HR Keshavamurthy: ಗಮಕ ಗಂಧರ್ವ ಪದ್ಮಶ್ರೀ ಪುರಸ್ಕೃತ ಹೆಚ್ ಆರ್ ಕೇಶವಮೂರ್ತಿ ವಿಧಿವಶ
ಗಮಕ ಗಂಧರ್ವ ಪದ್ಮಶ್ರೀ ಪುರಸ್ಕೃತ ಹೆಚ್. ಆರ್. ಕೇಶವಮೂರ್ತಿ ನಿಧನರಾಗಿದ್ದಾರೆ.
ಶಿವಮೊಗ್ಗ: ಗಮಕ ಗಂಧರ್ವ ಪದ್ಮಶ್ರೀ ಪುರಸ್ಕೃತ ಹೆಚ್. ಆರ್. ಕೇಶವಮೂರ್ತಿ (HR Keshava Murthy) (89) ವಿಧಿವಶರಾಗಿದ್ದಾರೆ. ಶಿವಮೊಗ್ಗ (Shivamogga) ಸಮೀಪದ ಹೊಸಹಳ್ಳಿ ಗ್ರಾಮದ ಹೆಚ್. ಆರ್. ಕೇಶವಮೂರ್ತಿ ಅವರು ಮೂರುದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಈ ಸಂಬಂಧ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ಇಂದು (ಡಿ.21) ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಗಮಕ ಕಲೆಗೆ ದೇಶದಲ್ಲೇ ಮೊದಲ ಬಾರಿಗೆ ಪದ್ಮಶ್ರೀ ಪುರಸ್ಕಾರಗೊಂಡ ಕೀರ್ತಿ ಹೆಚ್. ಆರ್. ಕೇಶವಮೂರ್ತಿ ಅವರಿಗೆ ಸಲ್ಲುತ್ತದೆ. ಹೆಚ್. ಆರ್. ಕೇಶವಮೂರ್ತಿ ಅವರಿಗೆ ಕೇಂದ್ರ ಸರ್ಕಾರ 2022ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು.
ಹೆಚ್.ಆರ್.ಕೇಶವಮೂರ್ತಿ ಅವರದು ಶಿವಮೊಗ್ಗ ಸಮೀಪದ ಮತ್ತೂರು ಹೊಸಹಳ್ಳಿ. ರಾಮಸ್ವಾಮಿ ಶಾಸ್ತ್ರಿ–ಲಕ್ಷ್ಮೀ ದೇವಮ್ಮ ದಂಪತಿ ಪುತ್ರ. 22 ಫೆಬ್ರವರಿ 1934ರಲ್ಲಿ ಜನಿಸಿದ್ದ ಅವರು ಬಾಲ್ಯದಿಂದಲೇ ಗಮಕ ಕಲೆ ಕರಗತ ಮಾಡಿಕೊಂಡಿದ್ದರು. ತಂದೆ, ತಾಯಿ ರಾಗವಾಗಿ ಹಾಡುತ್ತಿದ್ದ ಪುರಾಣಗಳಿಂದ ಉತ್ತೇಜಿತರಾದ ಅವರು 16ನೇ ವಯಸ್ಸಿನಲ್ಲೇ ಗ್ರಾಮದ ವೆಂಕಟೇಶಯ್ಯ ಅವರ ಬಳಿ ಗಮಕ ವಾಚನ ಅಧ್ಯಯನ ಆರಂಭಿಸಿದ್ದರು. ರಾಮಾಯಣ, ಮಹಾಭಾರತ, ಕನ್ನಡ ಹಾಗೂ ಸಂಸ್ಕೃತದ ಕಾವ್ಯಗಳನ್ನು ಹಲವು ರಾಗಗಳಲ್ಲಿ ವಾಚನ ಮಾಡುವುದನ್ನು ರೂಢಿಸಿಕೊಂಡರು. 100ಕ್ಕೂ ಹೆಚ್ಚು ವಿಭಿನ್ನ ರಾಗಗಳಲ್ಲಿ ವಾಚನ ಮಾಡುವ ಮೂಲಕ ಶತರಾಗಿ ಎಂಬ ಬಿರುದಿಗೂ ಪಾತ್ರರಾಗಿದ್ದರು.
ರಾಜ್ಯ, ದೇಶದ ಹಲವೆಡೆ ನಡೆದ ಕಾರ್ಯಕ್ರಮಗಳಲ್ಲಿ ಗಮಕ ವಾಚನದ ಮೂಲಕ ಗಮನ ಸೆಳೆದಿರುವ ಅವರ ಸಾಧನೆಗೆ ಕುಮಾರವ್ಯಾಸ, ರಾಜ್ಯೋತ್ಸವ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ. ಖ್ಯಾತ ಗಮಕ ಕಲಾವಿದ ಹೆಚ್.ಆರ್. ಕೇಶವಮೂರ್ತಿ ಅವರು ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಹೆಚ್.ಆರ್.ಕೇಶವಮೂರ್ತಿ ಅವರು ಗಮಕ ಕಲೆಗೆ ತಮ್ಮ ಜೀವನವನ್ನೇ ಮುಡಿಪಾಗಿರಿಸಿದ್ದರು. ನೂರಾರು ವಿದ್ಯಾರ್ಥಿಗಳಿಗೆ ಗಮಕ ಕಲೆಯನ್ನು ಉಚಿತವಾಗಿ ಕಲಿಸುವ ಮೂಲಕ ಮಾದರಿಯಾಗಿದ್ದರು. ಅವರ ಶೈಲಿಯು ಕೇಶವಮೂರ್ತಿ ಘರಾನಾ ಎಂದೇ ಖ್ಯಾತವಾಗಿದ್ದು, ಇದೀಗ ಪದ್ಮಶ್ರೀ ಪ್ರಶಸ್ತಿಯನ್ನು ಪಡೆಯುವ ಮೂಲಕ ಜಿಲ್ಲೆಗೆ ಮಾತ್ರವಲ್ಲದೇ, ಇಡೀ ರಾಜ್ಯಕ್ಕೆ ಖ್ಯಾತಿ ತಂದಿದ್ದರು.
ಹೆಚ್.ಆರ್.ಕೇಶವಮೂರ್ತಿ ಅವರು ಹೆಗ್ಗೋಡು, ಮತ್ತೂರು, ಶಿವಮೊಗ್ಗ, ಮೈಸೂರು, ಬೆಂಗಳೂರು, ಗದಗ ಹಾಗೂ ಹೊರ ರಾಜ್ಯಗಳು ಸೇರಿದಂತೆ ಅನೇಕ ಕಡೆ ಸುಮಾರು ನಲವತ್ತಕ್ಕೂ ಹೆಚ್ಚು ವರ್ಷಗಳಿಂದ ನಿರಂತರವಾಗಿ ಗಮಕ ಕಾರ್ಯಕ್ರಮಗಳನ್ನು ನೀಡುತ್ತ ಬಂದಿದ್ದರು. ಹಿರಿಯ ವ್ಯಾಖ್ಯಾನಕಾರರಾಗಿದ್ದ ವ್ಯಾಖ್ಯಾನ ವಾಚಸ್ಪತಿ ಮತ್ತೂರು ಲಕ್ಷ್ಮೀಕೇಶವ ಶಾಸ್ತ್ರಿಯವರ ವ್ಯಾಖ್ಯಾನದೊಂದಿಗೆ ಸಮಗ್ರ ಕುಮಾರವ್ಯಾಸ ಭಾರತದ 135 ಧ್ವನಿ ಸುರುಳಿಗಳು, ಮಾರ್ಕಂಡೇಯ ಅವಧಾನಿ ಅವರ ವ್ಯಾಖ್ಯಾನದೊಂದಿಗೆ 35 ಧ್ವನಿ ಸುರುಳಿಗಳಲ್ಲಿ ಜೈಮಿನಿ ಭಾರತ ಹೊರ ಬಂದಿದೆ. ಡಾ. ಮತ್ತೂರು ಕೃಷ್ಣಮೂರ್ತಿ ಮತ್ತು ಕೇಶವಮೂರ್ತಿಗಳ ಜೋಡಿ ಜಗತ್ಪ್ರಸಿದ್ಧವಾಗಿದೆ. ಇವರಿಬ್ಬರ ವಾಚನ ವ್ಯಾಖ್ಯಾನದಲ್ಲಿ ಕುಮಾರವ್ಯಾಸ ಭಾರತದ 200 ಕ್ಯಾಸೆಟ್ಟುಗಳು ಬಿಡುಗಡೆಯಾಗಿವೆ.
ನಾಳೆ ಹೊಸಹಳ್ಳಿ ಗ್ರಾಮದ ಹೊರ ವಲಯದಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ಕೇಶವಮೂರ್ತಿ ಅವರ ಅಂತ್ಯಕ್ರಿಯೆ ನಡೆಯಲಿದೆ.
ಪದ್ಮಶ್ರೀ ಪ್ರಶಸ್ತಿ ಪುರಸ್ಕøತ ಹೆಚ್ ಆರ್ ಕೇಶವಮೂರ್ತಿಯವರ ನಿಧನಕ್ಕೆ ತೀವ್ರ ಸಂತಾಪ*
ಮಾಜಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಸಂತಾಪ
ಶಿವಮೊಗ್ಗ ಬಳಿಯ ಮತ್ತೂರು ಹೊಸಳ್ಳಿಯ ಖ್ಯಾತ ಗಮಕ ಕಲಾವಿದರಾದ ಪದ್ಮಶ್ರೀ ಶ್ರೀ ಹೆಚ್.ಆರ್.ಕೇಶವಮೂರ್ತಿ ಅವರು ನಿಧನರಾದ ಸುದ್ದಿ ಅತ್ಯಂತ ಆಘಾತ ತಂದಿದೆ. ಅವರ ನಿಧನದಿಂದ ಒಬ್ಬ ಹಿರಿಯ ವಿದ್ವಾಂಸರನ್ನು ನಾಡು ಕಳೆದುಕೊಂಡಿದೆ. ಅವರ ಆತ್ಮಕ್ಕೆ ಸದ್ಗತಿ ಪ್ರಾರ್ಥಿಸುತ್ತಾ, ಕುಟುಂಬದವರಲ್ಲಿ ಸಂತಾಪಗಳನ್ನು ಕೋರುತ್ತೇನೆ. ಓಂ ಶಾಂತಿ
— B.S.Yediyurappa (@BSYBJP) December 21, 2022
89 ವರ್ಷದ ಕೇಶವಮೂರ್ತಿಗಳು ಗಮಕ ಕ್ಷೇತ್ರದಲ್ಲಿ ಪರಿಣಿತರಾಗಿದ್ದು ತಮ್ಮ ಜೀವನವನ್ನು ಗಮಕ ಕಲೆಗಾಗಿಯೇ ಮುಡಿಪಾಗಿರಿಸಿದ್ದರು. ಶ್ರೀಯುತರ ಅಗಲಿಕೆಯು ತೀವ್ರ ನೋವನ್ನು ತಂದಿದ್ದು, ಭಗವಂತ ಕುಟುಂಬ ಮತ್ತು ಸಮಾಜಕ್ಕೆ ಈ ನೋವು ಭರಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸುತ್ತೇವೆ ಎಂದು ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಮತ್ತು ಸಂಸದರಾದ ಬಿ.ವೈ.ರಾಘವೇಂದ್ರ ಇವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:10 pm, Wed, 21 December 22