ಒಂದು ಕೆಜಿ ನವಣೆಯಲ್ಲಿ ಎಷ್ಟು ಕಾಳುಗಳಿವೆ? ಶಿವಮೊಗ್ಗದ ಯುವಕನೋರ್ವ ಎಣಿಸಿಯೇಬಿಟ್ಟ!

ಒಂದು ಕೆಜಿ ನವಣೆಯಲ್ಲಿ ಎಷ್ಟು ಕಾಳುಗಳಿವೆ ಎಂಬುದನ್ನು ಏಣಿಸಿರುವ ಅಭಿಷೇಕ್, ಪ್ರತಿ ಪ್ಯಾಕೇಟ್​ನಲ್ಲಿ 500 ಕಾಳುಗಳನ್ನು ಬೇರ್ಪಡಿಸಿ, ಅತಿ ಸಣ್ಣದಾದ ಮತ್ತು ಹೆಚ್ಚು ತೂಕವಿಲ್ಲದ ನವಣೆ ಕಾಳುಗಳನ್ನು ಕೂಡ ಎಣಿಸಿರುವುದು ವಿಶೇಷವಾಗಿದೆ.

ಒಂದು ಕೆಜಿ ನವಣೆಯಲ್ಲಿ ಎಷ್ಟು ಕಾಳುಗಳಿವೆ? ಶಿವಮೊಗ್ಗದ ಯುವಕನೋರ್ವ ಎಣಿಸಿಯೇಬಿಟ್ಟ!
ಒಂದು ಕೆಜಿ ನವಣೆ ಕಾಳನ್ನು ಎಣಿಸಿ ವಿಶೇಷ ಸಾಧನೆ ಮಾಡಿದ ಅಭಿಷೇಕ್
Follow us
| Updated By: preethi shettigar

Updated on:Jul 05, 2021 | 2:11 PM

ಶಿವಮೊಗ್ಗ: ಲಾಕ್​ಡೌನ್​ ಸಂದರ್ಭದಲ್ಲಿ ಮನೆಯಿಂದ ಹೊರಗೆ ಹೋಗಲು ಅವಕಾಶ ಇರಲಿಲ್ಲ. ಎಲ್ಲಾ ಕ್ಷೇತ್ರವು ಬಂದ್ ಆಗಿತ್ತು. ಅದರಲ್ಲೂ ಶಾಲಾ – ಕಾಲೇಜು ಬಂದ್ ಆಗಿದೆ. ಹೀಗಾಗಿ ವಿದ್ಯಾರ್ಥಿಗಳು ಮನೆಯಲ್ಲಿಯೇ ಕಾಲ ಕಳೆಯುವಂತಾಗಿದೆ. ಈ ಸಂದರ್ಭದಲ್ಲಿ ಅನೇಕ ಯುವಕ -ಯುವತಿಯರು ಮೊಬೈಲ್​ನಲ್ಲಿಯೇ ಹೆಚ್ಚು ಕಾಲ ಕಳೆಯುತ್ತಿದ್ದಾರೆ. ಆದರೆ ಶಿವಮೊಗ್ಗದ ಯವಕನೊಬ್ಬ ಲಾಕ್​ಡೌನ್​ ಸಮಯವನ್ನು ಸದುಪಯೋಗ ಪಡಿಸಿಕೊಂಡಿದ್ದು, ವಿಶೇಷ ಸಾಧನೆಯನ್ನು ಮಾಡಿದ್ದಾನೆ. ಮನೆಗೆ ತರುವ ನವಣೆ ಕಾಳಿನಲ್ಲಿ ಅದರಲ್ಲೂ ಒಂದು ಕೆಜಿಯಲ್ಲಿ ಎಷ್ಟು ಕಾಳುಗಳಿವೆ ಎಂದು ಏಣಿಸಿ ಈತ ಸಾಧನೆ ಮಾಡಿದ್ದಾನೆ. ಅದು ಹೇಗೆ ಎಂದು ಹುಬ್ಬೇರಿಸುವವರಿಗೆ ಇಲ್ಲಿದೆ ಉತ್ತರ.

ಸಾಮಾನ್ಯವಾಗಿ ಈಗ ಎಲ್ಲರೂ ಮೊಬೈಲ್​ನಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ. ಮೊಬೈಲ್​ನಲ್ಲಿ ವಿಡಿಯೋ ಗೇಮ್​ಗಳು, ಸಿನಿಮಾಗಳು, ವಾಟ್ಸಪ್, ಚಾಟಿಂಗ್ ಅಂತಾ ಕಾಲಹರಣ ಮಾಡುತ್ತಾರೆ. ಆದರೆ ಲಾಕ್​ಡೌನ್​ ಸಮಯದಲ್ಲಿ ಶಿವಮೊಗ್ಗದ ಗಾಂಧಿ ಬಜಾರ್​ನ ಅಶೋಕ್ ರಸ್ತೆ ನಿವಾಸಿಯಾಗಿರುವ ಅಭಿಷೇಕ್ ವಿಶೇಷ ಸಾಧನೆಯೊಂದನ ಮಾಡಿ ಇತರರಿಗೆ ಮಾದರಿಯಾಗಿದ್ದಾನೆ. ಬ್ರಹ್ಮಾವರದ ವಿದ್ಯಾಲಕ್ಷ್ಮೀ ಗ್ರೂಪ್ ಆಫ್ ಇನ್ಸ್​ಟಿಟ್ಯೂಷನ್​ನಲ್ಲಿ ಬಿಬಿಎ, ಏವಿಯೇಷನ್ ಅಂಡ್ ಹಾಸ್ಪಿಟಾಲಿಟಿ ಮ್ಯಾನೇಜ್ಮೆಂಟ್ ವ್ಯಾಸಾಂಗ ಮಾಡುತ್ತಿದ್ದು, ಕೊರೋನಾ 2ನೇ ಅಲೆಯ ಲಾಕ್​ಡೌನ್ ಆಗುತ್ತಿದ್ದಂತೆ, ಮನೆಗೆ ಬಂದಿದ್ದಾನೆ. ಹೀಗೆ ಮನೆಯಲ್ಲಿ ಸುಮ್ಮನೆ ಕೂತು ಬೇಜಾರಾದ ಕಾರಣ ಮನೆಗೆ ತಂದ ನವಣೆಯನ್ನು ಎಣಿಸಲು ಶುರು ಮಾಡಿದ್ದಾನೆ. ಒಂದು ಕೆ.ಜಿ ನವಣೆಯಲ್ಲಿ, 4,04,882 ಕಾಳುಗಳನ್ನು ಏಣಿಸಿ, 500 ಕ್ಕೆ ಒಂದರಂತೆ ಪ್ಯಾಕ್ ಮಾಡಿ ಈ ವಿಶೇಷ ಸಾಧನೆ ಮಾಡಿದ್ದಾನೆ.

ನವಣೆ ಕಾಳು ಏಣಿಸಿರುವ ಯುವಕ ಅಭಿಷೇಕ್, ಒಂದು ಕೆ.ಜಿ. ನವಣೆ 4,04,882 ಕಾಳು ಏಣಿಸಲು 87 ಗಂಟೆ 35 ನಿಮಿಷ ತೆಗೆದುಕೊಂಡಿದ್ದು, ಇದನ್ನು ಐಡಬ್ಲ್ಯೂಆರ್ ಫೌಂಡೇಷನ್ ನವರು, ವಿಡಿಯೋ ಕಾಲ್ ಮಾಡಿ ಪರೀಕ್ಷೆ ಕೂಡ ಮಾಡಿದ್ದಾರೆ. ಸಾಮಾನ್ಯವಾಗಿ, ಒಂದು ಕೆಜಿ ನವಣೆಯಲ್ಲಿ ಎಷ್ಟು ಕಾಳುಗಳು ಇರುತ್ತವೆ ಎಂಬುದು ಎಷ್ಟೋ ಜನರಿಗೆ ಗೊತ್ತಿರುವುದಿಲ್ಲ. ಅದನ್ನು ತಿಳಿದುಕೊಳ್ಳುವ ಪ್ರಯತ್ನವೂ ಮಾಡುವುದಿಲ್ಲ. ಆದರೆ, ಈ ಕೆಲಸವನ್ನು ಅಭಿಷೇಕ್ ಮಾಡಿ ತೋರಿಸಿದ್ದಾರೆ.

ಒಂದು ಕೆಜಿ ನವಣೆಯಲ್ಲಿ ಎಷ್ಟು ಕಾಳುಗಳಿವೆ ಎಂಬುದನ್ನು ಏಣಿಸಿರುವ ಅಭಿಷೇಕ್, ಪ್ರತಿ ಪ್ಯಾಕೇಟ್​ನಲ್ಲಿ 500 ಕಾಳುಗಳನ್ನು ಬೇರ್ಪಡಿಸಿ, ಅತಿ ಸಣ್ಣದಾದ ಮತ್ತು ಹೆಚ್ಚು ತೂಕವಿಲ್ಲದ ನವಣೆ ಕಾಳುಗಳನ್ನು ಕೂಡ ಎಣಿಸಿರುವುದು ವಿಶೇಷವಾಗಿದೆ. ಅತಿ ಕ್ಲಿಷ್ಟಕರವಾದ ಮತ್ತು ವಿಭಿನ್ನ ಪ್ರಯತ್ನದಲ್ಲಿ ಅಭಿಷೇಕ್ ಯಶಸ್ವಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ, ಇವರಿಗೆ ಇಂಡಿಯಾಸ್ ವರ್ಲ್ಡ್ ರೆಕಾರ್ಡ್ಸ್ ಪದಕ ಮತ್ತು ಪ್ರಶಸ್ತಿ ಪತ್ರ ಲಭಿಸಿದ್ದು, ಅಭಿಷೇಕ್ ಪೋಷಕರು ಸಂತಸಗೊಂಡಿದ್ದಾರೆ.

ಒಟ್ಟಾರೆ ಪ್ರಮುಖವಾಗಿ ಪಕ್ಷಿಗಳಿಗೆ ಆಹಾರವಾಗಿರುವ ಮತ್ತು ಸಕ್ಕರೆ ಕಾಯಿಲೆ ಇರುವವರಿಗೆ ಈ ನವಣೆ ಕಾಳುಗಳ ಅಗತ್ಯತೆ ಹೆಚ್ಚಿದ್ದು, ಅಭಿಷೇಕ್ ಮನೆಯಲ್ಲಿಯೂ ಉಪಹಾರಕ್ಕಾಗಿ ಈ ನವಣೆ ಕಾಳುಗಳನ್ನು ಬಳಸುತ್ತಾರಂತೆ. ಸಾಧನೆಗೆ ಇದೇ ಕಾಳನ್ನು ಬಳಸಿಕೊಂಡಿದ್ದು, ಅಭಿಷೇಕ್ ವಿಭಿನ್ನ ಪ್ರಯತ್ನಕ್ಕೆ ಸಾಕ್ಷಿಯಾಗಿದೆ. ಏನೇ ಆಗಲಿ, ಒಂದು ಕಾಳು ಬೆಳೆಯ ಹಿಂದೆಯೂ, ಮಹತ್ವವಾದ ಪರಿಶ್ರಮವಿದ್ದು, ಅಭಿಷೇಕ್ ಸಾಧನೆ ಇಂದಿನ ಪಿಳಿಗೆಯ ಯುವಕರಿಗೆ ಮಾದರಿಯಾಗಿದೆ ಎನ್ನುವುದು ಮಾತ್ರ ಸತ್ಯ.

ಇದನ್ನೂ ಓದಿ: 17 ಚಾಕ್​ಪೀಸ್​ಗಳ ಮೇಲೆ ರಾಷ್ಟ್ರಗೀತೆಯ ಕೆತ್ತನೆ.. ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಯುವಕನ ಸಾಧನೆ

ಅಮೆರಿಕಾದಿಂದ ಅಂತರಿಕ್ಷಕ್ಕೆ ಹೊರಟ ಗುಂಟೂರು ಯುವತಿ; ಕಲ್ಪನಾ ಚಾವ್ಲಾ ನಂತರ ಸಾಧನೆಯತ್ತ ಮತ್ತೋರ್ವ ಭಾರತೀಯ ನಾರಿ

Published On - 2:10 pm, Mon, 5 July 21