ನಾಳೆ ಶಿವಮೊಗ್ಗದಲ್ಲಿ ಯುವನಿಧಿ ಯೋಜನೆಗೆ ಚಾಲನೆ, ಶಾಲಾ ಸಮಯ ಬದಲಾವಣೆ

| Updated By: ರಮೇಶ್ ಬಿ. ಜವಳಗೇರಾ

Updated on: Jan 11, 2024 | 5:36 PM

Yuva Nidhi Scheme: ಕಾಂಗ್ರೆಸ್ ಸರ್ಕಾರದ ಮತ್ತೊಂದು ಗ್ಯಾರಂಟಿ ಯೋಜನೆಯಾದ ಯುವನಿಧಿಗೆ ಚಾಲನೆ ಕಾರ್ಯಕ್ರಮಕ್ಕೆ ಶಿವಮೊಗ್ಗ ಸಜ್ಜಾಗಿದೆ. ಸಿಎಂ‌ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವಾರು ಭಾಗಿಯಾಗಲಿದ್ದಾರೆ. ಅಲ್ಲದೇ 1 ಲಕ್ಷಕ್ಕೂ ಹೆಚ್ಚಿನ ಫಲಾನುಭವಿಗಳ ಭಾಗಿಯಾಗಿದ್ದಾರೆ.ಹೀಗಾಗಿ ನಾಳೆ(ಜನವರಿ 12) ಶಿವಮೊಗ್ಗ ನಗರದ ಶಾಲಾ ಸಮಯವನ್ನು ಬದಲಾವಣೆ ಮಾಡಲಾಗಿದೆ.

ನಾಳೆ ಶಿವಮೊಗ್ಗದಲ್ಲಿ ಯುವನಿಧಿ ಯೋಜನೆಗೆ ಚಾಲನೆ, ಶಾಲಾ ಸಮಯ ಬದಲಾವಣೆ
Follow us on

ಶಿವಮೊಗ್ಗ, (ಜನವರಿ 11): ರಾಜ್ಯ ಕಾಂಗ್ರೆಸ್​ ಸರ್ಕಾರದ ಮಹತ್ವಾಕಾಂಕ್ಷೆಯ 5ನೇ ಗ್ಯಾರಂಟಿ (Congress Guarantee Scheme) ಘೋಷಣೆಯಾಗಿರುವ ʼಯುವ ನಿಧಿʼ (Yuva Nidhi Scheme) ಯೋಜನೆಯಡಿ ಫಲಾನುಭವಿಗಳಿಗೆ ನಗದು ವರ್ಗಾವಣೆ ಕಾರ್ಯಕ್ರಮಕ್ಕೆ ಶಿವಮೊಗ್ಗ (Shivamogga) ನಗರ ಸಜ್ಜಾಗಿದೆ. ಸ್ವಾಮಿ ವಿವೇಕಾನಂದ ಜನ್ಮ ದಿನವಾದ ಶುಕ್ರವಾರ (ಜ. 12) ಶಿವಮೊಗ್ಗದ ಫ್ರೀಡಂ ಪಾರ್ಕ್‌ನಲ್ಲಿ ಕಾರ್ಯಕ್ರಮ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರ ಹಾಗೂ ಪ್ರದೇಶದ ಶಾಲಾ ಸಮಯದಲ್ಲಿ ಬದಲಾವಣೆ ಮಾಡಲಾಗಿದ್ದು, ನಾಳೆ ಬೆಳಗ್ಗೆ 9ರಿಂದ ಸಂಜೆ 4 ಗಂಟೆವರೆಗೆ ಶಾಲೆ ನಡೆಸಲು ಬಿಇಒ ಆದೇಶ ಹೊರಡಿಸಿದ್ದಾರೆ.

ಮುಖ್ಯಮಂತ್ರಿಗಳ ಕಾರ್ಯಕ್ರಮ ಹಿನ್ನೆಲೆ ಸಂಚಾರ ದಟ್ಟಣೆ ಹೆಚ್ಚಾಗುವ ಕಾರಣ ಹಲವು ರಸ್ತೆಗಳ ಮಾರ್ಗ‌ ಬದಲಾವಣೆ ಮಾಡಿರುವ ಹಿನ್ನೆಲೆ ಶಾಲಾ ಸಮಯ‌ ಬದಲಾವಣೆ ಮಾಡಲಾಗಿದೆ ಎಂದು ಶಿವಮೊಗ್ಗ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ‌ಬಿಇಒ‌ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: ನಾಳೆ ಶಿವಮೊಗ್ಗದಲ್ಲಿ ಯುವ ನಿಧಿ ಯೋಜನೆಗೆ ಚಾಲನೆ: ಅರ್ಹ ನಿರುದ್ಯೋಗಿ ಡಿಪ್ಲೋಮಾ, ಪದವೀಧರರ ಖಾತೆಗೆ ಬೀಳಲಿದೆ 1500, 3000 ರೂಪಾಯಿ

ಶುಕ್ರವಾರ(ಜನವರಿ 12) ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು, ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿಲಿದ್ದಾರೆ. ಬಳಿಕ ಫಲಾನುಭವಿಗಳಿಗೆ ಮೊದಲ ಕಂತಿನ ಹಣವನ್ನು ಬಿಡುಗಡೆ ಮಾಡಲಾಗುತ್ತದೆ. ಇನ್ನು ಈ ಕಾರ್ಯಕ್ರಮಕ್ಕೆ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಉಡುಪಿ ಹಾಗೂ ಹಾವೇರಿ ಜಿಲ್ಲೆಗಳಿಂದ ಸುಮಾರು 1 ಲಕ್ಷಕ್ಕೂ ಹೆಚ್ಚಿನ ಫಲಾನುಭವಿಗಳು ಹಾಗೂ ಅಷ್ಟೇ ಸಂಖ್ಯೆಯ ಜನರು ಪಾಲ್ಗೊಳ್ಳಲಿದ್ದಾರೆ.

ಇನ್ನು ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಸಚಿವರು, ಕಾಂಗ್ರೆಸ್ ನಾಯಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಹೀಗಾಗಿ ಶಿವಮೊಗ್ಗದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುವ ಸಾಧ್ಯತೆಗಳಿವೆ. ಈ ಕಾರಣಕ್ಕಾಗಿ ಮುಂಜಾಗ್ರತ ಕ್ರಮವಾಗಿ ಕಾರ್ಯಕ್ರಮ ಪ್ರಾರಂಭವಾಗುವುದರೊಳಗೆ ವಿದ್ಯಾರ್ಥಿಗಳು ಶಾಲೆ ತೆರಳಲು ಸಮಯ ಬದಲಾವಣೆ ಮಾಡಲಾಗಿದೆ.

ಸಂಚಾರ ದಟ್ಟಣೆ ಹೆಚ್ಚಾಗುವ ಕಾರಣ ಹಲವು ರಸ್ತೆಗಳ ಮಾರ್ಗ‌ ಬದಲಾವಣೆ ಮಾಡಲಾಗಿದೆ. ಈ ಹಿನ್ನೆಲೆ ಶಾಲಾ ಸಮಯ‌ ಬದಲಾವಣೆ ಮಾಡಲಾಗಿದೆ ಎಂದು ಬಿಇಒ ತಿಳಿಸಿದ್ದಾರೆ. ಹೀಗಾಗಿ ನಾಳೆ ಶಿವಮೊಗ್ಗ ನಗರದಲ್ಲಿ ಶಾಲೆಗಳು 10 ಗಂಟೆ ಬದಲಾಗಿ ಒಂದು ಗಂಟೆ ಮೊದಲೇ ಅಂದರೆ 9 ಗಂಟೆಗೆ ಪ್ರಾರಂಭವಾಗಲಿವೆ. ಇನ್ನು ಸಂಜೆ ಬೇಗ ಶಾಲೆ ಮುಗಿಯಲಿದೆ.

ಕಾರ್ಯಕ್ರಮಕ್ಕೆ ಬರುವವರಿಗೆ ಬಸ್‌ ವ್ಯವಸ್ಥೆ

ಶಿವಮೊಗ್ಗ ಹಾಗೂ ನೆರೆಯ ಜಿಲ್ಲೆಗಳಿಂದ ಕಾರ್ಯಕ್ರಮಕ್ಕೆ ಆಗಮಿಸುವ ಯುವ ವಿದ್ಯಾರ್ಥಿಗಳನ್ನು ಸಮಾರಂಭ ಸ್ಥಳಕ್ಕೆ ಕರೆತರಲು ರಸ್ತೆ ಸಾರಿಗೆ ನಿಗಮ ಮತ್ತು ಖಾಸಗಿ ಒಡೆತನದ ಬಸ್ ಹಾಗೂ ಇತರೆ ವಾಹನಗಳ ಸೌಲಭ್ಯವನ್ನು ಕಲ್ಪಿಸಲಾಗಿದೆ. ಪ್ರತಿ ಬಸ್‌ ಗೆ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗುವುದಲ್ಲದೆ, ಸುರಕ್ಷತೆಯ ದೃಷ್ಟಿಯಿಂದ ಪ್ರತಿ ವಿದ್ಯಾರ್ಥಿಯ ಹೆಸರು ಮತ್ತು ಮೊಬೈಲ್ ನಂಬರ್ ಸಂಗ್ರಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಏನಿದು ಯುವನಿಧಿ ಯೋಜನೆ?

ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳ ಪೈಕಿ ಯುವನಿಧಿ ಯೋಜನೆಯೂ ಒಂದಾಗಿದೆ. ಈಗಾಗಲೇ ನಾಲ್ಕು ಗ್ಯಾರಂಟಿಗಳನ್ನು ಸರ್ಕಾರ ಜಾರಿಗೊಳಿಸಿದೆ. ಇದೀಗ ಐದನೇ ಗ್ಯಾರಂಟಿ ಯುವನಿಧಿ ಜಾರಿಗೊಳಿಸಲಿದೆ. ಈ ಯೋಜನೆಯ ಪ್ರಕಾರ ನಿರುದ್ಯೋಗಿ ಪದವೀಧರ ಹಾಗೂ ಡಿಪ್ಲೊಮಾ ಪದವೀಧರರಿಗೆ ಪ್ರತಿ ತಿಂಗಳು ಭತ್ಯೆ ಸಿಗಲಿದೆ. ಪದವೀಧರರಿಗೆ ಪ್ರತಿ ತಿಂಗಳು 3000 ರೂಪಾಯಿ ನೀಡಿದರೆ, ಡಿಪ್ಲೊಮಾ ಪದವೀಧರರಿಗೆ 1500 ರೂಪಾಯಿ ನೀಡಲಾಗುತ್ತದೆ. ಪದವೀಧರರಿಗೆ ಉದ್ಯೋಗ ಸಿಗುವವರೆಗೆ ಅಥವಾ ಗರಿಷ್ಠ 2 ವರ್ಷದವರೆಗೆ ನೀಡಲಾಗುತ್ತದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ