ಶಿವಮೊಗ್ಗ: ಅಗ್ನಿ ಅವಘಡ, ಒಂದೇ ಕುಟುಂಬದ ಮೂವರು ಸಜೀವ ದಹನ
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಅರಳಸುರಳಿ ಸಮೀಪ ಕೆಕೋಡ್ನಲ್ಲಿ ಅಗ್ನಿ ಅವಘಡ ಸಂಭವಿಸಿ ಒಂದೇ ಕುಟುಂಬದ ಮೂವರು ಸಜೀವದಹನರಾಗಿದ್ದಾರೆ.
ಶಿವಮೊಗ್ಗ ಅ.08: ತೀರ್ಥಹಳ್ಳಿ (Thirthahalli) ತಾಲೂಕಿನ ಅರಳಸುರಳಿ ಸಮೀಪ ಕೆಕೋಡ್ನಲ್ಲಿ ಅಗ್ನಿ ಅವಘಡ (Fire Accident) ಸಂಭವಿಸಿ ಒಂದೇ ಕುಟುಂಬದ ಮೂವರು ಸಜೀವದಹನರಾಗಿದ್ದಾರೆ. ಅರ್ಚಕ ವೃತ್ತಿಯಲ್ಲಿದ್ದ ರಾಘವೇಂದ್ರ ಕೆಕೋಡ್ (65), ಪತ್ನಿ ನಾಗರತ್ನಾ (55), ಹಿರಿಯ ಪುತ್ರ ಶ್ರೀರಾಮ್ (30) ಮೃತ ದುರ್ದೈವಿಗಳು. ಮನೆಯ ಕೋಣೆಯೊಳಗೆ ಸಂಗ್ರಹಿಸಿಟ್ಟಿದ್ದ ಕಟ್ಟಿಗೆ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಇನ್ನು ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಇನ್ನೋರ್ವ ಪುತ್ರ ಭರತ್ (28) ಆಸ್ಪತ್ರೆಗೆ ದಾಖಲಿಸಲಾಗಿದೆ. . ಕೌಟುಂಬಿಕ ಸಮಸ್ಯೆ ಹಿನ್ನೆಲೆಯಲ್ಲಿ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಸ್ಥಳಕ್ಕೆ ಎಸ್ಪಿ ಮಿಥುನ್ ಕುಮಾರ್, ಎಫ್.ಎಸ್.ಎಲ್ ತಂಡ ಮತ್ತು ಶ್ವಾನ ದಳ ಭೇಟಿ ನೀಡಿತು. ಘಟನೆ ಬಗ್ಗೆ ಎಸ್ಪಿ ಮಿಥುನ್ ಕುಮಾರ್ ಮಾತನಾಡಿ ದುರಂತದಲ್ಲಿ ರಾಘವೇಂದ್ರ, ನಾಗರತ್ನ, ಶ್ರೀರಾಮ್ ಮೃತಪಟ್ಟಿದ್ದಾರೆ. ಗಾಯಗೊಂಡ ಭರತ್ ಹೇಳಿಕೆ ಪಡೆದು ತನಿಖೆ ನಡೆಸಲಾಗುವುದು. ತನಿಖೆ ಬಳಿಕ ಘಟನೆಗೆ ನಿಖರ ಕಾರಣ ತಿಳಿಯಲಿದೆ ಎಂದು ಹೇಳಿದರು.
ಇನ್ನು ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ಭೇಟಿ ನೀಡಿ ಸ್ಥಳೀಯರಿಂದ ಮಾಹಿತಿ ಪಡೆದರು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಮೃತ ರಾಘವೇಂದ್ರ ಕೆಕೋಡ್ ಕುಟುಂಬಕ್ಕೆ 10 ಎಕರೆ ಅಡಿಕೆ ತೋಟ ಇದೆ. 20 ರಿಂದ 25 ವರ್ಷದಿಂದ ಈ ಕುಟುಂಬ ನನಗೆ ಪರಿಚಯ ಇದೆ. ಆರ್ಥಿಕವಾಗಿ ಕುಟುಂಬಸ್ಥರು ಚೆನ್ನಾಗಿ ಇದ್ದಾರೆ ಬಡತನ ಏನು ಇಲ್ಲ. ರಾಘವೇಂದ್ರ ಅಣ್ಣ, ತಮ್ಮಿಂದಲೂ ಎಲ್ಲರೂ ಊರ ಹೊರಗೆ ಇದ್ದಾರೆ. ಎಲ್ಲರೂ ಚೆನ್ನಾಗಿ ಇದ್ದಾರೆ. ರಾಘವೇಂದ್ರ ಕುಟುಂಬ ಮಾತ್ರ ಗ್ರಾಮದಲ್ಲಿ ವಾಸ ಮಾಡುತ್ತಿದ್ದರು ಎಂದು ತಿಳಿಸಿದರು.
ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಯಲ್ಲಿ ಮೂವರು ಮೃತಪಟ್ಟಿದ್ದಾರೆ. ಓರ್ವನ ಸ್ಥಿತಿ ಗಂಭೀರವಾಗಿದೆ. ಮೃತ ದೇಹಗಳು ಗುರುತು ಸಿಗದಷ್ಟು ಸುಟ್ಟು ಕರಕಲವಾಗಿವೆ. ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಅವರಿಗೆ ಇರಲಿಲ್ಲ. ಸದ್ಯ ಘಟನೆಗೆ ಕಾರಣ ಏನು ಎನ್ನುವುದು ಗೊತ್ತಾಗುತ್ತಿಲ್ಲ. ಪೊಲೀಸ್ ತನಿಖೆಯಿಂದಲೇ ಎಲ್ಲವೂ ಗೊತ್ತಾಗಬೇಕಿದೆ ಎಂದರು.
ಇದನ್ನೂ ಓದಿ: ಮಂಡ್ಯದ ಮನ್ ಮುಲ್ ಅಗ್ನಿ ಅವಘಡ ಪ್ರಕರಣ: ಎನ್ಒಸಿ ಪಡೆಯದೆ ಕಟ್ಟಡ ನಿರ್ಮಾಣ
ಈ ಬಗ್ಗೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ ದುರಂತ ನಡೆಯಬಾರದಿತ್ತು ನಡೆದಿದೆ. ಒಬ್ಬೊಬ್ಬರು ಒಂದೊಂದು ಅಭಿಪ್ರಾಯ ಹೇಳುತ್ತಾರೆ. ಆರ್ಥಿಕವಾಗಿ ಚೆನ್ನಾಗಿದ್ದರು. ಎಲ್ಲರೂ ವಿದ್ಯಾವಂತರು. ಪೊಲೀಸರು ತನಿಖೆ ನಂತರ ಆತ್ಮಹತ್ಯೆಗೆ ಕಾರಣ ಗೊತ್ತಾಗಬೇಕು. ಕುಟುಂಬದಲ್ಲಿ ಏನು ಸಮಸ್ಯೆ ಇತ್ತು ಗೊತ್ತಿಲ್ಲ. ನಾನು ಒಬ್ಬ ವಕೀಲನಾಗಿ ಅವರ ಕೇಸ್ನಲ್ಲಿ ಭಾಗವಹಿಸಿದ್ದೆ. ಪೊಲೀಸ್ ತನಿಖೆಯಾಗಲಿ ಎಲ್ಲಾ ಹೊರಗೆ ಬರುತ್ತದೆ ಎಂದು ಹೇಳಿದರು.
ಗ್ರಾಮಸ್ಥ ರಾಘವೇಂದ್ರ ಬಾಯಾರಿ ಮಾತನಾಡಿ, ರಾಘವೇಂದ್ರ ಕೆಕೋಡ್ ಒಳ್ಳೆಯ ವ್ಯಾಪಾರ ಮಾಡುತ್ತಿದ್ದರು. ಶನಿವಾರ ನನ್ನ ಮನೆಗೆ ಬಂದು, ನನ್ನ ಗಾಡಿ ತೆಗೆದುಕೊಂಡು ಹೊಸನಗರಕ್ಕೆ ಹೋಗಿದ್ದರು. ಜಮೀನು ಅಡಕೆ ವ್ಯಾಪಾರ ಮಾಡುತ್ತಿದ್ದರು. ಒಳ್ಳೆಯ ಕುಟುಂಬ, ಯಾವುದೇ ತೊಂದರೆ ಇರಲಿಲ್ಲ ಎಂದು ಮಾಹಿತಿ ನೀಡಿದರು.
ಮೃತ ರಾಘವೇಂದ್ರ ಕೆಕೋಡ್ ಅವರ ಸಹೋದರ ಡಾ.ಸುಧೀಂದ್ರ ಮಾತನಾಡಿ ಶನಿವಾರ ಶಿವಮೊಗ್ಗದಿಂದ ಬಂದು ನೋಡುವಷ್ಟರಲ್ಲಿ ಸುಟ್ಟ ಸ್ಥಿತಿಯಲ್ಲಿ ಮೂರು ಜನ ಇದ್ದರು. ನಾವೆಲ್ಲರೂ ಚನ್ನಾಗಿಯೇ ಇದ್ವಿ. ಮನಸ್ಸಿನಲ್ಲಿ ಏನಿತ್ತು ಗೊತ್ತಿಲ್ಲ. ಆರ್ಥಿಕವಾಗಿ ಏನಾದರೂ ಸಮಸ್ಯೆ ಇತ್ತೇನೋ ನಮ್ಮ ಬಳಿ ಏನು ಹೇಳಿಕೊಂಡಿರಲಿಲ್ಲ. ಒಟ್ಟುಐದು ಜನ ಅಣ್ಣ-ತಮ್ಮಂದಿರು. ಗಣಪತಿ ಹಬ್ಬ ಎಲ್ಲರು ಒಟ್ಟಿಗೆ ಮಾಡುತ್ತಿದ್ದೇವು. ಈ ಬಾರಿ ಹಬ್ಬಕ್ಕೆ ಬರಲು ಆಗಲಿಲ್ಲ ಎಂದು ದುಃಖತಪ್ತರಾದರು.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:26 am, Sun, 8 October 23