ರಾಮನಗರ, (ಡಿಸೆಂಬರ್ 28): ಸ್ನೇಹಿತರ ಜೊತೆ ಚಾರಣಕ್ಕೆ (trekking) ಹೋಗಿದ್ದಾಗ ದಾರಿ ತಪ್ಪಿ ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆಯಾಗಿದ್ದಾನೆ. ಗಗನ್ ದೀಪಕ್ ಸಿಂಗ್ (30)ಮೃತ ದುರ್ದೈವಿ. ಉತ್ತರಪ್ರದೇಶ ಮೂಲದ ಮೃತ ಯುವಕ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ನಲೆಸಿದ್ದ. ಕಳೆದ ಶನಿವಾರ ಸ್ನೇಹಿತನ ಜೊತೆ ರಾಮನಗರದ(Ramanagara) ಸಾವನದುರ್ಗ (savandurga) ಚಾರಣಕ್ಕೆ ತೆರಳಿ ಬಳಿಕ ನಾಪತ್ತೆಯಾಗಿದ್ದ. ಇದೀಗ ಸಾವನದುರ್ಗ ಬೆಟ್ಟದ ಎಮ್ಮೆಬೀಡು ಪ್ರದೇಶದಲ್ಲಿ ಗಗನ್ ದೀಪಕ್ ಸಿಂಗ್ ಶವ ಪತ್ತೆಯಾಗಿದೆ.
ಕಳೆದ ಶನಿವಾರ ಗೆಳೆಯರೊಂದಿಗೆ ರಾಮನಗರದ ಸಾವನದುರ್ಗ ಏಕಶಿಲಾ ಬೆಟ್ಟಕ್ಕೆ ಚಾರಣ ಬಂದಿದ್ದ. ಸ್ನೇಹಿತನ ಜೊತೆ ಚಾರಣಕ್ಕೆ ಬಂದ ವೇಳೆ ದಾರಿ ತಪ್ಪಿ ಕಾಣೆಯಾಗಿದ್ದ. ಬಳಿಕ ಸ್ನೇಹಿತ ಪೊಲೀಸರಿಗೆ ಮಾಹಿತಿ ನೀಡಿದ್ದ. ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲಿಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಕಳೆದ ನಾಲ್ಕು ದಿನಗಳಿಂದ ಯುವಕನಿಗಾಗಿ ಹುಡುಕಾಟ ನಡೆಸಿದ್ದರು. ಆದರೂ ಪತ್ತೆಯಾಗಿರಲಿಲ್ಲ. ಬಳಿಕ ಥರ್ಮಲ್ ಡ್ರೋನ್, ಶ್ವಾನದಳ ಸೇರಿ SDRF ತಂಡದಿಂದ ಶೋಧಕಾರ್ಯ ಮುಂದುವರಿಸಿದ್ದರು. ಸತತ 100 ಗಂಟೆಗಳ ಕಾರ್ಯಾಚರಣೆ ಬಳಿಕ ಯುವಕನ ಶವ ಪತ್ತೆಯಾಗಿದೆ.