ಈ ಘಟನೆಯಿಂದ ರಮೇಶ್ ಜಾರಕಿಹೊಳಿಗೆ ಹೊಡೆತ ಬಿದ್ದಿದೆ, ಸುಧಾರಿಸಿಕೊಳ್ಳಲು ಸಮಯ ಬೇಕು: ಸಹೋದರ ಸತೀಶ್ ಜಾರಕಿಹೊಳಿ
ವಿಡಿಯೋವನ್ನು ಹರಿಬಿಟ್ಟವರು ಕಾಂಗ್ರೆಸ್ನವರೋ ಅಥವಾ ಬಿಜೆಪಿಯರವರೋ ಎನ್ನುವ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಸತೀಶ್ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರು: ರಮೇಶ್ ಜಾರಕಿಹೊಳಿ ಅವರಿಗೆ ಸಂಬಂಧಿಸಿದ ಸೆಕ್ಸ್ ಸಿಡಿ ಬಿಡುಗಡೆ ಆಗುತ್ತಿದ್ದಂತೆ ರಾಜಕೀಯ ಕೋಲಾಹಲ ಎದ್ದಿದೆ. ವಿಡಿಯೋ ವೈರಲ್ ಆದ ಬೆನ್ನಲ್ಲೇ ರಮೇಶ್ ಜಾರಕಿಹೊಳಿ ಜಲಸಂಪನ್ಮೂಲ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಬೆಳವಣಿಗೆ ಬಗ್ಗೆ ಗೋಕಾಕ್ನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಮತ್ತು ರಮೇಶ್ ಜಾರಕಿಹೊಳಿ ಸಹೋದರ ಸತೀಶ್ ಜಾರಕಿಹೊಳಿ ಟಿವಿ9 ಕನ್ನಡಕ್ಕೆ ಮೊದಲ ಪ್ರತಿಕ್ರಿಯೆ ನೀಡಿದ್ದು, ರಮೇಶ್ ಜಾರಕಿಹೊಳಿ ಟಾರ್ಗೆಟ್ ಯಾಕೆ ಮಾಡಿದ್ದಾರೆ ಗೊತ್ತಿಲ್ಲ. ಘಟನೆಯಿಂದ ರಮೇಶ್ಗೆ ಹೊಡೆತ ಬಿದ್ದಿದೆ, ಸುಧಾರಿಸಿಕೊಳ್ಳಲು ಸಮಯ ಬೇಕು ಎಂದಿದ್ದಾರೆ.
ರಮೇಶ್ ಜಾರಕಿಹೊಳಿ ಈಗಾಗಲೇ ರಾಜೀನಾಮೆ ಕೊಟ್ಟಿದ್ದಾರೆ. ಮುಂದೆ ಇನ್ನೇನಿದ್ದರೂ ಕಾನೂನು ಹೋರಾಟ. ಸಿಡಿಯಲ್ಲಿ ಇರುವುದು ರಮೇಶ್ ಹೌದೋ ಅಥವಾ ಇಲ್ಲವೋ ಎನ್ನುವ ವಿಚಾರ ಪೊಲೀಸರ ತನಿಖೆಯಿಂದ ಗೊತ್ತಾಗುತ್ತದೆ. ಆದಷ್ಟು ಬೇಗ ಪೊಲೀಸರು ತನಿಖೆ ಆರಂಭಿಸಬೇಕು ಎಂದು ಸತೀಶ್ ಆಗ್ರಹಿಸಿದ್ದಾರೆ.
ವಿಡಿಯೋವನ್ನು ಹರಿಬಿಟ್ಟವರು ಕಾಂಗ್ರೆಸ್ನವರೋ ಅಥವಾ ಬಿಜೆಪಿಯರವರೋ ಎನ್ನುವ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಸತೀಶ್ ಪ್ರತಿಕ್ರಿಯಿಸಿದ್ದಾರೆ. ಈ ಕೆಲಸವನ್ನು ಕಾಂಗ್ರೆಸ್ ಮಾಡಿದೆಯೇ ಅಥವಾ ಬಿಜೆಪಿ ಮಾಡಿದೆಯೋ ಎನ್ನುವ ವಿಚಾರ ತನಿಖೆಯಿಂದ ಅಷ್ಟೇ ಹೊರ ಬರಬೇಕಿದೆ. ಯಾರ ಬಗ್ಗೆ ಆರೋಪ ಮಾಡಲೂ ನಮ್ಮಲ್ಲಿ ಸಾಕ್ಷಿಗಳಿಲ್ಲ. ಸಿಡಿ ಬಿಡುಗಡೆಯಲ್ಲಿ ಮೇಲ್ನೋಟಕ್ಕೆ ಷಡ್ಯಂತ್ರದಂತೆ ಕಂಡು ಬರುತ್ತಿದೆ. ರಮೇಶ್ ಜಾರಕಿಹೊಳಿ ಟಾರ್ಗೆಟ್ ಯಾಕೆ ಮಾಡಿದ್ದಾರೆ ಗೊತ್ತಿಲ್ಲ. ಈ ಘಟನೆಯಿಂದ ರಮೇಶ್ ಜಾರಕಿಹೊಳಿಗೆ ಹೊಡೆತ ಬಿದ್ದಿದೆ. ಅವರಿಗೆ ಸುಧಾರಿಸಿಕೊಳ್ಳಲು ಸಮಯ ಬೇಕು ಎಂದಿದ್ದಾರೆ ಅವರು.
ಈ ಪ್ರಕರಣದಿಂದ ಜಾರಕಿಹೊಳಿ ಕುಟುಂಬಕ್ಕೆ ಡ್ಯಾಮೇಜ್ ಆಗಿದೆ. ಜಾರಕಿಹೊಳಿ ಕುಟುಂಬಸ್ಥರೇ ಮಂತ್ರಿ ಇರಬೇಕು ಅಂತಾ ಕಾನೂನು ಇಲ್ಲ. ಅನಿವಾರ್ಯ ಕಾರಣಗಳಿಂದಾಗಿ ಸ್ಥಾನ ಹೋಗಿದೆ. ಇದಕ್ಕೆ ಎನೂ ಮಾಡಲು ಆಗುವುದಿಲ್ಲ. ರಮೇಶ್ ಜಾರಕಿಹೊಳಿ ಜತೆಗೆ ಈವರೆಗೆ ಮಾತಾಡಿಲ್ಲ. ಅವಕಾಶ ಬಂದರೆ ರಮೇಶ್ ಜಾರಕಿಹೊಳಿ ಜೊತೆಗೆ ಮಾತಾಡುತ್ತೇನೆ. ಪೊಲೀಸರ ತನಿಖೆಯಿಂದ ಪ್ರಕರಣದ ಸತ್ಯಾಸತ್ಯತೆ ಗೊತ್ತಾಗಲಿದೆ ಎಂದರು ಸತೀಶ್.
ಇದನ್ನೂ ಓದಿ: ರಮೇಶ್ ಜಾರಕಿಹೊಳಿ ರಾಜೀನಾಮೆ ಅಂಗೀಕರಿಸಿದ ರಾಜ್ಯಪಾಲ ವಜುಭಾಯಿ ವಾಲಾ
Published On - 8:46 pm, Wed, 3 March 21