ತಾನು ಓದಿದ ಸರ್ಕಾರಿ ಶಾಲೆ ಕಂಡು ಮರುಕ: 14 ಕೋಟಿ ರೂ. ವೆಚ್ಚದಲ್ಲಿ ಹೈಟೆಕ್ ಕಟ್ಟಡ ನಿರ್ಮಿಸಿಕೊಟ್ಟ ವೈದ್ಯ
ತಾನು ಓದಿದ ಸರ್ಕಾರಿ ಶಾಲೆಯ ಶಿಥಿಲಾವಸ್ಥೆ ಕಂಡು ಮರುಗಿದ ರಾಮನಗರದ ಓರ್ವ ವೈದ್ಯ, ಸ್ವಂತ ಹಣದಲ್ಲಿ ಹೈಟೆಕ್ ಕಟ್ಟಡ ನಿರ್ಮಿಸಿ ಕೊಟ್ಟಿದ್ದಾರೆ. ಹುಟ್ಟೂರಿನ ಶಾಲೆಯ ಋಣ ತೀರಿಸಲು ಈ ಮಹತ್ಕಾರ್ಯ ಮಾಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ನೂತನ ಕಟ್ಟಡ ಸರ್ಕಾರಕ್ಕೆ ಹಸ್ತಾಂತರವಾಯಿತು. ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು.

ಬೆಂಗಳೂರು ದಕ್ಷಿಣ, ಜುಲೈ 18: ಬೆಂಗಳೂರು ದಕ್ಷಿಣ (Bangalore South) ಜಿಲ್ಲೆಯ ಚನ್ನಪಟ್ಟಣ (Channapattana) ತಾಲೂಕಿನ ಹೊಂಗನೂರು ಗ್ರಾಮದ ವೈದ್ಯ ಡಾ. ಹೆಚ್ ಎಂ ವೆಂಕಟಪ್ಪ ಅವರು, ತಂದೆ-ತಾಯಿ ಸ್ಮರಣಾರ್ಥವಾಗಿ ತಮ್ಮದೇ ಕಣ್ವ ಫೌಂಡೇಷನ್ ವತಿಯಿಂದ, ತಾವು ಓದಿದ್ದ ಸರ್ಕಾರಿ ಶಾಲೆಗೆ (Government School) ಹೊಸ ರೂಪ ಕೊಟ್ಟಿದ್ದಾರೆ.
ಶ್ರೀಮತಿ ಚನ್ನಮ್ಮ ಮಂಚೇಗೌಡ ಕರ್ನಾಟಕ ಪಬ್ಲಿಕ್ ಸ್ಕೂಲ್ಗೆ ಸುತ್ತಮುತ್ತಲಿನ ಗ್ರಾಮಗಳ ಹೆಚ್ಚಿನ ಪೋಷಕರು ಪೈಪೋಟಿಗೆ ಬಿದ್ದು ತಮ್ಮ ಮಕ್ಕಳನ್ನು ದಾಖಲಿಸುತ್ತಿದ್ದಾರೆ. ಈ ವರ್ಷ ಬೇಸಿಗೆ ರಜೆ ಮುಗಿಯುವ ಹೊತ್ತಿಗೆ ಹಳೇ ಶಿಥಿಲ ಕಟ್ಟಡಗಳನ್ನು ನೆಲಸಮ ಮಾಡಿ, ಹೊಸ ಕಟ್ಟಡಕ್ಕೆ ತರಗತಿಗಳನ್ನು ಸ್ಥಳಾಂತರಿಸಲಾಗಿದೆ. ಎರಡು ಪ್ರತ್ಯೇಕ ಕಟ್ಟಡಗಳ ಹೈಟೆಕ್ ಶಾಲೆ 1,500 ವಿದ್ಯಾರ್ಥಿಗಳ ಸಾಮರ್ಥ್ಯ ಹೊಂದಿದೆ. ಎಲ್‌ಕೆಜಿಯಿಂದ ದ್ವಿತೀಯ ಪಿಯುಸಿವರೆಗೆ ಒಂದೇ ಸೂರಿನಡಿ ಗುಣಮಟ್ಟದ ಶಿಕ್ಷಣಕ್ಕೆ ವ್ಯವಸ್ಥೆ ಇದೆ. ಗ್ರಾಮದ ಸುತ್ತಲಿನ 12 ಹಳ್ಳಿಗಳ ಮಕ್ಕಳು ಇಲ್ಲಿ ಓದುತ್ತಿದ್ದಾರೆ. ನೂತನ ಶಾಲಾ ಕಟ್ಟಡವನ್ನ ಶುಕ್ರವಾರ (ಜು.18) ಡಿಸಿಎಂ ಡಿಕೆ ಶಿವಕುಮಾರ್ ಉದ್ಘಾಟಿಸಿದರು.
ಸದ್ಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ಒಳಗೊಂಡಂತೆ ಸುಮಾರು 850 ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಓದುತ್ತಿದ್ದಾರೆ. ಪ್ರಸಕ್ತ ಸಾಲಿನಿಂದ ಎಲ್‌ಕೆಜಿ, ಯುಕೆಜಿ ಆರಂಭಿಸಲಾಗಿದೆ. ದ್ವಿತೀಯ ಪಿಯುವರೆಗೆ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದ ಶಿಕ್ಷಣಕ್ಕೆ ಇಲ್ಲಿ ಸೌಲಭ್ಯ ಕಲ್ಪಿಸಲಾಗಿದೆ. ಈ ವರ್ಷ 150ಕ್ಕೂ ಅಧಿಕ ವಿದ್ಯಾರ್ಥಿಗಳ ದಾಖಲಾತಿಯಾಗಿದೆ. ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಲ್ಲೂ ಕಾನ್ವೆಂಟ್ ಮಾದರಿ ಶಿಕ್ಷಣ ಸಿಗಬೇಕು ಎಂಬ ಆಶಯದೊಂದಿಗೆ ಶಾಲೆಯನ್ನು ವೈದ್ಯ ಹೆಚ್ ಎಂ ವೆಂಕಟಪ್ಪ ಕಟ್ಟಿಸಿದ್ದಾರೆ.
ಸರ್ಕಾರಿ ಶಾಲೆಯಲ್ಲಿ ಓದಿ ವೈದ್ಯನಾದ ವೆಂಕಟಪ್ಪ
8ನೇ ತರಗತಿವರೆಗೆ ತಮ್ಮೂರಿನ ಈ ಸರ್ಕಾರಿ ಶಾಲೆಯಲ್ಲಿ ವ್ಯಾಸಾಂಗ ಮಾಡಿದ ವೆಂಕಟಪ್ಪ, ಮುಂದೆ ಸರ್ಕಾರಿ ವೈದ್ಯರಾದರು. ವಿವಿಧೆಡೆ ಹಲವು ವರ್ಷ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದರು. ನಂತರ ಬೆಂಗಳೂರಿನಲ್ಲಿ ಕಣ್ವ ಡಯಾಗ್ನಾಸ್ಟಿಕ್ ಕೇಂದ್ರ ಆರಂಭಿಸಿದ ಅವರು ಕಣ್ವ ಫೌಂಡೇಷನ್ ಆರಂಭಿಸಿ ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದ್ದಾರೆ. ವೈದ್ಯ ಹೆಚ್ ಎಂ ವೆಂಕಟಪ್ಪ ಅವರ ಕಾರ್ಯಕ್ಕೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ನೋಡಿ: ಬೆಂಗಳೂರು ದಕ್ಷಿಣ ತಾಲೂಕು ಕಚೇರಿಯ ಹಾಜರಿ ಪುಸ್ತಕದಲ್ಲೂ ಹತ್ತಾರು ಪ್ರಮಾದಗಳು, ಕೃಷ್ಣ ಭೈರೇಗೌಡಗೆ ಅಚ್ಚರಿ!
ಹೊಸ ಕಟ್ಟಡದಲ್ಲಿ 51 ಕೊಠಡಿಗಳು ಇವೆ. 10 ಸಾವಿರ ಪುಸ್ತಕಗಳ ಸಾಮರ್ಥ್ಯದ ಗ್ರಂಥಾಲಯ ಇದೆ. 40 ಕಂಪ್ಯೂಟರ್ ಹೊಂದಿರುವ ಲ್ಯಾಬ್ ವಿಜ್ಞಾನ ಹಾಗೂ ಗಣಿತ ಪ್ರಯೋಗಾಲಯ ಸುಸಜ್ಜಿತ ಡೆಸ್ಕ್ ಹಾಗೂ ಡಿಜಿಟಲ್ ಬೋರ್ಡ್ ಸಿದ್ಧವಾಗುತ್ತಿದೆ. ಕಟ್ಟಡದ ಪ್ರತಿ ಅಂತಸ್ತಿನಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯಗಳಿವೆ.
ಒಟ್ಟಾರೆಯಾಗಿ ತನ್ನೂರಿನ, ತಾನೂ ಓದಿದ ಶಾಲೆಯ ಋಣ ತೀರಿಸಲು ಸ್ವಂತ ಹಣದಲ್ಲಿ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಸರ್ಕಾರಿ ಶಾಲೆ ಕಟ್ಟಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:21 pm, Fri, 18 July 25







