AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nandan Nilekani: ವಿದ್ಯುತ್ ವಲಯದ ಸುಧಾರಣೆಗೆ ಸರ್ಕಾರದ ಯತ್ನ; ನಂದನ್ ನಿಲೇಕಣಿ ನೇತೃತ್ವದ ಕಾರ್ಯಪಡೆ ರಚನೆ ಸಾಧ್ಯತೆ

Power Sector, Nandan Nilekani may head task force for reforms: ಭವಿಷ್ಯದಲ್ಲಿ ಬಹಳ ದೊಡ್ಡ ಬೇಡಿಕೆ ಇರುವ ವಿದ್ಯುತ್ ಕ್ಷೇತ್ರದಲ್ಲಿ ದೊಡ್ಡ ಸುಧಾರಣೆ ತರಲು ಸರ್ಕಾರ ಮುಂದಾಗಿದೆ. ಈ ಸೆಕ್ಟರ್​​ನಲ್ಲಿ ಡಿಜಿಟಲೈಸ್ ಮತ್ತು ಡೀಸೆಂಟ್ರಲೈಸ್ ಮಾಡಲು ನಂದನ್ ನಿಲೇಕಣಿ ನೇತೃತ್ವದಲ್ಲಿ ಕಾರ್ಯಪಡೆ ರಚಿಸಲು ಸರ್ಕಾರ ಯೋಜಿಸಿದೆ. ವಿದ್ಯುತ್ ಕ್ಷೇತ್ರದಲ್ಲಿ ಪರಿವರ್ತನೆ ತರುವ ಬಗೆ ಬಗ್ಗೆ ನಂದನ್ ನಿಲೇಕಣಿ ಈ ಮೊದಲೂ ಅಭಿಪ್ರಾಯಗಳನ್ನು ನೀಡಿದ್ದಿದೆ.

Nandan Nilekani: ವಿದ್ಯುತ್ ವಲಯದ ಸುಧಾರಣೆಗೆ ಸರ್ಕಾರದ ಯತ್ನ; ನಂದನ್ ನಿಲೇಕಣಿ ನೇತೃತ್ವದ ಕಾರ್ಯಪಡೆ ರಚನೆ ಸಾಧ್ಯತೆ
ನಂದನ್ ನಿಲೇಕಣಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 18, 2025 | 6:37 PM

Share

ನವದೆಹಲಿ, ಜೂನ್ 18: ಭಾರತದ ವಿದ್ಯುತ್ ಕ್ಷೇತ್ರದಲ್ಲಿ ಸುಧಾರಣೆ (Power sector reforms) ತರಲು ಸರ್ಕಾರ ಗಂಭೀರ ಹೆಜ್ಜೆಗಳನ್ನು ಇರಿಸುತ್ತಿದೆ. ಪವರ್ ಸೆಕ್ಟರ್​ನ ಡಿಜಿಟಲೀಕರಣ (digitisation) ಮತ್ತು ವಿಕೇಂದ್ರೀಕರಣಕ್ಕಾಗಿ (de-centralization) ಕಾರ್ಯಪಡೆಯೊಂದನ್ನು ಸರ್ಕಾರ ರಚಿಸಲು ಮುಂದಾಗಿದೆ. ಇನ್ಫೋಸಿಸ್ ಸಹ-ಸಂಸ್ಥಾಪಕ ನಂದನ್ ನಿಲೇಕಣಿ (Nandan Nilekani) ಅವರನ್ನು ಈ ಟ್ಯಾಸ್ಕ್ ಫೋರ್ಸ್​​ಗೆ ಮುಖ್ಯಸ್ಥರನ್ನಾಗಿ ಮಾಡುವ ಸಾಧ್ಯತೆ ಇದೆ.

ಆಧಾರ್ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೆ ತರಲು ಪ್ರಮುಖ ಪಾತ್ರ ವಹಿಸಿದ್ದ ನಂದನ್ ನಿಲೇಕಣಿಗೆ ಈಗ ಸರ್ಕಾರದಿಂದ ಮತ್ತೊಂದು ದೊಡ್​ಡ ಜವಾಬ್ದಾರಿ ಸಿಕ್ಕಿದೆ. ವಿದ್ಯುತ್ ಕ್ಷೇತ್ರದಲ್ಲಿ ಹಣದ ವೆಚ್ಚಕ್ಕೆ ಕಡಿವಾಣ ಹಾಕಲು ಏನು ಕ್ರಮ ತೆಗೆದುಕೊಳ್ಳಬಹುದು ಎಂಬುದನ್ನು ಅವಲೋಕಿಸುವುದು ಕಾರ್ಯಪಡೆಯ ಜವಾಬ್ದಾರಿಯಾಗಿರಬಹುದು.

ವಿದ್ಯುತ್ ಉತ್ಪಾದನೆ, ಪ್ರಸರಣ ಮತ್ತು ವಿತರಣೆ ಕಾರ್ಯಗಳಲ್ಲಿ ಶೇ. 26ರಷ್ಟು ವೆಚ್ಚವನ್ನು ಕಡಿಮೆ ಮಾಡುವ ಗುರಿ ಸರ್ಕಾರದ್ದಾಗಿದೆ. ಈ ನಿಟ್ಟಿನಲ್ಲಿ ನಂದನ್ ನಿಲೇಕಣಿ ಅವರ ನೆರವನ್ನು ಯಾಚಿಸಲಾಗಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ಈ ಬಗ್ಗೆ ಎಕನಾಮಿಕ್ ಟೈಮ್ಸ್ ವೆಬ್​​ಸೈಟ್​​ನಲ್ಲಿ ವರದಿ ಬರೆಯಲಾಗಿದೆ.

ಇದನ್ನೂ ಓದಿ: ಇನ್ಫೋಸಿಸ್ ನಾರಾಯಣಮೂರ್ತಿಯಿಂದ ಐಐಎಂಎಗೆ 20 ವರ್ಷದ ಸ್ಕಾಲರ್​​ಶಿಪ್ ಸ್ಕೀಮ್; ವಿದ್ಯಾರ್ಥಿಯ ಸರ್ವ ವೆಚ್ಚವೂ ಮೂರ್ತಿಗಳದ್ದೇ

ನಂದನ್ ನಿಲೇಕಣಿ ಅವರು ಕೆಲ ತಿಂಗಳ ಹಿಂದಷ್ಟೇ ವಿದ್ಯುತ್ ವಿಚಾರದ ಬಗ್ಗೆ ತಮ್ಮ ಎಕ್ಸ್ ಅಕೌಂಟ್​​​ನಲ್ಲಿ ಪ್ರತಿಕ್ರಿಯೆ ನೀಡಿದ್ದರು. ಅವರ ಪ್ರಕಾರ ಎನರ್ಜಿ ಅಥವಾ ವಿದ್ಯುತ್ ಮುಂದಿನ ಯುಪಿಐ ಆಗಲಿದೆಯಾಂತೆ. ‘ಕೋಟ್ಯಂತರ ಸಂಖ್ಯೆಯ ಸಣ್ಣ ವಿದ್ಯುತ್ ಉತ್ಪಾದಕರು ಡಿಜಿಟಲ್ ಎನರ್ಜಿ ಗ್ರಿಡ್​​ನಲ್ಲಿ ಭಾಗಿಯಾಗಲಿದ್ದಾರೆ’ ಎಂದು ತಮ್ಮ ಎಕ್ಸ್ ಪೋಸ್ಟ್​​ನಲ್ಲಿ ಅವರು ಬರೆದಿದ್ದರು.

ಡಿಜಿಟಲ್ ಎನರ್ಜಿ ಗ್ರಿಡ್ ಬಗ್ಗೆ ಫೆಬ್ರುವರಿಯಲ್ಲಿ ಶ್ವೇತಪತ್ರವೊಂದನ್ನು ಪ್ರಕಟಿಸಲಾಗಿತ್ತು. ಅದಕ್ಕೆ ನಿಲೇಕಣಿಯವರೇ ಮುನ್ನುಡಿ ಬರೆದಿದ್ದರು. ಇಂಟರ್​ನ್ಯಾಷನಲ್ ಎನರ್ಜಿ ಏಜೆನ್ಸಿ (ಐಇಎ) ಮತ್ತು ಫೌಂಡೇಶ್ ಫಾರ್ ಇಂಟರಾಪರಾಬಿಲಿಟಿ ಇನ್ ಡಿಜಿಟಲ್ ಎಕನಾಮಿ(FIDE- ಎಫ್​ಐಡಿಇ) ಸಂಸ್ಥೆಗಳು ಜಂಟಿಯಾಗಿ ಆ ವರದಿ ಬಿಡುಗಡೆ ಮಾಡಿದ್ದವು.

ಇದನ್ನೂ ಓದಿ: ಗಮನಿಸಿ, ಐಸಿಐಸಿಐ ಬ್ಯಾಂಕ್​​ನ ಎಟಿಎಂ ಟ್ರಾನ್ಸಾಕ್ಷನ್, ಕ್ಯಾಷ್ ಡೆಪಾಸಿಟ್ ಇತ್ಯಾದಿ ಶುಲ್ಕಗಳಲ್ಲಿ ಬದಲಾವಣೆ

ಸೌರಫಲಕ ಸ್ಥಾಪಿಸಿರುವ ಅಥವಾ ಇವಿ ಬ್ಯಾಟರಿ ಹೊಂದಿರುವ ಪ್ರತಿಯೊಂದು ಮನೆ ಮತ್ತು ಪ್ರತಿಯೊಬ್ಬ ವ್ಯಕ್ತಿಯೂ ವಿದ್ಯುತ್ ಅನ್ನು ಬಳಸುವುದರ ಜೊತೆಗೆ, ಅದನ್ನು ಸೃಷ್ಟಿಸುವ, ಸಂಗ್ರಹಿಸುವ ಮತ್ತು ಮಾರಾಟ ಮಾಡುವ ಕೆಲಸ ಮಾಡಲು ಅವಕಾಶ ಇದೆ ಎಂದು ಆ ವರದಿಯಲ್ಲಿ ಹೇಳಲಾಗಿದೆ. ಅದಕ್ಕೆ ನಂದನ್ ನಿಲೇಕಣಿ ತಮ್ಮ ಎಕ್ಸ್ ಪೋಸ್ಟ್​ನಲ್ಲಿ ‘ಎನರ್ಜಿ ಈಸ್ ನೆಕ್ಸ್ಟ್ ಯುಪಿಐ’ ಎಂದು ಹೇಳಿದ್ದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ