ಮದುವೆ ಆಗುವುದಾಗಿ ನಂಬಿಸಿ ಮಹಿಳೆಗೆ ವಂಚನೆ: ಶಿವಮೊಗ್ಗ ಬಿಜೆಪಿ ಮುಖಂಡ ಅರೆಸ್ಟ್

ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದಲ್ಲದೆ ಸಂತ್ರಸ್ತೆಯಿಂದಲೇ ನಾಲ್ಕು ಲಕ್ಷ ರೂ. ಪಡೆದು ವಂಚಿಸಿದ ಆರೋಪದಲ್ಲಿ ಶಿವಮೊಗ್ಗ ಜಿಲ್ಲಾ ಬಿಜೆಪಿ ಮುಖಂಡನ ಬಂಧನವಾಗಿದೆ. ಒಂದೆಡೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್​ ಪಾದಯಾತ್ರೆ ನಡೆಸುತ್ತಿರುವ ಮಧ್ಯ ಯಡಿಯೂರಪ್ಪ ತವರು ಜಿಲ್ಲೆಯ ಬಿಜೆಪಿ ಮುಖಂಡನ ಬಂಧನ ಭಾರೀ ಸಂಚಲನಕ್ಕೆ ಕಾರಣವಾಗಿದೆ.

ಮದುವೆ ಆಗುವುದಾಗಿ ನಂಬಿಸಿ ಮಹಿಳೆಗೆ ವಂಚನೆ: ಶಿವಮೊಗ್ಗ ಬಿಜೆಪಿ ಮುಖಂಡ ಅರೆಸ್ಟ್
ಶರತ್ ಕಲ್ಯಾಣಿ
Edited By:

Updated on: Aug 06, 2024 | 3:36 PM

ಶಿವಮೊಗ್ಗ, (ಆಗಸ್ಟ್​ 06): ಮದುವೆಯಾಗುವುದಾಗಿ ನಂಬಿಸಿ ಮಹಿಳೆಗೆ ವಂಚಿಸಿದ ಆರೋಪದ ಮೇಲೆ ಶಿವಮೊಗ್ಗ ಜಿಲ್ಲಾ ಬಿಜೆಪಿ ಮುಖಂಡ ಶರತ್ ಕಲ್ಯಾಣಿ ಎನ್ನುವರನ್ನು ಪೊಲೀಸರು ಬಂಧಿಸಿದ್ದಾರೆ. ಮದುವೆ ಆಗುವುದಾಗಿ ನಂಬಿಸಿ ಮೋಸ ಜೊತೆಗೆ ಸಂತ್ರಸ್ತೆಯಿಂದ 4 ಲಕ್ಷ ರೂ. ಹಣ ಪಡೆದು ಹಿಂದಿರುಗಿಸದೆ ವಂಚಿಸಿರುವ ಆರೋಪದ ಮೇಲೆ ಬಂಧನವಾಗಿದೆ. ಶಿವಮೊಗ್ಗ ಜಿಲ್ಲಾ ಬಿಜೆಪಿ ಸಾಮಾಜಿಕ ಜಾಲತಾಣದ ಪ್ರಮುಖ್ ಆಗಿರುವ ಶರತ್ ವಿರುದ್ಧ ಜುಲೈ 26ರಂದು ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಎಫ್​ಐಆರ್ ದಾಖಲಾಗುತ್ತಿದ್ದಂತೆಯೇ ಶರತ್ ನಾಪತ್ತೆಯಾಗಿದ್ದ. ಇದೀಗ ಶರತ್​ ವಿಜಯಪುರದ ಬಳಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಶರತ್ ಕಲ್ಯಾಣಿಯು ತನಗೆ ಮದುವೆಯಾಗಿರುವ ಮಾಹಿತಿ ಮುಚ್ಚಿಟ್ಟು ‘ನಾನಿನ್ನು ಅವಿವಾಹಿತ. ನಿನ್ನನ್ನು ಪ್ರೀತಿಸುತ್ತೇನೆ, ಮದುವೆಯಾಗಿ ನಿನಗೆ ಬಾಳು ಕೊಡುತ್ತೇನೆ ಎಂದು ನಂಬಿಸಿ ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸಿದ್ದ’ ಎಂದು ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿರುವ 43 ವರ್ಷದ ವಿಚ್ಛೇದಿತ ಮಹಿಳೆ ದೂರು ನೀಡಿದ್ದರು.

ಇದನ್ನೂ ಓದಿ: ದೇಗುಲದಲ್ಲಿ ದರ್ಶನ್​ ಫೋಟೋ ಇಟ್ಟು ಪೂಜೆ ಮಾಡಿದ ಅರ್ಚಕ ಅಮಾನತು!

ಏಳೆಂಟು ತಿಂಗಳಿಂದ ಮಹಿಳೆ ಜೊತೆ ನಿರಂತರ ಸಂಪರ್ಕದಲ್ಲಿದ್ದ ಶರತ್, ಸಂತ್ರಸ್ತ ಮಹಿಳೆಯು ಮದುವೆಯಾಗು ಎಂದು ಒತ್ತಾಯಿಸಿದ್ದಾನೆ. ಈ ವೇಳೆ ಶರತ್, ‘ನನಗೆ ಹಣಕಾಸಿನ ಸಮಸ್ಯೆ ಇದೆ. ಅದು ಬಗೆಹರಿದ ನಂತರ ಮದುವೆಯಾಗುತ್ತೇನೆ’ ಎಂದು ಭರವಸೆ ನೀಡಿದ್ದ. ಅಲ್ಲದೆ, ಈಗ ನನಗೆ ಸಹಾಯ ಮಾಡು ಎಂದು ಕೇಳಿದ್ದ. ಈ ವೇಳೆ ಮಹಿಳೆಯು ಹಲವು ಬಾರಿ ಹಣ ನೀಡಿದ್ದು, ಒಟ್ಟು ನಾಲ್ಕು ಲಕ್ಷ ಹಣ ನಾಲ್ಕು ಲಕ್ಷ ಹಣವನ್ನು ಶರತ್‌ಗೆ ನೀಡಿದ್ದರು. ನಂತರ ಮಹಿಳೆ ಮದುವೆಗೆ ಒತ್ತಾಯಿಸಿದಾಗ ಶರತ್ ಆಕೆಯ ಮನೆ ಕಡೆ ಹೋಗುವುದನ್ನು ನಿಲ್ಲಿಸಿದ್ದಲ್ಲದೆ, ಫೋನ್ ಸಂಪರ್ಕವನ್ನೂ ಕಡಿದುಕೊಂಡಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಪ್ರಕರಣ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಶರತ್ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದರು. ಒಂದು ವಾರದಿಂದ ತಲೆಮರಿಸಿಕೊಂಡಿದ್ದ ಆರೋಪಿ ಬಿಜಾಪುರದಲ್ಲಿ ಪೊಲೀಸ್ ಬಲೆಗೆ ಬಿದ್ದಾನೆ. ಸದ್ಯ ಶರತ್​ನನ್ನು ವಿಜಯಪುರದಿಂದ ಶಿವಮೊಗ್ಗಕ್ಕೆ ಕರೆತಂದು ವಿಚಾರಣೆಗೊಳಪಡಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 3:27 pm, Tue, 6 August 24