ಶಿವಮೊಗ್ಗ, ಸೆ.06: ನಾಳೆಯಿಂದ ಗಣೇಶ ಹಬ್ಬದ ಸಂಭ್ರಮ. ಗಣೇಶ ಹಬ್ಬದ ಹಿಂದೆಯೇ ಈದ್ ಮಿಲಾದ್ ಹಬ್ಬ ಕೂಡ ಇದೆ. ಅದರಲ್ಲೂ ಶಿವಮೊಗ್ಗ(Shivamogga) ಕೋಮುಗಲಭೆಯ ಸೂಕ್ಷ್ಮ ಕೇಂದ್ರವಾಗಿದೆ. ಶಿವಮೊಗ್ಗದ ಹಿಂದೂ ಮಹಾಸಭಾ ಗಣೇಶ ರಾಜ್ಯದಲ್ಲಿ ಗಮನ ಸಳೆದಿದ್ದು, ಈ ಗಣೇಶನ ವಿಸರ್ಜನೆ ಮೆರವಣಿಗೆಯಲ್ಲಿ ಲಕ್ಷಾಂತರ ಜನರು ಸೇರುತ್ತಾರೆ. ಈ ಹಿನ್ನಲೆಯಲ್ಲಿ ಎರಡು ಹಬ್ಬವನ್ನು ಶಾಂತಿಯುತವಾಗಿ ನಡೆಸುವುದು ಈಗ ಪೊಲೀಸರಿಗೆ ದೊಡ್ಡ ಸವಾಲು ಎದುರಾಗಿದೆ.
ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ಅವರು ಕಳೆದ ಒಂದು ತಿಂಗಳಿನಿಂದ ಬಂದೋಬಸ್ತ್ ಮತ್ತು ಶಾಂತಿ ಸಭೆಗಳ ಮೂಲಕ ನಿರಂತರವಾಗಿ ಕಾರ್ಯಪ್ರವೃತ್ತರಾಗಿದ್ದಾರೆ. ಶಿವಮೊಗ್ಗ, ಭದ್ರಾವತಿ, ಸಾಗರ, ಶಿಕಾರಿಪುರ ಸೇರಿದಂತೆ ಜಿಲ್ಲೆಯ ವಿವಿಧ ಭಾಗದಲ್ಲಿ ಹಿಂದೂಮಹಾಸಭಾ ಗಣೇಶನ ವಿಸರ್ಜನೆಗಳಿವೆ. ಈ ಎಲ್ಲ ಗಣೇಶ ವಿಸರ್ಜನೆ ಮೆರವಣಿಗೆಯು ಶಾಂತಿಯುತವಾಗಿ ನಡೆಯಬೇಕಿದೆ. ಈ ಹಿನ್ನಲೆಯಲ್ಲಿ ಯಾವುದೇ ಪ್ರಚೋದನೆಕಾರಿ ಫ್ಲೇಕ್ಸ್, ಬ್ಯಾನರ್ ಹಾಕದಂತೆ ಈಗಾಗಲೇ ಶಿವಮೊಗ್ಗ ಡಿಸಿ ಗುರುದತ್ತ ಹೆಗಡೆ ಆದೇಶದ ಮಾಡಿದ್ದಾರೆ. ಈ ನಡುವೆ ಶಿವಮೊಗ್ಗ ನಗರದ ಸೂಕ್ಷ್ಮ ಪ್ರದೇಶದಲ್ಲಿ ಇಂದು ಪೊಲೀಸರ ಪಥಸಂಚಲನ ನಡೆಯಿತು. ಪೊಲೀಸ್ ಇಲಾಖೆಗೆ ಆರ್ಎಎಫ್ ತುಕಡಿಯು ಸಾಥ್ ನೀಡಿತು.
ಇದನ್ನೂ ಓದಿ: ಗಣಪತಿ ಮೂರ್ತಿ ತಯಾರಿಸುತ್ತಿರುವ ದಿವ್ಯಾಂಗ ವ್ಯಕ್ತಿ; ವಿಡಿಯೋ ಇಲ್ಲಿದೆ ನೋಡಿ
ಕಳೆದ ವರ್ಷ ರಾಗಿಗುಡ್ಡದಲ್ಲಿ ಪ್ರಚೋದನಾಕಾರಿ ಫ್ಲೇಕ್ಸ್ ಮತ್ತು ಕಟೌಟ್ ವಿವಾದ ಶುರುವಾಗಿತ್ತು. ಇದು ಬಳಿಕ ಎರಡು ಕೋಮಿನ ನಡುವೆ ಹಿಂಸಾರೂಪ ಪಡೆದುಕೊಂಡಿತ್ತು. 15 ದಿನಗಳ ರಾಗಿಗುಡ್ಡದಲ್ಲಿ 144 ಸೆಕ್ಷನ್ ಜಾರಿ ಕೂಡ ಮಾಡಲಾಗಿತ್ತು. ಎಲ್ಲೆಂದರಲ್ಲಿ ಕಲ್ಲು ತೂರಾಟ, ಲಾಠಿ ಚಾರ್ಜ್, ಮನೆ ಮೇಲೆ ಕಲ್ಲುತೂರಾಟ ಸೇರಿದಂತೆ ಅನೇಕ ಹಿಂಸಾರೂಪದ ಘಟನೆಗಳು ನಡೆದಿದ್ದವು. ಈ ವರ್ಷ ಶಾಂತಿಯುತವಾಗಿ ಹಬ್ಬದಾಚರಣೆ ಆಗಬೇಕಿದೆ. ಈ ಹಿನ್ನಲೆಯಲ್ಲಿ ಎರಡು ಕೋಮಿನ ಮುಖಂಡರನ್ನು ಸೇರಿಸಿ ಶಾಂತಿ ಸಭೆಗಳು ನಿರಂತರವಾಗಿ ಶಿವಮೊಗ್ಗದಲ್ಲಿ ನಡೆದಿವೆ.
ಈ ನಡುವೆ ಶಿವಮೊಗ್ಗದ ಕೋಟೆ ಭೀಮೇಶ್ವರನ ದೇಗುಲ ಆವರಣದಲ್ಲಿ ಹಿಂದೂ ಮಹಾಸಭಾ ಗಣೇಶನ ಪ್ರತಿಷ್ಟಾಪನೆಗೆ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ರಾಮಣ್ಣ ಶ್ರೇಷ್ಠಿ ಪಾರ್ಕ್, ಗಾಂಧಿ ಬಜಾರ್, ಶಿವಪ್ಪನಾಯಕ ವೃತ್ತ, ನೆಹರು ರಸ್ತೆ ಸೇರಿದಂತೆ ನಗರದಲ್ಲಿ ಅದ್ಧೂರಿ ಅಲಂಕಾರ ಮಾಡಲಾಗುತ್ತಿದೆ. ಹಿಂದೂ ಮಹಾಸಭಾ ಗಣೇಶನ ವಿಸರ್ಜನೆ ಮೆರವಣಿಗೆಯು ಈ ವರ್ಷ ಅದ್ಧೂರಿಯಾಗಿ ನಡೆಸುವುದಕ್ಕೆ ಈಗಾಗಲೇ ಹಿಂದೂ ಪರ ಸಂಘಟನೆಗಳು ಎಲ್ಲ ಸಿದ್ಧತೆಯಲ್ಲಿ ತೊಡಗಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ