ಮೈಸೂರಿನಲ್ಲಿ ಅನುಮತಿ ಪಡೆಯದೆ ರೇವ್ ಪಾರ್ಟಿ? 64 ಜನರ ವಿರುದ್ಧ ಎಫ್​ಐಆರ್​ ದಾಖಲು

| Updated By: ಗಂಗಾಧರ​ ಬ. ಸಾಬೋಜಿ

Updated on: Sep 29, 2024 | 4:37 PM

ವಿಶ್ವ ವಿಖ್ಯಾತ ಮೈಸೂರು ದಸರಾಗೆ ಚಾಲನೆ ನೀಡಲು 4 ದಿನವಷ್ಟೇ ಬಾಕಿ ಇದೆ. ಈ ಮಧ್ಯೆ ಮೈಸೂರಿನಲ್ಲಿ ಅನುಮತಿ ಪಡೆಯದೆ ರೇವ್ ಪಾರ್ಟಿ ಆಯೋಜನೆ ಮಾಡಲಾಗಿದೆ ಎನ್ನಲಾಗುತ್ತಿದೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ 64 ಜನರ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ಬಂಧಿತ 64 ಜನರ ಪೈಕಿ 8 ಯುವತಿಯರಿದ್ದಾರೆ.

ಮೈಸೂರಿನಲ್ಲಿ ಅನುಮತಿ ಪಡೆಯದೆ ರೇವ್ ಪಾರ್ಟಿ? 64 ಜನರ ವಿರುದ್ಧ ಎಫ್​ಐಆರ್​ ದಾಖಲು
ಮೈಸೂರಿನಲ್ಲಿ ಅನುಮತಿ ಪಡೆಯದೆ ರೇವ್ ಪಾರ್ಟಿ? 64 ಜನರ ವಿರುದ್ಧ ಎಫ್​ಐಆರ್​ ದಾಖಲು
Follow us on

ಮೈಸೂರು, ಸೆಪ್ಟೆಂಬರ್​ 29: ನಗರದಲ್ಲಿ ಅನುಮತಿ ಪಡೆಯದೆ ರೇವ್ ಪಾರ್ಟಿ (Rave party) ಆಯೋಜನೆ ಮಾಡಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ 64 ಜನರ ಪೈಕಿ 8 ಯುವತಿಯರಿದ್ದಾರೆ. ಈ ಸಂಬಂಧ ಇಲವಾಲ ಪೊಲೀಸ್ ಠಾಣೆಯಲ್ಲಿ 64 ಜನರ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ಐಪಿಸಿ ಸೆಕ್ಷನ್ 221, 223, 121(2), BNS15(a), 32, 34, 38(a) KE ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಸದ್ಯ ಬಂಧಿತರನ್ನು ಮೈಸೂರು, ಮಡಿಕೇರಿ, ಬೆಂಗಳೂರು, ತಮಿಳುನಾಡು ಮೂಲದವರು ಎನ್ನಲಾಗುತ್ತಿದ್ದು, ಪೊಲೀಸರು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ.

ಕೆಆರ್​​ಎಸ್ ಹಿನ್ನೀರಿನ ಬಳಿ ಇರುವ ಎಡಹಳ್ಳಿಯಲ್ಲಿ ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಮೂಲೆಪೆಟ್ಲು ಗ್ರಾಮದ ಸಂತೋಷ್ ಎಂಬಾತನಿಂದ ರೇವ್​ ಪಾರ್ಟಿ ಆಯೋಜನೆ ಮಾಡಲಾಗಿತ್ತು. ಮಧು ಎಂಬಾತನಿಗೆ ಸೇರಿದ ಜಮೀನಿನಲ್ಲಿ ಪಾರ್ಟಿ ಆಯೋಜಿಸಿದ್ದರು.

ಇದನ್ನೂ ಓದಿ: ದಸರಾ ಉತ್ಸದ ನಡುವೆ ಮೈಸೂರು ಹೊರವಲಯದಲ್ಲಿ ರೇವ್​ ಪಾರ್ಟಿ?

ಇನ್ನು ಪಾರ್ಟಿಗೆ ಅಧಿಕೃತವಾಗಿ ಅನುಮತಿ ಪಡೆಯಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸಂತೋಷ್ ಅಪ್ಲೋಡ್​ ಮಾಡಿದ್ದರು. ಇದನ್ನು ನಂಬಿ 50ಕ್ಕೂ ಹೆಚ್ಚು ಜೋಡಿ ಪಾರ್ಟಿಗೆ ನೋಂದಾಯಿಸಿಕೊಂಡಿದ್ದರು. 150ಕ್ಕೂ ಹೆಚ್ಚು ಯುವಕ-ಯುವತಿಯರು ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ತಲಾ 2 ಸಾವಿರ ವಸೂಲಿ ಮಾಡಿ, ಇಸ್ರೇಲ್​​ನಿಂದ ರ‍್ಯಾಪರ್​ ಗ್ರೇನ್ ರಿಪ್ಪರ್ ಕರೆಸಿದ್ದರು. ಪೊಲೀಸರಿಂದ ಯಾವುದೇ ಅನುಮತಿ ಪಡೆಯದೆ ಖುಲ್ಲಂ ಖುಲ್ಲಾ ಮಸ್ತಿಯಲ್ಲಿ ತೊಡಗಿದ್ದರು.

ಡಿಜೆ ಮೂಲಕ ಅಬ್ಬರದ ಮ್ಯೂಸಿಕ್ ಹಾಕಿದ್ದ ಕಾರಣ ಎಸ್​​ಪಿಗೆ ಮಾಹಿತಿ ನೀಡಲಾಗಿದೆ. ಮೈಸೂರು ಎಸ್​ಪಿ ಆದೇಶದಂತೆ ಅಡಿಷನಲ್ ಎಸ್​ಪಿ ನಾಗೇಶ್ ಹಾಗೂ ಡಿವೈಎಸ್​ಪಿ ಕರೀಂ ರಾವತರ್​​ ನೇತೃತ್ವದಲ್ಲಿ ರೇವ್ ಪಾರ್ಟಿ ಮೇಲೆ ರೇಡ್ ಮಾಡಲಾಗಿದೆ.

ಯುವತಿಯರ ಜೊತೆ ಕುಣಿದು ಕುಪ್ಪಳಿಸ್ತಿದ್ದವರು ಖಾಕಿ ಎಂಟ್ರಿ ಕೊಡ್ತಿದ್ದಂತೆ ಎದ್ನೋ ಬಿದ್ನೋ ಅಂತ ಕಾಲ್ಕಿತ್ತಿದ್ದರು. ಕೆಲ ಪುಂಡರು ಪೊಲೀಸರ ಮೇಲೂ ದಾಳಿ ಮಾಡಿದ್ದರು. ಆದರೆ 150ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದಿದ್ದ ಪೊಲೀಸ್​​ ಎಲರ ರಕ್ತದ ಮಾದರಿ ಸಂಗ್ರಹಿಸಿದ್ದರು. ಕಾರ್ಯಕ್ರಮ ಆಯೋಜಕರು, ಜಮೀನಿನ ಮಾಲೀಕರ ವಿರುದ್ಧ ಕೇಸ್ ದಾಖಲಾಗಿದೆ. ಆದರೆ ಪಾರ್ಟಿ ನಡೆದ ಸ್ಥಳದಲ್ಲಿ ಯಾವುದೇ ಮಾದಕ ವಸ್ತು ಸಿಕ್ಕಿಲ್ಲ ಎನ್ನಲಾಗುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:22 pm, Sun, 29 September 24