Rain Effect: ಮುಂಬೈ ಕರ್ನಾಟಕದಲ್ಲಿ ಭಾರೀ ಮಳೆ; ನದಿಗಳು ತುಂಬಿ ರಸ್ತೆ ಜಲಾವೃತ
ಜುಲೈ, ಆಗಸ್ಟ್ ತಿಂಗಳ ಮಳೆಯ ಹೊಡೆತವನ್ನು ತಡೆದುಕೊಳ್ಳುವುದು ಹೇಗೆ ಎಂಬ ಚಿಂತೆ ಕೃಷಿಕರಲ್ಲಿ ಆರಂಭವಾಗಿದೆ. ಜೋರು ಮಳೆಯಿಂದಾಗಿ ಜಲಾಶಯಗಳು ತುಂಬಿದ್ದು, ಬೆಳೆಗಳು ಮುಳುಗಿದೆ. ಪ್ರಸ್ತುತ ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ? ಎಂಬ ವಿವರ ಇಲ್ಲಿ ಲಭ್ಯವಿದೆ.
ಕರ್ನಾಟಕಕ್ಕೆ ಮುಂಗಾರು ಪ್ರವೇಶವಾಗಿದ್ದು ಕೆಲ ಭಾಗಗಳಲ್ಲಿ ನೈರುತ್ಯ ಮಾರುತಗಳು ಭಾರೀ ಮಳೆ ಸುರಿಸುತ್ತಿವೆ. ಈಗಾಗಲೇ ನದಿಗಳು ತುಂಬಿದ್ದು, ರಸ್ತೆ ಮೇಲೆ ತಮ್ಮ ಹರಿವು ಶುರು ಮಾಡಿದೆ. ಮುಂಬೈ ಕರ್ನಾಟಕ ಭಾಗದಲ್ಲಿ ಮಳೆ ತೀವ್ರಗೊಂಡಿದ್ದು, ಮುಂಗಾರು ಆರಂಭದಲ್ಲೇ ಆರ್ಭಟ ಜೋರಾಗಿದೆ. ಕಳೆದ ವರ್ಷ ಶುರುವಿನಲ್ಲಿ ಬಿಡುವು ಕೊಟ್ಟಿದ್ದ ಮಳೆರಾಯ ಈ ಬಾರಿ ಬಿಟ್ಟೂಬಿಡೆದೇ ಸುರಿಯುತ್ತಿರುವುದು ರೈತರಲ್ಲಿ ಆತಂಕವನ್ನೂ ಸೃಷ್ಟಿಸಿದೆ. ಈಗಲೇ ಹೀಗಾದರೆ ಜುಲೈ, ಆಗಸ್ಟ್ ತಿಂಗಳ ಮಳೆಯ ಹೊಡೆತವನ್ನು ತಡೆದುಕೊಳ್ಳುವುದು ಹೇಗೆ ಎಂಬ ಚಿಂತೆ ಕೃಷಿಕರಲ್ಲಿ ಆರಂಭವಾಗಿದೆ. ಜೋರು ಮಳೆಯಿಂದಾಗಿ ಜಲಾಶಯಗಳು ತುಂಬಿದ್ದು, ಬೆಳೆಗಳು ಮುಳುಗಿದೆ. ಪ್ರಸ್ತುತ ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ? ಎಂಬ ವಿವರ ಇಲ್ಲಿ ಲಭ್ಯವಿದೆ.
ಬೆಳಗಾವಿಯ ಪಶ್ಚಿಮ ಘಟ್ಟದಲ್ಲಿ ಭಾರಿ ಮಳೆ ಕುಂಭದ್ರೋಣ ಮಳೆಗೆ ಬೆಳಗಾವಿ ಜಿಲ್ಲೆ ಅಕ್ಷರಶಃ ತತ್ತರಿಸಿದೆ. ಕಳೆದ ಐದು ದಿನಗಳಿಂದ ಬರುತ್ತಿರುವ ಮಳೆಗೆ ಬಹಳಷ್ಟು ಸೇತುವೆಗಳು, ಕೃಷಿಭೂಮಿಗಳು ಜಲಾವೃತವಾಗಿವೆ. ಪಶ್ಚಿಮ ಘಟ್ಟದಲ್ಲಿ ಭಾರಿ ಮಳೆಯಾಗಿದ್ದು, ಕೃಷ್ಣಾ, ಭೀಮಾ ನದಿ ತಟದಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ ಯಡೂರು – ಕಲ್ಲೋಳ ಸೇತುವೆ ಜಲಾವೃತವಾಗಿದೆ. ಕೃಷ್ಣಾ, ದೂದಗಂಗಾ, ವೇದಗಂಗಾ, ಹೀರಣ್ಯಕೇಶಿ ನದಿಗಳ ನೀರಿನ ಮಟ್ಟದಲ್ಲಿ ಏರಿಕೆಯಾಗಿದ್ದು ಪ್ರವಾಹ ಭೀತಿ ಎದುರಾಗಿದೆ. ಚಿಕ್ಕೋಡಿ, ನಿಪ್ಪಾಣಿ, ಹುಕ್ಕೇರಿ ತಾಲೂಕುಗಳ 7 ಸೇತುವೆಗಳು ಜಲಾವೃತವಾಗಿದ್ದು, ಜನಸಂಚಾರ ಸ್ಥಗಿತಗೊಂಡಿದೆ. ಕೃಷ್ಣಾ ಹಾಗೂ ಪಂಚಗಂಗಾ ನದಿಯ ಸಂಗಮ ಕ್ಷೇತ್ರವಾಗಿರುವ ಸುಕ್ಷೇತ್ರ ನರಸಿಂಹವಾಡಿ ಕೂಡ ಮುಳುಗಡೆಯಗಿದೆ. ಮೂಡಲಗಿ ತಾಲ್ಲೂಕಿನ ಸುಣಧೋಳಿ, ಕಾಮಲಧಿನ್ನಿ, ಔರಾದಿ ಸೇತುವೆಗಳು ಕೂಡ ಮುಳುಗಡೆಯಾಗಿವೆ. ರಸ್ತೆ ಸಂಚಾರಕ್ಕೆ ಅವಕಾಶವಿಲ್ಲದೆ ಈ ಭಾಗದ ಜನರು ಪರಿತಪಿಸುತ್ತಿದ್ದಾರೆ.
ಮಲಪ್ರಭ ಜಲಾಶಯದ ವಿವರ ಜಲಾಶಯದ ಗರಿಷ್ಟ ಸಾಮರ್ಥ್ಯ 2079.50 ಅಡಿ ಇಂದಿನ ನೀರಿನಮಟ್ಟ.2053.00 ಅಡಿ. ಜಲಾಶಯಕ್ಕೆ ಒಳಹರಿವು 12708 ಕ್ಯೂಸೆಕ್ ಜಲಾಶಯದಿಂದ ಹೊರಹರಿವು 194 ಕ್ಯೂಸೆಕ್.
ಇನ್ನೊಂದೆಡೆ ಬೆಳಗಾವಿ ಹೊರವಲಯದ ಬಳ್ಳಾರಿ ನಾಲೆ ಉಕ್ಕಿ ಹರಿಯುತ್ತಿದೆ. ನಾಲೆಯಲ್ಲಿ ಪ್ರವಾಹದಿಂದಾಗಿ ನೂರಾರು ಎಕರೆ ಕೃಷಿ ಭೂಮಿ ಮುಳುಗಡೆಯಾಗಿದೆ. ಕೃಷಿಭೂಮಿಯಲ್ಲಿ ಬೆಳೆಯಲಾಗಿದ್ದ ಭತ್ತ, ಜೋಳ, ಕಬ್ಬು ಬೆಳೆ ಸಂಪೂರ್ಣ ನಾಶವಾಗಿದೆ. ಸಾಮಾನ್ಯ ಮಳೆಗೆ ಹೀಗಾದರೆ ಇನ್ನು ಭಾರೀ ಮಳೆಯಾದರೆ ಏನಪ್ಪಾ ಕಥೆ ಎಂದು ಜನರು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ. ಅಲ್ಲದೆ ಪ್ರವಾಹದಿಂದಾಗಿ ನಾಶವಾಗಿರುವ ತಮ್ಮ ಬೆಳೆಗೆ ಪರಿಹಾರ ಕೊಡಿ ಎಂದು ರೈತರು ಆಗ್ರಹಿಸಿದ್ದಾರೆ.
ವಿಜಯಪುರ ಜಿಲ್ಲಾಡಳಿದಿಂದ ನದಿಗೆ ಸಾರ್ವಜನಿಕರು ಇಳಿಯದಂತೆ ಮನವಿ ನೆರೆಯ ಮಹಾರಾಷ್ಟ್ರದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿರುವ ಕಾರಣ ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಆಲಮಟ್ಟಿ ಬಳಿ ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ ಲಾಲ್ ಬಹಾದ್ದೂರ್ ಶಾಸ್ತ್ರೀ ಸಾಗರಕ್ಕೆ ಉತ್ತಮ ಒಳ ಹರಿವು ಉಂಟಾಗಿದೆ. 519.60 ಮೀಟರ್ ಗರಿಷ್ಟ ಸಾಮರ್ಥ್ಯದ ಡ್ಯಾಂಗೆ 1 ಲಕ್ಷ 18 ಸಾವಿರ 193 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಸದ್ಯ ಡ್ಯಾಂನಲ್ಲಿ 511.60 ಮೀಟರ್ ನೀರು ಡ್ಯಾಂನಲ್ಲಿ ಸಂಗ್ರಹವಾಗಿದೆ. ಇನ್ನು ಡ್ಯಾಂನಿಂದ 451 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಜೊತೆಗೆ ಮಹಾರಾಷ್ಟ್ರದಲ್ಲಿ ಇನ್ನೂ ಮಳೆ ಮುಂದುವರೆದಿದ್ದು, ಒಳ ಹರಿವು ಹೆಚ್ಚಾಗಲಿದೆ. ಕಾರಣ ಡ್ಯಾಂನ ಕೆಳ ಭಾಗದ ನದಿಪಾತ್ರದ ಜನರು ನದಿಯಲ್ಲಿ ಇಳಿಯಬಾರದೆಂದು ಜಿಲ್ಲಾಡಳಿತ ಸಾರ್ವಜನಿಕರಲ್ಲಿ ಮನವಿ ಮಾಡಿದೆ.
ಧಾರವಾಡ ಜಿಲ್ಲೆಯಲ್ಲಿ ಭಾರೀ ಮಳೆಯಿಂದ ಬೆಳೆ ಜಲಾವೃತ ಕೆರೆ ಕಟ್ಟೆ ಒಡೆದು ರೈತರ ಜಮೀನುಗಳಿಗೆ ನೀರು ನುಗ್ಗಿದೆ. ನೂರಾರು ಎಕರೆಯಲ್ಲಿ ಬೆಳೆದ ಬೆಳೆ ಸಂಪೂರ್ಣ ಜಲಾವೃತವಾಗಿದ್ದು, ಭತ್ತ, ಸೋಯಾಬೀನ್, ಕಬ್ಬು, ಹತ್ತಿ, ಗೋವಿನಜೋಳ ನೀರು ಪಾಲಾಗಿದೆ. ಅಷ್ಟೇ ಅಲ್ಲದೇ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಕಲಘಟಗಿ ತಾಲೂಕಿನ ಹಟಕಿನಾಳದ ಜಿಗಳಿ ಕೆರೆ ಒಡೆದು ಹಾನಿ ಉಂಟಾಗಿದೆ.
ಬಾಗಲಕೋಟೆಯ ಘಟಪ್ರಭಾ ನದಿಯಲ್ಲಿ ಮತ್ತಷ್ಟು ಹೆಚ್ಚಿದ ನೀರಿನ ಹರಿವು ಅಪಾಯದ ಮಟ್ಟ ಮೀರಿ ಘಟಪ್ರಭಾ ನದಿ ಹರಿಯುತ್ತಿದ್ದು, ಘಟಪ್ರಭಾ ನದಿಗೆ ಅಡ್ಡಲಾಗಿ ಕಟ್ಟಿದ್ದ 9 ಸೇತುವೆ ಮುಳುಗಡೆಯಾಗಿದೆ. ಮಿರ್ಜಿ ಗ್ರಾಮದ ಬಳಿ ಹಳೇ ಮತ್ತು ಹೊಸ ಸೇತುವೆ ಮುಳುಗಡೆಯಾಗಿದ್ದು, ಜಮೀನುಗಳಿಗೆ ನೀರು ನುಗ್ಗಿದೆ. ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಗೆ ಸಜ್ಜಾಗಿದ್ದ ಮಿರ್ಜಿಯ ಸೇತುವೆ ಮುಲುಗಡೆಯಾಗಿದೆ. 5 ಕೋಟಿ ವೆಚ್ಚದ ನಾಲ್ಕುವರೆ ಮೀಟರ್ ಎತ್ತರದ ಹೊಸ ಸೇತುವೆ ಇದಾಗಿದ್ದು, ಸಂಪೂರ್ಣ ಮುಳುಗಿದೆಇನ್ನು ರಬಕವಿಬನಹಟ್ಟಿ ತಾಲೂಕಿನ ಢವಳೇಶ್ವರ, ನಂದಗಾಂವ್, ಮುಧೋಳ ತಾಲೂಕಿನ ಮಿರ್ಜಿ, ಚನಾಳ, ಜಾಲಿಬೇರ, ಅಷ್ಟೇ ಅಲ್ಲದೇ ಮುಧೋಳ ಬಳಿಯ ಕಿರುಸೇತುವೆ, ಜೀರಗಾಳ ಕಿರುಸೇತುವೆ, ಜಂಬಗಿ ಕೆಡಿ, ಕಸಬಾ ಜಂಬಗಿ ಸೇತುವೆಗಳು ಮುಳುಗಡೆಯಾಗಿದೆ.
ಘಟಪ್ರಭಾ ಜಲಾಶಯದ ವಿವರ ಜಲಾಶಯದ ಗರಿಷ್ಟ ಸಾಮರ್ಥ್ಯ 2175.00 ಅಡಿ. ಜಲಾಶಯದ ಇಂದಿನನೀರಿನ ಮಟ್ಟ 2110.00 ಅಡಿ ಜಲಾಶಯಕ್ಕೆ ಒಳಹರಿವು 39515 ಕ್ಯೂಸೆಕ್ ಜಲಾಶಯದಿಂದ ಹೊರಹರಿವು 98 ಕ್ಯೂಸೆಕ್ ಹುಕ್ಕೇರಿ ತಾಲೂಕಿನ ಘಟಪ್ರಭ ಜಲಾಶಯ
ಹಾವೇರಿ ಜಿಲ್ಲೆಯ ಹಲವೆಡೆ ಧಾರಾಕಾರ ಮಳೆ ಜಿಲ್ಲೆಯ ಯಲಗಚ್ಚ, ಕರ್ಜಗಿ, ಅಗಡಿ ಸೇರಿದಂತೆ ಹಲವೆಡೆ ಭಾರೀ ಮಳೆಯಾಗಿದ್ದು, ನಗರದಲ್ಲಿ ಬೆಳಿಗ್ಗೆಯಿಂದಲೆ ಸುರಿಯುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸ್ತ ಅಸ್ತವ್ಯಸ್ತವಾಗಿದೆ.
ಇದನ್ನೂ ಓದಿ:
Rain Effect: ಕರ್ನಾಟಕದ ವಿವಿಧೆಡೆ ಭಾರೀ ಮಳೆ; ಮಳೆಗಾಲದ ಆರಂಭಿಕ ಹಂತದಲ್ಲಿಯೇ ತತ್ತರಿಸಿದ ಜನತೆ
Incessant rains in Kodagu : ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನಲ್ಲಿ ಭಾರೀ ಮಳೆ
Published On - 11:17 am, Sat, 19 June 21