ಮಲೆನಾಡು ಭಾಗದಲ್ಲಿ ಮಳೆ ತೀವ್ರಗೊಂಡಿದ್ದು, ಮುಂಗಾರು ಆರಂಭದಲ್ಲೇ ಆರ್ಭಟ ಜೋರಾಗಿದೆ. ಕಳೆದ ವರ್ಷ ಶುರುವಿನಲ್ಲಿ ಬಿಡುವು ಕೊಟ್ಟಿದ್ದ ಮಳೆರಾಯ ಈ ಬಾರಿ ಬಿಟ್ಟೂಬಿಡೆದೇ ಸುರಿಯುತ್ತಿರುವುದು ರೈತರಲ್ಲಿ ಆತಂಕ ಸೃಷ್ಟಿಸಿದೆ. ಕರ್ನಾಟಕಕ್ಕೆ ಮುಂಗಾರು ಪ್ರವೇಶವಾಗಿದ್ದು, ಕೆಲ ಭಾಗಗಳಲ್ಲಿ ನೈರುತ್ಯ ಮಾರುತಗಳು ಭಾರೀ ಮಳೆ ಸುರಿಸುತ್ತಿವೆ. ಈಗಾಗಲೇ ನದಿಗಳು ತುಂಬಿದ್ದು, ರಸ್ತೆ ಮೇಲೆ ತಮ್ಮ ಹರಿವು ಶುರು ಮಾಡಿದೆ. ಈಗಲೇ ಹೀಗಾದರೆ ಜುಲೈ, ಆಗಸ್ಟ್ ತಿಂಗಳ ಮಳೆಯ ಹೊಡೆತವನ್ನು ತಡೆದುಕೊಳ್ಳುವುದು ಹೇಗೆ ಎಂಬ ಚಿಂತೆ ಕೃಷಿಕರಲ್ಲಿ ಆರಂಭವಾಗಿದೆ. ಜೋರು ಮಳೆಯಿಂದಾಗಿ ಜಲಾಶಯಗಳು ತುಂಬಿದ್ದು, ಬೆಳೆಗಳು ಮುಳುಗಿದೆ.
ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ
ಸಕಲೇಶಪುರ ಪಟ್ಟಣದ ಪ್ರೇಮನಗರದಲ್ಲಿ ರಸ್ತೆಯ ಒಂದು ಭಾಗ ಕುಸಿದಿದ್ದು, ಈ ಹಿನ್ನೆಲೆಯುಲ್ಲಿ ಸಂಚಾರ ಸ್ಥಗಿತಗೊಂಡಿದೆ. ನಿರ್ಮಾಣ ಹಂತದಲ್ಲಿದ್ದ ತಡೆಗೋಡೆ ಸಮೇತ ಕುಸಿದ ರಸ್ತೆಯಿಂದಾಗಿ ಸುತ್ತಮುತ್ತಲಿನ ಹತ್ತಾರು ಮನೆಗಳಿಗೂ ಆತಂಕ ಶುರುವಾಗಿದೆ. ದುರಸ್ತಿ ಆಗದಿದ್ದರೆ ಮಣ್ಣು ಕುಸಿದು ಮತ್ತಷ್ಟು ಅಪಾಯವಾಗುವ ಭೀತಿ ಎದುರಾಗಿದೆ. ಹಾಸನ ಜಿಲ್ಲೆಯ ಸಕಲೇಶಪುರ ಹೊರವಲಯದಲ್ಲಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿ ಮಳೆಗೆ ಕುಸಿದಿದೆ. ಬೆಂಗಳೂರು-ಮಂಗಳೂರು ನಡುವಿನ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲೂ ಭಾರೀ ಮಳೆ
ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಇಂದು ಕೂಡ ಮಳೆಯ ಅಬ್ಬರ ಮುಂದುವರೆದಿದೆ. ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ, ಕಳಸ ತಾಲೂಕುಗಳಲ್ಲಿ ಭಾರೀ ಮಳೆ ಸುರಿದಿದೆ. ಭಾರೀ ಮಳೆಗೆ ಕೊಪ್ಪ ತಾಲೂಕಿನ ಗುಡ್ಡೆತೋಟ ಗ್ರಾಮದ ಹತ್ತಿರದ ಬೈಂದೂರಿಗೆ ಸಂಪರ್ಕ ಕಲ್ಪಸುವ ರಾಜ್ಯ ಹೆದ್ದಾರಿ ಬಳಿಯ ರಸ್ತೆ ಬದಿಯ ಗುಡ್ಡ ಕುಸಿದಿದ್ದು ಕೆಲ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಇನ್ನೂ ಜಯಪುರ ಸಮೀಪದ ಕೊಗ್ರೆ ಗ್ರಾಮದಲ್ಲಿ ಬೃಹತ್ ಮರಗಳು ರಸ್ತೆಗುರುಳಿದ್ದು, ಭೂ ಕುಸಿತ ಉಂಟಾಗಿದೆ. ಧಾರಾಕಾರ ಮಳೆಯಿಂದ ಮರ-ಮಣ್ಣು ರಸ್ತೆಗೆ ಉರುಳಿ ಬಿದ್ದಿದ್ದರಿಂದ ಕೊಗ್ರೆ-ಬಸರೀಕಟ್ಟೆ ಗ್ರಾಮದ ಸಂಪರ್ಕ ಕೂಡ ಬಂದ್ ಆಗಿತ್ತು.
ಗಾಳಿ ಮಳೆಗೆ ಮನೆ ಕುಸಿತ
ಮೂಡಿಗೆರೆ ತಾಲೂಕಿನ ದಾರದಹಳ್ಳಿಯಲ್ಲೂ ಭಾರೀ ಗಾಳಿಗೆ ಮನೆ ಕುಸಿದಿದೆ. ಮನೆಯಲ್ಲೇ ಅಜ್ಜಿ ಒಬ್ಬರೇ ವಾಸವಿದ್ದು, ಮನೆ ಬೀಳುವುದನ್ನು ಕಂಡು ಹೊರಗಡೆ ಓಡಿ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಬಣಕಲ್, ಚಾರ್ಮಾಡಿಘಾಟ್, ಬಾಳೂರು ಸುತ್ತಮುತ್ತ ಧಾರಾಕಾರ ಮಳೆ ಸುರಿದಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಈ ಮಧ್ಯೆ, ವಿದ್ಯುತ್ ಕಂಬವೊಂದು ಭಾರೀ ಗಾಳಿಗೆ ಮನೆ ಮೇಲೆ ಮುರಿದು ಬಿದ್ದು, ಕಂಬ ಬಿದ್ದ ಸ್ಥಳದ ಅಕ್ಕಪಕ್ಕದಲ್ಲಿ ಗ್ರೌಂಡಿಂಗ್ ಆದ ಘಟನೆ ಮೂಡಿಗೆರೆ ತಾಲೂಕಿನ ಚಕ್ಕಮಕ್ಕಿ ಗ್ರಾಮದಲ್ಲಿ ನಡೆದಿದೆ. ಕೂಡಲೇ ಸ್ಥಳೀಯರು ವಿಷಯವನ್ನು ಮೆಸ್ಕಾಂ ಸಿಬ್ಬಂದಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಮಳೆ ಸುರಿಯುತ್ತಿದೆ, ಸ್ಥಳದಲ್ಲಿ ಗ್ರೌಂಡಿಂಗ್ ಆಗಿ ಮತ್ತೊಂದು ಅನಾಹುತವಾಗುವುದು ಬೇಡವೆಂದು ಸ್ಥಳೀಯರು ರಸ್ತೆಗೆ ಮರದ ದಿಮ್ಮಿಗಳನ್ನು ಅಡ್ಡವಿಟ್ಟು ಸಂಚಾರವನ್ನೇ ಬಂದ್ ಮಾಡಿದ್ದರು.
ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಿದ ವಿಷಯ ತಿಳಿದ ಬಣಕಲ್ ಪೊಲೀಸರು ಸ್ಥಳಕ್ಕೆ ಬಂದಾಗ ಸ್ಥಳೀಯರು-ಪೊಲೀಸರ ಮಧ್ಯೆ ಮಾತಿನ ಚಕಮಕಿ ಕೂಡ ನಡೆದಿದೆ. ಸ್ಥಳೀಯರು ಫೋನ್ ಮಾಡಿ ವಿಷಯ ಹೇಳಿದ ಮೇಲೂ ತಡವಾಗಿ ಬಂದ ಮೆಸ್ಕಾಂ ಸಿಬ್ಬಂದಿಗಳಿಗೆ ಸ್ಥಳೀಯರು ಕ್ಲಾಸ್ ತೆಗೆದುಕೊಂಡಿದ್ದಾರೆ. ಇನ್ನೂ ಮೂಡಿಗೆರೆ ತಾಲೂಕಿನ ಮುಗ್ರಹಳ್ಳಿ ಗ್ರಾಮದ ಸೇತುವೆ ಕುಸಿಯುವ ಭೀತಿ ಎದುರಾಗಿದೆ. ಹಳೆ ಸೇತುವೆ ಪಕ್ಕ ಹೊಸ ಸೇತುವೆ ನಿರ್ಮಾಣ ಮಾಡುತ್ತಿದ್ದು, ಹಳೆ ಸೇತುವೆಯ ಮುಂಭಾಗ ಕಟ್ಟಿದ್ದ ತಡೆಗೋಡೆಯ ಕಲ್ಲುಗಳನ್ನು ತೆಗೆದಿದ್ದೆ ಸೇತುವೆಯ ಮಣ್ಣು ಕೊಚ್ಚಿ ಹೋಗಲು ಕಾರಣ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗದಲ್ಲಿಯೂ ಭಾರೀ ಮಳೆ
ಶಿವಮೊಗ್ಗದಲ್ಲಿಯೂ ಭಾರೀ ಮಳೆಯಾಗಿದ್ದು, ನದಿಗಳು ಸಂಪೂರ್ಣ ತುಂಬಿವೆ. ಜಿಲ್ಲೆಯ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ? ಎಂಬ ವಿವರ ಇಲ್ಲಿ ಲಭ್ಯವಿದೆ.
ಸಾಗರ ತಾಲೂಕಿನನಲ್ಲಿರುವ ಲಿಂಗನಮಕ್ಕಿ ಜಲಾಶಯ ನೀರಿನಮಟ್ಟ
ಗರಿಷ್ಠ ನೀರಿನ ಮಟ್ಟ: 1819 ಅಡಿ
ಇಂದಿನ ಮಟ್ಟ:1782.80 ಅಡಿ
ಒಟ್ಟು ಸಾಮರ್ಥ್ಯ: 151.64 ಟಿಎಂಸಿ
ಒಳಹರಿವು : 29473 ಕ್ಯೂಸೆಕ್
ಹೊರಹರಿವು : 00 ಕ್ಯೂಸೆಕ್
ಶಿವಮೊಗ್ಗ ಭದ್ರಾ ಜಲಾಶಯ ನೀರಿನಮಟ್ಟ
ಗರಿಷ್ಠ ನೀರಿನ ಮಟ್ಟ: 186 ಅಡಿ
ಇಂದಿನ ಮಟ್ಟ: 148.6 ಅಡಿ
ಒಟ್ಟು ಸಾಮರ್ಥ್ಯ: 33.112 ಟಿಎಂಸಿ
ಒಳಹರಿವು : 17,885 ಕ್ಯೂಸೆಕ್
ಹೊರಹರಿವು : 73 ಕ್ಯೂಸೆಕ್
ಗಾಜನೂರಿನ ತುಂಗಾ ಜಲಾಶಯ ನೀರಿನ ಮಟ್ಟ
ಗರಿಷ್ಠ ನೀರಿನ ಮಟ್ಟ: 588.24 ಮೀಟರ್ ಅಡಿ
ಇಂದಿನ ಮಟ್ಟ: 587.03 ಅಡಿ
ಒಟ್ಟು ಸಾಮರ್ಥ್ಯ: 3.24 ಟಿಎಂಸಿ
ಒಳಹರಿವು 27,040 ಕ್ಯೂಸೆಕ್
ಹೊರಹರಿವು 33,104 ಕ್ಯೂಸೆಕ್
ಹೊಸನಗರ ತಾಲೂಕಿನನಲ್ಲಿರುವ ಮಾನಿ ಜಲಾಶಯದ ಇಂದಿನ ನೀರಿನ ಮಟ್ಟ
ಗರಿಷ್ಠ ನೀರಿನ ಮಟ್ಟ: 594.36 ಮೀಟರ್
ಇಂದಿನ ಮಟ್ಟ: 572.89 ಮೀಟರ್
ಒಟ್ಟು ಸಾಮರ್ಥ್ಯ: 33.96 ಟಿಎಂಸಿ
ಒಳಹರಿವು : 7,117 ಕ್ಯೂಸೆಕ್
ಹೊರಹರಿವು : 00 ಕ್ಯೂಸೆಕ್
ಇದನ್ನೂ ಓದಿ:
Rain Effect: ಮುಂಬೈ ಕರ್ನಾಟಕದಲ್ಲಿ ಭಾರೀ ಮಳೆ; ನದಿಗಳು ತುಂಬಿ ರಸ್ತೆ ಜಲಾವೃತ
WTC Final 2021: ಮಳೆಯ ಅವಕೃಪೆ, ಇಂದು ಆಟ ಆರಂಭ ಆಗುತ್ತದಾ? ಭಾರತದ ಪ್ಲೇಯಿಂಗ್ 11 ಮಾರ್ಪಾಡು ಆಗುತ್ತದಾ?