
ಬೆಂಗಳೂರು, (ಜುಲೈ 17): ರೌಡಿಶೀಟರ್ ಬಿಕ್ಲು ಶಿವನ ಹತ್ಯೆ ಪ್ರಕರಣಕ್ಕೆ (rowdy sheeter bilkul shiva Murder Case) ಸಂಬಂಧಿಸಿದಂತೆ ಹಂತಕರು ಸಿಕ್ಕಿಬಿದ್ದಿದ್ದಾರೆ. ಇದರ ಬೆನ್ನಲ್ಲೇ ಪ್ರಕರಣದ ಐದನೇ ಆರೋಪಿಯಾಗಿರುವ ಕೆ.ಆರ್ ಪುರಂ ಬಿಜೆಪಿ ಶಾಸಕ ಬೈರತಿ ಬಸವರಾಜ್ (Byrathi Basavaraj )ಅವರಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ. ಇಂದು(ಜುಲೈ 17) ಪುಲಿಕೇಶಿನಗರ (pulakeshinagar Polic) ಇನ್ಸ್ ಪೆಕ್ಟರ್ ಗೋವಿಂದರಾಜು ಅವರು ಹೆಣ್ಣೂರು ಸಮೀಪದ ಬೈರತಿಯಲ್ಲಿರುವ ಬೈರತಿ ಬಸವರಾಜ್ ನಿವಾಸಕ್ಕೆ ತೆರಳಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕೊಟ್ಟಿದ್ದಾರೆ. ಎರಡು ದಿನಗಳ ಒಳಗೆ ವಿಚಾರಣೆಗೆ ಆಗಮಿಸುವಂತೆ ಬೈರತಿ ಬಸವರಾಜ್ ಪುತ್ರ ನೀರಜ್ ಅವರ ಕೈಗೆ ನೋಟಿಸ್ ನೀಡಿ ತೆರಳಿದ್ದಾರೆ.
ಹೌದು..ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ನಿನ್ನೆಯಷ್ಟೇ (ಜುಲೈ 16) ಮೃತ ಬಿಕ್ಲು ಶಿವನ ತಾಯಿ ದೂರಿನ ಅನ್ವಯ ಕೇಸ್ ದಾಖಲಾಗಿತ್ತು. ಆದ್ರೆ, ಇದೀಗ ದೂರು ಕೊಟ್ಟ ತಾಯಿ ವಿಜಯಲಕ್ಷ್ಮೀ ಅವರು ನಾನು ಬೈರತಿ ಬಸವರಾಜ್ ವಿರುದ್ಧ ದೂರು ಕೊಟ್ಟಿಲ್ಲ. ಪೊಲೀಸರೇ ಹೆಸರು ಹಾಕಿಕೊಂಡಿದ್ದಾರೆ ಎಂದು ಹೇಳಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ಮೊದಲೇ ರಾಜಕೀಯ ದುರುದ್ದೇಶ ಇದೆ ಅಂತಿದ್ದ ಬಿಜೆಪಿಗೆ ಮೃತನ ತಾಯಿ ಮಾತು ಅಸ್ತ್ರವಾಗಿ ಸಿಕ್ಕಿದೆ. ಈ ಬಗ್ಗೆ ಪ್ರತಿಕ್ರಿಯೆ ಕೊಟ್ಟ ಬಿಜೆಪಿ ನಾಯಕ ಪಿ. ರಾಜೀವ್, ಫೋಟೋವನ್ನ ಹಿಡಿದುಕೊಂಡು, ಕೊಲೆಯ ಮೋಟಿವ್ ಹೇಗೆ ಪ್ರೂವ್ ಮಾಡ್ತೀರಾ ಎಂದು ಪೊಲೀಸರಿಗೆ ಪ್ರಶ್ನಿಸಿದ್ದಾರೆ. ಮತ್ತೊಂದ್ಕಡೆ ಬಸನಗೌಡ ಪಾಟೀಲ್ ಯತ್ನಾಳ್, ಇದು ದ್ವೇಷ ಕಾರಣಕ್ಕೆ ಟಾರ್ಗೆಟ್ ಮಾಡಿರುವ ಕೇಸ್ ಎಂದಿದ್ದಾರೆ.
ಬೈರತಿ ಬಸವರಾಜ್ ಇರುವ ವಿಡಿಯೋ ಫೋಟೋಗಳು ವೈರಲ್ ಆಗಿವೆ. ಬೈರತಿಗೆ ಬೆಳ್ಳಿ ಕಿರೀಟ ಮತ್ತು ಕೇಕ್ ಕಟಿಂಗ್ ಮಾಡಿಸಿ ಇದೇ ಜಗದೀಶ್ ಸನ್ಮಾನ ಮಾಡಿದ್ನಂತೆ. ಅಲ್ಲದೇ ಕಾಲ್ ಹಿಸ್ಟರಿಯಲ್ಲಿ ಬೈರತಿ ಬಸವರಾಜ್, ಜಗ್ಗನನ್ನ ಸಂಪರ್ಕ ಮಾಡಿರುವುದು ಬಯಲಾಗಿದೆ. ಅಲ್ಲದೇ ಬೈರತಿ ಬಸವರಾಜ್ ಸಚಿವರಾಗಿದ್ದಾಗ ಜಗದೀಶ್‌ನನ್ನ ರೌಡಿ ಶೀಟ್ ಪಟ್ಟದಿಂದ ತೆಗೆಸಿದ್ದರು ಎನ್ನಲಾಗಿದೆ.
ಇಷ್ಟೆಲ್ಲಾ ಸುಳಿವುಗಳ ನಡುವೆ ನಿಜಕ್ಕೂ ಶಾಸಕರಿಗೂ ಕೊಲೆಗೂ, ಆರೋಪಿಗಳಿಗೂ ಲಿಂಕ್ ಇದ್ಯಾ ಎಂಬ ಬಗ್ಗೆ ಮತ್ತಷ್ಟು ಸಾಕ್ಷ್ಯ ಸಂಗ್ರಹಿಸುತ್ತಿದ್ದಾರೆ. ಮತ್ತೊಂದೆಡೆ ಪೊಲೀಸರು ಬಂಧಿಸಿರುವ ಐವರು ಆರೋಪಿಗಳನ್ನ 10 ದಿನ ಪೊಲೀಸ್ ಕಸ್ಟಡಿ ನೀಡಲಾಗಿದೆ. 2 ದಿನಕ್ಕೊಮ್ಮೆ ಬೆಳಗ್ಗೆ 2 ಗಂಟೆಗಳ ಕಾಲ ವಕೀಲರ ಭೇಟಿಗೆ ಅವಕಾಶ ನೀಡಲಾಗಿದೆ.