ಕನಕಪುರ: ಕೆಎಸ್​ಆರ್​ಟಿಸಿ ಬಸ್​​ನಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ

ಮಹಿಳೆಯೊಬ್ಬರು ಕೆಎಸ್​ಆರ್​ಟಿಸಿ ಬಸ್​ನಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿರುವ ಘಟನೆ ಕನಕಪುರದಲ್ಲಿ ನಡೆದಿದೆ. ಮಹಿಳೆ ಆಸ್ಪತ್ರೆಗೆ ಹೋಗುವಾಗ ಹೆರಿಗೆ ನೋವು ಕಾಣಿಸಿಕೊಂಡಿದೆ. ಈ ವೇಳೆ ಇತರ ಮಹಿಳಾ ಪ್ರಯಾಣಿಕರ ಸಹಾಯದಿಂದ ಮಹಿಳೆ ಮಕ್ಕಳಿಗೆ ಜನ್ಮ ನೀಡಿದ್ದಾಳೆ.

ಕನಕಪುರ: ಕೆಎಸ್​ಆರ್​ಟಿಸಿ ಬಸ್​​ನಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ
ಸಾಂದರ್ಭಿಕ ಚಿತ್ರ

Updated on: Oct 23, 2024 | 11:07 AM

ರಾಮನಗರ, ಅಕ್ಟೋಬರ್​ 23: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ಬಸ್‌ನಲ್ಲಿ ಮಹಿಳೆಯೊಬ್ಬರು ಅವಳಿ ಮಕ್ಕಳಿಗೆ ಜನ್ಮ ನೀಡಿರುವ ಘಟನೆ ಕನಕಪುರದಲ್ಲಿ (Kanakapura) ನಡೆದಿದೆ. ಆದರೆ, ಆಸ್ಪತ್ರೆಯಲ್ಲಿ ಒಂದು ಮಗು ಸಾವನ್ನಪ್ಪಿದೆ. ಏಳು ತಿಂಗಳ ಗರ್ಭಿಣಿಯಾಗಿದ್ದ ರಜಿಯಾ ಬಾನು ಎಂಬುವರು ನಿಯಮಿತ ತಪಾಸಣೆಗಾಗಿ ಹುಣಸನಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ (ಪಿಎಚ್‌ಸಿ) ಹೋಗುತ್ತಿದ್ದರು. ಆದರೆ, ಕನಕಪುರ ಜಿಲ್ಲಾಸ್ಪತ್ರೆಗೆ ಹೋಗುವಂತೆ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯರು ಸೂಚಿಸಿದ್ದಾರೆ ಎನ್ನಲಾಗಿದೆ.

ಬಾನು ಕನಕಪುರಕ್ಕೆ ಹೋಗಲು ಕೆಎಸ್​ಆರ್​ಟಿಸಿ ಬಸ್ ಹತ್ತಿದರು. ಬಸ್ಸು ಕಬ್ಬಾಳು ಸಮೀಪ ಬಂದಾಗ ಹೆರಿಗೆ ನೋವು ಕಾಣಿಸಿಕೊಂಡಿದೆ. ತಕ್ಷಣವೇ, ಇತರ ಪ್ರಯಾಣಿಕರು ಬಾನು ಅವರಿಗೆ ಸಹಾಯ ಮಾಡಿದರು ಮತ್ತು ಅವರು ಅವಳಿ ಮಕ್ಕಳಿಗೆ ಜನ್ಮ ನೀಡಿದರು. ಒಂದು ಗಂಡು ಮತ್ತು ಒಂದು ಹೆಣ್ಣು ಮಗು ಜನಿಸಿದವು. ಬಸ್ ನೇರವಾಗಿ ಕನಕಪುರ ಜಿಲ್ಲಾಸ್ಪತ್ರೆಗೆ ತೆರಳಿದ್ದು, ಬಾನು ಮತ್ತು ಶಿಶುಗಳನ್ನು ದಾಖಲಿಸಲಾಯಿತು.

ಅವಧಿಗೂ ಮುನ್ನವೇ ಹೆರಿಗೆ ಆಗಿದ್ದರಿಂದ ಮಕ್ಕಳ ತೂಕ ಕಡಿಮೆ ಇದ್ದು, ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಕನಕಪುರ ಜಿಲ್ಲಾಸ್ಪತ್ರೆ ವೈದ್ಯರು ಸೂಚಿಸಿದ್ದಾರೆ. ಬಾನು ದುರ್ಬಲರಾಗಿದ್ದರಿಂದ ಅವಧಿಪೂರ್ವ ಹೆರಿಗೆ ಆಗಿರಬಹುದು ಎಂದು ಕನಕಪುರ ಜಿಲ್ಲಾ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಚಿಕಿತ್ಸೆ ನೀಡಿದರೂ ಒಂದು ಮಗು ಮೃತಪಟ್ಟಿದೆ. ಇನ್ನೊಂದು ಮಗು ಚಿಕಿತ್ಸೆಯಲ್ಲಿದೆ ಮತ್ತು ಅದು ಆರೋಗ್ಯವಾಗಿದೆ. ಬಾನು ಕೂಡ ಆರೋಗ್ಯವಾಗಿದ್ದಾರೆ ಎಂದು ವಾಣಿ ವಿಲಾಸ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ.ಸವಿತಾ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ