ಸಕ್ರೆಬೈಲಿನಲ್ಲಿ ಒಡೆಯನಿಲ್ಲದೆ ‘ಭೀಷ್ಮ’ ಆನೆ ಅನಾಥ: ಹೆತ್ತ ಮಗನಂತೆ ಸಾಕಿ ಸಲಹುತ್ತಿದ್ದ ಮಾವುತ ಸಿದ್ದಿಕ್ ಪಾಷಾ ಇನ್ನಿಲ್ಲ

ಸಕ್ರೆಬೈಲು ಆನೆ ಬಿಡಾರದ ದಕ್ಷ ಮಾವುತ ಸಿದ್ದಿಕ್ ಪಾಷಾ ಅವರ ಅಕಾಲಿಕ ನಿಧನವು ಇಡೀ ಬಿಡಾರದಲ್ಲಿ ಸೂತಕದ ಛಾಯೆ ಮೂಡಿಸಿದೆ. 16 ವರ್ಷಗಳಿಂದ ಕಾಡಾನೆಗಳನ್ನು ಪಳಗಿಸಿ, ಆರೈಕೆ ಮಾಡುತ್ತಿದ್ದ ಸಿದ್ದಿಕ್, ವಿಶೇಷವಾಗಿ ಬಲಿಷ್ಠ ಭೀಷ್ಮ ಆನೆಯ ಜವಾಬ್ದಾರಿ ಹೊತ್ತಿದ್ದರು. ಮೆದುಳು ಜ್ವರದಿಂದ ನಿಧನರಾದ ಅವರ ಅಗಲಿಕೆಯಿಂದಾಗಿ ಆನೆಗಳು ಹಾಗೂ ಸಿಬ್ಬಂದಿ ದುಃಖದಲ್ಲಿ ಮುಳುಗಿದ್ದಾರೆ, ಮಾವುತ-ಆನೆಗಳ ನಡುವಿನ ಪವಿತ್ರ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ.

ಸಕ್ರೆಬೈಲಿನಲ್ಲಿ ಒಡೆಯನಿಲ್ಲದೆ ‘ಭೀಷ್ಮ’ ಆನೆ ಅನಾಥ: ಹೆತ್ತ ಮಗನಂತೆ ಸಾಕಿ ಸಲಹುತ್ತಿದ್ದ ಮಾವುತ ಸಿದ್ದಿಕ್ ಪಾಷಾ ಇನ್ನಿಲ್ಲ
‘ಭೀಷ್ಮ’ ಆನೆ
Edited By:

Updated on: Jun 12, 2026 | 6:58 PM

ಶಿವಮೊಗ್ಗ, ಜೂ.12: ರಾಜ್ಯದ ಅತ್ಯಂತ ಪ್ರಸಿದ್ಧ ಪ್ರವಾಸಿ ತಾಣ ಹಾಗೂ ಪ್ರಕೃತಿ ಪ್ರೇಮಿಗಳ ಸ್ವರ್ಗ ಎಂದೇ ಹೆಸರಾಗಿರುವ ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರದಲ್ಲಿ ಸದ್ಯ ಸೂತಕದ ಛಾಯೆ ಆವರಿಸಿದೆ. ಕಳೆದ 16 ವರ್ಷಗಳಿಂದ ಕಾಡಾನೆಗಳನ್ನು ಅತ್ಯಂತ ಪ್ರೀತಿಯಿಂದ ಪಳಗಿಸಿ, ಸಲಹುತ್ತಿದ್ದ ಬಿಡಾರದ ದಕ್ಷ ಮಾವುತ ಸಿದ್ದಿಕ್ ಪಾಷಾ (39) ಅವರು ಅನಾರೋಗ್ಯದಿಂದ ಅಕಾಲಿಕ ನಿಧನ ಹೊಂದಿದ್ದಾರೆ. ನೆಚ್ಚಿನ ಮಾವುತನ ಅಗಲಿಕೆಯಿಂದಾಗಿ ಇಡೀ ಆನೆ ಬಿಡಾರದಲ್ಲಿ ಸದ್ಯ ಮೌನ ನೆಲೆಸಿದೆ. ಸುತ್ತಲೂ ದಟ್ಟ ಅರಣ್ಯ, ತುಂಗಾ ನದಿಯ ಹಿನ್ನೀರಿನ ಪ್ರದೇಶದ ನಡುವೆ ಇರುವ ಸಕ್ರೆಬೈಲು ಬಿಡಾರದಲ್ಲಿ ಸದ್ಯ 22ಕ್ಕೂ ಹೆಚ್ಚು ಆನೆಗಳಿವೆ. ಇಲ್ಲಿನ ಬಲಿಷ್ಠ ‘ಭೀಷ್ಮ’ ಆನೆಯ ಸಂಪೂರ್ಣ ಜವಾಬ್ದಾರಿಯನ್ನು ಸಿದ್ದಿಕ್ ಪಾಷಾ ಅವರೇ ಹೊತ್ತಿದ್ದರು. ಕಳೆದ ಕೆಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಸಿದ್ದಿಕ್ ಅವರಿಗೆ ಮೆದುಳು ಜ್ವರ (Brain Fever) ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ಶಿವಮೊಗ್ಗದಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗಮಧ್ಯದಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ.

ಆನೆ ಬಿಡಾರದಲ್ಲಿ ಮಾವುತ ಮತ್ತು ಆನೆಗಳ ನಡುವಿನ ಸಂಬಂಧ ಕೇವಲ ಪ್ರಾಣಿ ಮತ್ತು ಮನುಷ್ಯನ ಸಂಬಂಧವಾಗಿರದೆ, ಒಂದು ತಾಯಿ ಮತ್ತು ಮಗುವಿನ ಪವಿತ್ರ ಒಡನಾಟದಂತಿರುತ್ತದೆ. ಪ್ರತಿದಿನ ಬೆಳಗ್ಗೆ ಆನೆಯನ್ನು ಕಾಡಿನಿಂದ ಬಿಡಾರಕ್ಕೆ ಕರೆತಂದು ಆಹಾರ, ಆರೈಕೆ ನೀಡುವುದು, ನಂತರ ಪ್ರವಾಸಿಗರ ವೀಕ್ಷಣೆಗೆ ವ್ಯವಸ್ಥೆ ಮಾಡುವುದು, ಮಧ್ಯಾಹ್ನ ಮತ್ತೆ ಕಾಡಿಗೆ ಬಿಟ್ಟು ಬರುವುದು ಸೇರಿದಂತೆ ಸೂರ್ಯ ಮುಳುಗುವವರೆಗೂ ಮಾವುತರು ಆನೆಗಳ ಜೊತೆಯಲ್ಲೇ ಸಮಯ ಕಳೆಯುತ್ತಾರೆ.

ಇದನ್ನೂ ಓದಿ: ಕೊಲ್ಲೂರು ಮೂಕಾಂಬಿಕಾ ದೇವಿಗೆ ಬೆಳ್ಳಿಯ ಖಡ್ಗ ಸಮರ್ಪಿಸಿದ ತಮಿಳುನಾಡು ಸಿಎಂ ವಿಜಯ್

ಮೃತ ಸಿದ್ದಿಕ್ ಪಾಷಾ ಅವರು ಆನೆಗಳ ಜೊತೆ ವಿಶೇಷ ಬಾಂಧವ್ಯ ಇಟ್ಟುಕೊಂಡಿದ್ದು, ಈಗಾಗಲೇ ಬಿಡಾರದ ಅನೇಕ ಕಾಡಾನೆಗಳನ್ನು ಅತ್ಯಂತ ಮಮತೆಯಿಂದ ಪಳಗಿಸಿ ಹೆಸರುವಾಸಿಯಾಗಿದ್ದರು. ಆನೆಗಳ ಮಾತುಗಳನ್ನು ಕಣ್ಣ ಸನ್ನಯಿಂದಲ್ಲೇ ಎಲ್ಲವನ್ನೂ ಅರ್ಥ ಮಾಡಿಕೊಳ್ಳುತ್ತಿದ್ದ ಯಜಮಾನ ಸಿದ್ದಿಕ್ ಇನ್ನಿಲ್ಲ ಎಂಬ ಕಹಿ ಸತ್ಯ ಬಿಡಾರದ ಸಹೋದ್ಯೋಗಿ ಮಾವುತರಲ್ಲಿ ಭಾರೀ ಆಘಾತ ಮೂಡಿಸಿದೆ. ಇತ್ತ ಸಿದ್ದಿಕ್ ಪ್ರೀತಿಯಿಂದ ಸಾಕಿದ್ದ ಭೀಷ್ಮ ಆನೆಯೂ ತನ್ನ ಒಡೆಯನನ್ನು ಕಳೆದುಕೊಂಡು ಅನಾಥವಾಗಿದೆ. ಭೀಷ್ಮ ಆನೆ ಇನ್ನು ಮುಂದೆ ಹೊಸ ಮಾವುತನ ಜೊತೆ ಹೊಂದಾಣಿಕೆ ಆಗಬೇಕಾದರೆ ಸಾಕಷ್ಟು ದಿನಗಳು ಬೇಕಾಗುತ್ತವೆ ಎಂದು ಬಿಡಾರದ ಸಿಬ್ಬಂದಿ ಕಣ್ಣೀರಿಡುತ್ತಿದ್ದಾರೆ. ಸಿದ್ದಿಕ್ ಅವರ ನಿಧನಕ್ಕೆ ಇಡೀ ಸಕ್ರೆಬೈಲು ಆನೆ ಬಿಡಾರದ ಸಿಬ್ಬಂದಿಗಳ ಕಂಬನಿ ಮಿಡಿದಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Basavaraj Yaraganavi
Follow Us