ಅಪ್ರಾಪ್ತ ಬಾಲಕನಿಗೆ ಬೈಕ್ ಕೊಟ್ಟ ಮಾಲೀಕನಿಗೆ ಬಿತ್ತು ಬರೋಬ್ಬರಿ 27000 ರೂ.ದಂಡ!, ಇರಲಿ ಎಚ್ಚರ!

ಅಪ್ರಾಪ್ತ ವಯಸ್ಸಿನವರಿಗೆ ವಾಹನ ಚಾಲನೆಗೆ ನೀಡುವುದು ಅಕ್ಷಮ್ಯ ಅಪರಾಧವಾಗಿದ್ದು, ವಾಹನ ನೀಡುವ ಪೋಷಕರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ಜಾಗೃತಿ ಮೂಡಿಸುತ್ತಲೇ ಇದ್ದಾರೆ. ಆದರೂ ಸಹ ಪೋಷಕರು, ಚಲಾಯಿಸಲು ಮಕ್ಕಳ ಕೈಗೆ ವಾಹನಗಳನ್ನ ನೀಡುತ್ತಲೇ ಇದ್ದಾರೆ. ಅದರಂತೆ ಶಿವಮೊಗ್ಗದಲ್ಲಿ ಅಪ್ರಾಪ್ತನಿಗೆ ಬೈಕ್ ಕೊಟ್ಟಿದ್ದ ಮಾಲೀಕ ಬರೋಬ್ಬರಿ 27,000 ರೂಪಾಯಿ ದಂಡ ತೆತ್ತುವಂತಾಗಿದೆ.

ಅಪ್ರಾಪ್ತ ಬಾಲಕನಿಗೆ ಬೈಕ್ ಕೊಟ್ಟ ಮಾಲೀಕನಿಗೆ ಬಿತ್ತು ಬರೋಬ್ಬರಿ 27000 ರೂ.ದಂಡ!, ಇರಲಿ ಎಚ್ಚರ!
ಪ್ರಾತಿನಿಧಿಕ ಚಿತ್ರ
Edited By:

Updated on: Aug 19, 2026 | 6:49 PM

ಶಿವಮೊಗ್ಗ, (ಆಗಸ್ಟ್ 19): ಇತ್ತೀಚಿಗೆ ಅಪ್ರಾಪ್ತ ವಯಸ್ಕರರು ವಾಹನ ಚಲಾಯಿಸುವುದು ಹೆಚ್ಚಾಗಿದೆ. ಬೈಕ್​ ಅನ್ನು ಸರಿಯಾಗಿ ಬ್ಯಾಲೆನ್ಸ್​ ಮಾಡಲು ಬರದಿದ್ದರೂ, ಸಂಚಾರಿ ನಿಯಮಗಳ ಬಗ್ಗೆ ಅರಿವು ಇರದಿದ್ದರೂ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ವಾಹನ ಓಡಿಸುತ್ತಾರೆ. ಇದರಿಂದ ಅಪಘಾತ ಸಂಭವಿಸಿ ಜೀವಕ್ಕೆ ಕುಂದು ತಂದುಕೊಳ್ಳುತ್ತಾರೆ. ಹೀಗೆ ಅಪ್ರಾಪ್ತ ಬಾಲಕನಿಗೆ ಚಲಾಯಿಸಲು ವಾಹನ ಕೊಟ್ಟ ಮಾಲೀಕನಿಗೆ ಶಿವಮೊಗ್ಗ (Shivamogga) ನ್ಯಾಯಾಲಯ ಬರೋಬ್ಬರಿ 27,000 ರೂಪಾಯಿ ದಂಡ ವಿಧಿಸಿದೆ.​

2025ರಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ​ಶಿವಮೊಗ್ಗದ 1ನೇ ACJ ಮತ್ತು JMFC ನ್ಯಾಯಾಲಯವು ಅಪ್ರಾಪ್ತನಿಗೆ ವಾಹನ ನೀಡಿದ ಮಾಲೀಕನಿಗೆ 27000 ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ. ​2025ರಲ್ಲಿ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅಪ್ರಾಪ್ತನಿಗೆ ದ್ವಿಚಕ್ರ ವಾಹನ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕೋರ್ಟ್​​​ಗೆ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಇದನ್ನು ವಿಚಾರಣೆ ನಡೆಸಿದ ಶಿವಮೊಗ್ಗ ಕೋರ್ಟ್, ಮಾಲೀಕನಿಗೆ 27,000 ರೂಪಾಯಿ ದಂಡ ವಿಧಿಸಿದೆ. ಇದರೊಂದಿಗೆ ಮಕ್ಕಳ ಕೈಗೆ ವಾಹನ ಕೊಡುವ ಪೋಷಕರು ಹಾಗೂ ಮಾಲೀಕರಿಗೆ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: ಅಪ್ರಾಪ್ತ ವಯಸ್ಕರರು ವಾಹನ ಚಲಾಯಿಸಲು ಅನುಮತಿ ನೀಡಿದ್ದಕ್ಕೆ ಪೋಷಕರಿಗೆ 1.5 ಲಕ್ಷ ರೂ. ದಂಡ

ಅಪ್ರಾಪ್ತರು ಕೆಲವು ಬಾರಿ ತಮ್ಮ ಪಾಲಕರಿಗೆ ಗೊತ್ತಾಗದಂತೆ ಅಥವಾ ಗೊತ್ತಿದ್ದು ವಾಹನಗಳನ್ನು ಚಲಾಯಿಸಿ ಅಪಾಯಕಾರಿಯಾದ ವ್ಹೀಲಿಂಗ್‌ ಮಾಡಿ ಸಾರ್ವಜನಿಕರ ಪ್ರಾಣಕ್ಕೆ ಹಾನಿ ಉಂಟು ಮಾಡುತ್ತಾರೆ. ಇಂತಹ ಅಪ್ರಾಪ್ತರು ಹಾಗೂ ಪಾಲಕರ ವಿರುದ್ಧ ಸಂಚಾರ ಪೊಲೀಸರು ಕಠಿಣ ಕ್ರಮ ಜರುಗಿಸುತ್ತಿದ್ದಾರೆ. ಅಪ್ರಾಪ್ತ ಮಕ್ಕಳು ಮಾಡಿದಂತಹ ತಪ್ಪಿಗೆ ಪಾಲಕರು ಅಥವಾ ಪೋಷಕರು ಕಾನೂನಿನ ಸಂಕಷ್ಟ ಎದುರಿಸುವಂತಾಗಿದೆ. ಹೀಗಾಗಿ ಅಪ್ರಾಪ್ತ ಮಕ್ಕಳಿಗೆ ತಮ್ಮ ವಾಹನಗಳನ್ನು ನೀಡುವ ಮುನ್ನ ಪಾಲಕರು ನೂರಾರು ಬಾರಿ ಯೋಚಿಸಬೇಕು, ಇಲ್ಲವಾದರೆ ಪಾಲಕರು ವಿನಾಕಾರಣ ಕಾನೂನಿನ ಸಂಕಷ್ಟಕ್ಕೆ ಸಿಲುಕಿ ಒದ್ದಾಡಬೇಕಾಗುತ್ತದೆ.

ಪಾಲಕರು, ಅಪ್ರಾಪ್ತ ಮಕ್ಕಳಿಗೆ ಯಾವುದೇ ಕಾರಣಕ್ಕೂ ವಾಹನಗಳನ್ನು ನೀಡಬಾರದು. ಇವರ ಬಳಿ ಚಾಲನಾ ತರಬೇತಿ ಮತ್ತು ಡಿಎಲ್‌ ಕೂಡ ಇರುವುದಿಲ್ಲ. ಇದರಿಂದಾಗಿ ಅಪ್ರಾಪ್ತರು ವಾಹನ ಚಲಾಯಿಸಿದರೆ ಅವರ ಜೀವಕ್ಕೆ ಕುತ್ತು ತಂದುಕೊಳ್ಳುವುದರ ಜತೆಗೆ ಇತರರ ಜೀವನಕ್ಕೆ ಕುತ್ತು ತರುವ ಸಾಧ್ಯತೆ ಹೆಚ್ಚಿದೆ. ಈ ಸಂಬಂಧ ಪ್ರಕರಣ ದಾಖಲಿಸುವಾಗ ಅಪ್ರಾಪ್ತರ ಜತೆಗೆ ಅವರ ಪಾಲಕರ ಅಥವಾ ಪೋಷಕರ ವಿರುದ್ಧವೂ ಪ್ರಕರಣ ದಾಖಲಿಸಲಾಗುತ್ತದೆ. ಹೀಗಾಗಿ ತಮ್ಮ ಅಪ್ರಾಪ್ತ ಮಕ್ಕಳ ಮೇಲೆ ಪಾಲಕರು ಹೆಚ್ಚಿನ ನಿಗಾ ವಹಿಸಬೇಕು ಇಲ್ಲವಾದರೆ ಕಾನೂನಿನ ಸಂಕಷ್ಟ ತಪ್ಪಿದಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:48 pm, Wed, 19 August 26

Loading...
Unable to load recommendations.
Follow Us