AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವಮೊಗ್ಗ–ಬೆಂಗಳೂರು ಎಲೆಕ್ಟ್ರಿಕ್‌ ಬಸ್‌ ಸೇವೆ ಶುರು, ಹೇಗಿದೆ ಬಸ್? ಟಿಕೆಟ್‌ ರೇಟ್ ಎಷ್ಟಿದೆ? ಇಲ್ಲಿದೆ ವಿವರ

ಬೆಂಗಳೂರು-ಶಿವಮೊಗ್ಗ ನಡುವೆ ಎಲೆಕ್ಟ್ರಿಕ್ ಬಸ್ ಸಂಚಾರ ಆರಂಭಿಸಿ. ಬಸ್ ಟಿಕೆಟ್​ ಎಷ್ಟು ಹಾಗೂ ಬಸ್‌ ಟೈಮಿಂಗ್ ಏನು| ಬುಕ್ ಮಾಡುವುದು ಹೇಗೆ? ಸಂಫೂರ್ಣ ವಿವರ ಈ ಕೆಳಗಿನಂತಿದೆ ನೋಡಿ.

ಶಿವಮೊಗ್ಗ–ಬೆಂಗಳೂರು ಎಲೆಕ್ಟ್ರಿಕ್‌ ಬಸ್‌ ಸೇವೆ ಶುರು, ಹೇಗಿದೆ ಬಸ್? ಟಿಕೆಟ್‌ ರೇಟ್ ಎಷ್ಟಿದೆ? ಇಲ್ಲಿದೆ ವಿವರ
ಎಲೆಕ್ಟ್ರಿಕ್ ಬಸ್‌
ರಮೇಶ್ ಬಿ. ಜವಳಗೇರಾ
|

Updated on: May 30, 2023 | 8:13 AM

Share

ಬೆಂಗಳೂರು/ಶಿವಮೊಗ್ಗ: ಮೈಸೂರು, ಬೆಂಗಳೂರು ನಗರಗಳ ಮಧ್ಯೆ ಸಂಚಾರಕ್ಕೆ ಸೀಮಿತವಾಗಿದ್ದ ಎಲೆಕ್ಟ್ರಿಕ್‌ ಬಸ್ಸುಗಳು (E-bus) ಈಗ ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಸಂಚಾರ ಆರಂಭಿಸಿವೆ. ಶಿವಮೊಗ್ಗ(Shivamogga)–ಬೆಂಗಳೂರು ಮಧ್ಯೆ ವಿದ್ಯುತ್‌ ಚಾಲಿತ(ಎಲೆಕ್ಟ್ರಿಕ್‌) ಬಸ್‌ ಸಂಚಾರ ಆರಂಭವಾಗಿದೆ. ಶಿವಮೊಗ್ಗ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಿಂದ ಮೊದಲ ಎಲೆಕ್ಟ್ರಿಕ್‌ ಬಸ್‌ (AC Electric Buses ) ಈಗಾಗಲೇ ಬೆಂಗಳೂರಿಗೆ(Bengaluru) ತೆರಳಿದ್ದು, ಡಿಪೋ ಸಿಬ್ಬಂದಿ ಪೂಜೆ ಸಲ್ಲಿಸಿ ಬಸ್‌ಗೆ ಚಾಲನೆ ನೀಡಿದ್ದರು. ಇನ್ನು ಬಸ್‌ ಟಿಕೆಟ್ ದರ ಎಷ್ಟು? ಬಸ್ ಟೈಮಿಂಗ್ ಬಗ್ಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ) ಮಾಹಿತಿ ನೀಡಿದ್ದು, ಅದು ಈ ಕೆಳಗಿನಂತಿದೆ.

ಇದನ್ನೂ ಓದಿ: Shivamogga News: ಮುಸ್ಲಿಂ ಗೆಳತಿಯನ್ನು ಬೈಕ್‌ನಲ್ಲಿ ಡ್ರಾಪ್ ಕೊಟ್ಟಿದ್ದಕ್ಕೆ ಹಿಂದೂ ಯುವಕನ ಮೇಲೆ ಹಲ್ಲೆ

ಬಸ್  ಟಿಕೆಟ್ ದರ ಮತ್ತು ಬಸ್ ಟೈಮಿಂಗ್

ಶಿವಮೊಗ್ಗ-ಬೆಂಗಳೂರು ನಡುವಿನ ಕೆಎಸ್‌ಆರ್‌ಟಿಸಿಯ ಎಲೆಕ್ಟ್ರಿಕ್ ಬಸ್‌ನ ದರವನ್ನು 600 ರೂ. ನಿಗದಿ ಮಾಡಲಾಗಿದೆ. ಕೆಎಸ್ಆರ್‌ಟಿಸಿಯ ವೆಬ್‌ಸೈಟ್‌ನಲ್ಲಿ ಸಾಮಾನ್ಯ ಬಸ್‌ನ ಟಿಕೆಟ್ ಬುಕ್ ಮಾಡುವ ಮಾದರಿಯಲ್ಲಿಯೇ ಎಲೆಕ್ಟ್ರಿಕ್ ಬಸ್ ಟಿಕೆಟ್‌ಗಳನ್ನು ಸಹ ಬುಕ್ ಮಾಡಬಹುದಾಗಿದೆ. ಶಿವಮೊಗ್ಗ-ಬೆಂಗಳೂರು ನಡುವಿನ ಎಲೆಕ್ಟ್ರಿಕ್ ಬಸ್ ಪ್ರತಿದಿನ ಮಧ್ಯಾಹ್ನ 12ಕ್ಕೆ ಶಿವಮೊಗ್ಗದಿಂದ ಸಂಚಾರ ಆರಂಭಿಸಲಿದೆ, ಸಂಜೆ 6 ಗಂಟೆಗೆ ಬೆಂಗಳೂರು ತಲುಪಲಿದೆ. ಬೆಂಗಳೂರು ನಗರದಿಂದ ರಾತ್ರಿ 11ಕ್ಕೆ ಹೊರಟು ಮರುದಿನ ಬೆಳಗ್ಗೆ 5 ಗಂಟೆಗೆ ಶಿವಮೊಗ್ಗ ನಗರ ತಲುಪಲಿದೆ. https://awatar.ksrtc.in ವೆಬ್​ಸೈಟ್​ನಲ್ಲಿ ಟಿಕೆಟ್‌ ಬುಕ್ಕಿಂಗ್‌ ಮಾಡಿಕೊಳ್ಳಬಹುದಾಗಿದೆ.

ಬಸ್ಸಿನ ವಿಶೇಷತೆಗಳೇನು? ಚಾರ್ಜ್‌ ಎಷ್ಟು?

ಇವಿ ಪ್ಲಸ್‌ ಬಸ್ಸುಗಳು ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆ ಹೊಂದಿದೆ. ಸಿಸಿ ಕ್ಯಾಮರಾ, ಅಗ್ನಿಶಾಮಕ ಸಾಧನ, ಎಮರ್ಜನ್ಸಿ ಬಟನ್‌ಗಳು, ಪ್ರಥಮ ಚಿಕಿತ್ಸೆ ಕಿಟ್‌, ಗ್ಲಾಸ್‌ ಹ್ಯಾಮರ್‌ ಸೇರಿದಂತೆ ಹಲವು ಸೌಲಭ್ಯಗಳಿವೆ. ಎಲೆಕ್ಟ್ರಿಕ್‌ ಬಸ್ಸುಗಳು ಅತ್ಯಾಧುನಿಕ ಲಿ-ಆನ್‌ ಫಾಸ್ಪೇಟ್‌ ಬ್ಯಾಟರಿ ಹೊಂದಿದೆ. ಒಮ್ಮೆ ಬ್ಯಾಟರಿ ಚಾರ್ಜ್‌ ಆಗಲು ಸುಮಾರು ಎರಡೂವರೆ ಗಂಟೆ ಸಮಯ ಹಿಡಿಯಲಿದೆ. ಶಿವಮೊಗ್ಗ ಡಿಪೋದಲ್ಲಿ ಬಸ್‌ ಚಾರ್ಜಿಂಗ್‌ ಪಾಯಿಂಟ್‌ ನಿರ್ಮಿಸಲಾಗಿದೆ. ಒಮ್ಮೆ ಚಾರ್ಜ್‌ ಮಾಡಿದರೆ 300 ಕಿ.ಮೀವರೆಗೆ ಬಸ್‌ ಸಂಚರಿಸಲಿದೆ.

ಚಿಕ್ಕಮಗಳೂರಿಗೂ ಎಲೆಕ್ಟ್ರಿಕ್ ಬಸ್

ಮೇ 19ರಿಂದ ಕೆಎಸ್‌ಆರ್‌ಟಿಸಿಯ ಎಲೆಕ್ಟ್ರಿಕ್ ಬಸ್‌ ಬೆಂಗಳೂರು-ಚಿಕ್ಕಮಗಳೂರು ನಡುವೆ ಸಂಚಾರ ಆರಂಭಿಸಿವೆ. ಬೆಂಗಳೂರು-ಚಿಕ್ಕಮಗಳೂರು ನಡುವಿನ 6 ವೊಲ್ವೋ ಬಸ್‌ಗಳ ಬದಲಾಗಿ ಇವಿ ಪವರ್ ಪ್ಲಸ್ ಹೆಸರಿನ ಎಲೆಕ್ಟ್ರಿಕ್ ಬಸ್‌ನ ಸಂಚಾರ ಆರಂಭಗೊಂಡಿದೆ. ಈ ಬಸ್‌ ಸೇವೆಯಿಂದ ಚಿಕ್ಕಮಗಳೂರು-ಬೆಂಗಳೂರು ಮಾತ್ರವಲ್ಲ. ಹಾಸನ ಮತ್ತು ಬೇಲೂರು ಭಾಗದ ಪ್ರಯಾಣಿಕರಿಗೆ ಸಹ ಅನುಕೂಲವಾಗಿದೆ. ಬೆಂಗಳೂರಿನಿಂದ ಪ್ರತಿನಿತ್ಯ ಬೆಳಗ್ಗೆ 5 ಗಂಟೆಯಿಂದ ರಾತ್ರಿ 12 ಗಂಟೆಯ ತನಕ ಆರು ಕೆಎಸ್‌ಆರ್‌ಟಿಸಿಯ ಎಲೆಕ್ಟ್ರಿಕ್ ಬಸ್‌ಗಳು ಸಂಚಾರಿಸಲಿವೆ.

ಮಾರ್ಚ್‌ 20ರಂದು ರಾಜ್ಯದಲ್ಲಿ ಮೊದಲ ಎಲೆಕ್ಟ್ರಿಕ್‌ ಬಸ್‌ ಸಂಚಾರ ಆರಂಭವಾಗಿದ್ದು, ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಿದ್ದರು. ಪ್ರಾಯೋಗಿಕವಾಗಿ ಬೆಂಗಳೂರು – ಮೈಸೂರು ನಡುವೆ ಮಾತ್ರ ಬಸ್ಸುಗಳು ಸಂಚರಿಸುತ್ತಿದ್ದವು. ಹಂತ ಹಂತವಾಗಿ ಬೆಂಗಳೂರಿನಿಂದ ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ವಿರಾಜಪೇಟೆ, ಮಡಿಕೇರಿಗೆ ವಿದ್ಯುತ್‌ ಬಸ್‌ ಸೇವೆ ವಿಸ್ತರಣೆಗೆ ಯೋಜಿಸಲಾಗಿತ್ತು. ಅದರಂತೆ ಶಿವಮೊಗ್ಗ ಬೆಂಗಳೂರು ಹಾಗೂ ಬೆಂಗಳೂರು ಚಿಕ್ಕಮಗಳೂರು ಮಧ್ಯೆ ಬಸ್‌ ಸಂಚಾರ ಆರಂಭವಾಗಿದೆ.

ಇನ್ನಷ್ಟು ಶಿವಮೊಗ್ಗ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ