ಮುಂಗಾರು ದುರ್ಬಲಗೊಂಡರೂ ಮಲೆನಾಡು, ಕರಾವಳಿ ಭಾಗವನ್ನು ಬಿಡದ ಮಳೆ; ಅಡಿಕೆ ಬೆಳೆಗೆ ಕೊಳೆ ರೋಗ, ರೈತರು ಕಂಗಾಲು

ಈ ಬಾರಿ ಮೇ ತಿಂಗಳಿನಿಂದಲೂ ಮಳೆಯ ವಾತಾವರಣವೇ ಆವರಿಸಿಕೊಂಡಂತೆ ಆಗಿರುವುದರಿಂದ ಇದು ಮಲೆನಾಡು ಭಾಗದ ಅಡಿಕೆ ಬೆಳೆಗಾರರಿಗೆ ಭಾರೀ ತಲೆನೋವು ತರಿಸಿದ್ದು, ಈಗಾಗಲೇ ಹೆಚ್ಚಿನ ತೋಟಗಳಲ್ಲಿ ಕೊಳೆರೋಗ ಕಾಣಿಸಿಕೊಂಡಿದೆ.

ಮುಂಗಾರು ದುರ್ಬಲಗೊಂಡರೂ ಮಲೆನಾಡು, ಕರಾವಳಿ ಭಾಗವನ್ನು ಬಿಡದ ಮಳೆ; ಅಡಿಕೆ ಬೆಳೆಗೆ ಕೊಳೆ ರೋಗ, ರೈತರು ಕಂಗಾಲು
ಸಂಗ್ರಹ ಚಿತ್ರ
TV9kannada Web Team

| Edited By: Skanda

Jul 30, 2021 | 8:55 AM

ಬೆಂಗಳೂರು: ಕಳೆದ ಹದಿನೈದು ಇಪ್ಪತ್ತು ದಿನಗಳಿಂದ ಕರ್ನಾಟಕದ ಜನತೆ ಕಂಗೆಟ್ಟು ನೋಡುವಂತೆ ಆರ್ಭಟಿಸುತ್ತಿರುವ ಮಳೆ (Karnataka Rain) ರಾಜ್ಯದ ಕೆಲ ಭಾಗಗಳಲ್ಲಿ ಶಾಂತವಾಗಿದ್ದರೂ ಮಲೆನಾಡು ಮತ್ತು ಕರಾವಳಿಯಲ್ಲಿ ಬಿಡುವು ನೀಡುವ ಲಕ್ಷಣ ಗೋಚರಿಸುತ್ತಿಲ್ಲ. ಇನ್ನೂ 3 ದಿನಗಳ ಕಾಲ ಕರ್ನಾಟಕದಲ್ಲಿ ಮಳೆ ವಾತಾವರಣ ಮುಂದುವರೆಯಲಿದ್ದು, ಮಲೆನಾಡು ಹಾಗೂ ಕರಾವಳಿಯಲ್ಲಿ ಅಧಿಕ ಮಳೆಯಾಗುವ ಸಾಧ್ಯತೆ ಇದೆ. ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಹಾಗೂ ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಭಾಗದಲ್ಲಿ ವ್ಯಾಪಕ ಮಳೆಯಾಗಲಿದೆ (Heavy Rain) ಎಂದು ಹವಾಮಾನ ವರದಿಗಳು (Weather Report) ಮುನ್ಸೂಚನೆ ನೀಡಿವೆ. ಹವಾಮಾನ ಇಲಾಖೆ ಮೂಲಗಳು ನೀಡಿರುವ ಸದ್ಯದ ಮಾಹಿತಿ ಪ್ರಕಾರ ಶೀಘ್ರದಲ್ಲೇ ಮುಂಗಾರು ದುರ್ಬಲವಾಗುವ ಸಾಧ್ಯತೆ ಕಾಣಿಸುತ್ತಿದ್ದು, ನಂತರ ಮಳೆಯ ಅಬ್ಬರ ಇಳಿಮುಖವಾಗಲಿದೆ ಎನ್ನಲಾಗಿದೆ.

ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಮುಂದಿನ ಮೂರ್ನಾಲ್ಕು ದಿನ ಮಳೆ ಹೀಗೇ ಮುಂದುವರೆಯುವ ಸಾಧ್ಯತೆಯಿದೆ. ಉಳಿದೆಕಡೆ ಮೋಡ ಕವಿದ ವಾತಾವರಣವಿರಲಿದ್ದು, ತುಂತುರು ಮಳೆಯಾಗಲಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮುಂದಿನ 2 ದಿನ ಹಗುರ ಮಳೆಯಿಂದ ಸಾಧಾರಣ ಪ್ರಮಾಣದ ಮಳೆಯಾಗಲಿದ್ದು ಗರಿಷ್ಠ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್ ಪಾಟೀಲ್ ಮಾಹಿತಿ ನೀಡಿದ್ದಾರೆ.

ದಕ್ಷಿಣ ಭಾರತದ ಚಿರಾಪುಂಜಿ ಎಂದೇ ಗುರುತಿಸಿಕೊಂಡಿದ್ದ ಆಗುಂಬೆಯಲ್ಲಿ ಕಳೆದೆರೆಡು ದಿನಗಳಿಂದ ಆಗಾಗ ಸೂರ್ಯ ದರ್ಶನವಾಗುತ್ತಿದೆಯಾದರೂ ಕೆಲವೇ ಕ್ಷಣಗಳಲ್ಲಿ ದಟ್ಟ ಮೋಡ ಕವಿದು ಭಾರೀ ಮಳೆ ಸುರಿಯುತ್ತಿದೆ. ಈ ಬಾರಿ ಮೇ ತಿಂಗಳಿನಿಂದಲೂ ಮಳೆಯ ವಾತಾವರಣವೇ ಆವರಿಸಿಕೊಂಡಂತೆ ಆಗಿರುವುದರಿಂದ ಇದು ಮಲೆನಾಡು ಭಾಗದ ಅಡಿಕೆ ಬೆಳೆಗಾರರಿಗೆ ಭಾರೀ ತಲೆನೋವು ತರಿಸಿದ್ದು, ಈಗಾಗಲೇ ಹೆಚ್ಚಿನ ತೋಟಗಳಲ್ಲಿ ಕೊಳೆರೋಗ ಕಾಣಿಸಿಕೊಂಡಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮತ್ತು ಹೊಸನಗರ ತಾಲ್ಲೂಕಿನಾದ್ಯಂತ ಮಳೆ ಮುಂದುವರೆದಿದೆ. ಭಾರೀ ಮಳೆಯ ಕಾರಣ ಲಿಂಗನಮಕ್ಕಿ ಮತ್ತು ಭದ್ರಾ ಜಲಾಶಯಗಳ ನೀರಿನ ಮಟ್ಟ ಹೆಚ್ಚಾಗಿದ್ದು, ಗುರುವಾರ ಮುಂಜಾನೆಯಿಂದ ತುಂಗಾ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ.

ಚಿಕ್ಕಮಗಳೂರಿನ ಕೊಪ್ಪ, ಎನ್.ಆರ್ ಪುರ, ಶೃಂಗೇರಿ ಹಾಗೂ ಮೂಡಿಗೆರೆ ತಾಲೂಕಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರ, ಚಾರ್ಮಾಡಿ ಘಾಟಿ, ಬಣಕಲ್, ಬಾಳೆಹೊನ್ನೂರು ಭಾಗದಲ್ಲಿ ಸುರಿಯುತ್ತಿರುವ ಭೀಕರ ಮಳೆ ಹಾಗೂ ಅದರೊಟ್ಟಿಗೆ ಬೀಸುತ್ತಿರುವ ಭಾರೀ ಗಾಳಿಯಿಂದ ಜನ ಕಂಗಾಲಾಗಿದ್ದಾರೆ.

ಇತ್ತ ಉಡುಪಿಯಲ್ಲಿ ಕಳೆದ ಎರಡು ದಿನಗಳಿಂದ ಅಧಿಕ ಪ್ರಮಾಣದ ಮಳೆಯಾಗಿದೆ. ಧಾರಾಕಾರ ಮಳೆಯಿಂದಾಗಿ ಕರಾವಳಿ ಭಾಗದ ರೈತರು ಕೂಡಾ ಕಂಗಾಲಾಗಿ ಹೋಗಿದ್ದಾರೆ. ಕೆಲವೆಡೆ ಇಂದು ಕೂಡಾ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಕರಾವಳಿ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್​ ಘೋಷಣೆ ಆಗಿರುವುದರಿಂದ ನಾಲ್ಕೈದು ದಿನ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಮುನ್ನೆಚ್ಚರಿಕೆ ನೀಡಲಾಗಿದೆ.

ಇದನ್ನೂ ಓದಿ: Karnataka Dams Water Level: ಮಳೆ ಆರ್ಭಟ ಕಡಿಮೆ; ರಾಜ್ಯದ 12 ಪ್ರಮುಖ ಜಲಾಶಯಗಳಲ್ಲಿ ಇಂದಿನ ನೀರಿನ ಮಟ್ಟ

(Karnataka Weather Report Malnad and Coastal Karnataka receiving Heavy Rain Areca nut growers facing problems)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada