ದೇಗುಲದಲ್ಲಿ ದರ್ಶನ್ ಫೋಟೋ ಇಟ್ಟು ಪೂಜೆ ಮಾಡಿದ ಅರ್ಚಕ ಅಮಾನತು!
ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಸ್ಯಾಂಡಲ್ವುಡ್ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ವಿಚಾರಣಾಧೀನ ಕೈದಿಯಾಗಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಹೀಗಿರುವಾಗ ಅರ್ಚಕರೊಬ್ಬರು ದೇವಸ್ಥಾನದಲ್ಲಿ ನಟ ದರ್ಶನ್ ಫೋಟೋಗೆ ಪೂಜೆ ಮಾಡುವ ಮೂಲಕ ತನ್ನ ಸ್ಥಾನ ಕುತ್ತುತಂದುಕೊಂಡಿದ್ದಾರೆ.
ಬಳ್ಳಾರಿ, (ಆಗಸ್ಟ್ 06): ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸ್ಯಾಂಡಲ್ವುಡ್ ನಟ ಚಾಲೆಂಜಂಗ್ ಸ್ಟಾರ್ ದರ್ಶನ್ ಅವರು ಜೈಲುಪಾಲಾಗಿದ್ದಾರೆ. ಆದ್ರೆ, ಮತ್ತೊಂದೆಡೆ ದರ್ಶನ್ ಬಿಡುಗಡೆಗಾಗಿ ಪೂಜೆ-ಪುನಸ್ಕಾರಗಳು ನಡೆಯುತ್ತಿವೆ. ಅದರಂತೆ ಅರ್ಚಕನೋರ್ವ ಒಂದು ಹೆಜ್ಜೆ ಮುಂದೆ ಹೋಗಿ ದೇವಸ್ಥಾನದಲ್ಲೇ ದರ್ಶನ್ ಫೋಟೋ ಇಟ್ಟು ಪೂಜೆ ಮಾಡಿ ಕೆಲಸ ಕಳೆದುಕೊಂಡಿದ್ದಾನೆ. ಹೌದು…ಬಳ್ಳಾರಿ ಜಿಲ್ಲೆ ಕುರುಗೋಡಿನ ಬಸವೇಶ್ವರ ದೇಗುಲದಲ್ಲಿ ದರ್ಶನ್ ಫೋಟೋ ಇಟ್ಟು ಪೂಜೆ ಮಾಡಿದ್ದಕ್ಕೆ ಅರ್ಚಕ ಮಲ್ಲಿ ಎನ್ನುವರನ್ನು ಧಾರ್ಮಿಕ ದತ್ತಿ ಇಲಾಖೆ ಅಮಾನತು ಮಾಡಿದೆ.
ದೊಡ್ಡಬಸವೇಶ್ವರ ದೇವಸ್ಥಾನದಲ್ಲಿ ಮಲ್ಲಿ ಎಂಬ ಅರ್ಚಕ ನಟ ದರ್ಶನ್ ಪೋಟೊ ಇಟ್ಟು ಪೂಜೆ ಮಾಡಿದ್ದಾರೆ. ಪೂಜೆ ಮಾಡಿ ಮಂಗಳಾರತಿ ಎತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದೇವಸ್ಥಾನದ ಸಂಪ್ರದಾಯಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಕ್ಕೆ ಧಾರ್ಮಿಕ ದತ್ತಿ ಇಲಾಖೆಯು, ಅರ್ಚಕನನ್ನು ಅಮಾನತುಗೊಳಿಸಿದೆ.
ಇದನ್ನೂ ಓದಿ: ರೇಣುಕಾ ಸ್ವಾಮಿ ಪ್ರಕರಣ: ಪೊಲೀಸರಿಂದ ಹೊಸ ತಂತ್ರಜ್ಞಾನ ಬಳಕೆ, ದರ್ಶನ್ ಆಂಡ್ ಗ್ಯಾಂಗ್ಗೆ ಸಂಕಷ್ಟ
ಅರ್ಚಕ ಮಲ್ಲಿ ದೇವಸ್ಥಾನದ ರೂಢಿ ಸಂಪ್ರದಾಯಕ್ಕೆ ಧಕ್ಕೆ ಹಾಗೂ ಕರ್ತವ್ಯ ನಿರ್ಲಕ್ಷ್ಯದ ಆರೋಪದ ಮೇಲೆ ಧಾರ್ಮಿಕ ದತ್ತಿ ಇಲಾಖೆ ಕಾರ್ಯ ನಿರ್ವಾಹಕ ಅಧಿಕಾರಿ ಹನುಮಂತಪ್ಪರವರು ಅರ್ಚಕ ಮಲ್ಲಿ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಅಲ್ಲದೇ ಈ ಘಟನೆಯ ವಿಚಾರಣೆ ಮುಗಿಯುವವರೆಗೂ ದೇವಸ್ಥಾನಕ್ಕೆ ಬಾರದಂತೆ ನಿಷೇಧ ಹೇರಿದ್ದಾರೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ ಒಟ್ಟು 17 ಮಂದಿ ಬಂಧಿತರಾಗಿದ್ದಾರೆ. ಪ್ರಕರಣದಲ್ಲಿ ದರ್ಶನ್ ಎರಡನೇ ಆರೋಪಿ ಆಗಿದ್ದು, ಪವಿತ್ರಾ ಗೌಡ ಮೊದಲ ಆರೋಪಿ ಆಗಿದ್ದಾರೆ. ಇನ್ನು ಆರೋಪಿಗಳಿಗೆ ಆಗಸ್ಟ್ 18ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಪ್ರಕರಣದಲ್ಲಿ ಮೂರು ಜನ ಸಾಕ್ಷಿಗಳಿದ್ದು ಅವರನ್ನು ತುಮಕೂರಿನ ಜೈಲಿಗೆ ವರ್ಗಾವಣೆ ಮಾಡಲಾಗಿದೆ. ದರ್ಶನ್ ಸೇರಿದಂತೆ ಇನ್ನುಳಿದ ಆರೋಪಿಗಳು ಬೆಂಗಳೂರಿನ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿದ್ದಾರೆ.
ಇನ್ನೊಂದೆಡೆ ದರ್ಶನ್ ಕುಟುಂಬ ಮತ್ತು ಅವರ ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ. ಬೇಗ ದರ್ಶನನ್ನು ಜೈಲಿನಿಂದ ಬಿಡುಗಡೆಯಾಗಲಿ ಎಂದು ಪೂಜೆ ಪುನಸ್ಕಾರಗಳನ್ನು ಮಾಡುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:40 pm, Tue, 6 August 24