ಶಿವಮೊಗ್ಗ, ಜೂ.23: ಮಹಿಳೆಗೆ ಮದುವೆ ಆಗುವುದಾಗಿ ನಂಬಿಸಿ ವಂಚಿಸಿದ ಆರೋಪದ ಮೇಲೆ ಶಿವಮೊಗ್ಗ(Shivamogga) ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರುಣ್ ಕುಗ್ವೆ(Arun Kugwe) ಅವರನ್ನು ಶಿವಮೊಗ್ಗ ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸಾಗರದ ಮಹಿಳೆಗೆ ವಂಚಿಸಿದ ಪ್ರಕರಣದಲ್ಲಿ ಈ ಹಿಂದೆ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು.ಆದರೆ, ಕಾರಣಾಂತರದಿಂದ ಕೇಸ್ ದಾಖಲಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಸಂಸ್ರಸ್ತ ಮಹಿಳೆ ಶಿವಮೊಗ್ಗ ಮಹಿಳಾ ಠಾಣೆಗೆ ಬಂದು ದೂರು ನೀಡಿದ್ದರು. ಇದೀಗ ಮಹಿಳಾ ಠಾಣೆ ಪೊಲೀಸ್ ಸಿಪಿಐ ಭರತ್ ಕುಮಾರ್ ನೇತೃತ್ವದಲ್ಲಿ ಸಾಗರದ ನಿವಾಸದಲ್ಲಿ ಅರುಣ್ನನ್ನು ಅರೆಸ್ಟ್ ಮಾಡಲಾಗಿದೆ.
ಇನ್ನು ಈ ಕುರಿತು ನೊಂದ ಯುವತಿ ನ್ಯಾಯಕ್ಕಾಗಿ ಠಾಣೆ ಮೆಟ್ಟಿಲೇರಿದ್ದು, ಆತನ ವಿರುದ್ದ ದೂರು ದಾಖಲಿಸಿದ್ದಳು. ‘ನನ್ನೊಂದಿಗೆ ಮದುವೆ ಆಗುವ ಆಸೆ ತೋರಿಸಿದ ಅರುಣ್ ಕುಗ್ವೆ, ನಾಲ್ಕು ವರ್ಷಗಳಿಂದ ಸಂಬಂಧ ಬೆಳೆಸಿ ತನ್ನೊಂದಿಗೆ ಸಂಪರ್ಕ ಬೆಳೆಸಿದ ನಂತರದ ವಿವಿಧ ಆಮಿಷ ತೋರಿಸಿ ಮದುವೆಯಾಗುತ್ತೇನೆ ಎಂದು ಹೇಳುತ್ತಾ, ಬಲಾತ್ಕಾರ ಮಾಡಿರುತ್ತಾನೆ. ಜೋಗ, ಶಿವಮೊಗ್ಗ ಮತ್ತಿತರ ಕಡೆಗಳಲ್ಲಿ ತನ್ನೊಂದಿಗೆ ಆಮಿಷ ತೋರಿಸಿ ದೈಹಿಕ ಸಂಬಂಧ ಬೆಳೆಸಿರುತ್ತಾನೆ. ಬಲಾತ್ಕಾರವಾಗಿ ವಿಡಿಯೋ ಚಿತ್ರೀಕರಣ, ಫೋಟೋ ತೆಗೆದುಕೊಂಡಿದ್ದಾನೆ.
ಜೊತೆಗೆ ಇತ್ತೀಚೆಗೆ ಬೇರೆ ಹುಡುಗಿಯರೊಂದಿಗೆ ಇದೇ ರೀತಿ ವರ್ತಿಸಿದ್ದು ಕಂಡು ಬಂದಾಗ ಆ ಬಗ್ಗೆ ಕೇಳಿದ್ದಕ್ಕೆ ಜೀವ ಬೆದರಿಕೆ ಒಡ್ಡಿದ್ದು, ಬೇರೊಬ್ಬ ಯುವತಿಯೊಂದಿಗೆ ಮದುವೆ ನಿಶ್ಚಯ ಮಾಡಿಕೊಂಡಿರುತ್ತಾನೆ. ಅದನ್ನ ಪ್ರಶ್ನಿಸಿದ್ದಕ್ಕೆ ಅವನ ಸೋದರ ಗಣೇಶ್ ಎಂಬುವವನು ನನಗೆ ಮತ್ತು ನನ್ನ ಕುಟುಂಬದವರಿಗೆ ಜೀವ ಬೆದರಿಕೆ ಹಾಕಿರುತ್ತಾನೆ ಎಂದು ಯುವತಿ ದೂರು ನೀಡಿದ್ದಾಳೆ.
ಈ ಹಿನ್ನೆಲೆಯಲ್ಲಿ ಅರುಣ್ ಕುಗ್ವೆ ಮತ್ತು ಗಣೇಶ್ ಇಬ್ಬರ ಮೇಲೆ IPC ಸೆಕ್ಷನ್ 354, 376 ಹಾಗೂ 506 ಅಡಿಯಲ್ಲಿ ಪ್ರಕರಣ ದಾಖಲಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:10 pm, Sun, 23 June 24