ಶಿವಮೊಗ್ಗ: ಮನೆಗೆ ಭೇಟಿ ನೀಡಿದ ರೇಣುಕಾಚಾರ್ಯ ಎದುರು ದುಃಖ ತೋಡಿಕೊಂಡ ಮೃತ ಹರ್ಷನ ತಾಯಿ
ಹರ್ಷ ಕುಟುಂಬಕ್ಕೆ ರೇಣುಕಾಚಾರ್ಯ ವೈಯಕ್ತಿಕವಾಗಿ ₹ 5 ಲಕ್ಷ ನೀಡಿದರು. ಹರ್ಷನ ತಾಯಿಗೆ ಸಾಂತ್ವನ ಹೇಳುವ ವೇಳೆ ರೇಣುಕಾಚಾರ್ಯ ಗದ್ಗದಿತರಾದರು
ಶಿವಮೊಗ್ಗ: ನಗರದಲ್ಲಿ ಈಚೆಗೆ ಮೃತಪಟ್ಟ ಬಜರಂಗದಳ ಕಾರ್ಯಕರ್ತ ಹರ್ಷ ಅವರ ಮನೆಗೆ ಹೊನ್ನಾಳಿ ಶಾಸಕ, ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಗುರುವಾರ ಪತ್ನಿ ಸುಮಾ ಜೊತೆಗೆ ಭೇಟಿ ನೀಡಿದರು. ಮೃತ ಹರ್ಷನ ತಾಯಿ ಮತ್ತು ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಹರ್ಷ ಕುಟುಂಬಕ್ಕೆ ರೇಣುಕಾಚಾರ್ಯ ವೈಯಕ್ತಿಕವಾಗಿ ₹ 5 ಲಕ್ಷ ನೀಡಿದರು. ಈ ವೇಳೆ ಬ್ಯಾಡಗಿ ಶಾಸಕ ವಿರೂಪಾಕ್ಷಪ್ಪ ₹ 1 ಲಕ್ಷ, ಹೊನ್ನಾಳಿ ಕ್ಷೇತ್ರದ ಕಾರ್ಯಕರ್ತರು ಸಂಗ್ರಹಿಸಿದ್ದ ₹ 17,000 ಪರಿಹಾರ ನೀಡಿದರು. ಹರ್ಷನ ತಾಯಿಗೆ ಸಾಂತ್ವನ ಹೇಳುವ ವೇಳೆ ರೇಣುಕಾಚಾರ್ಯ ಗದ್ಗದಿತರಾದರು. ಒಂದು ತಿಂಗಳಿನಿಂದ ನನಗೆ ಏನೋ ಒಂದು ತರ ಕಳವಳ ಆಗ್ತಾ ಇತ್ತು. ಯಾವತ್ತೂ ಆ ರೀತಿಯಾಗಿ ಅನ್ನಿಸಿರಲಿಲ್ಲ. ಹೀಗಾಗಿ ಪ್ರತಿ ಹತ್ತು ನಿಮಿಷಕ್ಕೆ ಅವನಿಗೆ ಕರೆ ಮಾಡುತ್ತಿದ್ದೆ. ಆದರೆ ನನ್ನ ಪ್ರಪಂಚವೇ ಆಗಿದ್ದ ಅವನನ್ನು ಕಳೆದುಕೊಂಡೆ ಎಂದು ಹರ್ಷ ತಾಯಿ ಪದ್ಮಾ ಹೇಳಿದರು.
ಹರ್ಷನ ಕೊಲೆ ಮಾಡಿದವರನ್ನು ಎನ್ಕೌಂಟರ್ ಮಾಡಬೇಕು ಎಂದು ರೇಣುಕಾಚಾರ್ಯ ಭಾವುಕರಾಗಿ ನುಡಿದರು. ಛತ್ರಪತಿ ಶಿವಾಜಿಯ ಪ್ರತಿರೂಪದಲ್ಲಿ ಹರ್ಷನನ್ನು ನೋಡಿದ್ದೇನೆ. ಇತಿಹಾಸ ಪುರುಷರು ಬಹಳ ದಿನ ಇರಲಿಲ್ಲ. ಹಿಂದೂ ಪರ ಸಂಘಟನೆಗಳ ಸಾಕಷ್ಟು ಯುವಕರ ಹತ್ಯೆಯಾಗಿದೆ. ಹಂತಕರನ್ನು ಎನ್ಕೌಂಟರ್ ಮಾಡಿದರೆ ಇಂತಹ ಕೃತ್ಯ ನಿಲ್ಲುತ್ತದೆ ಎಂದು ತಿಳಿಸಿದರು. ಹರ್ಷನ ತಾಯಿಯದು ಒಂದೇ ಬಯಕೆ. ಹಿಂದುತ್ವ ಉಳಿಬೇಕು ಹರ್ಷನ ಆತ್ಮಕ್ಕೆ ಶಾಂತಿ ಸಿಗಬೇಕು ಎನ್ನುತ್ತಿದ್ದಾರೆ ಅವರು. ಗಲಭೆಯಾದರೆ ಮಕ್ಕಳು ಮನೆಯಿಂದ ಹೋಗದಂತೆ ನೋಡಿಕೊಳ್ಳುತ್ತೇವೆ. ಆದರೆ ಹರ್ಷ ಹಿಂದುತ್ವ ಉಳಿಸಲು ಪ್ರತಿನಿತ್ಯ ಹೋರಾಟ ನಡೆಸುತ್ತಿದ್ದ ಎಂದರು.
ಹರ್ಷನ ಕುಟುಂಬಕ್ಕೆ ಸಹಾಯ ಮಾಡಬಹುದು. ಆದರೆ ಹರ್ಷನನ್ನು ಪುನಃ ತಂದುಕೊಡಲು ಆಗುವುದಿಲ್ಲ. ನಾನು ವಿವಾದಾತ್ಮಕ ಹೇಳಿಕೆ ನೀಡುತ್ತೇನೆ ಎನ್ನುತ್ತಾರೆ. ಗಲಭೆಗೆ ಈಶ್ವರಪ್ಪ ಕಾರಣ ಎಂದು ಕಾಂಗ್ರೆಸ್ನವರು ಹೇಳುತ್ತಾರೆ. ಆದರೆ ಹರ್ಷನ ಮನೆಗೆ ಯಾವೊಬ್ಬ ಕಾಂಗ್ರೆಸ್ ಮುಖಂಡ ಬಂದಿಲ್ಲ. ಕಾಂಗ್ರೆಸ್ನವರು ಟಿಪ್ಪು ಜಯಂತಿ ಮಾಡುತ್ತಾರೆ. ಸಿದ್ದರಾಮಯ್ಯನವರೇ ನೀವು ಟಿಪ್ಪು ಜಯಂತಿ ಆಚರಣೆ ಮಾಡುತ್ತೀರಿ. ನೀವು ಟಿಪ್ಪು ಜಯಂತಿಯನ್ನು ಮಾಡಿದ್ದರ ಫಲ ಇದು. ಇನ್ನು ಮುಂದೆ ಈ ರೀತಿ ನಡೆದರೆ ನಾವು ಸಹಿಸುವುದಿಲ್ಲ. ರಾಜಕಾರಣಕ್ಕಾಗಿ ಸದನದಲ್ಲಿ ಮಾತನಾಡುತ್ತೀರಿ ಎಂದು ಲೇವಡಿ ಮಾಡಿದರು. ಭಾರತ್ ಮಾತಾಕಿ ಜೈ ಎನ್ನುವವರಿಗೆ ಮಾತ್ರವೇ ಇಲ್ಲಿ ಜೀವಿಸಲು ಅವಕಾಶ. ಆದನ್ನು ಬಿಟ್ಟು ಪಾಕಿಸ್ತಾನ್ ಜಿಂದಾಬಾದ್ ಎನ್ನುವವರು ದೇಶದ್ರೋಹಿಗಳಾಗುತ್ತಾರೆ. ಅಂಥವರು ದೇಶ ಬಿಟ್ಟು ಹೋಗಬೇಕು ಎಂದು ಆಗ್ರಹಿಸಿದರು.
26ರಿಂದ ಶಾಲೆ-ಕಾಲೇಜು ಆರಂಭ
ಶಿವಮೊಗ್ಗದಲ್ಲಿ ಫೆ 26ರಿಂದ ಶಾಲೆ ಮತ್ತು ಕಾಲೇಜುಗಳು ಮತ್ತೆ ಆರಂಭವಾಗಲಿವೆ ಎಂದು ಜಿಲ್ಲಾಧಿಕಾರಿ ಡಾ.ಸೇಲ್ವಮಣಿ ಮಾಹಿತಿ ನೀಡಿದ್ದಾರೆ. ಹರ್ಷ ಸಾವಿನ ಹಿನ್ನೆಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನೆಲೆಗೊಂಡಿದ್ದ ಕಾರಣ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ನಗರದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳನ್ನು ಮತ್ತೆ ಆರಂಭಿಸಲು ಜಿಲ್ಲಾಧಿಕಾರಿ ಕ್ರಮ ತೆಗೆದುಕೊಂಡಿದ್ದಾರೆ.