ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ: ಖಾಸಗಿ ಶಾಲೆಗಳ ಒಕ್ಕೂಟದಿಂದ ಸಿಎಂ ಸಿದ್ದರಾಮಯ್ಯಗೆ ಪತ್ರ
ಕಾಂಗ್ರೆಸ್ ಸರ್ಕಾರ ರಚನೆಯಾದ ನಂತರವೂ ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದ ಖಾಸಗಿ ಶಾಲೆಗಳ ಒಕ್ಕೂಟ (RUPSA) ಇದೀಗ ಮತ್ತೆ ಇಲಾಖೆ ವಿರುದ್ಧ ಸಿಡಿದೆದ್ದಿದ್ದು, ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಬೀದಿಗಿಳಿದು ಪ್ರತಿಭಟಿಸುವ ಎಚ್ಚರಿಕೆ ನೀಡಿದೆ.

ಬೆಂಗಳೂರು, ಅ.19: ಕಾಂಗ್ರೆಸ್ ಸರ್ಕಾರ ರಚನೆಯಾದ ನಂತರವೂ ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದ ಖಾಸಗಿ ಶಾಲೆಗಳ ಒಕ್ಕೂಟ (RUPSA) ಇದೀಗ ಮತ್ತೆ ಇಲಾಖೆ ವಿರುದ್ಧ ಸಿಡಿದೆದ್ದಿದ್ದು, ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಬೀದಿಗಿಳಿದು ಪ್ರತಿಭಟಿಸುವ ಎಚ್ಚರಿಕೆ ನೀಡಿದೆ.
ತಾಲೂಕು ಹಂತದಲ್ಲಿ ಬಿಇಒ ಹಾಗೂ ಡಿಡಿಪಿಐಗಳು ಕಚೇರಿಗಳಲ್ಲಿ ಭ್ರಷ್ಟಾಚಾರ ಕುರಿತು ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯಲಾಗಿದ್ದು, ಶಾಲೆಗಳ ರಿನಿವಲ್, ಉನ್ನತ್ತಿಕರಣದ ವೇಳೆ ಅಧಿಕಾರಿಗಳು ಲಂಚ ಪಡೆಯುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಅಲ್ಲದೆ, ಭ್ರಷ್ಟಾಚಾರಕ್ಕೆ ಸರ್ಕಾರ ಕಡಿವಾಣ ಹಾಕಬೇಕು. ಇಲ್ಲವಾದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರಲಿದೆ. ಭ್ರಷ್ಟರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದೆ. ಅಲ್ಲದೆ, ಇದೇ ರೀತಿ ಭ್ರಷ್ಟಾಚಾರ ಮುಂದುವರೆದರೆ ಬೀದಿಗಿಳಿದು ಪ್ರತಿಭಟಿಸುವುದಾಗಿ ರುಪ್ಸಾ ಅಧ್ಯಕ್ಷ ಹಾಲನೂರು ಲೇಪಾಕ್ಷಿ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯ ಸರ್ಕಾರದಲ್ಲೂ ಸಾಕಷ್ಟು ಭ್ರಷ್ಟಾಚಾರ ನಡೆಯುತ್ತಿದೆ: ಕೆಂಪಣ್ಣ
ಬಿಜೆಪಿ ಸರ್ಕಾರ ಹೋಗಿ ಕಾಂಗ್ರೆಸ್ ಸರ್ಕಾರ ರಚನೆಯಾದ ನಂತರವೂ ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ ಮುಂದುವರಿದಿದೆ ಎಂದು ಈ ಹಿಂದೆ ರುಪ್ಸಾ ಆರೋಪಿಸಿತ್ತು. ಶಿಕ್ಷಣ ಇಲಾಖೆಯಲ್ಲಿ ಮುಂದುವರಿದ ಅವ್ಯಾಹತ ಭ್ರಷ್ಟಾಚಾರದ ಬಗ್ಗೆ ಒಕ್ಕೂಟದ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಹೇಳಿಕೊಂಡಿದ್ದರು.
ಬಿಜೆಪಿ ಸರ್ಕಾರ ಇದ್ದಾಗಲೇ ಸಾಕ್ಷಿ ಸಮೇತ ಕೆಲ ಭ್ರಷ್ಟರ ಮುಖವಾಡ ಬಯಲಾಗಿತ್ತು. ಆ ಬಗ್ಗೆ ತನಿಖೆ ನಡೆಯುವ ಹಂತದಲ್ಲೇ ಈಗ ಮತ್ತೆ ಅವರಲ್ಲೇ ಕೆಲವರು ಹಳೆ ಚಾಳಿ ಮುಂದುವರಿಸಿದ್ದಾರೆ ಎಂದು ಕಿಡಿಕಾರಿದ್ದರು. ಅಧಿಕಾರ ಬಲ ಇದೆ ಅಂತ ಬಿಂಬಿಸಿ ಉನ್ನತ ಅಧಿಕಾರಿಗಳ ಹೆದರಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:40 pm, Thu, 19 October 23