ಬೆಂಗಳೂರು, ಏಪ್ರಿಲ್ 12: ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ (Rameshwaram Cafe Blast case) ಪ್ರಕರಣದ ಬಾಂಬರ್ ಹಾಗೂ ಮತ್ತೊಬ್ಬ ಪ್ರಮುಖ ಆರೋಪಿಯನ್ನು ರಾಷ್ಟ್ರೀಯ ತನಿಖಾ ದಳ (NIA) ಬಂಧಿಸಿದೆ. ಪ್ರಮುಖ ಬಾಂಬರ್ ಮುಸ್ಸಾವಿರ್ ಹುಸೇನ್ ಶಾಜಿಬ್ ಮತ್ತು ಸ್ಫೋಟದ ಮಾಸ್ಟರ್ ಮೈಂಡ್ ಅಬ್ದುಲ್ ಮತೀನ್ ತಾಹಾನನ್ನು ಪಶ್ಚಿಮ ಬಂಗಾಳದಲ್ಲಿ ಬಂಧಿಸಲಾಗಿದೆ. ಖಚಿತ ಮಾಹಿತಿ ಮತ್ತು ಗುಪ್ತಚರ ಇಲಾಖೆಗೆ ದೊರೆತ ಸುಳಿವಿನ ಆಧಾರದಲ್ಲಿ ಎನ್ಐಎ ತಂಡವು ಹಲವಾರು ತಿಂಗಳುಗಳಿಂದ ತಲೆಮರೆಸಿಕೊಂಡಿದ್ದ ಭಯೋತ್ಪಾದಕರನ್ನು ಪಶ್ಚಿಮ ಬಂಗಾಳದಲ್ಲಿ ಪತ್ತೆ ಮಾಡಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ ಎಂದು ಮೂಲಗಳು ತಿಳಿಸಿವೆ. ಉಗ್ರರು ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ತಲೆಮರೆಸಿಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಈ ಬಗ್ಗೆ ಎನ್ಐಎ ಅಧಿಕಾರಿಗಳು ಇನ್ನಷ್ಟೇ ಅಧಿಕೃತ ಹೇಳಿಕೆ ನೀಡಬೇಕಿದೆ.
ಬಾಂಬರ್ ಮುಸ್ಸಾವಿರ್ ಹುಸೇನ್ ಶಾಜಿಬ್ ಪತ್ತೆಗೆ ಆತ ಧರಿಸಿದ್ದ ಕ್ಯಾಪ್‌ನ ಸಹಾಯದಿಂದ ಕಾರ್ಯಾಚಣೆ ನಡೆಸಲಾಗಿತ್ತು. ಮತೀನ್ ತಾಹಾನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮುಸ್ಸಾವಿರ್ ಹುಸೇನ್ ಶಾಜಿಬ್ನದ್ದೇ ಕೃತ್ಯ ಎಂಬುದು ದೃಢಪಟ್ಟಿತ್ತು. ನಂತರ ಆತನ ಪತ್ತೆಗೆ ಬಲೆಬೀಸಲಾಗಿತ್ತು. ಶಂಕಿತ ಭಯೋತ್ಪಾದಕ ಕರ್ನಾಟಕ ಮೂಲದವನಾಗಿದ್ದು, ಮಲೆನಾಡು ಪ್ರದೇಶದಲ್ಲಿ ಉಗ್ರಗಾಮಿ ಗುಂಪುಗಳೊಂದಿಗೆ ಸಂಪರ್ಕ ಹೊಂದಿರುವ ಶಂಕೆ ಇದೆ.
ಸದ್ಯ ವಶಕ್ಕೆ ಪಡೆಯಲಾಗಿರುವ ಇಬ್ಬರನ್ನು ವಿಶೇಷ ನ್ಯಾಯಾಲಯಕ್ಕೆ ಎನ್ಐಎ ಹಾಜರುಪಡಿಸಲಿದೆ. ಪಶ್ಚಿಮ ಬಂಗಾಳದ ಪರಗಣ ಜಿಲ್ಲೆಯ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿ ವಿಚಾರಣೆಗೆ ವಶಕ್ಕೆ ನೀಡುವಂತೆ ಕೋರ್ಟ್ಗೆ ಮನವಿ ಮಾಡಲಿದೆ.
ಈಗಾಗಲೇ ಭಯೋತ್ಪಾದನೆ ಚಟುವಟಿಕೆಗಳ ಶಂಕೆಯ ಮೇಲೆ ಜೈಲಿನಲ್ಲಿರುವ ಉಗ್ರಗಾಮಿಗಳನ್ನು ವಿಚಾರಣೆಗೆ ಒಳಪಡಿಸಿದ್ದೂ ಸಹ ಬಾಂಬರ್ನ ಪತ್ತೆಗೆ ನೆರವಾಯಿತು. ಈ ವೇಳೆ, ಜೈಲಿನಲ್ಲಿದ್ದ ಶಂಕಿತ ಉಗ್ರ ಶಾರಿಕ್, ಮತೀನ್ ಮತ್ತು ಈಗ ವಶಕ್ಕೆ ಪಡೆಯಲಾಗಿರುವ ಮುಸ್ಸಾವಿರ್ ಹುಸೇನ್ ನಡುವೆ ಸಂಪರ್ಕ ಇರುವುದೂ ಬಹಿರಂಗಗೊಂಡಿತ್ತು. ಕಳೆದ 3-4 ವರ್ಷಗಳಿಂದ ಅಧಿಕಾರಿಗಳಿಂದ ತಪ್ಪಿಸಿಕೊಳ್ಳುತ್ತಿದ್ದರೂ, ಶಂಕಿತನ ಗುರುತು, ವಿಳಾಸ ಮತ್ತು ಇತಿಹಾಸಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಯನ್ನು ಕಲೆಹಾಕುವಲ್ಲಿ ಎನ್ಐಎ ಅಧಿಕಾರಿಗಳು ಯಶಸ್ವಿಯಾಗಿದ್ದರು.
ಇದನ್ನೂ ಓದಿ: ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣ; ಕೊನೆಗೂ ಶಂಕಿತನ ಜಾಡು ಹಿಡಿದ ಪೊಲೀಸರು, ಬಂಧನಕ್ಕಾಗಿ ತೀವ್ರ ಶೋಧ
ಮಾರ್ಚ್ ಒಂದರಂದು ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ್ದ ಕಡಿಮೆ ತೀವ್ರತೆಯ ಬಾಂಬ್ ಸ್ಫೋಟದಲ್ಲಿ ಐದಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಬಾಂಬ್ ಇಟ್ಟಿದ್ದ ವ್ಯಕ್ತಿಯ ಪತ್ತೆಗೆ ನಂತರ ಶೋಧ ಕಾರ್ಯ ತೀವ್ರಗೊಳಿಸಲಾಗಿತ್ತು. ಬಳಿಕ ತನಿಖೆಯ ಹೊಣೆಯನ್ನು ಎನ್ಐಎಗೆ ವಹಿಸಲಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:20 am, Fri, 12 April 24