
ಶಿವಮೊಗ್ಗ, ಆಗಸ್ಟ್ 31: ಯಾದಗಿರಿ ಜಿಲ್ಲೆಯ 9ನೇ ತರಗತಿ ವಿದ್ಯಾರ್ಥಿನಿ ಮಗುವಿಗೆ ಜನ್ಮ ನೀಡಿದ ಪ್ರಕರಣದ ಬೆನ್ನಲೇ ಶಿವಮೊಗ್ಗದಲ್ಲಿ (Shivamogga) 9ನೇ ತರಗತಿಯ ವಿದ್ಯಾರ್ಥಿನಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಇನ್ನೂ ಏನು ಅರಿಯದ 9ನೇ ಕ್ಲಾಸ್ ವಿದ್ಯಾರ್ಥಿನಿಯನ್ನು ಕಾಮುಕನೊಬ್ಬ ಗರ್ಭಿಣಿ ಮಾಡಿ ಅವಳ ಭವಿಷ್ಯವನ್ನೇ ಹಾಳು ಮಾಡಿದ್ದಾನೆ. ಸರಕಾರಿ ಶಾಲೆಯಲ್ಲಿ 9ನೇ ಕ್ಲಾಸ್ ವ್ಯಾಸಂಗ ಮಾಡುತ್ತಿದ್ದ ಬಾಲಕಿಗೆ ಆಗಸ್ಟ್ 29 ರ ಸಂಜೆ ಮನೆಯಲ್ಲೇ ಬಾಲಕಿಯ ಹೆರಿಗೆ ಆಗಿದೆ. ಅಜ್ಜಿಯೊಬ್ಬಳು ಬಾಲಕಿಯ ಹೆರಿಗೆ ಮಾಡಿಸಿದ್ದಾಳೆ. 7 ತಿಂಗಳಿಗೆ ಹರಿಗೆ ಆಗಿದೆ. ಸದ್ಯ ಬಾಲಕಿಗೆ ಹೆರಿಗೆ ಆಗಿದ್ದು ಕುಟುಂಬಸ್ಥರಿಗೆ ದೊಡ್ಡ ಆಘಾತ ಉಂಟುಮಾಡಿದೆ.
ಹೆರಿಗೆ ಬಳಿಕ ಮಗುವಿನ ತೂಕ 1.8 ಕೆ.ಜಿ ಇದ್ದು, ಮಗು ಮತ್ತು ಅಪ್ರಾಪ್ತೆ ತಾಯಿಯನ್ನು ಸದ್ಯ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಕ್ಕಳ ವಾರ್ಡ್ನಲ್ಲಿ ಮಗುವನ್ನು ತೀವ್ರ ನಿಗಾಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಮಗು ಮತ್ತು ತಾಯಿ ಇಬ್ಬರು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಇಂತಹ ಪ್ರಕರಣಗಳು ದಿನೇ ದಿನೇ ಜಾಸ್ತಿಯಾಗುತ್ತಿರುವುದಕ್ಕೆ ಜಿಲ್ಲಾಸ್ಪತ್ರೆಯ ಸರ್ಜನ್ ಡಾ. ಸಿದ್ದನಗೌಡ ಕಳವಳ ವ್ಯಕ್ತಪಡಿಸಿದ್ದಾರೆ. ಒಂದು ತಿಂಗಳಲ್ಲಿ ಇಂತಹ ನಾಲ್ಕು ಪ್ರಕರಣ ವರದಿಯಾಗಿದೆ. ಒಂದು ಪ್ರಕರಣದಲ್ಲಿ ಹೈಕೋರ್ಟ್ ಆದೇಶ ಪಡೆದು 24 ವಾರದ ಗರ್ಭಿಣಿ ಅಪ್ರಾಪ್ತೆಯ ಅಬಾರ್ಷನ್ (ಗರ್ಭಪಾತ) ಮಾಡಲಾಗಿದೆ. ಹೆಣ್ಣು ಮಕ್ಕಳ ಬಗ್ಗೆ ತಾಯಿ ತಂದೆ ಕಾಳಜಿ ವಹಿಸಬೇಕಿದೆ ಎಂದು ಜಿಲ್ಲಾ ಆಸ್ಪತ್ರೆಯ ಸರ್ಜನ್ ಡಾ. ಸಿದ್ದನಗೌಡ ಅಭಿಪ್ರಾಯಪಟ್ಟಿದ್ದಾರೆ.
ಹೀಗೆ ಅಪ್ರಾಪ್ತೆಯ ಹೆರಿಗೆ ಆಗಿರುವ ಬಗ್ಗೆ ಈಗಾಗಲೇ ಆಸ್ಪತ್ರೆಯ ಅಧಿಕಾರಿಗಳು ಮಕ್ಕಳ ಕಲ್ಯಾಣ ಸಮಿತಿ, ಮಕ್ಕಳ ರಕ್ಷಣಾ ಘಟಕ ಹಾಗೂ ದೊಡ್ಡಪೇಟೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಈ ಘಟನೆ ಕುರಿತು ಅಧಿಕಾರಿಗಳು ವಿಚಾರಣೆ ಆರಂಭಿಸಿದ್ದಾರೆ. ಹೆರಿಗೆ ಆಗಿರುವ ಅಪ್ರಾಪ್ತೆ ಮತ್ತು ಆಕೆಯ ಕುಟುಂಬಸ್ಥರ, ಸ್ಥಳೀಯರು ಹಾಗೂ ಶಾಲೆಯಿಂದ ಮಾಹಿತಿ ಕಲೆ ಹಾಕಿದ್ದಾರೆ. ಘಟನೆ ನಡೆದಿದ್ದು ವಿನೋಬ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆಗಿದೆ. ಹೀಗಾಗಿ ಅಪ್ರಾಪ್ತೆಯನ್ನು ಕಾಮಕ್ಕೆ ಬಳಕೆ ಮಾಡಿಕೊಂಡ ಆರೋಪಿ ವಿರುದ್ದ ಈಗ ಪೊಲೀಸರು ಕ್ರಮಕ್ಕೆ ಮುಂದಾಗಬೇಕಿದೆ. ಈಗಾಗಲೇ ವಿನೋಬ ನಗರ ಪೊಲೀಸರು ಪ್ರಕರಣದ ಕುರಿತು ತನಿಖೆ ಆರಂಭಿಸಿದ್ದಾರೆ.
ಈ ನಡುವೆ ಅಪ್ರಾಪ್ತೆಯ ಹೆರಿಗೆ ಕುರಿತು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ವರದಿ ಸಲ್ಲಿಸಬೇಕೆಂದು ಆಯೋಗದ ಸದಸ್ಯ ಶಶಿಧರ್ ಕೋಸಂಬೆ ಒತ್ತಾಯಿಸಿದ್ದಾರೆ. ಘಟನೆ ನಡೆದ ತಕ್ಷಣವೇ 24 ಘಂಟೆ ಒಳಗೆ ಫೋಕ್ಸೋ ಕೇಸ್ ದಾಖಲಿಸಬೇಕಿತ್ತು. ಕೂಡಲೇ ಕಾನೂನು ಕ್ರಮಕ್ಕೆ ಪೊಲೀಸರು ಮುಂದಾಗಬೇಕೆಂದು ಆಯೋಗದ ಸದಸ್ಯ ಶಶಿಧರ್ ಜಿಲ್ಲಾ ಪೊಲೀಸ್ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಟೀನೇಜ್ ಪ್ರೆಗ್ನೆನ್ಸಿ ಭಾರೀ ಹೆಚ್ಚಳ: ಬೆಚ್ಚಿಬೀಳಿಸುವಂತಿದೆ ಆರೋಗ್ಯ ಇಲಾಖೆ ಅಂಕಿಅಂಶ
ಇತ್ತೀಚಿನ ದಿನಗಳಲ್ಲಿ ಇಂತಹ ಪ್ರಕರಣಗಳು ಜಾಸ್ತಿ ಆಗುತ್ತಿವೆ. ಶಾಲೆಗಳಲ್ಲಿ ಮತ್ತು ಮನೆಯಲ್ಲಿ ಹೆಣ್ಣು ಮಕ್ಕಳಿಗೆ ಹೆಚ್ಚಿನ ಜಾಗೃತಿ ಮೂಡಿಸಬೇಕಿದೆ. ಇನ್ನೂ ಹೆಣ್ಣು ಮಕ್ಕಳ ಎಲ್ಲ ಚಲನವಲನ ಮತ್ತು ದೇಹದಲ್ಲಿ ಆಗುವ ಬದಲಾವಣೆ ಮೇಲೆ ಪೋಷಕರು ಹೆಚ್ಚು ನಿಗಾ ಇಡಬೇಕಿದೆ. ಹಾಗಿದ್ದಲ್ಲಿ ಮಾತ್ರ ಇಂತಹ ಶೋಷಣೆ ಮತ್ತು ಅವಾಂತರಗಳನ್ನು ತಡೆಯಲು ಸಾಧ್ಯ. ಸಮಾಜವು ಇನ್ನೂ ಹೆಚ್ಚು ಹೆಚ್ಚು ಜಾಗೃತಿಯಾಗಬೇಕಿದೆ ಎಂದು ಅವರು ಹೇಳಿದ್ದಾರೆ.