ವಿರುದ್ಧ ಕಲಂ 319, 237, 336, 353 ಬಿ.ಎನ್.ಎಸ್ ಹಾಗೂ 66(ಡಿ) ಐ.ಟಿ ಆಕ್ಟ್ ಅಡಿಯಲ್ಲಿ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ವಕೀಲ ಪ್ರದೀಪ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಮೊಬೈಲ್ ಬಿಡಿ, ಪುಸ್ತಕ ಹಿಡಿ: ರಾಮನಗರದ ಶಿಕ್ಷಕರೊಬ್ಬರಿಂದ ವಿನೂತನ ಅಭಿಯಾನ
ಕನಕಪುರ ತಾಲೂಕಿನ ದೊಡ್ಡಾಲಹಳ್ಳಿ ಗ್ರಾಮದ ಪವಿತ್ರ, ಮೈಸೂರಿನಲ್ಲಿ ಸರ್ಕಾರಿ ಶಾಲಾ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಗಂಡನಿಂದ ವಿಚ್ಛೇದನ ಪಡೆದಿದ್ದ ಮಹಿಳೆ ಸದ್ಯ ಮೈಸೂರಿನಲ್ಲಿ ವಾಸವಿದ್ದಾರೆ. ಮೈಸೂರಿನಲ್ಲಿ ಅಕ್ಕ ಪಕ್ಕದ ಮನೆಯವರಿಂದ ಕಿರಿಕಿರಿ ಹಿನ್ನೆಲೆ ಡಿಕೆ ಸುರೇಶ್ ಪತ್ನಿ ಎಂದರೆ ಜನ ಹೆದರುತ್ತಾರೆ ಎಂಬ ಕಾರಣಕ್ಕೆ ನಾನು ಅವರ ಪತ್ನಿ ಎಂದು ವಿಡಿಯೋ ಮಾಡಿ ಹರಿಬಿಟ್ಟಿದ್ದರು. ಸದ್ಯ ಮಹಿಳೆಯನ್ನ ಬಂಧಿಸಿರುವ ಪೊಲೀಸರು ಜೈಲಿಗಟ್ಟಿದ್ದಾರೆ.
ವಿಡಿಯೋದಲ್ಲಿ ಮಹಿಳೆ ಹೇಳಿರುವುದೇನು?
ತಾನು ಮೊದಲು ಡಿ.ಕೆ.ಸುರೇಶ್ ರವರ ಹೆಂಡತಿಯಾಗಿ ಹೇಳಬೇಕೆಂದರೆ ನಾನು ಪಸ್ಟ್ ಡಿ.ಕೆ ಸುರೇಶ್ ರವರ ಅಭಿಮಾನಿ. ಯಾಕೆಂದರೆ 3 ಸಾರಿ ಎಂಪಿಯಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ. ಯಾರು ಮಾಡುವುದಕ್ಕೆ ಆಗುವುದಿಲ್ಲ. ಇಂತವರ ನನ್ನ ಗಂಡ ಎಂದು ಹೇಳಿಕೊಳ್ಳಲು ಖುಷಿ ಪಡುತ್ತೇನೆ ಎಂದು ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:48 pm, Thu, 1 May 25







