ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ: ಕನ್ನಡಿಗನಿಗೆ ಒಲಿದ ಯುವ ಪುರಸ್ಕಾರ..!
ಕೇಂದ್ರ ಸಾಹಿತ್ಯ ಅಕಾಡೆಮಿಯ 2025ನೇ ಸಾಲಿನ ಯುವ ಪುರಸ್ಕಾರ ಪ್ರಶಸ್ತಿ ಆರ್. ದಿಲೀಪ್ ಕುಮಾರ್ ಅವರ "ಪಚ್ಚೆಯ ಜಗುಲಿ" ಮತ್ತು ಬಾಲ ಪುರಸ್ಕಾರ ಪ್ರಶಸ್ತಿ ಕೆ. ಶಿವಲಿಂಗಪ್ಪ ಹಂದಿಹಾಳು ಅವರ "ನೋಟ್ ಬುಕ್" ಕೃತಿಗೆ ಲಭಿಸಿದೆ. ಎರಡೂ ಕೃತಿಗಳು ಕನ್ನಡ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ನೀಡಿವೆ. ಪ್ರಶಸ್ತಿ ವಿಜೇತರಿಗೆ ತಲಾ 50,000 ರೂಪಾಯಿ ನಗದು ಮತ್ತು ಪ್ರಶಸ್ತಿ ಫಲಕ ನೀಡಲಾಗುತ್ತದೆ.

ನವದೆಹಲಿ/ಬೆಂಗಳೂರು, ಜೂನ್ 18: ಕೇಂದ್ರ ಸಾಹಿತ್ಯ ಅಕಾಡೆಮಿಯ 2025ನೇ ಸಾಲಿನ ಯುವ ಪುರಸ್ಕಾರ ಪ್ರಶಸ್ತಿ (Sahitya Akademi Yuva Puraskar) ಮತ್ತು ಬಾಲ ಪುರಸ್ಕಾರ (Bal Puraskar) ಪ್ರಶಸ್ತಿ ಪ್ರಕಟವಾಗಿದೆ. ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಕೊಡಮಾಡುವ 2025ನೇ ಸಾಲಿನ ಯುವ ಪುರಸ್ಕಾರ ಆರ್.ದಿಲೀಪ್ ಕುಮಾರ್ ಅವರ ‘ಪಚ್ಚೆಯ ಜಗುಲಿ’ಗೆ ಲಭಿಸಿದೆ. ಬಾಲ ಪುರಸ್ಕಾರ ಪ್ರಶಸ್ತಿ ಕೆ.ಶಿವಲಿಂಗಪ್ಪ ಹಂದಿಹಾಳು ಅವರ ‘ನೋಟ್ ಬುಕ್’ ಸಣ್ಣ ಕಥೆಗಳ ಸಂಕಲನಕ್ಕೆ ಲಭಿಸಿದೆ. ನೋಟ್ ಬುಕ್ ಮಕ್ಕಳ ಸಣ್ಣ ಕಥೆಗಳ ಪುಸ್ತಕವು 2021ರಲ್ಲಿ ಪ್ರಕಟವಾಗಿತ್ತು.
ಆರ್. ದಿಲೀಪ್ ಕುಮಾರ್ ಅವರು 1991ರ ಮಾರ್ಚ್ 16 ರಂದು ಮೈಸೂರಿನಲ್ಲಿ ಜನಿಸಿದರು. ದಿಲೀಪ್ ಕುಮಾರ್ ಅವರು ಸದ್ಯ ಚಾಮರಾಜನಗರದಲ್ಲಿ ವಾಸವಾಗಿದ್ದಾರೆ. ಇವರು ಪದವಿ ಶಿಕ್ಷಣವನ್ನು ಸರ್ಕಾರಿ ಪದವಿ ಕಾಲೇಜು ಚಾಮರಾಜನಗರ, ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನು ಜೆಎಸ್ಎಸ್ ಕಾಲೇಜು ಚಾಮರಾಜನಗರದಲ್ಲಿ ಪೂರೈಸಿದರು.
ಇದೇ ಕಾಲೇಜಿನಲ್ಲಿ ಬಿಎಡ್ ಪದವಿಯನ್ನು ಪಡೆದರು. ನಾಲ್ಕು ವರ್ಷಗಳ ಕಾಲ ಚಾಮರಾಜನಗರ, ಕೊಳ್ಳೇಗಾಲ, ಗುಂಡ್ಲುಪೇಟೆಗಳಲ್ಲಿನ ಪದವಿ ಪೂರ್ವ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಶಸ್ತಿ ಪುರಸ್ಕೃತರು ತಲಾ 50 ಸಾವಿರ ನಗದು ಹಾಗೂ ಫಲಕಗಳನ್ನು ಪಡೆಯಲಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:11 pm, Wed, 18 June 25