ಹೈದರಾಬಾದ್ ಪೊಲೀಸ್ ಅಕಾಡೆಮಿ ಕೇಂದ್ರ ಸಭಾಂಗಣಕ್ಕೆ ಕನ್ನಡಿಗ ಐಪಿಎಸ್ ಅಧಿಕಾರಿ ದಿವಂಗತ ವಡ್ಡರ್ಸೆ ಡಾ.ಕೆ.ಮಧುಕರ್ ಶೆಟ್ಟಿ ಹೆಸರು
ಡಾ.ಕೆ.ಮಧುಕರ್ ಶೆಟ್ಟಿ ಅವರ ಕಾರ್ಯಕ್ಷಮತೆಗೆ, ದಕ್ಷತೆಗೆ, ಕೆಲಸದೆಡೆಗಿನ ಬದ್ಧತೆಗೆ ಹಾಗೂ ನಮ್ಮೆಲರಿಗೂ ಮಾದರಿ ವ್ಯಕ್ತಿತ್ವವಾಗಿ ಇದ್ದಿದ್ದಕ್ಕೆ ಗೌರವ ಸೂಚಿಸುವ ಸಲುವಾಗಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಕೇಂದ್ರದ ಉಪ ನಿರ್ದೇಶಕ ಕೆಪಿಎ ಇಳ್ಯಾಸ್ ತಿಳಿಸಿದ್ದಾರೆ.
ಹಿರಿಯ ಪತ್ರಕರ್ತ ದಿವಂಗತ ವಡ್ಡರ್ಸೆ ರಘುರಾಮ್ ಶೆಟ್ಟಿ ಅವರ ಪುತ್ರ, ಕರ್ನಾಟಕದ ಹೆಮ್ಮೆಯ ಐಪಿಎಸ್ ಅಧಿಕಾರಿ ದಿವಂಗತ ಡಾ.ಕೆ.ಮಧುಕರ್ ಶೆಟ್ಟಿ ತಮ್ಮ ಪ್ರಾಮಾಣಿಕತೆಗೆ, ದಕ್ಷತೆಗೆ, ಕಾರ್ಯ ವೈಖರಿಗೆ, ನೇರ ನುಡಿಗೆ ಹೆಸರಾಗಿದ್ದವರು. ದುರದೃಷ್ಟವಶಾತ್ ಹೆಚ್1ಎನ್1 ಕಾಯಿಲೆಗೆ ತುತ್ತಾಗಿ 2018ರ ಡಿಸೆಂಬರ್ 28ರಂದು ಇಹಲೋಕ ತ್ಯಜಿಸಿದರು. ಆದರೆ, ಅವರು ತಮ್ಮ ಕಾರ್ಯಾವಧಿಯಲ್ಲಿ ಮಾಡಿದ ಉತ್ತಮ ಕೆಲಸಗಳನ್ನು ಇಂದಿಗೂ ಸಮಾಜ ಸ್ಮರಿಸುತ್ತಿದ್ದು, ಹೈದರಾಬಾದ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿ ಕೇಂದ್ರದ ಮುಖ್ಯ ಉಪನ್ಯಾಸ ಸಭಾಂಗಣಕ್ಕೆ ಅವರ ಹೆಸರನ್ನು ಗೌರವಾರ್ಥವಾಗಿ ಇಡಲು ನಿರ್ಧರಿಸಲಾಗಿದೆ.
ಈ ಬಗ್ಗೆ ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿ ಕೇಂದ್ರ ಅಧಿಕೃತ ಪ್ರಕಟಣೆ ನೀಡಿದ್ದು, ಕೇಂದ್ರದ ಮುಖ್ಯ ಉಪನ್ಯಾಸ ಸಭಾಂಗಣಕ್ಕೆ ದಿವಂಗತ ಡಾ.ಕೆ.ಮಧುಕರ್ ಶೆಟ್ಟಿ ಅವರ ಹೆಸರನ್ನಿಡಲು ನಿರ್ಧರಿಸಿದ್ದೇವೆ. ಅವರ ಕಾರ್ಯಕ್ಷಮತೆಗೆ, ದಕ್ಷತೆಗೆ, ಕೆಲಸದೆಡೆಗಿನ ಬದ್ಧತೆಗೆ ಹಾಗೂ ನಮ್ಮೆಲರಿಗೂ ಮಾದರಿ ವ್ಯಕ್ತಿತ್ವವಾಗಿ ಇದ್ದಿದ್ದಕ್ಕೆ ಗೌರವ ಸೂಚಿಸುವ ಸಲುವಾಗಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಕೇಂದ್ರದ ಉಪ ನಿರ್ದೇಶಕ ಕೆಪಿಎ ಇಳ್ಯಾಸ್ ತಿಳಿಸಿದ್ದಾರೆ.
ಮೂಲತಃ ಕರ್ನಾಟಕದ ಉಡುಪಿ ಜಿಲ್ಲೆಯವರಾದ ಮಧುಕರ್ ಶೆಟ್ಟಿ, 1999ರ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿದ್ದರು. ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆ ಬರೆಯುವ ಮುನ್ನ ದೆಹಲಿ ಜವಹರಲಾಲ್ ವಿಶ್ವವಿದ್ಯಾಲಯದಲ್ಲಿ (ಜೆಎನ್ಯು) ಸಮಾಜ ಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಚಿಕ್ಕಮಗಳೂರು ಎಸ್ಪಿಯಾಗಿ ಸೇವೆ ಸಲ್ಲಿಸುತ್ತಿದ್ದ ವೇಳೆ, ಡಿಸಿ ಹರ್ಷ ಗುಪ್ತಾ ಜತೆಗೂಡಿ ದಲಿತ ಸಮುದಾಯದ ಬೆನ್ನೆಲುಬಾಗಿ ನಿಂತಿದ್ದರು. ದಲಿತರ ಭೂಮಿಯನ್ನು ಅಕ್ರಮವಾಗಿ ವಶಪಡಿಸಿಕೊಂಡಿದ್ದ ವ್ಯಕ್ತಿಗಳಿಂದ ಜಮೀನು ಬಿಡಿಸಿ ದಲಿತರಿಗೆ ನೀಡಿದ್ದರು. ನಂತರ ಕೃತಜ್ಞತಾಪೂರ್ವಕವಾಗಿ ಆ ಹಳ್ಳಿಯ ಹೆಸರನ್ನು ಗುಪ್ತಶೆಟ್ಟಿ ಹಳ್ಳಿ ಎಂದೇ ನಾಮಕರಣ ಮಾಡಲಾಗಿತ್ತು.
ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ಅಧಿಕಾರಿ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಕಾರ್ಯವೈಖರಿ ಬಗ್ಗೆ ಅಸಮಾಧಾನಗೊಂಡಿದ್ದ ಮಧುಕರ್ ಶೆಟ್ಟಿ 2011ರಲ್ಲಿ ಉನ್ನತ ವಿದ್ಯಾಭ್ಯಾಸದ ರಜೆಯ ಮೇಲೆ ತೆರಳಿದ್ದರು. ನಂತರದ ಐದು ವರ್ಷಗಳ ಕಾಲ ಅಮೆರಿಕಾದಲ್ಲಿ ಅಧ್ಯಯನ ನಡೆಸಿದ್ದರು. ಆ ಸಮಯದಲ್ಲಿ ಸಂತೋಷ್ ಹೆಗಡೆ ಅವರ ವಿರುದ್ಧ ನೇರವಾಗಿ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದರು. ಸಂತೋಷ್ ಹೆಗಡೆ ಕೆಲ ವಿಚಾರಗಳಲ್ಲಿ ತಾರತಮ್ಯ ಮಾಡುತ್ತಿದ್ದರು ಎಂಬ ಗಂಭೀರ ಆರೋಪವನ್ನು ಸಹ ಹೊರಿಸಿದ್ದರು.
ಬಳಿಕ ಐಜಿಪಿಯಾಗಿ ಬಡ್ತಿ ಪಡೆದ ಅವರು ಕೆಲ ಸಮಯ ಪೊಲೀಸ್ ನೇಮಕಾತಿ ವಿಭಾಗದ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಿದರು. ನಂತರ ಕೆಲವೇ ದಿನಗಳಲ್ಲಿ ಕೇಂದ್ರ ಸೇವೆಗೆ ತೆರಳಿದ ಅವರು ಸರ್ದಾರ್ ವಲ್ಲಭಭಾಯ್ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ಉಪ ನಿರ್ದೇಶಕರಾಗಿ ನೇಮಕಗೊಂಡಿದ್ದರು. ಹಿರಿಯ ಪತ್ರಕರ್ತ ದಿವಂಗತ ವಡ್ಡರ್ಸೆ ರಘುರಾಮ್ ಶೆಟ್ಟಿ ಅವರ ಮಗನಾದ ಮಧುಕರ್ ಶೆಟ್ಟಿ ಬೆಂಗಳೂರು ಗ್ರಾಮಾಂತರ, ಚಾಮರಾಜನಗರ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಎಸ್ಪಿಯಾಗಿ ಕೆಲಸ ಮಾಡಿದ್ದರು. ವೀರಪ್ಪನ್ ಬಂಧನಕ್ಕೆ ರಚಿಸಿದ್ದ ಸ್ಪೆಷಲ್ ಟಾಸ್ಕ್ ಫೋರ್ಸ್ನಲ್ಲೂ ಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ನ್ಯೂಯಾರ್ಕ್ನ ವಿವಿಯೊಂದರಲ್ಲಿ ಸಾರ್ವಜನಿಕ ಆಡಳಿತ ವಿಷಯದಲ್ಲಿ ಪಿಹೆಚ್ಡಿ ಪಡೆದಿದ್ದ ಅವರು 2017ರ ಮಾರ್ಚ್ನಲ್ಲಿ ಹೈದರಾಬಾದ್ನ ಐಪಿಎಗೆ ಸೇರ್ಪಡೆಗೊಂಡಿದ್ದರು.
ದಕ್ಷ ಅಧಿಕಾರಿಯಾಗಿದ್ದ ಮಧುಕರ್ ಶೆಟ್ಟಿ ಅವರನ್ನು ಅನಾರೋಗ್ಯ ಹಿನ್ನೆಲೆಯಲ್ಲಿ 2018ರ ಡಿಸೆಂಬರ್ 25ರಂದು ಹೈದರಾಬಾದ್ನ ಕಾಂಟಿನೆಂಟಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಡಿಸೆಂಬರ್ 28ರಂದು ಮಧುಕರ್ ಶೆಟ್ಟಿ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದರು. ಅವರ ಸಾವಿಗೆ ಹೆಚ್1ಎನ್1 ಕಾರಣ ಎಂದು ಆಸ್ಪತ್ರೆಯ ವೈದ್ಯರು ಹೇಳಿದ್ದರು.
ಇದನ್ನೂ ಓದಿ: ವರ್ತೂರು ಕೋಡಿ ವೃತ್ತಕ್ಕೆ ಮಧುಕರ್ ಶೆಟ್ಟಿ ಹೆಸರಿಡಲು ನಿರಾಕರಣೆ: ಶಂಕರ್ ಬಿದರಿ ಆಕ್ರೋಶ