ಶಿವಮೊಗ್ಗ: ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ನಂತರ ಶಿವಮೊಗ್ಗ ನಗರದ ವಿದ್ಯಮಾನಗಳು ರಾಜ್ಯವ್ಯಾಪಿ ಎಲ್ಲರ ಗಮನ ಸೆಳೆದಿವೆ. ಗಲಭೆ ಮತ್ತು ಕಾನೂನು ಸುವ್ಯವಸ್ಥೆಯ ವಿಚಾರದ ಕಾರಣಕ್ಕೇ ಶಿವಮೊಗ್ಗ ಸುದ್ದಿಯಾದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್ ಅವರ ವರ್ಗಾವಣೆ ಸಾಧ್ಯತೆಯ ಬಗ್ಗೆಯೂ ಚರ್ಚೆಗಳು ಗರಿಗೆದರಿದ್ದವು. ಆದರೆ ಈ ವದಂತಿಯನ್ನು ಸ್ವತಃ ಗೃಹ ಸಚಿವ ಆರಗ ಜ್ಞಾನೇಂದ್ರ ತಳ್ಳಿ ಹಾಕಿದ್ದಾರೆ. ‘ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್ ವರ್ಗಾವಣೆ ವಿಚಾರ ಕೇವಲ ವದಂತಿ ಮಾತ್ರ. ಅವರು ಉತ್ತಮ ಅಧಿಕಾರಿ. ಅವರನ್ನು ವರ್ಗಾವಣೆ ಮಾಡುವ ಉದ್ದೇಶ ಇಲ್ಲ. ಆದರೆ ಶಿವಮೊಗ್ಗ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಗೆ ಸರ್ಜರಿ ನಡೆಸುತ್ತೇವೆ ಎಂದರು. ಶಿವಮೊಗ್ಗವನ್ನು ರೌಡಿಗಳ ಬ್ರೀಡಿಂಗ್ ಸೆಂಟರ್ ಎಂದು ಕರೆಯುತ್ತಿದ್ದಾರೆ. ಇದರಿಂದಾಗಿ ಶಿವಮೊಗ್ಗದವರಾದ ನಾವು ತಲೆ ತಗ್ಗಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಈ ಘಟನೆಯಲ್ಲಿ ಪೊಲೀಸ್ ಇಲಾಖೆಯ ವೈಫಲ್ಯ ಕೂಡ ಇದೆ. ಕೆಟ್ಟ ಶಕ್ತಿಗಳ ಜೊತೆ ಕೈಜೋಡಿಸಿರುವ ಪೊಲೀಸರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಈಗಾಗಲೇ ಅಂಥ ವಿಚಾರದಲ್ಲಿ ಪೊಲೀಸ್ ಅಧಿಕಾರಿಗಳ ವಿರುದ್ಧ ವಿಚಾರಣೆ ಆರಂಭವಾಗಿದೆ. ಹರ್ಷ ಸಾವು ವ್ಯರ್ಥವಾಗಲು ನಾವು ಬಿಡುವುದಿಲ್ಲ. ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ನೇಮಿಸಿ ವಿಚಾರಣೆ ನಡೆಸುತ್ತೇವೆ. ನ್ಯಾಯಾಲಯದಲ್ಲಿ ವಿಚಾರಣೆ ಶೀಘ್ರಗತಿಯಲ್ಲಿ ನಡೆಯುವಂತೆ ನೋಡಿಕೊಳ್ಳುತ್ತೇವೆ. ಆದಷ್ಟು ಬೇಗ ಹಂತಕರಿಗೆ ಶಿಕ್ಷೆಯಾಗಲಿದೆ ಎಂದು ಭರವಸೆ ನೀಡಿದರು. ಶಿವಮೊಗ್ಗದ ಸೀಗೆಹಟ್ಟಿ ಬಡಾವಣೆಯಲ್ಲಿರುವ ಬಜರಂಗದಳ ಕಾರ್ಯಕರ್ತ ಹರ್ಷ ಅವರ ಮನೆಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ ನೀಡಿ, ಪೋಷಕರಿಗೆ ಸಾಂತ್ವನ ಹೇಳಿದರು.
ನ್ಯಾಯಾಲಯಕ್ಕೆ ಆರೋಪಿಗಳು ಹಾಜರು
ಬಜರಂಗದಳ ಕಾರ್ಯಕರ್ತರ ಹರ್ಷಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳಾದ ಜಿಲಾನ್ ಮತ್ತು ಫರಾತ್ ಅವರನ್ನು ಪೊಲೀಸರು ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಇಬ್ಬರಿಗೂ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಹರ್ಷ ಕೊಲೆ ಪ್ರಕರಣದ ತನಿಖೆಗೆಂದು ರಚಿಸಿರುವ ವಿಶೇಷ ತಂಡವು ಈವರೆಗೆ ಒಟ್ಟು 8 ಜನರನ್ನು ಬಂಧಿಸಿದೆ. ಎಲ್ಲ ಆರೋಪಿಗಳೂ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿದ್ದಾರೆ. ಆರೋಪಿಗಳಾದ ಖಾಸಿಫ್, ನದೀಂ, ರಿಹಾನ್, ಆಸೀಫ್, ಅಬ್ದುಲ್ ಅಫಾನ್, ನಿಹಾನ್ ಈಗ ಜೈಲಿನಲ್ಲಿದ್ದಾರೆ.
ಇದನ್ನೂ ಓದಿ: Harsha Murder: ಹರ್ಷ ಕುಟುಂಬಕ್ಕೆ ಅಕ್ಷರದಲ್ಲಿ 5 ಲಕ್ಷ, ಅಂಕಿಯಲ್ಲಿ 50,000 ಅಂತ ಬರೆದು ಚೆಕ್ ಕೊಟ್ಟ ಶಾಸಕ ಯತ್ನಾಳ್!
ಇದನ್ನೂ ಓದಿ: Shivamogga Violence Live: ಸದ್ಗತಿ ಕೋರಿ ಹರ್ಷ ಅಸ್ಥಿ ವಿಸರ್ಜಿಸಿದ ಪ್ರಮೋದ್ ಮುತಾಲಿಕ್ ಹಾಗೂ ಕಾಳಿಸ್ವಾಮಿ