ಪ್ರಧಾನಿ ಮೋದಿ ಕನ್ನಡ ಭಾಷಣದ ಹಿಂದಿನ ಅಕ್ಷರ ಮಾಂತ್ರಿಕ; ಅಡ್ವಾಣಿಯೇ ನನ್ನ ಗುರು ಎಂದ ಎಸ್ಎ ಹೇಮಂತ್

|

Updated on: Apr 06, 2023 | 10:59 AM

ದೇಶ-ವಿದೇಶ ಪ್ರಯಾಣಿಸುವ ಪ್ರಧಾನಿಗೆ ಕರ್ನಾಟಕದ ಪುಟ್ಟ ಪ್ರಾಂತ್ಯದ ಬಗ್ಗೆ ಇಷ್ಟು ಮಾಹಿತು ತಿಳಿದಿರಲು ಹೇಗೆ ಸಾಧ್ಯ ಎಂದು ಯಾವತ್ತಾದರು ಯೋಚಿಸಿದ್ದೀರಾ? ಈ ಪ್ರಶ್ನೆಗೆ ಉತ್ತರ ಪತ್ರಕರ್ತ ಎಸ್.ಎ ಹೇಮಂತ್.

ಪ್ರಧಾನಿ ಮೋದಿ ಕನ್ನಡ ಭಾಷಣದ ಹಿಂದಿನ ಅಕ್ಷರ ಮಾಂತ್ರಿಕ; ಅಡ್ವಾಣಿಯೇ ನನ್ನ ಗುರು ಎಂದ ಎಸ್ಎ ಹೇಮಂತ್
SA Hemant is the man behind PM Narendra Modi's Kannada speech
Image Credit source: Tv9 Kannada
Follow us on

ಸದಾ ಹಿಂದಿಯಲ್ಲಿ ಭಾಷಣ ಮಾಡುವಾಗ ‘ಭಾಯ್​ಯೋ ಔರ್ ಬೆಹೆನೋ’ ಎಂದು ಜನರ ಮನ ಗೆದ್ದ ಪ್ರಧಾನಿ ಮೋದಿ (PM Narendra Modi) ಕರ್ನಾಟಕಕ್ಕೆ (Karnataka) ಬಂದಾಗ ಸ್ಪಷ್ಟವಾದ ಕನ್ನಡದಲ್ಲಿ ಭಾಷಣವನ್ನು (Kannada Speech) ಪ್ರಾರಂಭಿಸುತ್ತಾರೆ. ಪ್ರತಿ ಬಾರಿ ಮೋದಿ ಕನ್ನಡದಲ್ಲಿ ಮಾತನಾಡಿದಾಗ ಶಿಳ್ಳೆ-ಚಪ್ಪಾಳೆಯಂತೂ ಕಟ್ಟಿಟ್ಟ ಬುತ್ತಿ. ಅವರು ಭಾಷಣ ಮಾಡುತ್ತಿರುವ ಪ್ರಾಂತ್ಯದ ಬಗ್ಗೆ ಮೋದಿಯವರಿಗಿರುವ ಜ್ಞಾನ ಹಾಗು ಅವರು ಕನ್ನಡದಲ್ಲಿ ಮಾತನಾಡುವ ಕೆಲವು ವಾಕ್ಯ, ಮೋದಿ ತಾವು ಭೇಟಿ ನೀಡುವ ರಾಜ್ಯಕ್ಕೆ ಎಷ್ಟು ಗೌರವ ನೀಡುತ್ತಾರೆ ಎಂಬುದನ್ನು ಸಂಕೇತಿಸುತ್ತದೆ. ಹಾಗಾದರೆ ದೇಶ-ವಿದೇಶ ಪ್ರಯಾಣಿಸುವ ಪ್ರಧಾನಿಗೆ ಕರ್ನಾಟಕದ ಪುಟ್ಟ ಪ್ರಾಂತ್ಯದ ಬಗ್ಗೆ ಇಷ್ಟು ಮಾಹಿತು ತಿಳಿದಿರಲು ಹೇಗೆ ಸಾಧ್ಯ ಎಂದು ಯಾವತ್ತಾದರು ಯೋಚಿಸಿದ್ದೀರಾ? ಈ ಪ್ರಶ್ನೆಗೆ ಉತ್ತರ ಪತ್ರಕರ್ತ ಎಸ್.ಎ ಹೇಮಂತ್ (SA Hemanth). ಹೌದು, ಪ್ರಧಾನಿ ಹೇಳುವ ಪ್ರತಿ ಕನ್ನಡ ವಾಕ್ಯ, ಆ ಪ್ರದೇಶದ ಮಾಹಿತಿ ಇವೆಲ್ಲವನ್ನು ತಾಯಾರಿ ಮಾಡಿ ಪಿಎಂಒ ಕಚೇರಿಗೆ ಕಳಿಸುವ ವ್ಯಕ್ತಿ ನಮ್ಮ ಬೆಂಗಳೂರಿನವರು.

ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳದ ಎಸ್.ಎಂ ಹೇಮಂತ್, ಸರ್ಕಾರಿ ರಾಮನಾರಾಯಣ ಚೆಲ್ಲರಂ ಕಾಲೇಜು (Govt RC College) ಅಲ್ಲಿ ವ್ಯಾಸಂಗ ಮುಗಿಸಿ 1980 ರ ಆಗಸ್ಟ್ 20 ರಂದು ಬಿಜೆಪಿ ಪಕ್ಷ ಸೇರಿದರು. ಕಾರ್ಯಕರ್ತನಾಗಿ ಪಕ್ಷ ಸೇರಿದ ಇವರು ನಂತರ ಕಚೇರಿ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದರು. 1986 ರಲ್ಲಿ ಎಲ್.ಕೆ ಅಡ್ವಾಣಿಯವರು ಬಿಜೆಪಿ ಪಾರ್ಟಿ ಪ್ರೆಸಿಡೆಂಟ್ ಆದಾಗ ಬೆಂಗಳೂರಿನ ಬೇಗೂರಿನಲ್ಲಿ ಸಭೆ ಆಯೋಜಿಸಲಾಗಿತ್ತು, ಈ ಸಭೆಯಲ್ಲಿ ಅಡ್ವಾಣಿಯವರು ಮಾತನಾಡಲು ತೀರ್ಮಾನಿಸಿದ್ದರು.

ಅಂದು ನಡೆದ ಘಟನೆಯನ್ನು ಮೆಲುಕು ಹಾಕುತ್ತಾ, ಎಸ್. ಎ ಹೇಮಂತ್ ಕೆಲವು ವಿಷಯವನ್ನು Tv9 ಜೊತೆ ಹಂಚಿಕೊಂಡಿದ್ದಾರೆ. “ಅಂದು ಕುಮಾರಕೃಪಾ ಗೆಸ್ಟ್ ಹೌಸ್​ನಿಂದ ಬೇಗೂರಿಗೆ ಅಡ್ವಾಣಿಯವರ ಜೊತೆ ಹೋಗುವಾಗ ಅಡ್ವಾಣಿಯವರು ನನಗೆ ಬೇಗೂರಿನ ಬಗ್ಗೆ ಕೆಲವು ಮಾಹಿತಿಯನ್ನು ಕೇಳಿದರು, ಅಲ್ಲಿನ ವಿಶೇಷತೆ, ಅಲ್ಲಿನ ಪ್ರಸಿದ್ಧ ವ್ಯಕ್ತಿಗಳು ಅಥವಾ ಪಕ್ಷದಲ್ಲಿ ನಿರಂತರವಾಗಿ ಕೆಲಸ ಮಾಡುವವರ ಬಗ್ಗೆ ಕೇಳಿದರು. ಯಾವ ಕಾರಣಕ್ಕೆ ಇದನ್ನೆಲ್ಲ ಕೇಳಿದರು ಎಂದು ನನಗೆ ಅರ್ಥವಾಗಲಿಲ್ಲ. ಆದರು ನನಗೆ ತಿಳಿದ ಎಲ್ಲಾ ವಿಷಯಗಳನ್ನು ಅವರ ಜೊತೆ ಹಂಚಿಕೊಂಡೆ. ಅಂದು ಸಭೆಯಲ್ಲಿ ಅಡ್ವಾಣಿ ಸ್ಥಳೀಯ ನಾಗನಾಥ ದೇವಸ್ಥಾನವನ್ನು ಪ್ರಸ್ತಾಪಿಸಿದರು. ಇದನ್ನು ಕೇಳಿ ಜನರು ಬಹಳ ಸಂತೋಷ ಪಟ್ಟಿದ್ದರು. ಸಭೆ ಬಳಿಕ ಆಡ್ವಾಣಿ ನನ್ನ ಬಳಿ ಸ್ಥಳೀಯರ ಜೊತೆ ಒಂದಾಗಲು, ಅವರ ಕಷ್ಟ-ಸುಖಗಳಲ್ಲಿ ಭಾಗಿಯಾಗಲು ನಾವು ಅವರ ಊರು, ಅಲ್ಲಿನ ಜನರ ಬಗ್ಗೆ ತಿಳಿದಿರಬೇಕು ಎಂದು ನನಗೆ ಅರ್ಥ ಮಾಡಿಸಿದರು.” ಎಂದು ಹೇಮಂತ್ ಅವರು ಹೇಳಿದ್ದಾರೆ.

ಹೀಗೆ ಪ್ರಾರಂಭವಾದ ಹೇಮಂತ್ ಅವರ ಪಯಣ ಇಂದು ಪ್ರಧಾನಿಯವರ ಭಾಷಣವನ್ನು ತಾಯಿರಿ ಮಾಡುವವರೆಗೂ ಬಂದು ನಿಂತಿದೆ. ಅಂದಿನಿಂದ ಇಂದಿನವರೆಗು ಅದೆಷ್ಟೋ ಕೇಂದ್ರ ನಾಯಕರಿಗೆ ಭಾಷಣದ ವೇಳೆ ಕನ್ನಡದಲ್ಲಿ ಮಾತನಾಡಲು ಹೇಮಂತ್ ಹೇಳಿಕೊಟ್ಟಿದ್ದಾರೆ, ಈ ಪಟ್ಟಿಯಲ್ಲಿ ಅಮಿತ್ ಷಾ, ಯೋಗಿ ಆದಿತ್ಯನಾಥ್ ಕೂಡಾ ಸೇರಿದ್ದಾರೆ. ಅಮಿತ್ ಷಾ ಹಾವೇರಿಯಲ್ಲಿದ್ದಾಗ ಕನಕದಾಸರ ಬಗ್ಗೆ ಮಾತನಾಡುವಂತೆ, ಹಾಗೆ ಯೋಗಿ ಆದಿತ್ಯನಾಥ್ ಅವರು ಮಂಗಳೂರಿನ ಮಂಗಳಾ ದೇವಿ ಬಗ್ಗೆ ಮಾತನಾಡುವಂತೆ ಸೂಚಿಸಿದ್ದು ಇವರೇ.

“ಸಚಿವರಿಗೆ ಅಥವಾ ಪ್ರಧಾನಿಯವರಿಗೆ ಭಾಷಣದ ಪಾಯಿಂಟ್ಸ್ ಬರಿಯುವುದು ಸುಲಭದ ಕೆಲಸವಲ್ಲ. ಯಾವ ವಿಷಯವನ್ನು ಬರೆಯಬೇಕು ಎಂದು ಅಳೆದು ತೂಗಬೇಕಾಗುತ್ತದೆ. ಒಂದು ಜಿಲ್ಲೆಯಲ್ಲಿ ಪ್ರಧಾನಿಯವರು ಭಾಷಣ ಮಾಡುವಾಗ ಅಲ್ಲಿ ಎಲ್ಲ ಸಮುದಾಯದ ಜನರು ಇರುತ್ತಾರೆ, ಹಾಗಾಗಿ ಯಾವುದೊ ಒಂದು ಜನಾಂಗ ಅಥವಾ ಸಮುದಾಯವನ್ನು ಓಲೈಸಿ ಮಾತನಾಡುವಂತಿಲ್ಲ. ನನ್ನ ಬರವಣಿಗೆ ಯಾವಾಗಲು ಸಮುದಾಯವನ್ನು ಓಲೈಸುವ ಕಡೆ ತಿರುಗದೆ ಆ ಪ್ರದೇಶದ ವಿಶೇಷತೆ ಮತ್ತು ಅಲ್ಲಿನ ಪ್ರಸಿದ್ಧ ಜನ ಅಥವಾ ಇತಿಹಾಸ ಬಗ್ಗೆ ಇರುತ್ತದೆ. ನಾನು ಯಾರಿಗೆ ಭಾಷಣವನ್ನು ಬರೆದರೂ, ರಾಜಕೀಯವಾಗಿ ಏನನ್ನೂ ಬರೆಯುವುದಿಲ್ಲ. ಅಂದರೆ ಯಾವುದೇ ವಿರೋಧ ಪಕ್ಷದ ಬಗ್ಗೆ ಏನು ಮಾತಾಡಬೇಕು ಎಂದು ಬರೆಯುವುದು ನನ್ನ ಕೆಲಸವಲ್ಲ. ನಾನು ಸಂಪೂರ್ಣವಾಗಿ ಪ್ರಾದೇಶಿಕ ಸಂಪ್ರದಾಯ, ಸಂಸ್ಕೃತಿ ಮತ್ತು ಇತಿಹಾಸದ ಬಗ್ಗೆ ಮಾಹಿತಿ ಕೊಡುತ್ತೇನೆ ಅಷ್ಟೇ” ಎಂದು ಹೇಮಂತ್ ಅವರು ಹೇಳುತ್ತಾರೆ.

ಇದನ್ನೂ ಓದಿ: ನಟ ಸುದೀಪ್ ಬಿಜೆಪಿ ಪರ ಪ್ರಚಾರಕ್ಕೆ ಕಾಂಗ್ರೆಸ್ ಲೇವಡಿ ಬಗ್ಗೆ ಬಿಎಸ್ ಯಡಿಯೂರಪ್ಪ ಹೇಳಿದ್ದಿಷ್ಟು

ಎಲ್ಲ ಪ್ರದೇಶದ ಮಾಹಿತಿಯನ್ನು ಹೇಮಂತ್ ಅವರು ಹೇಗೆ ಕಲೆ ಹಾಕುತ್ತಾರೆ ಗೊತ್ತಾ?

ಪತ್ರಕರ್ತರಾಗಿರುವ ಹೇಮಂತ್ ಸುಮಾರು 7 ರಿಂದ 8 ಸಲ ಕರ್ನಾಟಕದ 224 ಕ್ಷೇತ್ರಕ್ಕೂ ಭೇಟಿ ನೀಡಿದ್ದಾರಂತೆ. ಸಣ್ಣ ವಯಸ್ಸಿನಿಂದಲೂ ಎಲ್ಲ ವಿಷಯದ ಬಗ್ಗೆ ಕುತೂಹಲವನ್ನು ಬೆಳೆಸಿಕೊಂಡಿರುವ ಇವರು ಯಾವುದೇ ಜಿಲ್ಲೆ ಅಥವಾ ಜಾಗಕ್ಕೆ ಹೋದರೂ, ಅಲ್ಲಿನ ವಿಶೇಷತೆಗಳನ್ನು ತಿಳಿದುಕೊಳ್ಳುವ ಆಸಕ್ತಿಯನ್ನು ಬೆಳೆಸಿಕೊಂಡಿದ್ದಾರೆ. ಈ ಅಭ್ಯಾಸ ಹೇಮಂತ್ ಅವರಿಗೆ ಭಾಷಣ ಬರೆಯುವಾಗ ಬಹಳಷ್ಟು ಸಹಾಯ ಮಾಡಿದೆ. ಯಾರನ್ನೋ ಕೇಳಿ ಅಥವಾ ಯಾವುದೊ ಪುಸ್ತಕವನ್ನು ಓದಿ ಮಾಹಿತಿಯನ್ನು ಕಲೆ ಹಾಕುವುದಕ್ಕಿಂತ ತಮ್ಮ ಸ್ವಂತ ಅನುಭವವನ್ನೇ ಕಾರ್ಯ ರೂಪಕ್ಕೆ ತರುವುದರಲ್ಲಿ ಹೇಮಂತ್ ಯಶಸ್ವಿಯಾಗಿದ್ದಾರೆ.

ಪ್ರಧಾನಿಯವರಿಗೆ ಹೇಮಂತ್ ಅವರು ಹೇಗೆ ಕನ್ನಡ ಕಲಿಸುತ್ತಾರೆ ಗೊತ್ತಾ?

ಹೇಮಂತ್ ಅವರು ಇಡೀ ಭಾಷಣವನ್ನು ಪ್ರಧಾನಿಯವರಿಗೆ ನೀಡುವಿದಿಲ್ಲ. ಅವರು ಭಾಷಣದಲ್ಲಿ ಹೇಳಬಹುದಾದ ಪಾಯಿಂಟ್ಸ್ ಅನ್ನು ಮಾತ್ರ ನೀಡುತ್ತಾರೆ. ಮೊದಲಿಗೆ ಭಾಷಣದ ಪ್ರಾರಂಭದ ಎರಡು ಕನ್ನಡ ವಾಕ್ಯವನ್ನು ಬರೆಯ್ತತ್ತಾರೆ. ಅದನ್ನು ಇಂಗ್ಲಿಷ್​ನಲ್ಲಿ ಅನುವಾದ ಮಾಡುತ್ತಾರೆ. ಆ ವಾಕ್ಯಗಳ ಉಚ್ಚಾರಣೆ ತಿಳಿಯಲು ಹಿಂದಿಯಲ್ಲಿ ಬರೆಯುತ್ತಾರೆ. ನಂತರ ವಾಯ್ಸ್ ರೆಕಾರ್ಡ್ ಮಾಡಿ ಪಿಎಂಒ ಕಚೇರಿಗೆ ಕಳಿಸುತ್ತಾರೆ. ಯಾವುದೇ ರೀತಿಯ ಕ್ಲಿಷ್ಟಕರ ಭಾಷೆ ಅಥವಾ ವಿಷಯವನ್ನು ಸೇರಿಸಿದೆ, ಪ್ರಧಾನಿ ಹಾಗು ಜನರಿಗೆ ಅರ್ಥವಾಗುವಂತಹ ಮಾಹಿತಿಯನ್ನು ನೀಡುತ್ತಾರೆ.

ಇತ್ತೀಚೆಗೆ ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಉದ್ಘಾಟನೆಯ ಸಂದರ್ಭದಲ್ಲಿ ಮಾಡಿದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಿಗಂದೂರು ಚೌಡೇಶ್ವರಿ ದೇವಸ್ಥಾನ, ಶ್ರೀಧರ ಸ್ವಾಮಿಗಳ ಆಶ್ರಮ, ಆಗುಂಬೆ, ಕೋಜಿ ಆಂಜನೇಯಸ್ವಾಮಿ ದೇವಸ್ಥಾನ, ಜೋಗ ಜಲಪಾತ, ಸಕ್ಕರೆ ಬೈಲು ಆನೆ ಶಿಬಿರ, ತ್ಯಾವರೆಕೊಪ್ಪ ಸಿಂಹ ಸಫಾರಿ, ಮತ್ತೂರು ಸಂಸ್ಕೃತ ಗ್ರಾಮ ಇತ್ಯಾದಿಗಳ ಬಗ್ಗೆ ಉಲ್ಲೇಖಿಸಿದ್ದರು. ಈ ಎಲ್ಲ ಮಾಹಿತಿ ಒದಗಿಸಿದ್ದು ತಾವೇ ಎಂದು ಹೇಮಂತ್ ಹೇಳುತ್ತಾರೆ. ಹಾಗೆಯೇ ತುಮಕೂರಿನಲ್ಲಿ ಪ್ರಧಾನಿ ಮಾಡಿದ ಭಾಷಣದಲ್ಲಿ ಅಕ್ಷರ, ಅನ್ನ ಮತ್ತು ಆಸರೆ ತ್ರಿವಿಧ ದಾಸೋಹಕ್ಕೆ ಹೆಸರಾದ ಶ್ರೀ ಸಿದ್ಧಗಂಗಾ ಮಠ, ಗುದ್ದಿಯ ಚಿದಂಬರ ಆಶ್ರಮ, ಚನ್ನಬಸವೇಶ್ವರ ದೇವಸ್ಥಾನ ಇದರ ಬಗ್ಗೆ ಮಾತನಾಡಲು ಮಾಹಿತಿ ನೀಡಿದ್ದು ಹೇಮಂತ್.

ಇದನ್ನೂ ಓದಿ: ಮುಸ್ಲಿಂ ಅಭಿಮಾನಿಗಳು ಕೊಟ್ಟ ಟೋಪಿ ಧರಿಸಿ ಪ್ರಚಾರ ಮಾಡಿದ ಹೆಚ್​ಡಿ ಕುಮಾರಸ್ವಾಮಿ

ಅಷ್ಟೇ ಅಲ್ಲದೆ ಬೆಳಗಾವಿ, ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಮೋದಿ ಅವರ ಭಾಷಣಗಳಲ್ಲಿ ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಗಂಗಾಧರ ರಾವ್‌ ದೇಶಪಾಂಡೆ, ದತ್ತಾತ್ರೇಯ ರಾಮಚಂದ್ರ ಬೇಂದ್ರೆ, ಮಲ್ಲಿಕಾರ್ಜುನ ಮನ್ಸೂರ್, ಇತ್ಯಾದಿ ವಿಷಯಗಳ ಬಗ್ಗೆ ಮಾತನಾಡಿರುವುದರ ಹಿಂದೆ ಇರುವ ಕೈ ಈ ಪರ್ತಕರ್ತರದ್ದು. ಶಿಕಾರಿಪುರ, ತಿಪಟೂರು, ತುಮಕೂರು ಹೀಗೆ ಹತ್ತು ಹಲವು ಕಡೆ ಪ್ರಧಾನಿಯರು ಯಶಸ್ವಿಯಾಗಿ ಭಾಷಣ ಮಾಡಿರುವುದರ ಹಿಂದೆ ಹೇಮಂತ್ ಅವರ ಪಾತ್ರ ದೊಡ್ಡದು.