ಶಿವಮೊಗ್ಗದಲ್ಲಿ ಮತ್ತೆ ವಕ್ಕರಿಸಿದ ಮಂಗನ ಕಾಯಿಲೆ: ಕಾಡಿನಂಚಿನ ಜನರಲ್ಲಿ ಆತಂಕ

ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೆ ಮಂಗನ ಕಾಯಿಲೆ ಕಾಣಿಸಿಕೊಂಡಿದೆ. ಹೀಗಾಗಿ ಮಲೆನಾಡು ಭಾಗದ ಕಾಡಂಚಿನ ಗ್ರಾಮದ ಜನರಲ್ಲಿ ಆತಂಕ ಶುರುವಾಗಿದೆ. ಈ ಬಾರಿ ಅವಧಿಗೂ ಮುನ್ನವೇ ಕೆಎಫ್​​ಡಿ‌ ಕೇಸ್​​​ಗಳ ಸಂಖ್ಯೆ 8ಕ್ಕೆ ಏರಿಕೆಯಾಗಿರುವುದು ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ. ಸದ್ಯ ಆರೋಗ್ಯ ಇಲಾಖೆ ಹೆಚ್ಚಿನ ನಿಗಾ ವಹಿಸಿದೆ.

ಶಿವಮೊಗ್ಗದಲ್ಲಿ ಮತ್ತೆ ವಕ್ಕರಿಸಿದ ಮಂಗನ ಕಾಯಿಲೆ: ಕಾಡಿನಂಚಿನ ಜನರಲ್ಲಿ ಆತಂಕ
ಪ್ರಾತಿನಿಧಿಕ ಚಿತ್ರ
Updated By: ಗಂಗಾಧರ​ ಬ. ಸಾಬೋಜಿ

Updated on: Dec 15, 2025 | 7:09 PM

ಶಿವಮೊಗ್ಗ, ಡಿಸೆಂಬರ್​ 15: ಮಲೆನಾಡಿನಲ್ಲಿ ಈ ಬಾರಿ ಈ ಮಂಗನ ಕಾಯಿಲೆ (Monkeypox virus) ಅಥವಾ ಕ್ಯಾಸನೂರು ಫಾರೆಸ್ಟ್‌ ಡಿಸೀಜ್‌ (ಕೆಎಫ್‌ಡಿ) ಪ್ರಕರಣಗಳು ಹೆಚ್ಚಾಗುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. ಕೆ.ಎಫ್.ಡಿ. ಪಾಸಿಟಿವ್ ಕೇಸ್​​ಗಳು ಈ ಬಾರಿ ದೊಡ್ಡ ಪ್ರಮಾಣದಲ್ಲಿ ಸ್ಫೋಟವಾಗುವ ಮುನ್ಸೂಚನೆ ನೀಡಿದ್ದು, ಈ ಬಾರಿ ಅವಧಿಗೂ ಮುನ್ನವೇ ಕೆ.ಎಫ್.ಡಿ‌. ಕೇಸ್​​​ಗಳ ಸಂಖ್ಯೆ 8ಕ್ಕೆ ಏರಿಕೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ಕಾಡಂಚಿನ ಗ್ರಾಮಗಳಲ್ಲಿ ಆತಂಕ

ಮಲೆನಾಡು ಜಿಲ್ಲೆಯ ಶಿವಮೊಗ್ಗದಲ್ಲಿ ಮತ್ತೆ ಮಂಗನ ಕಾಯಿಲೆ ಕಾಣಿಸಿಕೊಂಡಿದೆ. ಹೀಗಾಗಿ ಮಲೆನಾಡು ಭಾಗದ ಕಾಡಂಚಿನ ಗ್ರಾಮಗಳಲ್ಲಿ ಆತಂಕ ಶುರುವಾಗಿದೆ. ಅಷ್ಟಕ್ಕೂ ಈ ಸೋಂಕು ಪ್ರತಿ ವರ್ಷ ಬೇಸಿಗೆ ಸಮಯದಲ್ಲಿ ಕಂಡುಬರುತ್ತಿತ್ತು. ಆರೋಗ್ಯ ಇಲಾಖೆ ಇದಕ್ಕೆ ಮುನ್ನೆಚ್ಚರಿಕಾ ಕ್ರಮಗಳನ್ನ ಸಹ ತೆಗೆದುಕೊಳ್ಳುತ್ತಿತ್ತು. ಆದರೆ ಈ ವರ್ಷ ಡಿಸೆಂಬರ್ ತಿಂಗಳಲ್ಲೇ ಈ ಸೋಂಕು ಕಾಣಿಸಿಕೊಂಡಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮಂಕಿಪಾಕ್ಸ್ ಕಟ್ಟೆಚ್ಚರ: ವಿಮಾನ ನಿಲ್ದಾಣದಲ್ಲಿ ಶಂಕಿತರ ಟೆಸ್ಟಿಂಗ್, ಸ್ಕ್ರೀನಿಂಗ್, ಟ್ರ್ಯಾಕಿಂಗ್ ಶುರು

ಮಲೆನಾಡು ಭಾಗದ ಕಾಡಂಚಿನ ಪ್ರದೇಶಗಳ ಗ್ರಾಮಸ್ಥರ ಜೊತೆಗೆ, ಆರೋಗ್ಯ ಇಲಾಖೆಗೂ ಈಗ ದೊಡ್ಡ ಆತಂಕ ಎದುರಾಗಿದೆ. ಜಿಲ್ಲೆಯ ಹೊಸನಗರ ತಾಲೂಕಿನ ಬಿಳ್ಳೂಡಿ-ಸೋನಲೆ ಗ್ರಾಮದಲ್ಲಿ ಕಳೆದ ವಾರ ಹೊಸನಗರ ತಾಲೂಕಿನ ಬಿಳ್ಳೋಡಿ ಗ್ರಾಮದಲ್ಲಿ 55 ವರ್ಷದ ಮಹಿಳೆಗೆ ಕಾಣಿಸಿಕೊಂಡಿತ್ತು. ಆರೋಗ್ಯ ಇಲಾಖೆ ಅದೇ ಊರಿನ ಮತ್ತಷ್ಟು ಜನರನ್ನು ಪರೀಕ್ಷೆಗೆ ಒಳಪಡಿಸಿದ್ದು, ಇದೀಗ 7 ಜನರಿಗೆ ಪಾಸಿಟಿವ್ ಬಂದಿದೆ. ಇಲ್ಲಿಯವರೆಗೆ ಒಟ್ಟು 8 ಜನರಲ್ಲಿ ಕೆ.ಎಫ್.ಡಿ. ಸೋಂಕು ಕಾಣಿಸಿಕೊಂಡಿದೆ. ಈ ಎಂಟು ಜನರಲ್ಲಿ ಒಬ್ಬರು ಮಣಿಪಾಪ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದಾರೆ. ಮತ್ತೊಬ್ಬರಿಗೆ ಚಿಕಿತ್ಸೆ ಮುಂದುವರೆದಿದೆ. ತೀರ್ಥಹಳ್ಳಿಯ ತಾಲೂಕು ಆಸ್ಪತ್ರೆಯಲ್ಲಿ ಆರು ಜನರು ಕೆಎಫ್​​ಡಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆರೋಗ್ಯ ಇಲಾಖೆ ಹೆಚ್ಚಿನ ನಿಗಾ

ಬಿಳ್ಳೋಡಿ ಗ್ರಾಮದಲ್ಲಿ ಪಾಸಿಟಿವ್ ಬಂದಿರುವ 8 ಜನರಲ್ಲಿ ಮೂವರು ಪುರುಷರಿದ್ದು, ಐವರು ಮಹಿಳೆಯರು. ಸದ್ಯ ಎಲ್ಲರೂ ಆರೋಗ್ಯವಾಗಿದ್ದಾರೆ. ಜನವರಿ ಆರಂಭದಲ್ಲಿ ಹೆಚ್ಚಿನ ಪಾಸಿಟಿವ್ ಪ್ರಕರಣಗಳು ಕಂಡುಬರುತ್ತಿದ್ದವು. ಈ ಬಾರಿ ನವೆಂಬರ್‌ನಿಂದಲೇ ಸರ್ವೇಕ್ಷಣೆ ಆರಂಭಿಸಿರುವುದರಿಂದ ಆರೋಗ್ಯ ಇಲಾಖೆ ನಿರೀಕ್ಷೆಗೂ ಮೀರಿ ಪಾಸಿಟಿವ್ ಪ್ರಕರಣಗಳು ಕಂಡುಬಂದಿವೆ. ಮಂಗನ ಕಾಯಿಲೆಗೆ ಲಸಿಕೆ ನಿಲ್ಲಿಸಿ ಮೂರು ವರ್ಷ ಕಳೆದಿದೆ. ಸದ್ಯ ಆರೋಗ್ಯ ಇಲಾಖೆ ಹೆಚ್ಚಿನ ನಿಗಾ ವಹಿಸಿದೆ.

ಕುಗ್ರಾಮಗಳಲ್ಲಿ ಕೂಡ ಆರೋಗ್ಯ ಇಲಾಖೆ ಸಿಬ್ಬಂದಿ ತೆರಳಿ ಅಲ್ಲಿನ ಗ್ರಾಮಸ್ಥರಿಗೆ ಮಂಗನ ಕಾಯಿಲೆ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಜಾಗೃತಿ ಮೂಡಿಸುತ್ತಿದ್ದಾರೆ. ಅಲ್ಲದೇ ಕಾಡಂಚಿನ ಪ್ರದೇಶಗಳಲ್ಲಿ ದುಡಿಮೆಗಾಗಿ ತೆರಳುವ ಗ್ರಾಮಸ್ಥರು ಕಡ್ಡಾಯವಾಗಿ ಡಂಪ್ ಎಣ್ಣೆ ಮೈಯಿಗೆ ಲೇಪಿಸಿಕೊಳ್ಳುವ ಮೂಲಕ, ಉಣ್ಣೆಗಳಿಂದ ರಕ್ಷಣೆ ಪಡೆಯುವಂತೆ ಸೂಚಿಸಿದ್ದಾರೆ. ಒಂದು ಬಾರಿ ಈ ಎಣ್ಣೆ ಮೈಗೆ ಹಾಕಿಕೊಂಡರೇ ಉಣ್ಣೆಯಿಂದ ನಾಲ್ಕು ಘಂಟೆ ರಕ್ಷಣೆ ಪಡೆಯಬಹುದು.

ಇದನ್ನೂ ಓದಿ: Monkeypox Outbreak: ಮಂಕಿಪಾಕ್ಸ್​ನಿಂದ ಮತ್ತೆ ಲಾಕ್‌ಡೌನ್ ಆಗುತ್ತಾ? ಈ ಸಾಂಕ್ರಾಮಿಕ ರೋಗದ ಬಗ್ಗೆ WHO ಎಚ್ಚರಿಕೆ

ಅಲ್ಲದೇ ಗ್ರಾಮಗಳಲ್ಲಿ ಬ್ಯಾನರ್​ಗಳ ಮೂಲಕವೂ ಎಚ್ಚರಿಕೆ ನೀಡುತ್ತಿದ್ದಾರೆ. ಪಾಸಿಟಿವ್ ಬಂದಿರುವ ಜಾಗದ ಅರಣ್ಯ ಪ್ರದೇಶ, ಗದ್ದೆ ತೋಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಓಡಾಟ ಕಡಿಮೆ ಮಾಡಬೇಕು. ಬೇಸಿಗೆ ಮುಗಿಯುವರೆಗೆ ಗ್ರಾಮಸ್ಥರು ಸಾಕಷ್ಟು ಮುಂಜಾಗೃತೆಯನ್ನು ತೆಗೆದುಕೊಳ್ಳಬೇಕೆಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮನವಿ ಮತ್ತು ಜಾಗೃತಿ ಮೂಡಿಸುತ್ತಿದ್ದಾರೆ.

ದಶಕಗಳಿಂದ ಮಲೆನಾಡಿನ ಭಾಗದಲ್ಲಿ ಕೆಎಫ್​ಡಿ ಕಾಯಿಲೆ ದೊಡ್ಡ ಶಾಪದಂತೆ ಜನರನ್ನು ಕಾಡುತ್ತಿದೆ. ಈಗಾಗಲೇ ನೂರಾರು ಜನರನ್ನು ಕೆಎಫ್​ಡಿ ಕಾಯಿಲೆ ಬಲಿ ಪಡೆದುಕೊಂಡಿದೆ. ಈ ವರ್ಷದ ಬೇಸಿಗೆ ಮೊದಲೇ 8 ಕೆಎಫ್​​ಡಿ ಪಾಸಿಟಿವ್ ಪ್ರಕರಣಗಳು ಮಲೆನಾಡಿನ ಜನರನ್ನು ಬೆಚ್ಚಿಬೀಳಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.