ಮಾಕಳಿ ಗ್ರಾಮ ಪಂಚಾಯತಿ ಮಾಜಿ ಸದಸ್ಯನ ಸಾವು ಪ್ರಕರಣಕ್ಕೆ ಟ್ವಿಸ್ಟ್: ಪರಸಂಘಕ್ಕಾಗಿ ಗಂಡನ ಕೊಲೆ ಮಾಡಿಸಿದ ಮಹಿಳೆ
ಆತ ಗ್ರಾಮ ಪಂಚಾಯತಿ ಮಾಜಿ ಸದಸ್ಯ. ವ್ಯವಸಾಯ, ರಾಜಕೀಯದ ಜೊತೆಗೆ ಬೆಂಗಳೂರಿನಲ್ಲಿ ಕೋಳಿ ಅಂಗಡಿ ಇಟ್ಟುಕೊಂಡು ಬದುಕು ಸಾಗಿಸುತ್ತಿದ್ದ. ಸ್ವಗ್ರಾಮಕ್ಕೆ ಎಂದು ಬೆಂಗಳೂರಿನಿಂದ ಹೊರಟಿದ್ದ. ಆದರೆ ಆತ ಮಾರ್ಗಮಧ್ಯೆ ಅನುಮಾನಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದ. ಒಂದು ತಿಂಗಳ ನಂತರ ಗ್ರಾಪಂ ಮಾಜಿ ಸದಸ್ಯನ ಸಾವಿನ ಸತ್ಯ ಬಯಲಾಗಿದ್ದು, ಪರಸಂಘದ ಆಟಕ್ಕಾಗಿ ಪತ್ನಿಯೇ ಸುಪಾರಿ ನೀಡಿ ಭೀಕರವಾಗಿ ಹತ್ಯೆ ಮಾಡಿಸಿರುವ ಸತ್ಯ ಬಯಲಾಗಿದೆ.

ರಾಮನಗರ, ಜುಲೈ 25: ಆಕ್ರಮ ಸಂಬಂಧಕ್ಕೆ ಕಟ್ಟಿಕೊಂಡ ಗಂಡ ಅಡ್ಡಿಯಾಗುತ್ತಾನೆ, ಜೊತೆಗೆ ಸೈಟ್ಗಳ ಮಾರಾಟ ಮಾಡುತ್ತಾನೆ ಎಂದು ಕಟ್ಟಿಕೊಂಡ ಗಂಡನನ್ನು ಪತ್ನಿಯೇ ಕೊಲೆ ಮಾಡಿಸಿರುವ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆ (Ramanagara) ಚನ್ನಪಟ್ಟಣ ತಾಲ್ಲೂಕಿನ ಮಾಕಳಿ ಗ್ರಾಮದಲ್ಲಿ ನಡೆದಿದೆ. ಮೃತ ವ್ಯಕ್ತಿ ಗ್ರಾಮ ಪಂಚಾಯತಿ ಮಾಜಿ ಸದಸ್ಯ ಲೋಕೇಶ್ ಆಗಿದ್ದು, ವ್ಯವಸಾಯದ ಜೊತೆಗೆ ಜೆಡಿಎಸ್ನಲ್ಲಿ ಗುರುತಿಸಿಕೊಂಡಿದ್ದ. ಅಲ್ಲದೆ, ಬೆಂಗಳೂರಿನಲ್ಲಿ ಎರಡ್ಮೂರು ಕೋಳಿ ಅಂಗಡಿಗಳನ್ನು ಇಟ್ಟುಕೊಂಡು ಸಾಕಷ್ಟು ಸಿರಿವಂತನಾಗಿದ್ದ. ಜೊತೆಗೆ ಪತ್ನಿ ಚಂದ್ರಕಲಾಳನ್ನು ಕೂಡ ಎರಡು ಬಾರಿ ಮಾಕಳಿ ಗ್ರಾಮಪಂಚಾಯತಿ ಚುನಾವಣೆಯಲ್ಲಿ ಗೆಲ್ಲಿಸಿಕೊಂಡು ಬಂದಿದ್ದ. ಆದರೆ, ಸದ್ಯ ಮಾಕಳಿ ಗ್ರಾಪಂ ಸದಸ್ಯೆಯಾಗಿರುವ ಚಂದ್ರಕಲಾ, ಪರಸಂಘಕ್ಕಾಗಿ ಗಂಡನಿಗೆ ಮಹೂರ್ತ ಇಟ್ಟಿದ್ದಾಳೆ. ಅದು ಕೂಡ ತನ್ನ ಪ್ರಿಯಕರನಿಗೆ ಮೂರೂವರೆ ಲಕ್ಷಕ್ಕೆ ಸುಪಾರಿ ನೀಡಿ ಹತ್ಯೆ ಮಾಡಿಸಿದ್ದಾಳೆ.
18 ವರ್ಷಗಳ ದಾಂಪತ್ಯಕ್ಕೆ ಕೊಳ್ಳಿ ಇಟ್ಟ ಪರಸಂಘ
ಲೋಕೇಶ್ ಹಾಗೂ ಚಂದ್ರಕಲಾ ವಿವಾಹವಾಗಿ 18 ವರ್ಷಗಳು ಕಳೆದಿವೆ. ಇಬ್ಬರು ಎದೆಯುದ್ದ ಬೆಳೆದ ಮಕ್ಕಳು ಕೂಡ ಇದ್ದಾರೆ. ಬೆಂಗಳೂರಿನ ಗೊಲ್ಲರಹಟ್ಟಿಯಲ್ಲಿ ವಾಸವಾಗಿದ್ದರು. ಈ ಮಧ್ಯೆ ಚಂದ್ರಕಲಾಳಿಗೆ ಬೆಂಗಳೂರಿನ ಅಂಚೆ ಇಲಾಖೆ ನೌಕರ ಯೋಗೇಶ್ ಎಂಬಾತನ ಜೊತೆ ಆಕ್ರಮ ಸಂಬಂಧ ಬೆಳೆದಿದೆ. ಮತ್ತೊಂದೆಡೆಮ ಬೆಂಗಳೂರಿನಲ್ಲಿ ಇದ್ದ ಸೈಟ್ ಅನ್ನು ಮಾರಾಟ ಮಾಡಬೇಕು ಎಂದು ಲೋಕೇಶ್ ಯೋಚಿಸುತ್ತಿದ್ದ. ಈ ವಿಚಾರವಾಗಿ ಕಳೆದ ಹಲವು ತಿಂಗಳಿಂದ ಇಬ್ಬರ ನಡುವೆ ಸಾಕಷ್ಟು ಗಲಾಟೆ ನಡೆದಿತ್ತು. ಹೀಗಾಗಿ ಗಂಡನನ್ನೇ ಕೊಲೆ ಮಾಡಿಸಲು ಚಂದ್ರಕಲಾ ಮುಂದಾಗುತ್ತಾಳೆ.
7 ತಿಂಗಳ ಹಿಂದೆಯೇ ನಡೆದಿತ್ತು ಸಂಚು
ಏಳು ತಿಂಗಳ ಹಿಂದೆಯೇ ಸ್ಕೇಚ್ ಹಾಕಿ ಈ ಮೊದಲು ಎರಡು ಲಕ್ಷ ರೂಪಾಯಿಗೆ ಸುಪಾರಿ ನೀಡಿರುತ್ತಾಳೆ. ಆದರೆ ಅದು ಯಶಸ್ವಿ ಆಗಿರಿಲಿಲ್ಲ. ದುಡ್ಡು ಪಡೆದಿದ್ದ ಆರೋಪಿ ಪರಾರಿಯಾಗಿದ್ದಾನೆ. ಹೀಗಾಗಿ ಮತ್ತೆ ಏಳು ತಿಂಗಳ ನಂತರ ಎರಡನೇ ಬಾರಿಗೆ ಪ್ರಯತ್ನ ಮಾಡುತ್ತಾಳೆ. ಪ್ರಿಯಕರ ಯೋಗೇಶ್ಗೆ ಮೂರುವರೆ ಲಕ್ಷ ರೂಪಾಯಿಗೆ ಸುಪಾರಿ ನೀಡುತ್ತಾಳೆ. ಮೂಲತಃ ಮಂಡ್ಯ ಜಿಲ್ಲೆ ನವಿಲೆ ಗ್ರಾಮದ ಯೋಗೇಶ್, ಕ್ರಿಮಿನಲ್ ಹಿನ್ನೆಲೆಯುಳ್ಳ ಸೂರ್ಯ, ಶಿವಲಿಂಗ, ಚಂದನ್ ಹಾಗೂ ಶಾಂತರಾಜು ಎಂಬ ನಾಲ್ಕು ಜನರನ್ನ ಜೊತೆಗೆ ಕರೆದುಕೊಂಡು ಜೂನ್ 23 ರ ಸಂಜೆ ಬೆಂಗಳೂರಿನಿಂದ ಮಾಕಳಿ ಗ್ರಾಮಕ್ಕೆ ಬರುತ್ತಿದ್ದ ಲೋಕೇಶ್ನನ್ನು ಎಂಕೆ ದೊಡ್ಡಿ ಪೊಲೀಸ್ ಠಾಣಾ ವ್ಯಾಪ್ತಿಯ ಖ್ಯಾಸಪುರ ಗ್ರಾಮದ ಬಳಿ ಕಾರು ಅಡ್ಡಹಾಕಿ ಆನಂತರ ರಸ್ತೆಯಿಂದ ನಿರ್ಜನ ಪ್ರದೇಶಕ್ಕೆ ಕರೆದ್ಯೋಯ್ದು ಬಲವಂತವಾಗಿ ವಿಷಕುಡಿಸಿ, ಹತ್ಯೆ ಮಾಡಿ ಪರಾರಿಯಾಗಿದ್ದರು.
ಸುಪಾರಿ ನೀಡುವ ಮೊದಲೇ ಯೋಗೇಶ್ಗೆ ಚಂದ್ರಕಲಾ ಸೂಚನೆ ನೀಡಿರುತ್ತಾಳೆ. ಯಾವುದೇ ಸುಳಿವು ಸಿಗಬಾರದು, ಆತ್ಮಹತ್ಯೆ ರೀತಿ ಇರಬೇಕು ಎಂದೂ ತಿಳಿಸಿರುತ್ತಾಳೆ. ಹೀಗಾಗಿ ಲೋಕೇಶ್ನನ್ನ ಕೊಲೆಗೈದು ಕಾರಿನ ಪಕ್ಕದಲ್ಲಿ ಮೃತದೇಹವನ್ನು ಮಲಗಿಸಿ ವಿಷದ ಬಾಟಲ್ ಅನ್ನು ಕಾರಿನಲ್ಲಿ ಇಟ್ಟಿರುತ್ತಾರೆ. ಜೂನ್ 24ರಂದು ಮೃತದೇಹ ಅನುಮಾನಸ್ಪದ ರೀತಿಯಲ್ಲಿ ಪತ್ತೆಯಾಗಿರುತ್ತದೆ. ಪ್ರಾರಂಭದಲ್ಲಿ ಅಸಹಜ ಸಅವು ಪ್ರಕರಣ ದಾಖಲಿಸಿಕೊಂಡಿದ್ದ ಎಂಕೆ ದೊಡ್ಡಿ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಚಂದ್ರಕಲಾ, ಯೋಗೇಶ್ ಸೇರಿದಂತೆ ಆರೋಪಿಗಳನ್ನು ಬಂಧಿಸಿದ್ದಾರೆ.
ಹತ್ಯೆಯ ಬಳಿಕ ಪತ್ರಿಕಾಗೋಷ್ಠಿ ನಡೆಸಿ ನಾಟಕ
ಗಂಡನನ್ನೇ ಹತ್ಯೆ ಮಾಡಿಸಲು ಚಂದ್ರಕಲಾ, ಹೊಸ ಮೊಬೈಲ್ ಹಾಗೂ ಸಿಮ್ ಕಾರ್ಡ್ ಖರೀದಿ ಮಾಡಿರುತ್ತಾಳೆ. ಕೊಲೆ ಮಾಡಿಸಿದ ನಂತರ ಏನೂ ತಿಳಿಯದಂತೆ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಮನೆಯಲ್ಲಿ ಇರುತ್ತಾಳೆ. ಮತ್ತೊಂದು ವಿಶೇಷವೆಂದರೆ, ಹತ್ಯೆ ನಂತರ ಚನ್ನಪಟ್ಟಣದಲ್ಲಿ ಪತ್ರಿಕಾಗೋಷ್ಠಿ ಮಾಡಿ, ‘‘ನನ್ನ ಗಂಡನನ್ನ ಯಾರೋ ಕೊಲೆ ಮಾಡಿದ್ದಾರೆ. ನನ್ನ ಗಂಡನ ಆತ್ಮಕ್ಕೆ ಶಾಂತಿ ಸಿಗಬೇಕು. ಆರೋಪಿಗಳನ್ನ ಬಂಧಿಸಿ ಕಠಿಣ ಶಿಕ್ಷೆ ಕೊಡಿಸಬೇಕು’’ ಎಂದು ಆಗ್ರಹಿಸಿದ್ದಾಳೆ.
ಆರೋಪಿಗಳು ಸಿಕ್ಕಿಬಿದ್ಹೇಗೆ?
ಆರೋಪಿಗಳು ಕೂಡ, ಹತ್ಯೆ ಮಾಡಲೆಂದೇ ಕಾರೊಂದನ್ನು ಖರೀದಿ ಮಾಡಿರುತ್ತಾರೆ. ವಿವಿಧ ಆಯಾಮಗಳಲ್ಲಿ ತನಿಖೆ ಮಾಡಿದ ಪೊಲೀಸರಿಗೆ ಘಟನಾ ಸ್ಥಳದಲ್ಲಿ ವಿಷದ ಬಾಟಲ್ನ ಮುಚ್ಚುಳ ಸಿಕ್ಕಿರಲಿಲ್ಲ. ಜೊತೆಗೆ ಒಂದು ಚಪ್ಪಲಿ ಕೂಡ ಕಾಣೆಯಾಗಿತ್ತು. ಜೊತೆಗೆ ಯಾರಿಗೂ ಗೊತ್ತಿಲ್ಲದ ಹಾಗೆ ಚಂದ್ರಕಲಾ ಮೊಬೈಲ್ ನಂಬರ್ ಯೂಸ್ ಮಾಡುತ್ತಿರುವುದು ಗೊತ್ತಾಗಿದೆ. ಈ ಆಧಾರ ಮೇಲೆ ಪೊಲೀಸರು ಚಂದ್ರಕಲಾ, ಆಕೆಯ ಪ್ರಿಯಕರ ಯೋಗೇಶ್ ಸೇರಿ ಆರು ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: 112ಗೆ ಕರೆ ಮಾಡಿದ್ದ ಮಹಿಳೆಯನ್ನೇ ಬಲೆಗೆ ಬೀಳಿಸಿಕೊಂಡು ಪೊಲೀಸಪ್ಪನ ಪೋಲಿ ಆಟ
ಒಟ್ಟಾರೆ ಗ್ರಾಮ ಪಂಚಾಯತಿ ಮಾಜಿ ಸದಸ್ಯನ ಅನುಮಾನಸ್ಪದ ಸಾವಿನ ಸತ್ಯಾಂಶ ಹೊರಬಿದ್ದಿದ್ದು, ಪರಸಂಗಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಹೆಂಡತಿಯ ಬಂಧನವಾಗಿದೆ.



