Shivamogga: ಬಿಜೆಪಿಯ ಮೇಯರ್ ವಾರ್ಡ್ ನಲ್ಲಿರುವ ಅಂಗನವಾಡಿ ಹೇಗಿದೆ ನೀವೂ ನೋಡಿ
ನೂತನ ಅಂಗನವಾಡಿ ಕಟ್ಟಡವಾಗುವರೆಗೂ ಉತ್ತಮ ಸೌಲಭ್ಯವಿರುವ ತಾತ್ಕಾಲಿಕ ಕಟ್ಟಡದ ವ್ಯವಸ್ಥೆಯನ್ನು ಶಿಕ್ಷಣ ಇಲಾಖೆ ಅಧಿಕಾರಿಗಳು ಮಾಡಬೇಕಿತ್ತು. ಆದ್ರೆ ಯಾವುದೋ ಒಂದು, ಕೆಲಸಕ್ಕೆ ಬಾರದ ವ್ಯವಸ್ಥೆಗಳಿಲ್ಲದ, ಗಬ್ಬೆದ್ದು ದುರ್ವಾಸನೆಯಿಂದ ಕೂಡಿರುವ ಸ್ಥಳದಲ್ಲಿ ಅಂಗನವಾಡಿ ಕಟ್ಟಡವಿದೆ.
ಶಿವಮೊಗ್ಗ (Shivamogga) ತಾಲೂಕಿನ ಪುರಲೆ ಗ್ರಾಮದಲ್ಲಿ ಅಂಗನವಾಡಿಯ (Anganwadi) ವ್ಯವಸ್ಥೆ ನೋಡಿ ಗ್ರಾಮಸ್ಥರು ಕಂಗಾಲಾಗಿದ್ದಾರೆ. ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುವ ಈ ಗ್ರಾಮದಲ್ಲಿರುವ ತಾತ್ಕಾಲಿಕ ಅಂಗನವಾಡಿ ಅವ್ಯವಸ್ಥೆಯ ಆಗರವಾಗಿದೆ. ಬಿಜೆಪಿಯ ಮೇಯರ್ ವಾರ್ಡ್ ನಲ್ಲಿರುವ ಅಂಗನವಾಡಿ ಹೇಗಿದೆ ನೀವೇ ನೋಡಿ.
ಶಿವಮೊಗ್ಗ ತಾಲೂಕಿನ ಪುರಲೆ ವಾರ್ಡ್ ನಂ. 5. ಈ ವಾರ್ಡ್ ಪಾಲಿಕೆ ಸದಸ್ಯ ಮತ್ತು ಪಾಲಿಕೆಯ ಮೇಯರ್ ಆಗಿರುವವರು (BJP Mayor) ಶಿವಕುಮಾರ್. ಬಿಜೆಪಿ ಆಡಳಿತದ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಪುರಲೆ ಗ್ರಾಮ ಬರುತ್ತದೆ. ಕಳೆದ ಮೂರು ತಿಂಗಳ ಹಿಂದೆ ಹಳೆಯ ಅಂಗನವಾಡಿ ಕಟ್ಟಡ ನೆಲಸಮ ಮಾಡಲಾಗಿದೆ. ಅಲ್ಲೊಂದು ಹೊಸ ಅಂಗನವಾಡಿ ಕಟ್ಟಡ ಕಾಮಗಾರಿಗೆ ಪಾಲಿಕೆಯು ಮುಂದಾಗಿದೆ.
ಈ ನಡುವೆ ಪುರಲೆಯ ಗ್ರಾಮದಲ್ಲಿ ತಾತ್ಕಾಲಿಕವಾಗಿ ಒಂದು ಕಟ್ಡಡದಲ್ಲಿ ಅಂಗನವಾಡಿ ವ್ಯವಸ್ಥೆ ಕಲ್ಪಿಸಲಾಗಿದೆ. ನಿತ್ಯ ಹತ್ತಾರು ಪುಟ್ಟ ಪುಟ್ಟ ಮಕ್ಕಳು ಇಲ್ಲಿ ವಿದ್ಯಾಭ್ಯಾಸಕ್ಕೆಂದು (Education) ಬರುತ್ತಾರೆ. ಹೀಗೆ ಬರುವ ಬಡ ಮಕ್ಕಳಿಗೆ ಉತ್ತಮವಾದ ವಾತಾವರಣ ಇಲ್ಲಿ ಇಲ್ಲ. ಇರುವುದು ಒಂದು ಕೊಠಡಿ. ಒಂದು ಭಾಗದಲ್ಲಿ ಅಡುಗೆ ಮನೆ. ಮತ್ತೊಂದು ಭಾಗದಲ್ಲಿ ಮಕ್ಕಳಿಗೆ ಪಾಠ.
ಮಕ್ಕಳಿಗೆ ಎಲ್ಲ ಆಹಾರವನ್ನು ಇಲ್ಲಿಯೇ ಸಿದ್ಧಪಡಿಸಬೇಕು. ಬಿರುಕು ಬಿಟ್ಟಿರುವ ಗೋಡೆಗಳು. ಕಿಟಕಿ ಬಾಗಿಲು ಅಷ್ಟಕಷ್ಟೆ. ನೀರು ಮತ್ತು ಕರೆಂಟ್ ಕೇಳಲೇ ಬೇಡಿ. ಯಾವುದೇ ಸೌಲಭ್ಯಗಳಿಲ್ಲದ ಅಂಗನವಾಡಿಯಲ್ಲಿ ನಿತ್ಯ ಮಕ್ಕಳಿಗೆ ಆಟ ಮತ್ತು ಪಾಠ ನಡೆಯುತ್ತಿದೆ. ಇದು ಒಳಗಿನ ಸಮಸ್ಯೆಗಳಾದ್ರೆ, ಇನ್ನು ಕಟ್ಟಡದ ಸುತ್ತಮುತ್ತ ಹಸುಗಳು, ಪಕ್ಕದಲ್ಲೇ ಕಸದ ಗುಡ್ಡೆ ಹಾಕಿರುವ ಸ್ಥಳ. ಹೀಗೆ ಮಕ್ಕಳು ದುರ್ವಾಸನೆ ನಡುವೆ ಪಾಠ ನಿತ್ಯ ಪಾಠಕೇಳಬೇಕಿದೆ ಎಂಬ ಮಾಹಿತಿ ನೀಡುತ್ತಾರೆ ಮಂಜುನಾಥ್, ಇಲ್ಲಿನ ಗ್ರಾಮಸ್ಥರು.
ನಗರ ವ್ಯಾಪ್ತಿಗೆ ಬರುವ ಈ ಅಂಗನವಾಡಿಯ ಸಮಸ್ಯೆಗಳಿಗೆ ಪರಿಹಾರವಿಲ್ಲ. ಮೂರು ತಿಂಗಳಿನಿಂದ ನೆಟ್ಟಗೆ ಕುಡಿಯುವ ಮತ್ತು ಬಳಕೆಗೆ ನೀರಿನ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳೂ ವಿಫಲವಾಗಿದ್ದಾರೆ. ಪುಟ್ಟಪುಟ್ಟ ಮಕ್ಕಳಿಗೆ ಉತ್ತಮ ಸೌಲಭ್ಯಗಳು, ಪೌಷ್ಠಿಕ ಆಹಾರದೊಂದಿಗೆ ಶಿಕ್ಷಣ ನೀಡುವ ವ್ಯವಸ್ಥೆ ಇರಬೇಕಿತ್ತು. ಸರಕಾರ ಲಕ್ಷ ಲಕ್ಷ ಹಣ ಇಂತಹ ಅಂಗನವಾಡಿಗೆ ಹಣ ವೆಚ್ಚ ಮಾಡುತ್ತದೆ. ಆದ್ರೆ ಯಾವುದೇ ಪ್ರಯೋಜನವಾಗುತ್ತಿಲ್ಲ.
ಸಂಬಂಧಿಸಿದ ಅಧಿಕಾರಿಗಳು ಅನುದಾನ ದುರುಪಯೋಗ ಮಾಡುತ್ತಿದ್ದಾರೆ. ನೂತನ ಅಂಗನವಾಡಿ ಕಟ್ಟಡವಾಗುವರೆಗೂ ಉತ್ತಮ ಸೌಲಭ್ಯ ಇರುವ ತಾತ್ಕಾಲಿಕ ಕಟ್ಟಡದ ವ್ಯವಸ್ಥೆಯನ್ನು ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಾಡಬೇಕಿತ್ತು. ಆದ್ರೆ ಯಾವುದೋ ಒಂದು ಕೆಲಸಕ್ಕೆ ಬಾರದ ವ್ಯವಸ್ಥೆಗಳಿಲ್ಲದ, ಗಬ್ಬೆದ್ದು ದುರ್ವಾಸನೆಯಿಂದ ಕೂಡಿರುವ ಸ್ಥಳದಲ್ಲಿ ಅಂಗನವಾಡಿ ಕಟ್ಟಡವಿದೆ.
ನಿತ್ಯ ಮಕ್ಕಳಿಗೆ ಅಂಗನವಾಡಿಗೆ ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ. ಆರೋಗ್ಯಕರ ವಾತಾವರಣ ಅಂಗನವಾಡಿಯಲ್ಲಿ ಇಲ್ಲ. ಮಕ್ಕಳಿಗೆ ರೋಗರುಜಿನ ಬಂದ್ರೆ ಯಾರು ಹೊಣೆ ಅಂತಾ ಪೋಷಕರು ಅನೇಕ ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಆದ್ರೆ ಇಲ್ಲಿಯವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಈ ಅಂಗನವಾಡಿಯ ಜವಾಬ್ದಾರಿ ವಹಿಸಿಕೊಂಡಿರುವ ಕಾರ್ಯಕರ್ತೆ ಮಾತ್ರ ನೂರೆಂಟು ಸಮಸ್ಯೆಗಳಿದ್ದರೂ ಅದಕ್ಕೆ ತೇಪೆ ಹಚ್ಚು ಕೆಲಸ ಮಾಡುತ್ತಿದ್ದಾರೆ.
ಇದನ್ನೂ ಓದಿ: ಕಾರ್ಕಳ ಬಳಿ ಭೀಕರ ರಸ್ತೆ ಅಪಘಾತ, ಎರಡು ವರ್ಷದ ಮಗು ಸೇರಿ ಸ್ಥಳದಲ್ಲೇ ಮೂವರ ಸಾವು
ಖಾಸಗಿ ವಿದ್ಯಾಸಂಸ್ಥೆಗಳಿಲ್ಲಿ 30 ರಿಂದ 50 ಸಾವಿರ ಹಣ ಕೊಟ್ಟು ನರ್ಸರಿ, ಎಲ್ ಕೆಜಿ, ಯುಕೆಜಿ ವಿದ್ಯಾಭ್ಯಾಸ ಮಾಡುವ ಶಕ್ತಿ ಗ್ರಾಮೀಣ ಪ್ರದೇಶದ ಪೋಷಕರಿಗಿಲ್ಲ. ಹೀಗಾಗಿ ಅವರು ಉಚಿತವಾಗಿ ಸರಕಾರಿ ಅಂಗನವಾಡಿಯನ್ನೇ ನಂಬಿದ್ದಾರೆ. ಮೇಯರ್ ವಾರ್ಡ್ ನಲ್ಲಿರುವ ಈ ಅಂಗನವಾಡಿ ಕಟ್ಟಡ ಮಾತ್ರ ನೂರೆಂಟು ಸಮಸ್ಯೆಗಳಿಂದ ಕೂಡಿದೆ.. ಸಂಬಂಧ ಪಟ್ಟ ಅಧಿಕಾರಿಗಳು ಉತ್ತಮ ಸೌಲಭ್ಯ ಇರುವ ಕಟ್ಟಡಕ್ಕೆ ಈ ಅಂಗನವಾಡಿಯನ್ನು ಸ್ಥಳಾಂತರಿಸುವ ಮೂಲಕ ಮಕ್ಕಳಿಗೆ ಉತ್ತಮ ಶಿಕ್ಷಣದ ವ್ಯವಸ್ಥೆಗೆ ಮುಂದಾಗಬೇಕಿದೆ. (ವರದಿ: ಬಸವರಾಜ್ ಯರಗಣವಿ, ಟಿವಿ 9, ಶಿವಮೊಗ್ಗ)
ರಾಜ್ಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ