ಮೈಸೂರು, ಮಾರ್ಚ್.11: ಲೋಕಸಭಾ ಚುನಾವಣೆ (Lok Sabha Election) ಹತ್ತಿರವಾಗುತ್ತಿದ್ದು ರಾಜಕೀಯ ವಲಯದಲ್ಲಿ ತಯಾರಿ ಗರಿಗೆದರಿದೆ. ಎಲ್ಲಾ ಸಂಸದರು ತಮ್ಮ ಸಿದ್ಧತೆಗಳನ್ನು ಆರಂಭಿಸಿದ್ದಾರೆ. ಆದರೆ ಮೈಸೂರು ಸಂಸದ ಪ್ರತಾಪ್ ಸಿಂಹರಿಗೆ (Prathap Simha) ಈ ಬಾರಿಯ ಮೈಸೂರು ಲೋಕ ಸಭಾ ಟಿಕೆಟ್ ಸಿಗುವುದು ಅನುಮಾನ ಎಂಬ ಮಾತುಗಳು ಕೇಳಿ ಬರುತ್ತಿವೆ. ಅನೇಕ ಜನಪರ ಕೆಲಸಗಳನ್ನು ಮಾಡುವ ಮೂಲಕ ಜನಮನ್ನಣೆ ಗಳಿಸಿರುವ ಪ್ರತಾಪ್ ಸಿಂಹರಿಗೆ ಟಿಕೆಟ್ ಕೈ ತಪ್ಪಿದೆ ಎನ್ನಲಾಗುತ್ತಿದೆ. ವಿ.ಸೋಮಣ್ಣ (V Somanna) ಪರವಾಗಿ ನಿಂತಿದ್ದೆ ಪ್ರತಾಪ್ ಸಿಂಹರಿಗೆ ಮುಳುವಾಗುತ್ತಿದಿಯಾ ಎಂಬ ಮಾತುಗಳು ಕೇಳಿ ಬಂದಿವೆ.
ಪ್ರತಾಪ್ ಸಿಂಹಗೆ ಟಿಕೆಟ್ ತಪ್ಪಿಸಲು ಬಿಜೆಪಿಯ ರಾಜ್ಯ ನಾಯಕರೇ ತುದಿಗಾಲಲ್ಲಿ ನಿಂತಿದ್ದಾರೆ ಅನ್ನೋ ಮಾತು ಕೂಡ ಕೇಳಿಬರ್ತಿದೆ. ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಪ್ರತಾಪ್ ಸಿಂಹ ಮಾಜಿ ಸಚಿವ ಸೋಮಣ್ಣರ ಬೆನ್ನಿಗೆ ನಿಂತು ಹೋರಾಟ ಮಾಡಿದ್ರು. ಈ ವಿಚಾರ ಸೋಮಣ್ಣ ವಿರೋಧಿ ಬಣದ ಕೆಂಗಣ್ಣಿಗೆ ಗುರಿಯಾಗಿತ್ತು. ಇದೇ ವಿಚಾರ ಇಟ್ಟುಕೊಂಡು ಸೋಮಣ್ಣ ವಿರೋಧಿ ಗ್ಯಾಂಗ್ ಪ್ರತಾಪ್ ಸಿಂಹಗೆ ಟಿಕೆಟ್ ತಪ್ಪಿಸುವ ಪ್ರಯತ್ನ ನಡೆಸುತ್ತಿದೆ ಎನ್ನಲಾಗ್ತಿದೆ.
ಇದನ್ನೂ ಓದಿ: ಡಾ ಮಂಜುನಾಥ್ ಮನವೊಲಿಸುವಲ್ಲಿ ಯಶಸ್ವಿಯಾದ ಕುಮಾರಸ್ವಾಮಿ: ಬೆಂಗಳೂರು ಗ್ರಾಮಾಂತರದಿಂದ ಸ್ಪರ್ಧೆ ಬಹುತೇಕ ಖಚಿತ
ಕಳೆದ ಚುನಾವಣೆಯಲ್ಲಿ ಸಂಸದ ಪ್ರತಾಪ್ ಸಿಂಹ ಅವರು ಸೋಮಣ್ಣ ಪರ ಕೆಲಸ ಮಾಡಿದ್ದರು. ಸೋಮಣ್ಣ ಪರ ಅಬ್ಬರದ ಪ್ರಚಾರ ನಡೆಸಿದ್ದರು. ಆದ್ರೆ ಚುನಾವಣೆಯಲ್ಲಿ ಸೋಮಣ್ಣರಿಗೆ ಸೋಲಾಗಿತ್ತು. ಈ ವೇಳೆ ಸೋಲಿಗೆ ಪಕ್ಷದ ನಾಯಕರ ಒಳೇಟೆ ಕಾರಣ ಎಂದು ಹೇಳಲಾಗಿತ್ತು. ಈ ವಿಚಾರವಾಗಿ ಸೋಮಣ್ಣ ಕೂಡ ಬಹಿರಂಗವಾಗೆ ಅಸಮಾಧಾನ ಹೊರ ಹಾಕಿದ್ರು. ಅಡ್ಜಸ್ಟ್ ಪಾಲಿಟಿಕ್ಸ್ ಅಂತ ಪ್ರತಾಪ್ ಸಿಂಹ ಕೂಡ ಹೇಳಿಕೆ ನೀಡಿದ್ರು. ಚುನಾವಣೆ ಮಾತ್ರವಲ್ಲ ಮೈಸೂರಿಗೆ ಸೋಮಣ್ಣ ಉಸ್ತುವಾರಿ ಸಚಿವರಾಗಿ ಬಂದಾಗಿನಿಂದ ಪ್ರತಾಪ್ ಸಿಂಹ, ಸೋಮಣ್ಣ ಬೆನ್ನಿಗೆ ನಿಂತಿದ್ದರು. ಸೋಮಣ್ಣ ಮೈಸೂರಿಗೆ ಬಂದಾಗ ಬಿಜೆಪಿ ಹಿರಿಯ ನಾಯಕರು ಜೊತೆಗೆ ನಿಲ್ಲಲಿಲ್ಲ. ಈ ವೇಳೆ ಪ್ರತಾಪ್ ಸಿಂಹ ಸೋಮಣ್ಣರಿಗೆ ಸಾಥ್ ನೀಡಿದ್ದರು. ಇದೆಲ್ಲ ಸೋಮಣ್ಣ ವಿರೋಧಿ ಬಣದವರ ಕೆಂಗಣ್ಣಿಗೆ ಗುರಿಯಾಗಿತ್ತು. ಸದ್ಯ ಈಗಲೂ ಪ್ರತಾಪ್ ಸಿಂಹರಿಗೆ ಟಿಕೆಟ್ ಮಿಸ್ ಮಾಡಿಸಲು ಇದೇ ಕಾರಣ ಎಂಬ ಚರ್ಚೆ ನಡೆಯುತ್ತಿದೆ.
ಮತ್ತೊಂದೆಡೆ ಮೈಸೂರು ಮತ್ತು ಉಡುಪಿ-ಚಿಕ್ಕಮಗಳೂರು ಕ್ಷೇತ್ರಗಳಲ್ಲಿ ಹಾಲಿ ಸಂಸದರಿಗೆ ವಿರೋಧ ವ್ಯಕ್ತವಾಗಿದೆ. ದೆಹಲಿಯಲ್ಲಿ ನಡೆದ ರಾಜ್ಯ ಬಿಜೆಪಿ ನಾಯಕರ ಜೊತೆಗಿನ ಎರಡನೇ ಸಭೆಯ ಬಳಿಕ ಎರಡೂ ಕ್ಷೇತ್ರಗಳಲ್ಲಿ ವಿರೋಧ ಜೋರಾಗಿದೆ. ಎರಡನೇ ಸಭೆಯಲ್ಲಿ ಮೈಸೂರು ಕ್ಷೇತ್ರಕ್ಕೆ ಯದುವೀರ ಒಡೆಯರ್ ಹೆಸರು ಪ್ರಸ್ತಾಪವಾಗಿದೆ. ಎರಡನೇ ಸಭೆಯಲ್ಲಿ ಪ್ರತಾಪ ಸಿಂಹ ಮತ್ತು ಶೋಭಾ ಕರಂದ್ಲಾಜೆ ಬಗ್ಗೆ ಕ್ಷೇತ್ರಗಳಲ್ಲಿ ಇರುವ ವಿರೋಧದ ಬಗ್ಗೆ ರಾಜ್ಯ ನಾಯಕರು ಮಾಹಿತಿ ನೀಡಿದ್ದಾರೆ. ಈ ವೇಳೆ ವರಿಷ್ಠರು ರಾಜ್ಯ ನಾಯಕರಿಗೆ ಕೊಂಚ ಗರಂ ಆಗಿಯೇ ಪ್ರತಿಕ್ರಿಯಿಸಿದ್ದಾರೆ ಎಂದು ತಿಳಿದು ಬಂದಿದೆ.
ನೀವು ರಿಪೋರ್ಟ್ ಕೊಟ್ಟಿದ್ದೀರಿ, ನಿಮ್ಮ ಕೆಲಸ ಮಾಡಿದ್ದೀರಿ, ಅಲ್ಲಿಗೆ ನಿಮ್ಮ ಕೆಲಸ ಮುಗಿದಿದೆ, ಯಾರಿಗೆ ಕೊಡಬೇಕು ಎಂದು ನಾವು ತೀರ್ಮಾನ ಮಾಡುತ್ತೇವೆ ಎಂದು ವರಿಷ್ಠರು ಗರಂ ಆಗಿಯೇ ಪ್ರತಿಕ್ರಿಯಿಸಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಪ್ರತಾಪ ಸಿಂಹ ಮತ್ತು ಶೋಭಾ ಕರಂದ್ಲಾಜೆ ಬಗ್ಗೆ ವರಿಷ್ಠರು ಹೊಂದಿರುವ ರಿಪೋರ್ಟ್ ನಲ್ಲಿ ಇಬ್ಬರ ಪರವೂ ಸಕಾರಾತ್ಮಕ ವರದಿ ಇರುವ ಬಗ್ಗೆ ಮಾಹಿತಿ ಇದೆ. ಹೀಗಾಗಿ ರಾಜ್ಯ ನಾಯಕರು ಎರಡೂ ಕ್ಷೇತ್ರದಲ್ಲಿನ ವಿರೋಧದ ಬಗ್ಗೆ ಪ್ರಸ್ತಾಪಿಸಿದಾಗ ವರಿಷ್ಠರಿಂದ ನೇರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಎರಡನೇ ಸಭೆಯ ಬಳಿಕ ಎರಡೂ ಕ್ಷೇತ್ರಗಳಲ್ಲಿ ವಿರೋಧಾತ್ಮಕ ಬೆಳವಣಿಗೆ ಹೆಚ್ಚಾಗಿದೆ. ವರಿಷ್ಠರ ಖಡಕ್ ಪ್ರತಿಕ್ರಿಯೆಯ ಬಳಿಕ ಕ್ಷೇತ್ರದಲ್ಲಿ ವಿರೋಧ ದೊಡ್ಡ ಮಟ್ಟದಲ್ಲಿ ವ್ಯಕ್ತಪಡಿಸುವ ಮೂಲಕ ವರಿಷ್ಠರಿಗೆ ತಲುಪುವಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಬಿಜೆಪಿಯಲ್ಲಿ ಚರ್ಚೆ ನಡೆಯುತ್ತಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ