ಕೆಲಸದ ಅವಧಿ 9ರಿಂದ 10ಗಂಟೆಗೆ ಹೆಚ್ಚಳ: ಕರ್ನಾಟಕದ ಪ್ರಸ್ತಾಪಕ್ಕೆ ಐಟಿ ಸೆಕ್ಟರ್ ವಿರೋಧ, ಹೋಟೆಲ್ ಮಾಲಕರ ಸಂಘ ಬೆಂಬಲ
Karnataka government proposes to raise daily working hours limit to 10 hours: ಕಾರ್ಮಿಕ ಕಾನೂನಿಗೆ ತಿದ್ದುಪಡಿ ತರುವ ಕರ್ನಾಟಕ ಸರ್ಕಾರದ ನಡೆಗೆ ವಿವಿಧ ಸಂಘಟನೆಗಳು ವಿರೋಧಿಸಿವೆ. ಐಟಿ, ಬಿಪಿಒ, ಐಟಿಇಎಸ್ ಸೆಕ್ಟರ್ಗಳಲ್ಲಿ ಕಾರ್ಮಿಕರ ಕೆಲಸದ ಅವಧಿಯನ್ನು 8ರಿಂದ 9 ಗಂಟೆಗೆ ಏರಿಸಲು, ಮತ್ತು ಓಟಿ ಸೇರಿ ದಿನ ಗರಿಷ್ಠ ಕೆಲಸದ ಅವಧಿಯನ್ನು 12ಗಂಟೆಗೆ ಏರಿಸಲು ಸರ್ಕಾರ ಕಾನೂನು ತಿದ್ದುಪಡಿ ತರುತ್ತಿದೆ. ಐಟಿ ಉದ್ಯೋಗಿಗಳ ಒಕ್ಕೂಟವಾದ ಕೆಐಟಿಯು, ಕಾರ್ಮಿಕ ಸಂಘಟನೆ ಸಿಐಟಿಯು ಮೊದಲಾದ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಹೋಟೆಲ್ ಮಾಲಕರ ಸಂಘವು ಸರ್ಕಾರದ ನಡೆಗೆ ಬೆಂಬಲ ನೀಡಿದೆ.

ಬೆಂಗಳೂರು, ಜೂನ್ 18: ಐಟಿ ಮತ್ತು ಬಿಪಿಒ ಸೆಕ್ಟರ್ಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಕೆಲಸದ ಅವಧಿಯನ್ನು ಹೆಚ್ಚಿಸಿ ಕರ್ನಾಟಕ ಸರ್ಕಾರ ಮಾಡುತ್ತಿರುವ ನಿಯಮ ಬದಲಾವಣೆಯ ಪ್ರಸ್ತಾಪಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಾರ್ಮಿಕರ ಕೆಲಸದ ಅವಧಿಯನ್ನು (employees working hours) ದಿನಕ್ಕೆ 9ರಿಂದ 10 ಗಂಟೆಗೆ ಏರಿಸಲು ಮತ್ತು ದಿನದ ಗರಿಷ್ಠ ಕೆಲಸದ ಅವಧಿಯನ್ನು 9ರಿಂದ 12 ಗಂಟೆಗೆ ಏರಿಸಲು ಸರ್ಕಾರ ಪ್ರಸ್ತಾಪ ಮಾಡಿದೆ. ಈ ಸಂಬಂಧ 1961ರ ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆಗೆ (Karnataka Shops and Commercial Establishments Act, 1961) ಕರಡು ತಿದ್ದುಪಡಿ ತಂದಿದೆ. ಕಾರ್ಮಿಕ ಇಲಾಖೆ ಕಾರ್ಯದರ್ಶಿ ರೋಹಿಣಿ ಸಿಂಧೂರಿ ನೇತೃತ್ವದಲ್ಲಿ ಇಂದು ಸಭೆ ನಡೆಯಿತು. ಇದರಲ್ಲಿ ಕಾರ್ಮಿಕ ಕ್ಷೇತ್ರಕ್ಕೆ ಸಂಬಂಧಿಸಿದ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
1961ರ ಆ ಕಾಯ್ದೆಯ ಸೆಕ್ಷನ್ 7ರ ಪ್ರಕಾರ ಕೆಲಸದ ಅವಧಿ ದಿನಕ್ಕೆ 9 ಗಂಟೆ ಮೀರಬಾರದು ಎನ್ನುವ ನಿಯಮ ಇದೆ. ಓವರ್ಟೈಮ್ ಕೂಡ ಸೇರಿ ಇದನ್ನು 12 ಗಂಟೆಗೆ ವಿಸ್ತರಿಸುವ ಪ್ರಸ್ತಾಪ ಇದೆ. ಓವರ್ಟೈಮ್ ಅವಧಿ ಮೂರು ತಿಂಗಳಲ್ಲಿ 50 ಗಂಟೆಗೆ ಮಿತಿಗೊಳಿಸಲಾಗಿತ್ತು. ಅದನ್ನು 144 ಗಂಟೆಗೆ ಏರಿಸಲು ಸರ್ಕಾರ ಯೋಜಿಸಿದೆ.
ಇದನ್ನೂ ಓದಿ: ಇನ್ಫೋಸಿಸ್ ನಾರಾಯಣಮೂರ್ತಿಯಿಂದ ಐಐಎಂಎಗೆ 20 ವರ್ಷದ ಸ್ಕಾಲರ್ಶಿಪ್ ಸ್ಕೀಮ್; ವಿದ್ಯಾರ್ಥಿಯ ಸರ್ವ ವೆಚ್ಚವೂ ಮೂರ್ತಿಗಳದ್ದೇ
ಕರ್ನಾಟಕ ಐಟಿ ಒಕ್ಕೂಟ ವಿರೋಧ
ಕರ್ನಾಟಕ ಸರ್ಕಾರದ ಈ ಕಾರ್ಮಿಕ ಕಾನೂನು ತಿದ್ದುಪಡಿ ಪ್ರಸ್ತಾಪವನ್ನು ಐಟಿ ಉದ್ಯೋಗಿಗಳ ಒಕ್ಕೂಟವಾದ ಕೆಐಟಿಯು ಬಲವಾಗಿ ವಿರೋಧಿಸಿದೆ. ಕೆಲಸದ ಅವಧಿ 12 ಗಂಟೆಗೆ ವಿಸ್ತರಣೆಗೊಂಡರೆ ದಿನದಲ್ಲಿ ಇರುವ ಮೂರು ಶಿಫ್ಟ್ಗಳ ಸಂಖ್ಯೆ ಎರಡಕ್ಕೆ ಇಳಿಯಬಹುದು. ಇದರಿಂದ ಉದ್ಯೋಗಗಳಿಗೆ ಕತ್ತರಿ ಬೀಳಬಹುದು ಎಂದು ಕೆಐಟಿಯು ಆತಂಕ ವ್ಯಕ್ತಪಡಿಸಿದೆ.
ಕಾರ್ಪೊರೇಟ್ ಸೆಕ್ಟರ್ನಲ್ಲಿರುವ 25 ವರ್ಷದೊಳಗಿನ ವಯಸ್ಸಿನ ಶೇ. 90ರಷ್ಟು ಉದ್ಯೋಗಿಗಳು ದೀರ್ಘ ಕೆಲಸದ ಅವಧಿಯಿಂದಾಗಿ ಆತಂಕದ ಮನಸ್ಥಿತಿಯಲ್ಲಿದ್ದಾರೆ ಎನ್ನುವ ವರದಿಯೊಂದನ್ನು ಉಲ್ಲೇಖಿಸಿ ಕೆಐಟಿಯು ವಾದಿಸಿದೆ.
ಕಾರ್ಮಿಕ ಇಲಾಖೆ ನಡೆಸಿದ ಈ ಸಭೆಯಲ್ಲಿ ಪಾಲ್ಗೊಂಡಿದ್ದ ಸಿಐಟಿಯು ಅಧ್ಯಕ್ಷೆ ವರಲಕ್ಷ್ಮೀ ಕೂಡ ಈ ಪ್ರಸ್ತಾಪವನ್ನು ವಿರೋಧಿಸಿದ್ದಾರೆ. ಸರ್ಕಾರವು ಯಾವುದೇ ಕಾರಣಕ್ಕೂ ಕಾನೂನಿಗೆ ತಿದ್ದುಪಡಿ ತರಬಾರದು. ಕಾರ್ಮಿಕರಿಗೆ ಹೊರೆಯಾಗುತ್ತದೆ. ಕೆಲಸದ ಅವಧಿ ಹೆಚ್ಚಳ ಮಾಡಬಾರದು ಎಂದು ಸಿದ್ದರಾಮಯ್ಯ ಅವರಿಗೂ ಮನವಿ ಮಾಡುತ್ತೇನೆ ಎಂದು ವರಲಕ್ಷ್ಮೀ ಟಿವಿ9 ಕನ್ನಡಕ್ಕೆ ತಿಳಿಸಿದ್ದಾರೆ.
ಇದನ್ನೂ ಓದಿ: ನಾನ್-ಕಮರ್ಷಿಯಲ್ ವಾಹನಗಳಿಗೆ ಫಾಸ್ಟ್ಯಾಗ್ ಆಧಾರಿತ ವಾರ್ಷಿಕ ಪಾಸ್; ಬೆಲೆ 3,000 ರೂ; 200 ಟ್ರಿಪ್ ಮಿತಿ
ಸರ್ಕಾರದ ನಡೆಗೆ ಹೋಟೆಲ್ ಮಾಲೀಕರ ಸಂಘದ ಬೆಂಬಲ
ಕಾರ್ಮಿಕರ ಕೆಲಸ ಅವಧಿಯನ್ನು ಏರಿಸುವ ಸರ್ಕಾರದ ಪ್ರಸ್ತಾಪಕ್ಕೆ ಹೋಟೆಲ್ ಮಾಲೀಕರ ಸಂಘ ಬೆಂಬಲ ವ್ಯಕ್ತಪಡಿಸಿದೆ. ಐಟಿ ಕಂಪನಿಗಳಲ್ಲಿ ವಾರಕ್ಕೆ 48 ಗಂಟೆ ಮಾತ್ರ ಕೆಲಸ ಮಾಡಿಸಲಾಗುತ್ತಿದೆ. ದಿನದ ಕೆಲಸದ ಅವಧಿಯನ್ನು 10 ಗಂಟೆಗೆ ಏರಿಸಿದರೆ ಅಷ್ಟು ವ್ಯತ್ಯಾಸ ಆಗಲ್ಲ. ವಾರದಲ್ಲಿ ಎರಡು ದಿನ ರಜೆಯೂ ಉಳಿಯುತ್ತದೆ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ. ರಾವ್ ಹೇಳಿದ್ದಾರೆ.
ಸಭೆ ಬಳಿಕ ಕಾರ್ಮಿಕ ಇಲಾಖೆ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲಿಲ್ಲ. ಕಾರ್ಮಿಕರ ಕೆಲಸ ಅವಧಿಯನ್ನು ಹೆಚ್ಚಿಸಬೇಕು ಎಂಬುದು ಐಟಿ ವಲಯದ ಸಂಸ್ಥೆಗಳ ಮನವಿಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಕಾಯ್ದೆಗೆ ತಿದ್ದುಪಡಿ ತರಲು ಹೊರಟಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




