ಬೆಂಗಳೂರು, (ಸೆಪ್ಟೆಂಬರ್ 03): ಸಿದ್ದರಾಮಯ್ಯ ಬಿಸಿಮುಟ್ಟಿಸಿದ ಬೆನ್ನಲ್ಲೇ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ ಬಿಐ) ಹಾಗೂ ಪಂಜಾಬ್ ನ್ಯಾಶನಲ್ ಬ್ಯಾಂಕ್ (ಪಿಎನ್ ಬಿ)ನಿಂದ ಸರ್ಕಾರಕ್ಕೆ ವಾಪಸ್ 22 ಕೋಟಿ ರೂಪಾಯಿ ಬಂದಿದೆ. ಈ ಹಿಂದೆ ಮಾಡಿದ್ದ ಎರಡು ಪ್ರತ್ಯೇಕ ನಿಶ್ಚಿತ ಠೇವಣಿಗಳನ್ನು ಹಿಂದಿರುಗಿಸಲು ಎಸ್ ಬಿಐ ಹಾಗೂ ಪಿಎನ್ ಬಿ ನಿರಾಕರಿಸಿದ್ದವು. ಇದರ ಬೆನ್ನಲ್ಲೇ ಈ ಎರಡೂ ಬ್ಯಾಂಕಿನಲ್ಲಿ ಇರಿಸಿರುವ ಸರ್ಕಾರದ ಎಲ್ಲ ಠೇವಣಿಗಳನ್ನು ಹಿಂಪಡೆಯುವಂತೆ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿತ್ತು. ಇದರ ಬೆನ್ನಲ್ಲೇ ಬ್ಯಾಂಕ್ಗಳು ಸರ್ಕಾರಕ್ಕೆ ನಿಶ್ಚಿತ ಠೇವಣಿಯನ್ನು ಮರುಪಾವತಿಸಿವೆ. ಈ ಮೂಲಕ ಸರ್ಕಾರಕ್ಕೆ 22 ಕೋಟಿ ರೂಪಾಯಿ ಬಂದಿದೆ.
ರಾಜ್ಯ ಸರ್ಕಾರದ ಒಂದೇ ಒಂದು ಆದೇಶಕ್ಕೆ ಬೆದರಿದ ಬ್ಯಾಂಕ್ಗಳು ವರ್ಷಗಟ್ಟಲೇ ಬಾಕಿಯಿದ್ದ 22 ಕೋಟಿ ರೂ. ಹಣ ಸರ್ಕಾರದ ಖಜಾನೆಗೆ ಜಮೆ ಮಾಡಿವೆ. ಎಸ್‌ಬಿಐನಿಂದ 9.67 ಕೋಟಿ ರೂಪಾಯಿ ಸರ್ಕಾರದ ಖಜಾನೆಗೆ ಜಮೆಯಾಗಿದೆ. ಇನ್ನು ಪಿಎನ್‌ಬಿನಿಂದ ಒಂದು ವರ್ಷದ ಬಡ್ಡಿ ಸಹಿತ 13.9 ಕೋಟಿ ರೂ. ಜಮೆಯಾಗಿದೆ.
ಇದನ್ನೂ ಓದಿ: ಖಾತೆಗಳ ಸ್ಥಗಿತಕ್ಕೆ ಬೆಚ್ಚಿದ ಎಸ್‌ಬಿಐ, ಪಂಜಾಬ್ ಬ್ಯಾಂಕ್: ಸಿಎಂ ಜತೆಗಿನ ಸಂಧಾನ ಸಭೆ ಯಶಸ್ವಿ
ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಸರ್ಕಾರಕ್ಕೆ ಬರಬೇಕಿದ್ದ 22 ಕೋಟಿ ರೂ. ಹಣವನ್ನು ನೀಡಿದೆ ವರ್ಷಗಟ್ಟಲೇ ಬಾಕಿ ಉಳಿಸಿಕೊಂಡಿದ್ದವು. ಈ ಬಗ್ಗೆ ಸರ್ಕಾರ ಎಷ್ಟೇ ಪತ್ರ ಬರೆದರೂ ಸಹ ನಿಶ್ಚಿತ ಠೇವಣಿಗಳನ್ನು ಹಿಂದಿರುಗಿಸಲು ಬ್ಯಾಂಕ್ಗಳು ನಿರಾಕರಿಸಿದ್ದವು. ಇದರಿಂದ ಸಿಡಿಮಿಡಿಗೊಂಡಿದ್ದ ಸಿದ್ದರಾಮಯ್ಯ, ಈ 2 ಬ್ಯಾಂಕ್‌ಗಳಲ್ಲಿದ್ದ ಸರ್ಕಾರದ ಎಲ್ಲಾ ಖಾತೆ ಕ್ಲೋಸ್ ಮಾಡುವಂತೆ ಸುತ್ತೋಲೆ ಹೊರಡಿಸಿದ್ದರು. ಸರ್ಕಾರದ ಈ ನಿರ್ಧಾರಕ್ಕೆ ಕಂಗೆಟ್ಟು ಎರಡೂ ಬ್ಯಾಂಕಿನ ಅಧಿಕಾರಿಗಳು, ಸಿದ್ದರಾಮಯ್ಯನವರ ಬಳಿ ಓಡೋಡಿ ಬಂದು ಶೀಘ್ರದಲ್ಲೇ ಶ್ಚಿತ ಠೇವಣಿ ಮರುಪಾವತಿಸುವುದಾಗಿ ಹೇಳಿದ್ದರು. ಅದರಂತೆ ಇದೀಗ ಎರಡು ಬ್ಯಾಂಕ್ಗಳಿಂದ ಸರ್ಕಾರದ ಖಜಾನೆಗೆ ಬರೋಬ್ಬರಿ 22 ಕೋಟಿ ರೂಪಾಯಿ ವಾಪಸ್ ಬಂದಿದೆ.
ರಾಜ್ಯ ಸರ್ಕಾರದ ಇಲಾಖೆಗಳು, ಸಾರ್ವಜನಿಕ ಉದ್ದಿಮೆಗಳು, ನಿಗಮಗಳು, ಮಂಡಳಿಗಳು, ಸ್ಥಳೀಯ ಸಂಸ್ಥೆಗಳು ವಿಶ್ವವಿದ್ಯಾಲಯಗಳು, ಮತ್ತಿತರ ಸಂಸ್ಥೆಗಳು ಮಾಡಿರುವ ಎಲ್ಲಾ ರೀತಿಯ ಠೇವಣಿಗಳನ್ನು/ಹೂಡಿಕೆಗಳನ್ನು ತಕ್ಷಣದಿಂದ ಹಿಂಪಡೆಯುವಂತೆ ಹಾಗೂ ಇನ್ನು ಮುಂದೆ ಈ ಬ್ಯಾಂಕುಗಳಲ್ಲಿ ಯಾವುದೇ ರೀತಿಯ ಠೇವಣಿಗಳನ್ನು/ ಹೂಡಿಕೆಗಳನ್ನು ಮಾಡಬಾರದು ಎಂದು ಸುತ್ತೋಲೆಯಲ್ಲಿ ಆದೇಶಿಸಲಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ